Asianet Suvarna News Asianet Suvarna News

ಸಂಪುಟ ರಹಸ್ಯ ಇಂದು ಬಯಲು; ನಾಳೆ ಸಂಪುಟ ವಿಸ್ತರಣೆ..?

ಖಾತೆಗಳ ಹಂಚಿಕೆಗೆ ಸಂಬಂಧಿಸಿದಂತೆ ಸಮ್ಮಿಶ್ರ ಸರ್ಕಾರದ ಅಂಗ ಪಕ್ಷಗಳಾದ ಜೆಡಿಎಸ್‌ ಮತ್ತು ಕಾಂಗ್ರೆಸ್‌ ನಡುವಿನ ಗೊಂದಲ ತಕ್ಕಮಟ್ಟಿಗೆ ನಿವಾರಣೆಯಾದಂತಾಗಿದ್ದು, ಇಂದು ಸ್ಪಷ್ಟಚಿತ್ರಣ ಹೊರಬೀಳುವ ನಿರೀಕ್ಷೆಯಿದೆ. ಹೆಚ್ಚೂ ಕಡಮೆ ಬರುವ ಶನಿವಾರ ಅಥವಾ ಭಾನುವಾರ ಸಂಪುಟ ವಿಸ್ತರಣೆಯಾಗುವ ಸಾಧ್ಯತೆಯಿದೆ. ಒಂದು ವೇಳೆ ಇಂದು ಗೊಂದಲ ಸಂಪೂರ್ಣ ಇತ್ಯರ್ಥವಾಗದಿದ್ದರೆ ಮುಂದಿನ ವಾರಕ್ಕೆ ಮುಂದೂಡಿಕೆಯಾಗುವ ಸಂಭವವೂ ಇದೆ ಎಂದು ಉನ್ನತ ಮೂಲಗಳು ತಿಳಿಸಿವೆ.

Karnataka Politics State Cabinet Secrate Today disclosure

ಬೆಂಗಳೂರ[ಜೂ.01]: ಖಾತೆಗಳ ಹಂಚಿಕೆಗೆ ಸಂಬಂಧಿಸಿದಂತೆ ಸಮ್ಮಿಶ್ರ ಸರ್ಕಾರದ ಅಂಗ ಪಕ್ಷಗಳಾದ ಜೆಡಿಎಸ್‌ ಮತ್ತು ಕಾಂಗ್ರೆಸ್‌ ನಡುವಿನ ಗೊಂದಲ ತಕ್ಕಮಟ್ಟಿಗೆ ನಿವಾರಣೆಯಾದಂತಾಗಿದ್ದು, ಇಂದು ಸ್ಪಷ್ಟಚಿತ್ರಣ ಹೊರಬೀಳುವ ನಿರೀಕ್ಷೆಯಿದೆ. ಹೆಚ್ಚೂ ಕಡಮೆ ಬರುವ ಶನಿವಾರ ಅಥವಾ ಭಾನುವಾರ ಸಂಪುಟ ವಿಸ್ತರಣೆಯಾಗುವ ಸಾಧ್ಯತೆಯಿದೆ. ಒಂದು ವೇಳೆ ಇಂದು ಗೊಂದಲ ಸಂಪೂರ್ಣ ಇತ್ಯರ್ಥವಾಗದಿದ್ದರೆ ಮುಂದಿನ ವಾರಕ್ಕೆ ಮುಂದೂಡಿಕೆಯಾಗುವ ಸಂಭವವೂ ಇದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಇಂದು ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷಗಳಾಗಿರುವ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಮುಖಂಡರು ಜಂಟಿ ಪತ್ರಿಕಾಗೋಷ್ಠಿ ಕರೆದು ಮಾಹಿತಿ ನೀಡುವುದಾಗಿ ಖುದ್ದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಗುರುವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟ ವಿಸ್ತರಣೆ ಕುರಿತಂತೆ ಮೈತ್ರಿ ಪಕ್ಷಗಳ ನಡುವೆ ಯಾವುದೇ ಗೊಂದಲವಿಲ್ಲ. ಈ ಬಗ್ಗೆ ಚರ್ಚೆ ನಡೆದಿದ್ದು, ಅಂತಿಮ ನಿರ್ಧಾರ ಕೈಗೊಂಡಿಲ್ಲ ಅಷ್ಟೆ. ಶುಕ್ರವಾರ ಉಭಯ ಪಕ್ಷಗಳ ಮುಖಂಡರು ಜಂಟಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ಒದಗಿಸುತ್ತೇವೆ ಎಂದು ಹೇಳಿದರು.

