ಮಂಗಳೂರು(ಫೆ.19): ಈ ಪ್ರವಾಸಿ ಋುತುಮಾನದ 13ನೇ ವಿಲಾಸಿ ಹಡಗು ಮಂಗಳವಾರ ಎನ್‌ಎಂಪಿಟಿಗೆ ಆಗಮಿಸಿದ್ದು, ವಿದೇಶಿ ಪ್ರವಾಸಿಗರು ನಗರದ ವಿವಿಧ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡಿದ್ದಾರೆ. ಕೊರೋನಾ ವೈರಸ್‌ ಆತಂಕದ ಹಿನ್ನೆಲೆಯಲ್ಲಿ ಎಲ್ಲ ಪ್ರವಾಸಿಗರನ್ನು ತಪಾಸಣೆಗೆ ಒಳಪಡಿಸಲಾಗಿದ್ದು, ಯಾರಲ್ಲೂ ಕೊರೋನಾ ಸೋಂಕಿನ ಲಕ್ಷಣಗಳು ಕಂಡುಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುಂಬೈನಿಂದ ಹೊರಟಿದ್ದ ‘ಕೋಸ್ಟಾವಿಕ್ಟೋರಿಯಾ’ ಹೆಸರಿನ ಈ ಹಡಗು ಮಂಗಳವಾರ ಬೆಳಗ್ಗೆ 7 ಗಂಟೆಗೆ ಎನ್‌ಎಂಪಿಟಿಗೆ ಆಗಮಿಸಿತ್ತು. ಅದರಲ್ಲಿ 1800 ಪ್ರಯಾಣಿಕರು ಮತ್ತು 800 ಸಿಬ್ಬಂದಿಗಳಿದ್ದರು. ಕೊರೋನಾ ತಪಾಸಣೆ ಬಳಿಕ ಅವರನ್ನು ನಗರ ವೀಕ್ಷಣೆಗೆ ತೆರಳಲು ಅವಕಾಶ ಮಾಡಿಕೊಡಲಾಯಿತು.

ಮಂಗಳೂರು ಬಂದರಿಗೆ ಬಂತು ಐಷಾರಾಮಿ ಪ್ರವಾಸಿ ನೌಕೆ..!

ಕಳೆದ ಬಾರಿ ವಿಲಾಸಿ ಹಡಗು ಆಗಮಿಸಿದಾಗ ಮೂವರು ಚೀನೀ ಪ್ರಜೆಗಳಿದ್ದು, ಅವರನ್ನು ಹಡಗಿನಿಂದ ಕೆಳಗಿಳಿಯಲು ಅವಕಾಶ ನಿರಾಕರಿಸಲಾಗಿತ್ತು. ಆದರೆ ಈ ಬಾರಿಯ ಹಡಗಿನಲ್ಲಿ ಚೀನೀ ಪ್ರಜೆಗಳು ಇರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.