ಹುಬ್ಬಳ್ಳಿ(ನ.09): ಜಿಪಂ ಸದಸ್ಯ ಯೋಗೀಶಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸರು ಸಲ್ಲಿಸಿದ ಆರೋಪ ಪಟ್ಟಿಯಲ್ಲಿ 20ಕ್ಕೂ ಹೆಚ್ಚು ತಪ್ಪುಗಳು ಇರುವುದು ಸಿಬಿಐ ಮರುಪರಿಶೀಲಿಸಿ ತನಿಖೆ ನಡೆಸಿದ ವೇಳೆ ಬಯಲಿಗೆ ಬಂದಿದೆ ಎಂದು ಮೂಲಗಳು ತಿಳಿಸಿವೆ.

ಪೊಲೀಸ್‌ ಅಧಿಕಾರಿಗಳು ಬೇಕಂತಲೇ ಈ ರೀತಿ ಮಾಡಿ ಪ್ರಕರಣ ಹಾದಿ ತಪ್ಪಿಸಿದರೇ? ಸಾಕ್ಷ್ಯನಾಶ ಮಾಡುವ ಉದ್ದೇಶದಿಂದಲೇ ಈ ರೀತಿ ಮಾಡಲಾಯಿತೇ? ಎಂಬ ಪ್ರಶ್ನೆಗಳೀಗ ಕಾಡುತ್ತಿವೆ. ಪೊಲೀಸ್‌ ಅಧಿಕಾರಿಗಳಿಂದ ಹಿಡಿದು ಜಿಪಂ ಎಇಇ, ಕೆಎಎಸ್‌ ಅಧಿಕಾರಿಗಳು ಈ ಪ್ರಕರಣದಲ್ಲಿ ಸಾಕ್ಷ್ಯನಾಶದ ರೂವಾರಿಗಳಾಗಿ ಕಾರ್ಯನಿರ್ವಹಿಸಿದ್ದಾರೆ ಎಂಬ ಶಂಕೆ ಸಿಬಿಐ ಅಧಿಕಾರಿಗಳದ್ದು.

ತನಿಖೆ ಆರಂಭಿಸಿದ್ದ ಸಿಬಿಐ ಅಧಿಕಾರಿಗಳಿಗೆ ಮಹತ್ವದ ಸುಳಿವು ಪ್ರಾಪ್ತಿಯಾಗುವಲ್ಲಿ ರಾಜ್ಯ ಪೊಲೀಸರು ಸಲ್ಲಿಸಿದ್ದ ದೋಷಾರೋಪ ಪಟ್ಟಿಯೇ ಪ್ರಮುಖ ಅಸ್ತ್ರವಾಗಿತ್ತು. ತನಿಖೆ ನಡೆಸಲು ಶುರು ಮಾಡುತ್ತಿದ್ದಂತೆ ಸ್ಥಳೀಯ ಪೊಲೀಸರು ಸಲ್ಲಿಸಿದ್ದ ಆರೋಪ ಪಟ್ಟಿಯಲ್ಲಿ 20ಕ್ಕೂ ಹೆಚ್ಚು ತಪ್ಪುಗಳಿರುವುದು ಸಿಬಿಐ ಅಧಿಕಾರಿಗಳಿಗೆ ಕಂಡುಬಂದಿದೆ ಎಂದು ಮೂಲಗಳು ತಿಳಿಸಿವೆ. ಚಾರ್ಜ್‌ಶೀಟ್‌ನಲ್ಲಿನ ಮಾಹಿತಿ ನೋಡಿಯೇ ಕೊಲೆ ಸಂಚು ನಡೆಸಿರುವುದು ಸ್ಪಷ್ಟವಾಗಿದೆ.

