Asianet Suvarna News Asianet Suvarna News

ಬೆಳಗಾವಿ: 44 ಜನರಿಂದ ಸಾಮೂಹಿಕ ದೇಹದಾನ ವಾಗ್ದಾನಕ್ಕೆ ಸಿದ್ಧ..!

ದೇಹ ಮಣ್ಣಾಗುವ ಬದಲು, ನಾಲ್ಕು ಜನರಿಗೆ ಉಪಯುಕ್ತವಾಗಲಿ ಎಂಬ ಸದುದ್ದೇಶದಿಂದ 44 ಜನ ಸಮಾನ ಮನಸ್ಕರು ದೇಹದಾನ ವಾಗ್ದಾನ ಮಾಡಲು ನಿರ್ಧಾರ 

44 People Decided to Pledge Body Donation in Belagavi grg
Author
First Published Nov 10, 2022, 7:30 PM IST

ಜಗದೀಶ ವಿರಕ್ತಮಠ

ಬೆಳಗಾವಿ(ನ.10):  ದೇಹ ಮಣ್ಣಾಗುವ ಬದಲು, ನಾಲ್ಕು ಜನರಿಗೆ ಉಪಯುಕ್ತವಾಗಲಿ ಎಂಬ ಸದುದ್ದೇಶದಿಂದ 44 ಜನ ಸಮಾನ ಮನಸ್ಕರು ದೇಹದಾನ ವಾಗ್ದಾನ ಮಾಡಲು ನಿರ್ಧರಿಸಿದ್ದು, ಇದು ಇತರರಿಗೂ ಮಾದರಿಯಾಗಿದೆ. ಬೆಳಗಾವಿ ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು, ವೃದ್ಧರು ಸೇರಿದಂತೆ ಇನ್ನಿತರೆ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಮಾನ ಮನಸ್ಕರು ತಮ್ಮ ಮರಣಾನಂತರ ದೇಹದಾನ ಹಾಗೂ ಅಂಗಾಂಗಗಳ ದಾನ ಮಾಡುವ ಕುರಿತು ದಿಟ್ಟ ನಿರ್ಧಾರ ಕೈಗೊಳ್ಳಲು ಮುಂದಾಗಿದ್ದಾರೆ. ಈ ಸಾಮಾಜಿಕ ಕಾರ್ಯವು ಇತರರಿಗೂ ಮಾದರಿಯಾಗಿದೆ. ಪ್ರಸ್ತುತ, ಸರ್ಕಾರಿ ಶಾಲೆಗಳ ಸುಮಾರು 33 ಶಿಕ್ಷಕರು ಮತ್ತು ವೇದಾಂತ್‌ ಫೌಂಡೇಶನ್‌ನ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿರುವ ವಿದ್ಯಾರ್ಥಿಗಳು ಸೇರಿದಂತೆ 11 ಜನರು ಮರಣಾನಂತರ ತಮ್ಮ ದೇಹವನ್ನು ದಾನ ಮಾಡಲು ಮುಂದಾಗಿದ್ದಾರೆ. ಇವರಿಂದ ಪ್ರೇರಣೆಯಾಗಿರುವ ಬೆಳಗಾವಿಯ ಶಾಂತಾಯಿ ವೃದ್ಧಾಶ್ರಮದ ಕೆಲವು ವೃದ್ಧರು ತಮ್ಮ ದೇಹವನ್ನೂ ದಾನ ಮಾಡುವ ವಾಗ್ದಾನ ಮಾಡಲು ಅಣಿಯಾಗಿದ್ದಾರೆ.

