Asianet Suvarna News Asianet Suvarna News

ವಿಪಕ್ಷ ನಾಯಕರನ್ನು ಸಂಪರ್ಕಿಸಿದ್ದು ನಿಜ : ಒಪ್ಪಿಕೊಂಡ ಬಿ.ಎಸ್.ವೈ

ಪ್ರತಿಪಕ್ಷದ ಶಾಸಕರ ಜತೆ ಮಾತನಾಡಿದ್ದು ನಿಜ. ಆತ್ಮಸಾಕ್ಷಿಯಾಗಿ ಮತ ಹಾಕಿ ಎಂದು ಕೇಳಿದ್ದೂ ನಿಜ’ ಎಂದು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡುವ ಮೊದಲು ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ. 

Yeddyurappa Emotional Farewell Speech In Karnataka Assembly

ಬೆಂಗಳೂರು : ಪ್ರತಿಪಕ್ಷದ ಶಾಸಕರ ಜತೆ ಮಾತನಾಡಿದ್ದು ನಿಜ. ಆತ್ಮಸಾಕ್ಷಿಯಾಗಿ ಮತ ಹಾಕಿ ಎಂದು ಕೇಳಿದ್ದೂ ನಿಜ’ ಎಂದು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡುವ ಮೊದಲು ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ. ಶನಿವಾರ ವಿಧಾನಸಭೆಯಲ್ಲಿ ತಮ್ಮ ಸರ್ಕಾರದ  ಪರವಾಗಿ ವಿಶ್ವಾಸಮತ ಯಾಚನೆಯ ಪ್ರಸ್ತಾವ ಮಂಡಿಸಿ ಸುದೀರ್ಘ ವಿದಾಯ ಭಾಷಣ ಮಾಡಿದ ಯಡಿಯೂರಪ್ಪ ಅವರು ಭಾವೋದ್ವೇಗದಿಂದ ಮಾತನಾಡುತ್ತಲೇ ನಡೆದಿರುವ ಬೆಳವಣಿಗೆಗಳನ್ನು ಹೊರಹಾಕಿದರು.

ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ, ರಾಜ್ಯದಲ್ಲಿ ಯಡಿಯೂರಪ್ಪ ಸರ್ಕಾರ ಇದ್ದರೆ ರಾಜ್ಯದ ಚಿತ್ರಣವೇ ಬದಲಾಗಲಿದೆ ಎಂದು ಬಿಜೆಪಿ ಸರ್ಕಾರಕ್ಕೆ ಸಹಕಾರ ನೀಡಲು ಪ್ರತಿಪಕ್ಷದ ಸ್ಥಾನದಲ್ಲಿರುವ ಅನೇಕರು ಒಪ್ಪಿಕೊಂಡಿದ್ದರು. ಆದರೆ ನಿರೀಕ್ಷೆಯಂತೆ   ನಡೆಯಲಿಲ್ಲ. ಅದನ್ನು ರಾಜಕಾರಣದಲ್ಲಿ ಪ್ರಶ್ನೆ ಮಾಡಲಾಗುವುದಿಲ್ಲ ಎಂದು ಹೇಳಿದರು. 

ಪ್ರತಿಪಕ್ಷದವರನ್ನು ಸಂಪರ್ಕಿಸಿ ಆತ್ಮಸಾಕ್ಷಿಯಾಗಿ ಮತ ಹಾಕುವಂತೆ ಕೇಳಿರುವುದು ನಿಜ. ಅವರೊಂದಿಗೆ ಮಾತನಾಡಿದಾಗ ಬಿಜೆಪಿಗೆ ಸಹಕಾರ ನೀಡುವ ಬಗ್ಗೆ ಭರವಸೆಗಳನ್ನು ನೀಡಿದ್ದರು. ಆದರೆ, ಜೆಡಿಎಸ್, ಕಾಂಗ್ರೆಸ್‌ನ ಮುಖಂಡರ ಭಯದಿಂದಾಗಿ ಹಿಂದೇಟು  ಹಾಕಿದ್ದಾರೆ. ಜನಪ್ರತಿನಿಧಿಗಳನ್ನು ಕೂಡಿ ಹಾಕಿದ್ದಲ್ಲದೇ, ಅವರ ಕುಟುಂಬದವರು ಮೊಬೈಲ್‌ನಲ್ಲಿ ಮಾತನಾಡುವುದಕ್ಕೂ ಅವಕಾಶ ಕೊಟ್ಟಿಲ್ಲ. 

ಶಾಸಕರ ಬಗ್ಗೆ ವಿಶ್ವಾಸ ಇಲ್ಲದೆ ಅಪನಂಬಿಕೆಯಿಂದ ರೆಸಾರ್ಟ್‌ಗೆ ಕರೆದೊಯ್ಯಲಾಯಿತು ಎಂದು ಜೆಡಿಎಸ್-ಕಾಂಗ್ರೆಸ್ ಪಕ್ಷದ ನಡೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ ಸರ್ಕಾರದ ವೈಫಲ್ಯಗಳ ವಿರುದ್ಧ ಹೋರಾಡಿದ ಫಲವಾಗಿ ಬಿಜೆಪಿಗೆ 104 ಸ್ಥಾನಗಳನ್ನು ಗೆಲ್ಲಿಸಿ ಮತದಾರರು ಆಶೀರ್ವಾದ ಮಾಡಿದ್ದಾರೆ. ಜೆಡಿಎಸ್, ಕಾಂಗ್ರೆಸ್ ಪಕ್ಷಕ್ಕೆ ಕಡಿಮೆ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಮೂಲಕ ಜನರು ತಿರಸ್ಕಾರ  ಮಾಡಿದ್ದಾರೆ. 

ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ 2016 ರ ಏ.14ರ ಅಂಬೇಡ್ಕರ್ ಜಯಂತಿ ದಿನದಂದು ಪಕ್ಷದ ರಾಜ್ಯಾಧ್ಯಕ್ಷನಾಗಿ ಆಯ್ಕೆ ಮಾಡಿದ ಬಳಿಕ ಅಂದೇ ಮುಂದಿನ ಮುಖ್ಯಮಂತ್ರಿ ಎಂದು ಘೋಷಣೆ ಮಾಡಿದರು. ಯಾವುದೇ ರಾಜ್ಯದಲ್ಲಿ ಚುನಾವಣೆಗೂ ಮುನ್ನ ಮುಖ್ಯಮಂತ್ರಿ ಎಂದು ಘೋಷಣೆ ಮಾಡಿದ ಉದಾಹರಣೆ ಇಲ್ಲ ಎಂದು ಹೇಳಿದರು.

ಚುನಾವಣೆಯಲ್ಲಿ ಗೆಲುವು ಸಾಧಿಸಿದ ಏಕೈಕ ದೊಡ್ಡ ಪಕ್ಷವನ್ನು ರಾಜ್ಯಪಾಲರು ಕರೆದು ಸರ್ಕಾರ ರಚನೆಗೆ ಆಮಂತ್ರಣ ನೀಡುವುದು ಸಾಮಾನ್ಯ. ಅದರಂತೆ ನಮಗೂ ಆಹ್ವಾನ ನೀಡಲಾಗಿತ್ತು. ನಾಡಿನ ರೈತರು, ಕೃಷಿ ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ರೂಪಿಸಲಾಗಿತ್ತು. ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ಸಿಗದೆ 3,700 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನೊಂದ ನಾಡಿನ ರೈತರ ಸಮುದಾಯಕ್ಕೆ ನ್ಯಾಯ ಒದಗಿಸಲು ಯೋಜನೆಗಳನ್ನು ಜಾರಿಗೊಳಿಸುವ ಉದ್ದೇಶ ಹೊಂದಲಾಗಿತ್ತು. ರೈತರು ಸ್ವಾಭಿಮಾನದ ಬದುಕು ನಡೆಸುವಂತೆ ಮಾಡಲು ರಾಜ್ಯದಲ್ಲಿ ಪ್ರವಾಸ ಕೈಗೊಂಡು ಸಮಸ್ಯೆಗಳನ್ನು ಆಲಿಸಿ ಪರಿಹಾರ ಕಂಡು ಕೊಳ್ಳಲಾಗಿತ್ತು. ಬಿಜೆಪಿ ಸರ್ಕಾರ ಮುಂದುವರಿದಿದ್ದರೆ ಅವುಗಳನ್ನು ಅನುಷ್ಠಾನಗೊಳಿಸಲಾಗುತ್ತಿತ್ತು ಎಂದರು. 

ಹಲವು ಬಾರಿ ಏಳು-ಬೀಳುಗಳನ್ನು ಕಂಡಿದ್ದೇವೆ. ಯಾವುದೇ ಮರ್ಜಿಯಲ್ಲಿ ರಾಜಕಾರಣ ಮಾಡಿಲ್ಲ. ಹೋರಾಟದ ಮೂಲಕ ರಾಜಕಾರಣವನ್ನು ಮಾಡಿಕೊಂಡು ಬಂದಿದ್ದೇನೆ. ಒಂದಿಬ್ಬರು ಶಾಸಕರು ಇದ್ದ ವೇಳೆಯಿಂದಲೂ ಹೋರಾಟ ನಡೆಸಿಕೊಂಡು ಬಂದಿದ್ದೇನೆ. ಎಂದಿಗೂ ಕೈಕಟ್ಟಿ ಕುಳಿತುಕೊಂಡವನಲ್ಲ. ಬಡವರ, ದೀನ-ದಲಿತರ ಸಮಸ್ಯೆಗಳನ್ನು ತಿಳಿದು ಕೊಳ್ಳಲು ಅವರ ಮನೆಯಲ್ಲಿ ಕಾಲ ಕಳೆ ದಿದ್ದೇನೆ.ಇದಕ್ಕಾಗಿ ಹಗುರವಾದ ಮಾತುಗಳನ್ನು ಕೇಳಬೇಕಾಯಿತು. ಆದರೂ ನನ್ನ ಕರ್ತವ್ಯ ನಿಭಾಯಿಸಿದ್ದೇನೆ ಎಂದು ಮಾರ್ಮಿಕವಾಗಿ ನುಡಿದರು.

Follow Us:
Download App:
  • android
  • ios