ಈ ನಡುವೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಮುಖ್ಯಮಂತ್ರಿ ಕುಮಾರಸ್ವಾಮಿ ಅವರೊಂದಿಗೆ ವಿದೇಶದಿಂದ ದೂರವಾಣಿ ಮೂಲಕ ಸಂಪರ್ಕಿಸಿ ಸಂಪುಟ ವಿಸ್ತರಣೆ ಸಂಬಂಧ ಮಾತುಕತೆ ನಡೆಸಿದ್ದಾರೆ ಎಂಬ ಸುದ್ದಿಯೊಂದು ಹೊರಬಿದ್ದಿದೆ. ಖಾತೆಗಳ ಹಂಚಿಕೆಗೆ ಅವರೇ ಸುಲಭವಾದ ಸೂತ್ರ ನೀಡಿ ಬಿಕ್ಕಟ್ಟು ಬಗೆಹರಿಸಿದ್ದಾರೆ ಎನ್ನಲಾಗಿದೆ. ಆದರೆ, ಅದನ್ನು ಉಭಯ ಪಕ್ಷಗಳ ಯಾವೊಬ್ಬ ಮುಖಂಡರೂ ಖಚಿತಪಡಿಸಿಲ್ಲ.

ಆದರೆ, ಪ್ರಮುಖ ಖಾತೆಗಳಾದ ಹಣಕಾಸು ಮತ್ತು ಇಂಧನ ಇಲಾಖೆಯ ಹಂಚಿಕೆ ಕುರಿತ ಬಿಕ್ಕಟ್ಟು ಬಗೆಹರಿದಿದೆ ಎಂದು ಜೆಡಿಎಸ್‌ ಮೂಲಗಳು ಸ್ಪಷ್ಟಪಡಿಸಿವೆ. ಹಣಕಾಸು ಖಾತೆಯನ್ನು ಜೆಡಿಎಸ್‌ಗೆ ಬಿಟ್ಟುಕೊಡಲು ಒಪ್ಪಿಕೊಂಡಿರುವ ಕಾಂಗ್ರೆಸ್‌ ಇಂಧನ ಖಾತೆಯನ್ನು ತನ್ನ ಬಳಿಯೇ ಉಳಿಸಿಕೊಳ್ಳಲಿದೆ.

ಈ ನಡುವೆ ಕಾಂಗ್ರೆಸ್‌ ಉಸ್ತುವಾರಿ ವೇಣುಗೋಪಾಲ್‌ ಅವರು ಗುರುವಾರ ಪಕ್ಷದ ರಾಜ್ಯ ನಾಯಕರೊಂದಿಗೆ ಸುದೀರ್ಘ ಮಾತುಕತೆ ನಡೆಸಿದರು. ಅಲ್ಲದೆ, ಕೆಲವು ಕಾಂಗ್ರೆಸ್‌ ನಾಯಕರು ಮುಖ್ಯಮಂತ್ರಿ ಕುಮಾರಸ್ವಾಮಿ ಅವರೊಂದಿಗೆ ಸಮಾಲೋಚನೆ ನಡೆಸಿ ಬಿಕ್ಕಟ್ಟು ಪರಿಹರಿಸಿಕೊಳ್ಳುವ ನಿಟ್ಟಿನಲ್ಲಿ ಗಂಭೀರ ಪ್ರಯತ್ನ ನಡೆಸಿದರು ಎಂದು ವಿಶ್ವಸನೀಯ ಮೂಲಗಳಿಂದ ತಿಳಿದು ಬಂದಿದೆ.

Follow Us:
Download App:
  • android
  • ios