Asianet Suvarna News Asianet Suvarna News

ಹೂಕುಂಡದಲ್ಲಿ ಹೈಡ್ರೋ ಗಾಂಜಾ ಕೃಷಿ! ಭಾರೀ ಜಾಲ ಭೇದಿಸಿದ ಪೊಲೀಸರು!

ವಿದೇಶದಿಂದ ಹೈಡ್ರೋ ಗಾಂಜಾ ಬೀಜಗಳನ್ನು ತರಿಸಿಕೊಂಡು ಮನೆಯಲ್ಲಿಯೇ ಹೂಕುಂಡಗಳಲ್ಲಿ ಬೆಳೆಯುತ್ತಿದ್ದ ಜಾಲವನ್ನು ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ಪತ್ತೆ ಹಚ್ಚಿದ್ದಾರೆ.

3 Arrested For Hydro Marijuana Cultivation In Flower Pot
Author
Bengaluru, First Published Dec 14, 2019, 7:50 AM IST

ಬೆಂಗಳೂರು (ಡಿ.14): ವಿಶ್ವವ್ಯಾಪಿ ಬೇರುಬಿಟ್ಟಿರುವ ಮಾದಕ ದ್ರವ್ಯ ಸಾಗಾಟದ ಆನ್‌ಲೈನ್‌ ಜಾಲದಲ್ಲಿ ದಂಧೆಕೋರರು ಸಕ್ರಿಯವಾಗಿರುವುದು ಹೊಸತಲ್ಲ. ಆದರೆ, ವಿದೇಶದಿಂದ ಹೈಡ್ರೋ ಗಾಂಜಾ ಬೀಜಗಳನ್ನು ತರಿಸಿಕೊಂಡು ಮನೆಯಲ್ಲಿಯೇ ಹೂಕುಂಡಗಳಲ್ಲಿ ಬೆಳೆಯುತ್ತಿದ್ದ ಜಾಲವನ್ನು ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ಪತ್ತೆ ಹಚ್ಚಿದ್ದಾರೆ.

‘ಡಾರ್ಕ್ನೆಟ್‌’ ಆನ್‌ಲೈನ್‌ ವ್ಯವಸ್ಥೆ ಬಳಸಿ ‘ಬಿಟ್‌ಕಾಯಿನ್‌’ ಮೂಲಕ ಮಾದಕ ದ್ರವ್ಯಗಳನ್ನು ತರಿಸಿಕೊಳ್ಳುತ್ತಿದ್ದ ಮೂವರು ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಬಿಹಾರ ಮೂಲದ ಅಮಾತ್ಯ ರಿಷಿ (23), ಮಂಗಲ್‌ ಮುಕ್ಯ (30) ಹಾಗೂ ಬನಶಂಕರಿಯ ನಿವಾಸಿ ಆದಿತ್ಯ ಕುಮಾರ್‌ (21) ಬಂಧಿತರು. ಆರೋಪಿಗಳಿಂದ 20 ಲಕ್ಷ ರು. ಮೌಲ್ಯದ 225 ಗ್ರಾಂ ಎಲ್‌ಎಸ್‌ಡಿ ಮಾದಕ ದ್ರವ್ಯ ಮತ್ತು 2 ಕೆ.ಜಿ. ಹೈಡ್ರೋ ಗಾಂಜಾ ಹಾಗೂ ಕಂಪ್ಯೂಟರ್‌ ಸೇರಿ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ರಾವ್‌ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಆರೋಪಿ ಅಮಾತ್ಯ ಮೂರು ವರ್ಷಗಳ ಹಿಂದೆ ಬಿಬಿಎಂ ವ್ಯಾಸಂಗ ಮಾಡಲು ಬೆಂಗಳೂರು ನಗರಕ್ಕೆ ಬಂದು, ಪ್ರತಿಷ್ಠಿತ ಕಾಲೇಜು ಸೇರಿದ್ದ. ಈತನ ತಂದೆ ಬಿಹಾರದಲ್ಲಿ ಉದ್ಯಮಿಯಾಗಿದ್ದು, ಪುತ್ರನ ವಾಸಕ್ಕೆಂದು ಕೆಂಗೇರಿ ಬಳಿಯ ಶಾಂಗ್ರಿಲಾ ಅಪಾರ್ಟ್‌ಮೆಂಟ್‌ನಲ್ಲಿ  40ಲಕ್ಷದ ಫ್ಲಾಟ್‌ ಕೊಡಿಸಿದ್ದರು. ಅಮಾತ್ಯನ ಮನೆಯಲ್ಲಿ ಮಂಗಲ್‌ ಮುಕ್ಯ ಅಡುಗೆ ಭಟ್ಟನಾಗಿದ್ದ. ಅಮಾತ್ಯಗೆ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಆದಿತ್ಯ ಎಂಬಾತನ ಪರಿಚಯವಾಗಿತ್ತು.

