Asianet Suvarna News Asianet Suvarna News

ಮೂವರು ಬೈಕ್‌ ಕಳ್ಳರ ಬಂಧನ, 9 ಬೈಕ್‌ ವಶ

ಕೊಳ್ಳೇಗಾಲ ಪಟ್ಟಣದಲ್ಲಿ ಆಗಿಂದಾಗ್ಗೆ ಜರುಗುತ್ತಿದ್ದ ಬೈಕ್‌ ಕಳ್ಳತನಗಳ ಪ್ರಕರಣ ಬೆನ್ನಟ್ಟಿದ್ದ ಪಟ್ಟಣ ಪೊಲೀಸರು ಮೂವರು ಖದೀಮರನ್ನು ಬಂಧಿಸಿ ಒಂಭತ್ತು ಮೋಟಾರ್‌ ಬೈಕ್‌ಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

3 arrested for stealing bikes in chamarajnagar
Author
Bangalore, First Published Dec 8, 2019, 11:45 AM IST

ಚಾಮರಾಜನಗರ(ಡಿ.08): ಕೊಳ್ಳೇಗಾಲ ಪಟ್ಟಣದಲ್ಲಿ ಆಗಿಂದಾಗ್ಗೆ ಜರುಗುತ್ತಿದ್ದ ಬೈಕ್‌ ಕಳ್ಳತನಗಳ ಪ್ರಕರಣ ಬೆನ್ನಟ್ಟಿದ್ದ ಪಟ್ಟಣ ಪೊಲೀಸರು ಮೂವರು ಖದೀಮರನ್ನು ಬಂಧಿಸಿ ಒಂಭತ್ತು ಮೋಟಾರ್‌ ಬೈಕ್‌ಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಯಳಂದೂರು ತಾಲೂಕಿನ ಮಾಂಬಳ್ಳಿ ಗ್ರಾಮದ ಫಯಾಜ್‌ (27), ಸಯ್ಯದ್‌ ನೂರ್‌ (25) ಹಾಗೂ ಇನಾಯತ್‌ ಪಾಷಾ (29) ಬಂಧಿತ ಆರೋಪಿಗಳು. ಆರೋಪಿಗಳಿಂದ ಸುಮಾರು 3.26 ಲಕ್ಷ ಬೆಲೆಬಾಳುವ ವಿವಿಧ ಕಂಪನಿಗಳ 9 ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ಎಚ್‌.ಡಿ. ಆನಂದ್‌ ಕುಮಾರ್‌ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಬಂಧಿಸಿ ಕ್ರಮ:

ಪಟ್ಟಣದ ದೊಡ್ಡ ಮಸೀದಿ ಮುಂಭಾಗ, ಕಾರ್ತಿಕ್‌ ಬಾರ್‌ ಸಮೀಪ, ವೆಂಕಟೇಶ್ವರ ಮಹಲ್ ಹತ್ತಿರ, ಶ್ರೀನಿವಾಸ ಟಾಕೀಸ್‌, ಶೋಭ ಟಾಕೀಸ್‌, ಸರೋಜ ಬಾರ್‌ ಅಂಡ್‌ ರೆಸ್ಟೋರೆಂಟ್‌, ಅಚ್ಗಾಳ್‌ ವೃತ್ತ, ಎಂಜಿಎಸ್‌ವಿ ಕಾಲೇಜು ಸೇರಿಂದಂತೆ ಹಲವು ಕಡೆಗಳಲ್ಲಿ ನಿಲ್ಲಿಸಲಾಗಿದ್ದ ಬೈಕ್‌ಗಳು ಕಳ್ಳತನವಾಗಿದ್ದು, ಈ ಸಂಬಂಧ ಪ್ರಕರಣಗಳು ದಾಖಲಾಗಿದ್ದವು. ಈ ಪ್ರಕರಣದಲ್ಲಿ ಭಾಗಿಯಾಗಿದ್ದವರನ್ನು ಬಂಧಿಸಿ ಮುಂದಿನ ಕ್ರಮಕೈಗೊಂಡಿದೆ ಎಂದು ವಿವರಿಸಿದರು.

ತಂಡಕ್ಕೆ ಅಭಿನಂದನೆ:

ಟೌನ್‌ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಕಳೆದ ಹಲವು ದಿನಗಳಿಂದ ಬೈಕ್‌ ಕಳ್ಳತನಗಳು ನಡೆದಿದ್ದವು. ಈ ಸಂಬಂಧ ಕಳ್ಳರ ಬಂಧನಕ್ಕೆ ನಮ್ಮ ಸಿಬ್ಬಂದಿಗೆ ಸೂಚನೆಗಳನ್ನು ನೀಡಿದ್ದೆ. ಉತ್ತಮವಾಗಿ ಕಾರ್ಯಾಚರಣೆ ನಡೆಸಿ ಕಳ್ಳರನ್ನು ಬಂಧಿಸುವಲ್ಲಿ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ತಂಡವನ್ನು ಅಭಿನಂದಿಸುವೆ ಎಂದರು.

ಡಿವೈಎಸ್ಪಿ ನವೀನ್‌ಕುಮಾರ್‌ ಹಾಗೂ ಸಿಪಿಐ ಶ್ರೀಕಾಂತ್‌ ಅವರ ಮಾರ್ಗದರ್ಶನದಲ್ಲಿ ಪಿಎಸ್‌ಐ ಜೆ.ರಾಜೇಂದ್ರ ಹಾಗೂ ವಿ.ಸಿ.ಅಶೋಕ್‌ ನೇತೃತ್ವದಲ್ಲಿ ಕಳ್ಳರ ಪತ್ತೆಗೆ ವಿಶೇಷ ತಂಡ ರಚಿಸಲಾಗಿತ್ತು. ಕಳ್ಳತನಗಳ ಬಗ್ಗೆ ಮಾಹಿತಿ ಕಲೆ ಹಾಕಿ ಕಳ್ಳರ ಬಂಧನಕ್ಕೆ ವಿಶೇಷ ತಂಡ ಶ್ರಮಿಸಿದೆ. ಮಾಲು ಸಮೇತ ಕಳ್ಳರನ್ನು ಬಂಧಿಸಲಾಗಿದೆ. ಮೂರು ಲಕ್ಷದ ಇಪ್ಪತ್ತಾರು ಸಾವಿರ ಮೌಲ್ಯದ ಒಟ್ಟು 9 ಬೈಕ್‌ಗಳನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗಿದೆ ಎಂದರು.

