ರಾಮನಗರ [ಮಾ.17]: ಜರ್ಮಿ​ನಿ​ಯಿಂದ ಹಿಂದಿ​ರು​ಗಿದ ವಿದ್ಯಾ​ರ್ಥಿನಿ ಸೇರಿ​ದಂತೆ ನಾಲ್ವರಲ್ಲಿ ಕೊರೋನಾ ವೈರಸ್‌ ಸೋಂಕಿನ ಲಕ್ಷ​ಣ​ಗಳು ಕಂಡು ಬಂದಿ​ರುವ ಹಿನ್ನೆ​ಲೆ​ಯಲ್ಲಿ ಅವರ ರಕ್ತದ ಮಾದ​ರಿ, ಗಂಟಲು ದ್ರವ​ವನ್ನು ಪರೀಕ್ಷೆ​ಗಾಗಿ ಬೆಂಗ​ಳೂ​ರಿನ ವಿಕ್ಟೋ​ರಿಯಾ ಆಸ್ಪ​ತ್ರೆಗೆ ರವಾ​ನಿ​ಸ​ಲಾ​ಗಿದೆ.

ಜರ್ಮಿನಿಯಿಂದ ಚನ್ನಪಟ್ಟಣಕ್ಕೆ ಹಿಂದಿರುಗಿದ ವಿದ್ಯಾರ್ಥಿನಿಯೊಬ್ಬರಿಗೆ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಕೆಯ ಮತ್ತು ಆಕೆಯ ತಂದೆ, ತಾಯಿಯ ರಕ್ತ ಮಾದರಿ, ಗಂಟಲು ದ್ರವ​ವನ್ನು ಪರೀಕ್ಷೆಗೆ ಕಳುಹಿಸಿಕೊಡ​ಲಾ​ಗಿದೆ. ಮೂವ​ರ ಪೈಕಿ ವಿದ್ಯಾ​ರ್ಥಿ​ನಿ​ಯನ್ನು ಮಾತ್ರ ರಾಮ​ನ​ಗರ ಜಿಲ್ಲಾ​ಸ್ಪ​ತ್ರೆಯ ಐಸೋ​ಲೇ​ಷನ್‌ ವಾರ್ಡ್‌ನಲ್ಲಿ ಚಿಕಿ​ತ್ಸೆಗೆ ಕ್ರಮ​ಕೈ​ಗೊ​ಳ್ಳ​ಲಾ​ಗಿ​ದೆ.

ವಿದ್ಯಾಭ್ಯಾಸಕ್ಕೆಂದು ಜರ್ಮನಿಗೆ ತೆರಳಿದ್ದ 21 ವರ್ಷದ ಚನ್ನಪಟ್ಟಣ ನಗರ ವ್ಯಾಪ್ತಿಯ ನಿವಾಸಿ ಕೇವಲ 2 ದಿನಗಳ ಹಿಂದೆಯಷ್ಟೇ ತವರಿಗೆ ಹಿಂದಿರುಗಿದ್ದರು. ಭಾನುವಾರ ಸಂಜೆ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಕೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ದೂರ​ವಾಣಿ ಕರೆ ಮಾಡಿದ್ದಾರೆ. ತಕ್ಷಣ ಜಾಗೃತರಾದ ಅಧಿಕಾರಿಗಳು ಆಕೆಯನ್ನು ಜಿಲ್ಲಾಸ್ಪತ್ರೆಗೆ ಕರೆ ತಂದು ತಪಾಸಣೆ ಮಾಡಿಸಿದ್ದಾರೆ.

ಯುರೋಪ್‌ ಜನರಿಗೆ ಭಾರತಕ್ಕೆ ನೋ ಎಂಟ್ರಿ!.

ರೋಗ ಲಕ್ಷಣಗಳನ್ನು ಆಧರಿಸಿ ಕೊರೋನಾ ವೈರಸ್‌ ಸೋಂಕು ತಪಾಸಣೆಗೆಂದು ಆಕೆಯ ಜತೆಗೆ ತಂದೆ, ತಾಯಿ​ಯ ರಕ್ತ ಮಾದರಿ, ಗಂಟಲು ದ್ರವ​ವನ್ನು ಆಸ್ಪತ್ರೆಯ ತಜ್ಞ ವೈದ್ಯರು ಸಂಗ್ರಹಿಸಿದ್ದಾರೆ.

ಮರಗೆಲಸದ ಕಾರ್ಮಿಕನಿಗೂ ಕೊರೋನಾ ಶಂಕೆ:

ಚನ್ನಪಟ್ಟಣ ಮೂಲದ ಮರಗೆಲಸ ಕಾರ್ಮಿಕರೊಬ್ಬರು ಮೈಸೂರಿನಿಂದ ಹಿಂದಿರುಗಿದ್ದು, ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆ ವ್ಯಕ್ತಿಯ ರಕ್ತಮಾದರಿಯನ್ನು ಸಂಗ್ರಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಆತನನ್ನು ಪರೀಕ್ಷಿಸಿದ ವೈದ್ಯ​ರು, ಅಂತಹುದೇನು ಸೋಂಕು ಇಲ್ಲ, ಆದರೂ 14 ದಿವಸ ಎಲ್ಲೂ ತಿರುಗಾಡಬೇಡ ಮನೆಯಲ್ಲಿಯೇ ಇರುವಂತೆ ಸಲಹೆ ನೀಡಿದ್ದಾರೆ.

ಒಟ್ಟು ನಾಲ್ವರ ರಕ್ತ ಮಾದರಿ, ಗಂಟಲು ದ್ರವ​ವನ್ನು ಪರೀ​ಕ್ಷೆ​ಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕಳುಹಿಸಿಕೊ​ಡ​ಲಾ​ಗಿದೆ. ವರದಿ ಬರಲು ಕನಿಷ್ಠ 24 ಗಂಟೆ ಕಾಲಾವಕಾಶಬೇಕು. ಮಾ.17 ರಂದು ಬೆ​ಳಗ್ಗೆ ಅಥವಾ ಸಂಜೆ ವೇಳೆಗೆ ವರದಿ ಕೈಸೇರ​ಲಿದೆ ಎಂದು ಜಿಲ್ಲಾ ಆರೋಗ್ಯಾಧಿ​ಕಾರಿ ಡಾ.ನಿರಂಜನ್‌ ಕನ್ನ​ಡ​ಪ್ರ​ಭಕ್ಕೆ ಪ್ರತಿ​ಕ್ರಿಯೆ ನೀಡಿ​ದ​ರು.