ಆರೋಪಿಗಳು ಮಾದಕ ದ್ರವ್ಯ ವ್ಯಸನಿಗಳಾಗಿದ್ದು, ನಂತರದ ದಿನಗಳಲ್ಲಿ ಮಾದಕ ದ್ರವ್ಯ ಮಾರಾಟ ಜಾಲಕ್ಕೆ ಇಳಿದಿದ್ದರು. ಅಮಾತ್ಯ ಅಂತರ್ಜಾಲದ ಬಗ್ಗೆ ಹೆಚ್ಚು ತಿಳಿದುಕೊಂಡಿದ್ದಾನೆ. ಈತ ಅತಿಹೆಚ್ಚು ಬೇಡಿಕೆಯಿರುವ ಮಾದಕ ವಸ್ತುವಿನ ಬಗ್ಗೆ ಟಾರ್‌ ಬ್ರೌಸರ್‌ ಮೂಲಕ ಡಾರ್ಕ್ನೆಟ್‌ನಲ್ಲಿ ಶೋಧಿಸಿದ್ದ. ಹೈಡ್ರೋಗಾಂಜಾ ಬೀಜ ಪಡೆಯಲು ನೆದರ್‌ಲ್ಯಾಂಡ್‌ನ ಡ್ರಗ್‌ ಪೆಡ್ಲರ್‌ನನ್ನು ಸಂಪರ್ಕಿಸಿದ್ದ. ಈ ವೇಳೆ ಎಲ್‌ಎಸ್‌ಡಿ ಮಾದಕ ವಸ್ತುವಿನ ಬಗ್ಗೆ ಆತ ಮಾಹಿತಿ ಕೊಟ್ಟಿದ್ದ. ಆರೋಪಿಗಳು ಬಿಟ್‌ಕಾಯಿನ್‌ ಮೂಲಕ ಹಣ ಸಂದಾಯ ಮಾಡಿದ್ದರು.

ರಾಜಾರೋಷವಾಗಿ ಬಸ್ಸಲ್ಲೇ ಇದನ್ನು ಸಾಗಿಸ್ತಿದ್ದ ಮಹಿಳೆ ಅರೆಸ್ಟ್...

ಬಳಿಕ ಆತ ನೆದರ್‌ಲ್ಯಾಂಡ್‌ನಿಂದ ವಿಶೇಷ ಕೊರಿಯರ್‌ ಮೂಲಕ ಹೈಡ್ರೋಗಾಂಜಾ ಬೀಜ ಮತ್ತು ಎಲ್‌ಎಸ್‌ಡಿ ಮಾದಕ ವಸ್ತುವನ್ನು ಸ್ಟ್ಯಾಂಪ್‌ನಲ್ಲಿಟ್ಟು ಕಳುಹಿಸುತ್ತಿದ್ದ. ಒಂದು ಸ್ಟ್ಯಾಂಪ್‌ನಲ್ಲಿ 100 ಎಲ್‌ಎಸ್‌ಡಿ ಸ್ಲಿಪ್‌ಗಳಿರುತ್ತಿದ್ದವು. ಒಂದು ಸ್ಲಿಪ್‌ ಎಲ್‌ಎಸ್‌ಡಿ ತೂಕ 0.01 ಗ್ರಾಂ. ಅಲ್ಲದೇ, ಒಂದು ಹೈಡ್ರೋಗಾಂಜಾ ಬೀಜದ ಮೌಲ್ಯ ನಾಲ್ಕು ಸಾವಿರ ರು. ಬಾಳುತ್ತದೆ ಎಂದು ಸಿಸಿಬಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಹೂ ಕುಂಡದಲ್ಲಿ ಗಾಂಜಾ ಬೆಳೆ!:

ಹೈಡ್ರೋಗಾಂಜಾವನ್ನು ಹೂಕುಂಡದಲ್ಲಿ ಬೆಳೆಯುವುದನ್ನು ಆನ್‌ಲೈನ್‌ನಲ್ಲಿ ನೋಡಿ ಕಲಿತಿದ್ದರು. ಮನೆಯ ಶೌಚಗೃಹದಲ್ಲಿ ಆರು ಹೂ ಕುಂಡ ಸಂಗ್ರಹಿಸಿ ಗಾಂಜಾ ಬೆಳೆಯುತ್ತಿದ್ದರು. ಅದಕ್ಕೆ ಬೇಕಾದ ಸೂರ್ಯನ ಬೆಳಕಿನ ಬದಲಿಗೆ ಕೃತಕ ಎಲ್‌ಇಡಿ ಲೈಟ್‌ ವ್ಯವಸ್ಥೆ ಮಾಡಿಕೊಂಡಿದ್ದರು. ಮೂರು ತಿಂಗಳಲ್ಲಿ ಗಾಂಜಾ ಬೆಳೆದು ಪರಿಚಿತ ಗಿರಾಕಿಗಳಿಗೆ ಪೂರೈಕೆ ಮಾಡುತ್ತಿದ್ದರು. ಗಾಂಜಾ ಬೆಳೆಯಲು ಬೇಕಾದ ಮಣ್ಣನ್ನು ಸಹ ಆನ್‌ಲೈನ್‌ನಲ್ಲಿಯೇ ಖರೀದಿಸಿದ್ದರು. ಆರೋಪಿಗಳು ಮಾದಕ ದ್ರವ್ಯ ಮಾರಾಟ ಜಾಲದಲ್ಲಿ ತೊಡಗಿರುವ ಬಗ್ಗೆ ಸಿಸಿಬಿ ಜಂಟಿ ಪೊಲೀಸ್‌ ಆಯುಕ್ತರಿಗೆ ಮಾಹಿತಿ ಲಭ್ಯವಾಗಿತ್ತು. ಅವರು ಇನ್ಸ್‌ಪೆಕ್ಟರ್‌ಗಳಾದ ಲಕ್ಷ್ಮೀಕಾಂತಯ್ಯ, ಮಲ್ಲೇಶ್‌ ಬೊಲೆತಿನ್‌ ಅವರ ನೇತೃತ್ವದಲ್ಲಿ ತಂಡ ರಚಿಸಿದ್ದರು. ಕಾರ್ಯಾಚರಣೆ ನಡೆಸಿದಾಗ ಕೃತ್ಯ ಬಯಲಾಗಿದೆ ಎಂದು ವಿವರಿಸಿದರು.

ಒಂದು ಬೆಳೆ ತೆಗೆದಿದ್ರು

ಹೈಡ್ರೋ ಗಾಂಜಾ ಬೆಳೆಯಲು ಹೆಚ್ಚು ರಾಸಾಯನಿಕ ಗೊಬ್ಬರ ಬಳಸಲಾಗುತ್ತದೆ. ಮಣ್ಣಿಗಿಂತ ಹೆಚ್ಚಾಗಿ ಗೊಬ್ಬರವನ್ನೇ ಆರೋಪಿಗಳು ಹೂ ಕುಂಡದಲ್ಲಿ ಹಾಕಿದ್ದರು. ಸುಮಾರು ಎರಡು ತಿಂಗಳಿಗೆ ಹೈಡ್ರೋ ಗಾಂಜಾ ಗಿಡ ನಾಲ್ಕೈದು ಅಡಿಗೆ ಬೆಳೆಯುತ್ತದೆ. ಆರೋಪಿ ಅಮಾತ್ಯ ಆರು ಹೂ ಕುಂಡಗಳಲ್ಲಿ ಈ ಬೆಳೆ ಬೆಳೆದಿದ್ದು, ಹತ್ತು ದಿನಗಳ ಹಿಂದೆಯಷ್ಟೇ ಒಂದು ಕಟಾವು ತೆಗೆದಿದ್ದರು. ಆರೋಪಿಗಳು ಸುಮಾರು ಒಂದೂವರೆ ವರ್ಷದಿಂದ ದಂಧೆಯಲ್ಲಿ ತೊಡಗಿರುವುದು ಬೆಳಕಿಗೆ ಬಂದಿದೆ.

