ಎಸ್. ಗಿರೀಶ್ ಬಾಬು

ಬೆಂಗಳೂರು: ಇನ್ನೊಂದೇ ವಾರದಲ್ಲಿ ಬಹಿರಂಗ ಪ್ರಚಾರ ಅಂತ್ಯ. ಅದಾಗಿ ಎರಡು ದಿನಕ್ಕೆ ಮತದಾನ. ಹೀಗಾಗಿಯೇ ಕಾಂಗ್ರೆಸ್ ಅಧ್ಯಕ್ಷ  ಹುಲ್ ಗಾಂಧಿ, ಪ್ರಧಾನಿ ಮೋದಿ ಆದಿಯಾಗಿ ಎಲ್ಲ ಪಕ್ಷಗಳ ನಾಯಕರು ಈಗ ಬಿಡುವಿಲ್ಲದೆ ಪ್ರಚಾರದಲ್ಲಿ ಮುಳುಗಿದ್ದಾರೆ. ‘ಮಾಡು ಇಲ್ಲವೇ ಮಡಿ’ ಸಮಯ ವಿದು. ಇಂತಹ ಸಂದರ್ಭದಲ್ಲೇ ನಾಯಕರು ಹಳೆ ಗಾಯಗಳನ್ನು ಕೆದಕುವುದು. ಜೆಡಿಎಸ್ ವರಿಷ್ಠ ಎಚ್.ಡಿ.  ವೇಗೌಡರು ಅದನ್ನೇ ಮಾಡಿದ್ದಾರೆ. ಜೆಡಿಎಸ್-ಬಿಜೆಪಿ ಹತ್ತಿರವಾಗಿದೆ ಎಂದು ಪದೇ ಪದೇ ಹೇಳಿ ಜನರ ಮನಸ್ಸಿನಲ್ಲಿ ನಿಲ್ಲುವಂತೆ ಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತಂತ್ರಕ್ಕೆ ಪ್ರತಿ ತಂತ್ರವಾಗಿ ಜೆಡಿಎಸ್ ವರಿಷ್ಠ ದೇವೇಗೌಡ 2004 ರ ಸಂಗತಿಯೊಂದನ್ನು ಎಳೆದು ತಂದಿದ್ದಾರೆ. ಅದು ಸಿದ್ದರಾಮಯ್ಯ ಅವರೇ ಬಿಜೆಪಿ ಜತೆ ಸೇರಿ ಸರ್ಕಾರ ಮಾಡೋಣ ಎಂದಿದ್ದರು ಎಂಬುದು. ಹೌದಾ? ಸಿದ್ದರಾಮಯ್ಯ  ಆ ರೀತಿ ಹೇಳಿದ್ರಾ? ಅಸಲಿಗೆ 14 ವರ್ಷದ ಹಿಂದೆ ನಡೆದಿದ್ದು ಏನು ಎಂಬುದರಿಂದ ಹಿಡಿದು ಅಮಿತ್ ಶಾ-ಕುಮಾರಸ್ವಾಮಿ ಮಾತುಕತೆಯ ಸಾಕ್ಷಿ ಹೊರ ಬರೋದು ಯಾವಾಗ? ತಮ್ಮ ಪುತ್ರ ಡಾ|ಯತೀಂದ್ರ ರಾಜಕಾರಣಕ್ಕೆ ಬರುವಂತಾಗಿದ್ದು ಏಕೆ?  ಯಡಿಯೂರಪ್ಪ ಬಗ್ಗೆ ‘ಪಾಪ’ ಅಂತ ಅನಿಸಿದ್ದು ಏಕೆ ಎಂಬುದರವರೆಗೆ ‘ಕನ್ನಡಪ್ರಭಕ್ಕೆ’ ನೀಡಿದ ವಿಶೇಷ ಸಂದರ್ಶನದಲ್ಲಿ  ಮುಖ್ಯಮಂತ್ರಿ ಸಿದ್ದರಾಮಯ್ಯ ವಿವರವಾಗಿ ಮಾತನಾಡಿದ್ದಾರೆ.

