ಕೊಪ್ಪಳ: ನಾಪತ್ತೆಯಾಗಿದ್ದ ತಳಕಲ್ ಬಾಲಕನ ಹತ್ಯೆ, ಕಣ್ಣು, ಕಿಡ್ನಿ ಮಾಫಿಯಾದ ಕೃತ್ಯ..?
8 ಕಿ.ಮೀ. ದೂರದ ಹಳ್ಳದಲ್ಲಿ 4 ದಿನದ ಬಳಿಕ ಶವ ಪತ್ತೆ| ಕಣ್ಣು, ಕಿಡ್ನಿ ಮಾಫಿಯಾದ ಕೃತ್ಯ ಪಾಲಕರ ಆರೋಪ| ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಎಸ್ಪಿ ಜಿ. ಸಂಗೀತಾ| ಬಾಲಕನ ಕೊಲೆಗೆ ನಿಖರವಾದ ಕಾರಣ ಏನು ಎಂಬುದನ್ನು ಈಗಲೇ ಹೇಳಲಾಗಲ್ಲ. ತನಿಖೆ ನಡೆಯುತ್ತಿದೆ|
ಕೊಪ್ಪಳ(ಜು.23): ನಾಲ್ಕು ದಿನಗಳ ಹಿಂದೆ ನಾಪತ್ತೆಯಾಗಿದ್ದ ತಾಲೂಕಿನ ತಳಕಲ್ ಗ್ರಾಮದ ಬಾಲಕ ಮಂಜುನಾಥ ಬುರ್ಲಿ (10)ಯನ್ನು ಭೀಕರವಾಗಿ ಹತ್ಯೆಗೈಯ್ಯಲಾಗಿದ್ದು, ಹಲಗೇರಿ ಗ್ರಾಮದ ಹಳ್ಳದ ಬಳಿ ಬುಧವಾರ ಮೃತದೇಹ ಪತ್ತೆಯಾಗಿದೆ. ಘಟನೆಗೆ ಸಂಬಂಧಿಸಿದಂತೆ ಅದೇ ಗ್ರಾಮದ ಅಣ್ಣಪ್ಪ ನಡುವಲಮನಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ನಡೆಯುತ್ತಿದೆ.
ಹತ್ಯೆಗೈದ ಬಳಿಕ ಅಣ್ಣಪ್ಪ ಶವವನ್ನು 8 ಕಿ.ಮೀ. ದೂರದ ಹಲಗೇರಿ ಹಳ್ಳದಲ್ಲಿ ಹೂತು ಹಾಕಿದ್ದ. ಜು.19 ರಂದು ಮಂಜುನಾಥ ನಾಪತ್ತೆಯಾಗಿದ್ದ. ಈ ಕುರಿತು ಬಾಲಕನ ಪಾಲಕರು ಕುಕನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣದ ಜಾಡು ಹಿಡಿದು ಅಣ್ಣಪ್ಪನ ಮೇಲೆ ಸಂಶಯಗೊಂಡು ವಿಚಾರಣೆ ನಡೆಸಿದಾಗ ಕೊಲೆ ಮಾಡಿರುವ ವಿಚಾರ ಬಾಯಿಬಿಟ್ಟಿದ್ದು, ಶವ ಹೂತಿರುವ ಸ್ಥಳವನ್ನು ತೋರಿಸಿದ್ದಾನೆ.
ಗಂಡನನ್ನು ಕೊಂದು ದೂರು ಕೊಟ್ಟ ಪತ್ನಿ ಸೇರಿ ನಾಲ್ವರು ಆರೆಸ್ಟ್..!
ಮಾಫಿಯಾ ಕೈವಾಡ ಆರೋಪ
4ನೇ ತರಗತಿಯಲ್ಲಿ ಓದುತ್ತಿದ್ದ ಬಾಲಕ ಮಂಜುನಾಥ ಗ್ರಾಮದಲ್ಲಿ ಓಡಾಡಿಕೊಂಡಿದ್ದ. ಆದರೆ ಇದ್ದಕ್ಕಿದ್ದಂತೆ ಜು.19 ರಂದು ನಾಪತ್ತೆಯಾಗಿದ್ದ. ಮಗನನ್ನು ಮಾಫಿಯಾದವರು ಹತ್ಯೆಗೈದಿದ್ದಾರೆ ಎಂಬ ಸಂಶಯ ವ್ಯಕ್ತಪಡಿಸಿ ಪಾಲಕರು ದೂರು ನೀಡಿದ್ದರು. ಬುಧವಾರ ಮೃತದೇಹ ಪತ್ತೆಯಾಗುತ್ತಿದ್ದಂತೆ ಅವರ ಅನುಮಾನ ನಿಜವಾಯಿತು. ಮಂಜುನಾಥನ ಕಣ್ಣು, ಕಿಡ್ನಿಯನ್ನು ಮಾಫಿಯಾಕ್ಕೆ ಅಣ್ಣಪ್ಪ ನಡುವಲಮನಿ ಮಾರಾಟ ಮಾಡಿದ್ದಾನೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಶವ ಪತ್ತೆಯಾಗುತ್ತಿದ್ದಂತೆ ತಂದೆ, ತಾಯಿಗಳ ಆಕ್ರಂದನ ಮುಗಿಲು ಮುಟ್ಟಿತ್ತು. ಚಿಕ್ಕ ವಯಸ್ಸಿನ ಮಗನನ್ನು ಕಳೆದುಕೊಂಡ ಪಾಲಕರು ಕರುಳು ಕಿತ್ತು ಬರುವಂತೆ ರೋದಿಸುತ್ತಿದ್ದರು.
ಸ್ಥಳಕ್ಕೆ ಭೇಟಿ ನೀಡಿದ ಎಸ್ಪಿ ಜಿ. ಸಂಗೀತಾ, ಪರಿಶೀಲನೆ ನಡೆಸಿದರು. ಬಾಲಕನ ಕೊಲೆಗೆ ನಿಖರವಾದ ಕಾರಣ ಏನು ಎಂಬುದನ್ನು ಈಗಲೇ ಹೇಳಲಾಗಲ್ಲ. ತನಿಖೆ ನಡೆಯುತ್ತಿದೆ. ಬಳಿಕ ಕಾರಣ ಗೊತ್ತಾಗಲಿದೆ ಎಂದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಇಲಾಖೆ ತನಿಖೆ ಮುಂದುವರಿಸಿದೆ.