ನ.11ರಂದು ಒಪ್ಪಿಗೆ ಪತ್ರ:

ದೃಷ್ಟಿ ಸಮಸ್ಯೆ, ಹೃದಯ, ಮೂತ್ರಪಿಂಡ ಮತ್ತು ಇತರೆ ಅಂಗಾಂಗ ವೈಫಲ್ಯಗಳಿಂದ ಬಳಲುತ್ತಿರುವವರು ಇಂದು ಸಾಕಷ್ಟು ಜನರಿದ್ದಾರೆ. ಅಂತಹವರಿಗೆ ಸಹಾಯವಾಗಲಿ ಎಂಬ ದೃಷ್ಟಿಕೋನದಿಂದ ಸಮಾನ ಮನಸ್ಕ ವ್ಯಕ್ತಿಗಳ ಗುಂಪು ಈಗ ದೇಹದಾನ ವಾಗ್ದಾನ, ಜತೆಗೆ ಅಂಗಾಂಗ ದಾನಗಳನ್ನು ಮಾಡಲು ಮುಂದಾಗಿದೆ. 2022, ನ.11 ರಂದು ನಗರದ ಖಾಸಗಿ ಆಸ್ಪತ್ರೆಗೆ ತೆರಳಿ ದೇಹದಾನ ಮಾಡುವ ಕುರಿತು ಒಪ್ಪಿಗೆ ಪತ್ರವನ್ನು ಈ 44 ಜನರು ನೀಡಲಿದ್ದಾರೆ. ತಮ್ಮ ದೇಹವು ಕೆಲವೇ ಜನರ ಜೀವವನ್ನು ಉಳಿಸುತ್ತದೆ. ಜತೆಗೆ ವಿದ್ಯಾರ್ಥಿಗಳಿಗೆ ವೈದ್ಯಕೀಯ ಸಂಶೋಧನೆಯಲ್ಲಿ ದೇಹವು ತುಂಬಾ ಉಪಯುಕ್ತವಾಗಿದೆ ಎಂಬುದನ್ನು ಮನಗಂಡ ಶಿಕ್ಷಕರು ತಮ್ಮ ಸ್ನೇಹಿತರು ಮತ್ತು ಕುಟುಂಬಗಳೊಂದಿಗೆ ಹಲವು ಬಾರಿ ಸಮಾಲೋಚಿಸಿದ್ದಾರೆ. ಕೊನೆಗೆ ಸ್ವಯಂ ಪ್ರೇರಿತರಾಗಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಒಂದು ಕಾಲದಲ್ಲಿ ಅವರ ವಿದ್ಯಾರ್ಥಿಗಳಾಗಿದ್ದ ಅನೇಕ ಜನರು ಅವರಿಂದ ಸ್ಫೂರ್ತಿ ಪಡೆದು ತಮ್ಮ ದೇಹವನ್ನು ನೀಡಲು ಮುಂದೆ ಬರುತ್ತಾರೆ ಎಂಬುದು ಶಿಕ್ಷಕರ ಅಭಿಪ್ರಾಯ.

Ballari: ದೇಹದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ವೃದ್ಧೆ

ಸತೀಶ ಪಾಟೀಲ ರೂವಾರಿ:

ಮರಾಠಿ ಶಾಲೆಯ ಶಿಕ್ಷಕ ಸತೀಶ ಪಾಟೀಲ ಎಂಬುವರು ಈ ಯೋಜನೆ ಹುಟ್ಟುಹಾಕಿದ್ದಾರೆ. ಇವರ ನಿರ್ಧಾರಕ್ಕೆ ಬೆಳಗಾವಿ ದಕ್ಷಿಣದ ರೋಟರಿ ಕ್ಲಬ್‌ನ ರೋಟೇರಿಯನ್‌ ಅವಿನಾಶ ನಾಯ್ಕ ಮತ್ತು ಪ್ರಾಧ್ಯಾಪಕ ಡಾ.ಡಿ.ಎನ್‌.ಮಿಸಾಳೆ ಅವರಿಂದ ಸಹಾಯ ಮತ್ತು ಮಾರ್ಗದರ್ಶನ ಪಡೆದಿದ್ದಾರೆ. ಈ ಕುರಿತು ಮಾಹಿತಿ ನೀಡಿದ ಶಿಕ್ಷಕ ಸತೀಶ್‌ ಪಾಟೀಲ ಅವರು, ಸಾವಿನ ನಂತರ ದೇಹ ಮತ್ತು ಅಂಗಾಂಗ ದಾನದ ಬಗ್ಗೆ ದಿನಪತ್ರಿಕೆ ಓದುವಾಗ ಯೋಚನೆ ಬಂತು. ಗುಜರಾತಿನಲ್ಲಿ ಒಬ್ಬ ವ್ಯಕ್ತಿ ಸತ್ತ ನಂತರ ತನ್ನ ದೇಹವನ್ನು ದಾನ ಮಾಡಿದ್ದರಿಂದ ಇಬ್ಬರಿಗೆ ದೃಷ್ಟಿ, ಒಂದು ಹೃದಯ, ಇಬ್ಬರಿಗೆ ಕಿಡ್ನಿ ಸಿಕ್ಕಿತ್ತು. ಅದನ್ನು ಓದಿದ ನಂತರ, ನಾನು ಮೊದಲು ನನ್ನ ದೇಹವನ್ನು ದಾನ ಮಾಡಲು ನಿರ್ಧರಿಸಿದೆ. ಆದರೆ ನಾನು ನನ್ನ ನಿರ್ಧಾರವನ್ನು ನನ್ನ ಸ್ನೇಹಿತರು, ಪ್ರತಿಷ್ಠಾನದ ಸದಸ್ಯರೊಂದಿಗೆ ಹಂಚಿಕೊಂಡೆ. ಆಗ ಅನೇಕರು ತಮ್ಮ ದೇಹವನ್ನು ದಾನ ಮಾಡಲು ಮುಂದೆ ಬಂದರು. ಹೀಗಾಗಿ ಸಾಮೂಹಿಕ ದೇಹದಾನ ಮಾಡಲು ನಿರ್ಧರಿಸಿದ್ದೇವೆ ಎಂದು ಕನ್ನಡಪ್ರಭದೊಂದಿಗೆ ತಮ್ಮ ಪ್ರೇರಣೆಯನ್ನು ಹಂಚಿಕೊಂಡರು.

ಸಾವಿನ ನಂತರ ದೇಹದಿಂದ ಯಾವುದೇ ಅಂಗವನ್ನು ತೆಗೆದರೆ, ಆ ವ್ಯಕ್ತಿಯು ತನ್ನ ಹಿಂದಿನ ಜನ್ಮದಲ್ಲಿ ದಾನ ಮಾಡಿದ ಅಂಗವಿಲ್ಲದೆ ಮುಂದಿನ ಜನ್ಮದಲ್ಲಿ ಜನ್ಮ ಪಡೆಯುತ್ತಾನೆ ಎಂಬ ಕೆಲವು ತಪ್ಪು ಕಲ್ಪನೆಗಳು ಜನರಲ್ಲಿದ್ದವು. ಸಾವಿನ ನಂತರ ದೇಹದಿಂದ ಅಂಗವನ್ನು ತೆಗೆದುಹಾಕುವಾಗ ಅವರು ನೋವು ಅನುಭವಿಸುತ್ತಾರೆಯೇ ಎಂದು ಕೆಲವರು ಕೇಳಿದರು. ಅಂತಹ ಸಂದೇಹಗಳನ್ನು ದಾನಿಗಳಿಂದ ನಿವಾರಿಸಲು ಮತ್ತು ಅವರ ಮರಣದ ನಂತರ ಅವರು ಜನರಿಗೆ ಹೇಗೆ ಸಹಾಯ ಮಾಡಬಹುದು ಎಂಬುದನ್ನು ಅರಿತುಕೊಳ್ಳಬೇಕು. ಈ ಎಲ್ಲ ದಾನಿಗಳು ನ.11 ರಂದು ರೋಟರಿ ಕ್ಲಬ್‌ ಆಫ್‌ ಬೆಳಗಾವಿ ಸೌತ್‌ ಮೂಲಕ ತಮ್ಮ ದೇಹವನ್ನು ಖಾಸಗಿ ಕಾಲೇಜಿಗೆ ತೆರಳಿ ದಾನ ಮಾಡಲು ಅರ್ಜಿಯನ್ನು ಭರ್ತಿ ಮಾಡಲಿದ್ದಾರೆ ಅಂತ ಬೆಳಗಾವಿ ಮರಾಠಿ ಶಾಲೆಯ ಶಿಕ್ಷಕ ಸತೀಶ ಪಾಟೀಲ ತಿಳಿಸಿದ್ದಾರೆ. 
 

Follow Us:
Download App:
  • android
  • ios