ಬಿಜೆಪಿ ಅಂದ್ರೆ ಹರಿಹಾಯುವ ನೀವು 2004ರಲ್ಲಿ ಬಿಜೆಪಿ ಜತೆ ಸೇರೋಣ ಅಂತ ದೇವೇಗೌಡರಿಗೆ ಹೇಳಿದ್ದಿರಂತೆ?

ಅದು ಸಂಪೂರ್ಣ ಸುಳ್ಳು ಆರೋಪ. ಒಬ್ಬ ಮಾಜಿ ಪ್ರಧಾನಿಯಾಗಿ ದೇವೇಗೌಡರು ಈ ರೀತಿ ಹಸಿ ಸುಳ್ಳುಗಳನ್ನು ಹೇಳಬಾರದು. ಆಯ್ತು, ನಾನು ಹೇಳಿದ್ದೇ ಹೌದಾದರೆ, ದೇವೇಗೌಡರು 14 ವರ್ಷ ಸುಮ್ಮನೆ ಏಕಿದ್ದರು? ಆಗಲೇ ಹೇಳಬಹುದಾಗಿತ್ತಲ್ಲ! 

ಜೆಡಿಎಸ್‌ಗೆ ಮುಸ್ಲಿಂ ಮತಗಳು ಬೀಳಬಾರದು ಅನ್ನೋ ಕಾರಣಕ್ಕೆ ನೀವು ಜೆಡಿಎಸ್ -ಬಿಜೆಪಿ ಒಳ ಒಪ್ಪಂದದ ಆರೋಪ ಮಾಡಿ ಜೆಡಿಎಸ್‌ನ ಜಾತ್ಯತೀತತೆ ಕೆಡಿಸುತ್ತಿದ್ದೀರಿ?

ಮುಸ್ಲಿಂ ಮತಗಳು ಜೆಡಿಎಸ್‌ಗೆ ಹೋಗುವುದನ್ನು ತಡೆಯುವ ಉದ್ದೇಶದಿಂದ ನಾನು ಈ ಮಾತು ಹೇಳುತ್ತಿಲ್ಲ. ಅವರು ಏನು  ಮಾಡುತ್ತಿದ್ದಾರೋ ಅದನ್ನು ಹೇಳುತ್ತಿದ್ದೇನೆ. ನಾನು ಹೇಳುವುದಷ್ಟೇ ಅಲ್ಲ, ಅವರ (ಜೆಡಿಎಸ್ ಹಾಗೂ ಬಿಜೆಪಿ ನಾಯಕರ)  ನಡವಳಿಕೆಯಿಂದಲೂ ಇದು ಸ್ಪಷ್ಟವಾಗುತ್ತಿದೆ. ಬಿಜೆಪಿ ಯವರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್‌ಗೆ ನೆರವಾಗಲು ಅಪರಿಚಿತ ಅಭ್ಯರ್ಥಿ ಹಾಕಿದ್ದಾರೆ. ವರುಣ ಕ್ಷೇತ್ರದಲ್ಲೂ ಕೂಡ ಅಪರಿಚಿತ ಅಭ್ಯರ್ಥಿ ಬಿಜೆಪಿಯಿಂದ ಸ್ಪರ್ಧಿಸುತ್ತಿದ್ದಾರೆ. ಕೆ.ಆರ್.ಪೇಟೆ, ಪಿರಿಯಾಪಟ್ಟಣ ಕ್ಷೇತ್ರಗಳಲ್ಲಿ ಸಹ ದುರ್ಬಲ ಅಭ್ಯರ್ಥಿಗಳನ್ನು ಬಿಜೆಪಿಯಿಂದ ಕಣಕ್ಕೆ ಇಳಿಸಲಾಗಿದೆ. ಇದು ಬಹಳ ಸ್ಪಷ್ಟವಾಗಿ ಜೆಡಿಎಸ್ ಹಾಗೂ ಬಿಜೆಪಿ ನಡುವೆ ಒಳ ಒಪ್ಪಂದವಿದೆ ಎಂಬುದನ್ನು ಸಾಬೀತು ಪಡಿಸುತ್ತದೆ. ಇದು ಕೆಲ ಉದಾಹರಣೆಯಷ್ಟೇ, ಇಂತಹ ಹಲವು ಉದಾಹರಣೆಗಳಿವೆ. ಇದೆಲ್ಲಕ್ಕಿಂತ ಮುಖ್ಯವಾಗಿ ಚಾಮುಂಡೇಶ್ವರಿಯಲ್ಲಿ ನನ್ನ ಪ್ರತಿಸ್ಪರ್ಧಿ ಜಿ.ಟಿ. ದೇವೇಗೌಡ ಒಂದು ಹೇಳಿಕೆ ನೀಡಿದ್ದಾರೆ. ಅದು, ಎಲ್ಲೆಲ್ಲಿ ಬಿಜೆಪಿಗೆ ಶಕ್ತಿಯಿದೆ, ಅಲ್ಲಿ ನಾವು ಮತ್ತು ನಮಗೆ ಶಕ್ತಿ ಇರುವ ಕಡೆ ಬಿಜೆಪಿ ಬೆಂಬಲ ನೀಡುತ್ತಿದೆ ಅಂತ. ಒಳ ಒಪ್ಪಂದವಿದೆ ಎಂಬುದಕ್ಕೆ ಇದಕ್ಕಿಂತ ದೊಡ್ಡ ಸಾಕ್ಷಿ ಏನು ಬೇಕು?