ಆರೋಪಿಗಳ ಬಂಧನಕ್ಕೆ ಅಗತ್ಯ ಕ್ರಮ:

ಕೊಳ್ಳೇಗಾಲದಲ್ಲಿ ಮನೆಗಳ್ಳತನ ಹಾಗೂ ಸರಗಳ್ಳತನಗಳ ನಡೆದಿದ್ದು, ಆರೋಪಿಗಳ ಬಂಧನಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಅಲ್ಲದೇ ಮುಂದಿನ ದಿನಗಳಲ್ಲಿ ಈ ರೀತಿಯ ಪ್ರಕರಣಗಳು ನಡೆಯದಂತೆ ಎಚ್ಚರ ವಹಿಸುವ ನಿಟ್ಟಿನಲ್ಲಿ ಪೊಲೀಸ್‌ ಇಲಾಖೆ ಜಾಗ್ರತೆ ಸಹ ವಹಿಸಿದೆ ಎಂದು ಎಸ್ಪಿ ತಿಳಿಸಿದರು.

ಸಾರ್ವಜನಿಕರು ಸಹ ತಮ್ಮ ಹಣ, ವಸ್ತು, ಒಡವೆಗಳ ಬಗ್ಗೆ ಜಾಗೃತಿ ವಹಿಸಬೇಕು. ಯಾವುದೇ ಅನುಮಾನ್ಪದ ವ್ಯಕ್ತಿಗಳು ನಿಮ್ಮ ಸಮೀಪ ಕಂಡು ಬಂದಲ್ಲಿ ಮಾಹಿತಿ ನೀಡುವ ಪೊಲೀಸರಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಕ್ರಿಕೆಟ್‌ ದಂಧೆ ಬಗ್ಗೆ ಮಾಹಿತಿ ಇಲ್ಲ:

ಕೊಳ್ಳೇಗಾಲದಲ್ಲಿ ಕ್ರಿಕೆಟ್‌ ಬೆಟ್ಟಿಂಗ್‌ ದಂಧೆ ಇರುವ ಕುರಿತು ಮಾಹಿತಿ ಲಭ್ಯವಿಲ್ಲ. ಇಲ್ಲ ಎಂದು ಹೇಳಲೂ ಆಗಲ್ಲ, ಒಂದು ವೇಳೆ ಇಂತಹ ಮಾಹಿತಿ ಲಭ್ಯವಿದ್ದಲ್ಲಿ ನಾಗರಿಕರು ಮಾಹಿತಿ ನೀಡಿದರೆ ತಕ್ಷಣ ಕ್ರಮ ವಹಿಸುತ್ತೆವೆ. ರೈತರು ಹಣದಾಸೆಗಾಗಿ ಗಾಂಜಾ ಬೆಳೆದು ಸಂಸ್ಕರಣೆ ಮುಂದಾಗಿರುವ ಹಲವು ಪ್ರಕರಣಗಳಿದ್ದು ಪತ್ತೆ ಹಚ್ಚಲಾಗಿದೆ.

ಮಾದಕ ಪದಾರ್ಥ ಉಪಯೋಗಿಸುವುದರಿಂದ ಆಗಬಹುದಾದ ಕ್ರಮಗಳ ಕುರಿತು ಹೆಚ್ಚಿನ ಜಾಗ್ರತೆ ಮೂಡಿಸುವ ಅಗತ್ಯವಿದೆ. ಜಿಲ್ಲೆಯಲ್ಲಿ ಪೊಲೀಸರ ಸಂಖ್ಯೆ ಕಡಿಮೆ ಇದೆ. ಹಾಗಾಗಿ ಪ್ರತಿಯೊಬ್ಬ ನಾಗರಿಕರ ಮೇಲೂ ಸಹ ಹೊಣೆಗಾರಿಕೆ ಇದೆ ಎಂಬುದನ್ನು ಅರಿಯಬೇಕು. ಯುವ ಜನಾಂಗ ಮಾದಕ ಪದಾರ್ಥಗಳ ದಾಸರಾಗಿ ಜೀವನ ಹಾಳು ಮಾಡಿಕೊಳ್ಳದಂತೆ ಅರಿವು ಮೂಡಿಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದರು.

ಈ ಸಂದರ್ಭದಲ್ಲಿ ಸಹಾಯಕ ಎಸೈಗಳಾದ ರಾಮಚಂದ್ರ, ಸಿದ್ದಲಿಂಗೇಗೌಡ, ಸಿಬ್ಬಂದಿಗಳಾದ ರಂಗಸ್ವಾಮಿ, ನಾಗೇಂದ್ರರಾಜೇಅರಸ…, ಪ್ರಕಾಶ…, ಶಂಕರ್‌, ಸವಿರಾಜು, ಶಿವಕುಮಾರ್‌, ರಾಮಚಂದ್ರ, ಚಾಲಕರಾದ ಪ್ರಭಾಕರ್‌, ರಾಜಣ್ಣ ಇದ್ದರು.

Follow Us:
Download App:
  • android
  • ios