ಆನಂದಪುರ (ಅ.01): ಇಲ್ಲಿಗೆ ಸಮೀಪದ ಚಿಪ್ಪಳಿ ಕಾಡಿನಲ್ಲಿ ಸುಮಾರು 36 ಮಂಗಗಳನ್ನು ವಿಷವಿಕ್ಕಿ ಕೊಂದಿರುವ ಘಟನೆ ನಡೆದಿದ್ದು, ಈ ಸಂಬಂಧ ಐದು ಮಂದಿಯನ್ನು ಬಂಧಿಸಲಾಗಿದೆ.

ಬೆಳೆ ನಾಶ ಮಾಡುತ್ತಿದ್ದವು ಎಂಬ ಕಾರಣಕ್ಕೆ ಈ ಮಂಗಗಳನ್ನು ಸಾಯಿಸಲಾಗಿದೆ ಎಂದು ಆರೋಪಿಗಳು ತಿಳಿಸಿದ್ದಾರೆ.

ತ್ಯಾಗರ್ತಿ ವಿಶ್ವನಾಥ್‌, ದಸ್ತಗಿರಿ, ಲಂಬೋದರ, ಅಭಿಷೇಕ್‌ ಮತ್ತು ದಾಣಗೆರೆ ಸಂಜೀವ್‌ ಬಂಧಿತರು. ಇವರೊಂದಿಗೆ ಒಂದು ಆಡಿ ಕಾರು ಹಾಗೂ ಟಾಟಾ ಏಸ್‌ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.

ಮಂಗಳವಾರ ರಾತ್ರಿ ಅರಣ್ಯ ವೀಕ್ಷಕರು ಚಿಪ್ಪಳಿ ಕಾಡಿನಲ್ಲಿ ರಾತ್ರಿ ಗಸ್ತು ತಿರುಗುತ್ತಿರುವ ಸಂದರ್ಭದಲ್ಲಿ ಆರೋಪಿಗಳು ಸಾಯಿಸಿದ್ದ ಸುಮಾರು 36 ಮಂಗಗಳನ್ನು ಆಟೊದಲ್ಲಿ ತುಂಬಿಕೊಂಡು ಬಂದು ಕಾಡಿನಲ್ಲಿ ಸುರಿಯುತ್ತಿರುವುದನ್ನು ಕಂಡಿದ್ದಾರೆ. ತಕ್ಷಣವೇ ಮೇಲಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಹಿರಿಯ ಅಧಿಕಾರಿಗಳು ಆರೋಪಿಗಳನ್ನು ಮೃತ ಮಂಗಗಳ ಸಹಿತ ವಶಕ್ಕೆ ಪಡೆದರು.

ಶುಂಠಿ ಕೊಳೆ ರೋಗಕ್ಕೆ ಇಲ್ಲಿದೆ ಶಾಶ್ವಾತ ಪರಿಹಾರ

ಪ್ರಾರಂಭಿಕ ತನಿಖೆಯಲ್ಲಿ ಆರೋಪಿಗಳು ಬೆಳೆ ನಾಶ ಮಾಡುತ್ತಿವೆ ಎಂಬ ಕಾರಣಕ್ಕೆ ಮಂಗಗಳಿಗೆ ವಿಷವಿಟ್ಟು ಕೊಲ್ಲಲಾಗಿದೆ ಎಂದು ಹೇಳಿಕೆ ನೀಡಿದ್ದಾರೆ.

ಮೃತ ಮಂಗಗಳನ್ನು ಮರಣೋತ್ತರ ಪರೀಕ್ಷೆಯ ನಂತರ ಅರಣ್ಯ ಇಲಾಖೆಯವರು ಅಂತ್ಯಸಂಸ್ಕಾರ ಮಾಡಿದರು.

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಶ್ರೀಧರ್‌, ರಾಜೇಶ್‌ ನಾಯಕ್‌, ವಲಯ ಅರಣ್ಯಾಧಿಕಾರಿಗಳಾದ ಮೋಹನ್‌, ಉಪ ಅರಣ್ಯಾಧಿಕಾರಿಗಳಾದ ಇಸ್ಮಾಯಿಲ್‌, ರಾಘವೇಂದ್ರ, ಮಂಜುನಾಥ್‌, ಅರಣ್ಯ ವೀಕ್ಷಕರಾದ ಸತೀಶ್‌, ಷಣ್ಮುಖಪ್ಪಗೌಡ ಹಾಗೂ ಸಿಬ್ಬಂದಿ ಹಾಜರಿದ್ದರು. ವನ್ಯಜೀವಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅರಣ್ಯ ಇಲಾಖೆಯ ಮೂಲಗಳು ತಿಳಿಸಿವೆ.