ಸಮಯ ಬರಲಿ ಅಂತ ಕಾಯುತ್ತಿದ್ದಿರಬಹುದು? ಅಸಲಿಗೆ ಆಗ ನಡೆದಿದ್ದು ಏನು?

ಆಗ ವಾಸ್ತವವಾಗಿ ಚರ್ಚೆ ನಡೆದಿದ್ದು ಕಾಂಗ್ರೆಸ್ ಜತೆ ಸೇರಿ ಸರ್ಕಾರ ಮಾಡುವ ಬಗ್ಗೆ. ಕಾಂಗ್ರೆಸ್ ಬೆಂಬಲ ಪಡೆಯೋಣ, ನಾನು ಮುಖ್ಯಮಂತ್ರಿಯಾಗುತ್ತೇನೆ. ಅದಕ್ಕೆ ಕಾಂಗ್ರೆಸ್ ನವರು ಒಪ್ಪುತ್ತಾರೆ. ನೀವು ಒಪ್ಪಿಕೊಳ್ಳಿ ಎಂದು ದೇವೇಗೌಡರಿಗೆ ಹೇಳಿದ್ದೆ. ಆದರೆ, ಅದಕ್ಕೆ ದೇವೇಗೌಡ ಒಪ್ಪಲಿಲ್ಲ. ಅಲ್ಲದೆ, ಕಾಂಗ್ರೆಸ್ ಜತೆ ನಡೆದ ಸಭೆಯಲ್ಲಿ ನೀವೇ (ಕಾಂಗ್ರೆಸ್ ನವರೇ) ಸಿಎಂ ಆಗಿ ಅಂತ ಹೇಳಿ ನನಗೆ ಅನ್ಯಾಯ
ಮಾಡಿಬಿಟ್ಟರು.

ಆಗ ನೀವು ಬಿಜೆಪಿ ಜತೆ ಹೋಗೋಣ ಎಂದು ಹೇಳಿದಿರಿ ಎಂಬುದು ದೇವೇಗೌಡರ ಆರೋಪ?