ಯೋಗೀಶಗೌಡ ಹತ್ಯೆ ಪ್ರಕರಣ: ಇಂದು ಕೋರ್ಟ್‌ಗೆ ವಿನಯ್‌ ಕುಲಕರ್ಣಿ

ವಿಳಂಬವೇಕೆ?:

ಜಿಪಂ ಸದಸ್ಯ ಯೋಗೇಶಗೌಡ ಕೊಲೆ ನಡೆದ ಸ್ಥಳ ಉಪನಗರ ಠಾಣೆಯಿಂದ ಕೇವಲ 3 ನಿಮಿಷದ ಹಾದಿ. ಆದರೆ ಬಹಳ ಹೊತ್ತಿನ ನಂತರ ಬಳಿಕ ಠಾಣೆಯ ಆಗಿನ ಪಿಐ ಚೆನ್ನಕೇಶವ ಟಿಂಗರಿಕರ ಘಟನಾ ಸ್ಥಳಕ್ಕೆ ತೆರಳಿದ್ದರು. ಪೊಲೀಸರು ಹೋಗುವ ಹೊತ್ತಿಗೆ ಘಟನಾ ಸ್ಥಳದಲ್ಲಿ ನೂರಾರು ಜನ ಓಡಾಡಿದ್ದರು. ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದಲೇ ಹೀಗೆ ಮಾಡಿದ್ದರಾ? ಕೊಲೆಗೂ ಮುನ್ನ ಯೋಗೀಶಗೌಡ ಕಣ್ಣಿಗೆ ಕಾರದಪುಡಿ ಎರಚಲಾಗಿತ್ತು. ಅದನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಿರಲಿಲ್ಲ ಎಂಬ ಸಂಗತಿ ಸಿಬಿಐ ತನಿಖೆಯಲ್ಲಿ ಬಹಿರಂಗವಾಗಿದೆ.

ಮಾರಕಾಸ್ತ್ರ ಬದಲಾವಣೆ:

ಕೊಲೆಗೆ ಬಳಸಿದ್ದ ಹಾಗೂ ಚಾರ್ಜ್‌ಶೀಟ್‌ನಲ್ಲಿ ತೋರಿಸಿದ್ದ ಮಾರಕಾಸ್ತ್ರಗಳು ಬೇರೆ ಬೇರೆ ಎಂಬುದು ಯೋಗೀಶಗೌಡ ದೇಹದ ಮೇಲಿದ್ದ ಗುರುತುಗಳಿಂದ ಬಯಲಾಗಿದೆ ಎಂದು ಸಿಬಿಐ ತನಿಖೆ ವೇಳೆ ಗೊತ್ತಾಗಿದೆ. ಕೊಲೆಯಾದ ಜಿಮ್‌ನಲ್ಲಿನ ಸಿಸಿಟಿವಿ ದೃಶ್ಯದಲ್ಲಿ ಹತ್ಯೆಯ ಮೊದಲು ಹಾಗೂ ಹತ್ಯೆ ನಂತರದ ವಿಡಿಯೋ ಮಾಯವಾಗಿತ್ತಂತೆ. ಹೀಗೆ ಸಿಬಿಐ ನಡೆಸಿದ ತನಿಖೆಯಿಂದ ಸ್ಥಳೀಯ ಪೊಲೀಸರು ಹತ್ತಾರು ಎಡವಟ್ಟು ಮಾಡಿರುವುದು, ಪ್ರಕರಣದ ಹಾದಿ ತಪ್ಪಿಸಲು ಹಾಗೂ ಸಾಕ್ಷ್ಯನಾಶದ ಹಿನ್ನೆಲೆಯಲ್ಲೇ ಮಾಡಲಾಗಿದೆ ಎಂಬ ಸಂಶಯ ಸಿಬಿಐ ತಂಡದ ಎಂದು ಮೂಲಗಳು ತಿಳಿಸುತ್ತವೆ. ಇದೆಲ್ಲವೂ ವಿನಯ್‌ ಕುಲಕರ್ಣಿಗೆ ಇದೀಗ ಇಕ್ಕಟ್ಟಿಗೆ ಸಿಲುಕಿಸುವಂತಾಗಿದೆ.