ತಂದೆ ಬಳಿ ಹಣ ಕೇಳದ ಆರೋಪಿ

ಅಮಾತ್ಯ ಕೆಲ ತಿಂಗಳಿಂದ ತಂದೆ ಬಳಿ ಖರ್ಚಿಗೆ ಹಣ ಪಡೆಯುವುದನ್ನು ನಿಲ್ಲಿಸಿದ್ದ. ಫೋಟೋಗ್ರಫಿ ಕಲಿತಿರುವ ಆರೋಪಿ ಇದರಿಂದಲೇ ಹಣ ಸಂಪಾದನೆ ಮಾಡಿಕೊಳ್ಳುತ್ತಿದ್ದೇನೆ ಎಂದು ಪೋಷಕರ ಬಳಿ ಹೇಳಿಕೊಂಡು, ದಂಧೆಯಲ್ಲಿ ಬರುವ ಹಣದಿಂದ ಐಷಾರಾಮಿ ಜೀವನ ನಡೆಸುತ್ತಿದ್ದ ಎಂದು ಪೊಲಿಸರು ಹೇಳಿದರು.

ಏನಿದು ಡಾರ್ಕ್ನೆಟ್‌?

ಡ್ರಗ್ಸ್‌, ಸೆಕ್ಸ್‌, ಅಕ್ರಮ ಶಸ್ತ್ರಾಸ್ತ್ರ ವಹಿವಾಟು ಮಾಫಿಯಾಗಳು ಡಾರ್ಕ್ನೆಟ್‌ ಮೂಲಕ ರಹಸ್ಯ ವಹಿವಾಟು ನಡೆಸುತ್ತಿದ್ದು, ಬಿಟ್‌ಕಾಯಿನ್‌ ಮೂಲಕ ಪಾವತಿ ಮಾಡುತ್ತವೆ. ಭದ್ರತಾ ಸಿಬ್ಬಂದಿ ಹಾಗೂ ಪೊಲೀಸರ ಕಣ್ಣಿಗೆ ಮಣ್ಣೆರಚಿ ವಹಿವಾಟು ನಡೆಸಲು ಇದು ವರವಾಗಿ ಪರಿಣಮಿಸಿದೆ. ಡಾರ್ಕ್ನೆಟ್‌ ಅನ್ನು ಅನಾಮಧೇಯ ವ್ಯಕ್ತಿಗಳು ನಿರ್ವಹಿಸುತ್ತಾರೆ. ವಿಪಿಎನ್‌ ಎಂಬ ಅಪ್ಲಿಕೇಷನ್‌ ಹಾಕಿಕೊಂಡರೆ, ವ್ಯಕ್ತಿ ತಾನು ಅಂತರ್ಜಾಲದಲ್ಲಿ ಮಾಡುವ ಯಾವುದೇ ಕೆಲಸವೂ ಸೈಬರ್‌ ಪೊಲೀಸರಿಗೆ ಸಿಗುವುದಿಲ್ಲ. ಇದನ್ನು ಹ್ಯಾಕ್‌ ಮಾಡಲು ಸಾಧ್ಯವಿಲ್ಲ. 

ಆತನ ದತ್ತಾಂಶ ಸುರಕ್ಷಿತವಾಗಿರುತ್ತದೆ ಮತ್ತು ಇಂಟರ್‌ನೆಟ್‌ ಸೇವೆ ನೀಡುವವರಿಗೆ ಯಾರು ಎಲ್ಲಿಂದ ಆನ್‌ಲೈನ್‌ನಲ್ಲಿ ಖರೀದಿ ಮಾಡುತ್ತಿದ್ದಾರೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಸಿಗುವುದಿಲ್ಲ. ಇದರ ಜಾಡು ಹಿಡಿದು ಹೋಗುವ ತನಿಖಾಧಿಕಾರಿಗಳಿಗೆ ಮತ್ತೊಂದು ದೇಶದಲ್ಲಿನ ವಿಳಾಸ ಕಾಣಿಸುತ್ತದೆ. ವಿಪಿಎನ್‌ ಬಳಕೆಯಿಂದ ದತ್ತಾಂಶವನ್ನು ಬೇರೆ ಯಾರೂ ಕೂಡ ಹ್ಯಾಕ್‌ ಮಾಡಲು ಸಾಧ್ಯವಿಲ್ಲ. ಹೀಗಾಗಿ ಈ ಡಾರ್ಕ್ನೆಟ್‌ ಅಕ್ರಮಗಳಿಗೆ ತಾಣವಾಗಿದೆ. ಅಮೆರಿಕದ ಎಫ್‌ಬಿಐ ತನಿಖಾ ಸಂಸ್ಥೆ ಕೂಡ ಇದನ್ನು ಭೇದಿಸಲು ಯಶಸ್ವಿಯಾಗಿಲ್ಲ. ಅಷ್ಟರ ಮಟ್ಟಿಗೆ ದಂಧೆಕೋರರು ಅತ್ಯುನ್ನತ ತಂತ್ರಜ್ಞಾನ ಬಳಸುತ್ತಿದ್ದಾರೆ ಎನ್ನುತ್ತಾರೆ ಸಿಸಿಬಿ ಅಧಿಕಾರಿಯೊಬ್ಬರು.