ಇಲ್ಲ, ಅದು ಸುಳ್ಳು. ಒಂದು ವೇಳೆ ನನಗೆ ಅಂತಹ ಉದ್ದೇಶ ಇದ್ದಿದ್ದರೆ, 1999 ರಲ್ಲಿ ನಾನೂ ಜೆಡಿಯು ಸೇರಿ ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಳ್ಳಬಹುದಿತ್ತು. ಆಗ ಜನತಾದಳದಲ್ಲಿದ್ದ ಜೆ.ಎಚ್.ಪಟೇಲ್, ರಾಮಕೃಷ್ಣ ಹೆಗಡೆ, ಸಿಂಧ್ಯ, ಎಂ.ಪಿ.ಪ್ರಕಾಶ್ ಎಲ್ಲ ಜೆಡಿಯು ಜತೆ ಹೋಗಿ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡರು. ಆದರೆ, ನಾನು ಹೋಗಲಿಲ್ಲ. ದೇವೇಗೌಡರ ಜತೆ ಉಳಿದುಕೊಂಡೆ. ಒಂದು ವೇಳೆ ಆಗ ನಾನು, ಇಬ್ರಾಹಿಂ, ಜಾರಕಿಹೊಳಿ, ಮಹದೇವಪ್ಪ, ಲಕ್ಷ್ಮೀಸಾಗರ್, ಕೋದಂಡರಾಮಯ್ಯ, ವೆಂಕಟೇಶ್ ಎಲ್ಲಾ ಜೆಡಿಯುಗೆ ಹೋಗಿದ್ದರೆ ಜನತಾದಳ ಈಗ ಇರುತ್ತಲೇ ಇರಲಿಲ್ಲ. ದೇವೇಗೌಡ ಒಬ್ಬಂಟಿಯಾಗಿ ಬಿಡುತ್ತಿದ್ದರು. ನಿಜ ಹೇಳಬೇಕು ಎಂದರೆ, ಆಗ ಜಾರ್ಜ್  ಫರ್ನಾಂಡಿಸ್ ನನಗೆ ತುಂಬಾ ಆತ್ಮೀಯರಾಗಿದ್ದರು. ಏಕೆಂದರೆ, ನಾನು ಮೊದಲಿ ನಿಂದಲೂ ಜಾರ್ಜ್ ಫರ್ನಾಂಡಿಸ್ ಜತೆ ರಾಜಕಾರಣ
ಮಾಡುತ್ತಿದ್ದೆ. ಅವರು ಜೆಡಿಯುಗೆ ಬನ್ನಿ ಅಂತ ಕರೆದರೂ ನಾನು ಹೋಗಲಿಲ್ಲ. ಆಗಲೇ ಹೋಗದವನು, 2004ರಲ್ಲಿ ಹೋಗುತ್ತೀನಾ? ದೇವೇಗೌಡರು ಸುಳ್ಳು ಹೇಳುತ್ತಿದ್ದಾರೆ.

ದೇವೇಗೌಡರು ಹೇಳಿದ್ದು ಸುಳ್ಳು ಅನ್ನುವಿರಿ. ಆದರೆ, ನೀವು ಜೆಡಿಎಸ್-ಬಿಜೆಪಿ ಒಳ ಒಪ್ಪಂದವಾಗಿದೆ ಎನ್ನುವುದಕ್ಕೆ ಸಾಕ್ಷಿ ಏಕೆ ನೀಡುತ್ತಿಲ್ಲ?

ನನಗೆ ಇದ್ದ ಖಚಿತ ಮಾಹಿತಿಯನ್ನು ನೀಡಿದ್ದೇನೆ. ನೋಡೋಣ, ಸಮಯ ಬಂದಾಗ ನನ್ನ ಬಳಿ ಇರುವ ದಾಖಲಾತಿ ಬಗ್ಗೆಯೂ ಹೇಳುತ್ತೇನೆ. ? ದಾಖಲೆಯಿದ್ದರೆ, ಬಹಿರಂಗಪಡಿಸಲು ಮೀನಮೇಷವೇಕೆ? 

ಅಮಿತ್ ಶಾ ಹಾಗೂ ಕುಮಾರಸ್ವಾಮಿ ಇಬ್ಬರೂ ಒಂದೇ ವಿಮಾನದಲ್ಲಿ ದೆಹಲಿಗೆ ಹೋಗಿದ್ದರು. ಅಲ್ಲಿ ಇಬ್ಬರು ಮಾತುಕತೆ ನಡೆಸಿದ್ದರು. ಇದು ನನ್ನ ಬಳಿ ಇರುವ ಖಚಿತ ಮಾಹಿತಿ. ಅದನ್ನು ಹೇಳಿದ್ದೇನೆ. ಅಲ್ಲ, ನನ್ನ ಬಳಿ ದಾಖಲೆ ಕೇಳುತ್ತೀರಲ್ಲ, ಪ್ರಧಾನಿ ನರೇಂದ್ರ ಮೋದಿ  ನನ್ನ ಸರ್ಕಾರವನ್ನು ಶೇ.೧೦ರಷ್ಟು ಪರ್ಸಂಟೇಜ್ ಸರ್ಕಾರ ಎನ್ನುತ್ತಾರಲ್ಲ, ಅವರ ಬಳಿ ಯಾವ ಸಾಕ್ಷಿಯಿದೆ? ಸೀದಾ ರುಪಯ್ಯಾ ಅಂತ ಹೇಳಿದರು, ಅದಕ್ಕೇನು ಸಾಕ್ಷಿ ಕೊಡುತ್ತಾರೆ? ಇನ್ನು ಈ ದೇವೇಗೌಡರು ೨೦೦೪ರಲ್ಲಿ ನಾನು ಬಿಜೆಪಿ ಜತೆ ಹೋಗೋಣ ಎಂದಿದ್ದೆ ಅಂತಾರಲ್ಲ ಅದಕ್ಕೆ ಏನಿದೆ ಸಾಕ್ಷಿ? ಇಂತಹ ಆರೋಪ ಮಾಡುವ ಅವರು ಮೊದಲು ಸಾಕ್ಷಿ ನೀಡಲಿ...

24 ಗಂಟೆಯಲ್ಲಿ ಸಾಕ್ಷಿ ಕೊಡಲಿ ಎಂದು ಕುಮಾರಸ್ವಾಮಿ ಸವಾಲು ಹಾಕಿದ್ದಾರೆ? 

ನನಗೆ 24 ಗಂಟೆ ಕೊಡುತ್ತಾರಾ? ನಾನು ಅವರಿಗೆ ೪೮ ಗಂಟೆ ಕೊಡುತ್ತೇನೆ. ಅವರೂ ಸಾಕ್ಷಿ ಕೊಡಲಿ. 

 ರಾಹುಲ್ ಹಾಗೂ ನೀವು, ದೇವೇಗೌಡರ ಮೇಲೆ ಹರಿಹಾಯ್ದು ಅವರಿಗೆ ಅವಮಾನ ಮಾಡುತ್ತಿದ್ದೀರಿ ಎಂದು ಮೋದಿ ಹೇಳಿದ್ದಾರೆ?