ಸೂರ‍್ಯನ ಬದಲು ಎಲ್‌ಇಡಿ ಲೈಟ್‌!

ಹೂಕುಂಡದಲ್ಲಿ ಹೈಡ್ರೋ ಗಾಂಜಾ ಬೆಳೆಯುವುದನ್ನು ಆನ್‌ಲೈನ್‌ ಮೂಲಕ ಕಲಿತಿದ್ದ ಆರೋಪಿಗಳು, ಮನೆಯ ಶೌಚಗೃಹದಲ್ಲಿ ಆರು ಹೂ ಕುಂಡಗಳಲ್ಲಿ ಗಾಂಜಾ ಬೆಳೆಯುತ್ತಿದ್ದರು. ಸೂರ್ಯನ ಬೆಳಕಿನ ಬದಲು ಎಲ್‌ಇಡಿ ಲೈಟ್‌ ಮೂಲಕ ಕೃತಕ ಬೆಳಕಿನ ವ್ಯವಸ್ಥೆ ಮಾಡಿದ್ದರು. 3 ತಿಂಗಳಲ್ಲಿ ಬೆಳೆ ತೆಗೆದು ಪರಿಚಿತ ಗಿರಾಕಿಗಳಿಗೆ ಪೂರೈಸುತ್ತಿದ್ದರು.

ಏನಿದು ಹೈಡ್ರೋ ಗಾಂಜಾ?

ದೇಶಿ ಗಾಂಜಾಕ್ಕೆ ಹೋಲಿಕೆ ಮಾಡಿದರೆ ಹೈಡ್ರೋ ಗಾಂಜಾ ನಶೆ ಹೆಚ್ಚು. ಗ್ರಾಂ ಹೈಡ್ರೋ ಗಾಂಜಾಕ್ಕೆ ಮಾರುಕಟ್ಟೆಯಲ್ಲಿ 3ರಿಂದ 4 ಸಾವಿರ ರುಪಾಯಿ ಪಾವತಿಸಬೇಕು. ಹಣವಂತರು, ಸಾಫ್ಟ್‌ವೇರ್‌ ಉದ್ಯೋಗಿಗಳು ಈ ಹೈಡ್ರೋ ಗಾಂಜಾವನ್ನು ಹೆಚ್ಚಾಗಿ ತೆಗೆದುಕೊಳ್ಳುತ್ತಾರೆ. ಅಮಾತ್ಯ ತಮ್ಮ ಕಾಲೇಜು ಸೇರಿದಂತೆ ಒಂದು ವ್ಯವಸ್ಥಿತ ಜಾಲವನ್ನೇ ಕಟ್ಟಿಕೊಂಡಿದ್ದ. ಎಲ್ಲರಿಗೂ ಈತನೇ ಮಾದಕ ದ್ರವ್ಯ ಸಾಗಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ಲಭ್ಯವಾಗಿದೆ. ಎಲ್ಲರಿಗೂ ಸಮನ್ಸ್‌ ನೀಡಿ ವಿಚಾರಣೆಗೆ ಕರೆಯಲಾಗುವುದು ಎಂದು ಸಿಸಿಬಿ ಅಧಿಕಾರಿಯೊಬ್ಬರು ‘ಕನ್ನಡಪ್ರಭ’ಕ್ಕೆ ತಿಳಿಸಿದರು.

Follow Us:
Download App:
  • android
  • ios