ನಾನಾಗಲೀ, ರಾಹುಲ್ ಗಾಂಧಿಯವರಾಗಲೀ, ದೇವೇಗೌಡರ ಬಗ್ಗೆ ಕೆಟ್ಟ ಪದ ಬಳಸಿ ಟೀಕೆ ಮಾಡಿಲ್ಲ. ಜೆಡಿಎಸ್ ಪಕ್ಷ ಬಿಜೆಪಿಯ ‘ಬಿ’ ಟೀಮ್ ಎಂದು ರಾಹುಲ್ ಹೇಳಿಕೆ ನೀಡಿದ್ದರೇ ಹೊರತು ವೈಯಕ್ತಿಕವಾಗಿ ಯಾವತ್ತೂ ದೇವೇಗೌಡರ ಮೇಲೆ ಆರೋಪ ಮಾಡಿಲ್ಲ. ಕೆಟ್ಟದಾಗಿ ಮಾತನಾಡಿಲ್ಲ. ಇನ್ನು ನಾನು ಕೂಡ ದೇವೇಗೌಡ ಹಾಗೂ ಕುಮಾರಸ್ವಾಮಿ ಮಾಡುವ ಆರೋಪಗಳಿಗೆ ಪ್ರತ್ಯುತ್ತರ ನೀಡುತ್ತಿದ್ದೇನೆ. ಹೀಗಾಗಿ, ಮೋದಿ, ದೇವೇಗೌಡರನ್ನು ಹೊಗಳುವ ತಂತ್ರಗಾರಿಕೆಗೆ ಮುಂದಾಗಿದ್ದಾರೆ ಅಷ್ಟೆ. ಈಗ ದೇವೇಗೌಡರನ್ನು ಹೊಗಳುವ ಮೋದಿ ಕಳೆದ ಲೋಕಸಭೆಯಲ್ಲಿ ದೇವೇಗೌಡರನ್ನು ವೃದ್ಧಾಶ್ರಮಕ್ಕೆ ಕಳುಹಿಸಬೇಕು ಎಂದಿರಲಿಲ್ಲವೇ? ಇನ್ನು ನರೇಂದ್ರ ಮೋದಿ ಪ್ರಧಾನಿಯಾದರೆ ನಾನು ಲೋಕಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತೇನೆ. ಲೋಕಸಭೆಗೆ ಹೋಗುವುದಿಲ್ಲ ಎಂದು ದೇವೇಗೌಡ ಹೇಳಿರಲಿಲ್ಲವೇ? ಅವೆಲ್ಲ ಈಗ ಏನಾಯ್ತು? ನೋಡಿ, ರಾಜಕಾರಣಕ್ಕಾಗಿ ಈ ರೀತಿ ಸುಳ್ಳು ಹೇಳಬಾರದು, ಗಿಮಿಕ್‌ಗಳನ್ನು ಮಾಡಬಾರದು. 

ಈ ಎಲ್ಲ ಬೆಳವಣಿಗೆಯಿಂದ ಒಕ್ಕಲಿಗ ಮತಗಳು ಕಾಂಗ್ರೆಸ್ ವಿರುದ್ಧ ಕ್ರೊಢೀಕರಣಗೊಳ್ಳುವುದಿಲ್ಲವೇ? ಆ ಭೀತಿ ನಿಮಗಿಲ್ಲವೇ?

ಕಾಂಗ್ರೆಸ್‌ಗೆ ಎಲ್ಲಾ ಜಾತಿಯ ಮತಗಳು ಇವೆ. ಲಿಂಗಾಯತರ ಮತಗಳು, ಒಕ್ಕಲಿಗರ ಮತಗಳು, ಕುರುಬರು, ಪರಿಶಿಷ್ಟರು, ಅಲ್ಪಸಂಖ್ಯಾತರು... ಹೀಗೆ ಎಲ್ಲಾ ಜಾತಿಯವರ ಮತಗಳು ಇವೆ. ನಮ್ಮ ಸರ್ಕಾರವೂ ಯಾವುದೇ ಒಂದು ಜಾತಿಗಾಗಿ ಯೋಜನೆ ಮಾಡಿಲ್ಲ. ಅನ್ನಭಾಗ್ಯ, ಕ್ಷೀರ ಭಾಗ್ಯ, ಆರೋಗ್ಯ ಭಾಗ್ಯ, ಉಚಿತ ಲ್ಯಾಪ್‌ಟಾಪ್... ಹೀಗೆ ಎಲ್ಲ ಯೋಜನೆಯನ್ನು ಎಲ್ಲರಿಗಾಗಿ ಮಾಡಿದ್ದೇವೆ. ಇದರಿಂದ ಎಲ್ಲಾ ಜಾತಿಯವರಿಗೂ ಲಾಭವಾಗಿದೆ. ಹೀಗಿರುವಾಗ ಯಾವುದೇ ಒಂದು ಜಾತಿ ನಮಗೆ ಏಕೆ ವಿರುದ್ಧವಾಗುತ್ತದೆ? ಕೇವಲ ಮೋದಿ, ದೇವೇಗೌಡ ಹೇಳಿದ ಕೂಡಲೇ ಒಂದು ಜಾತಿ ಜನರೆಲ್ಲ ನಮಗೆ ವಿರುದ್ಧವಾಗುತ್ತಾರಾ? ಅದೆಲ್ಲ ಸುಳ್ಳು.

ಆಯ್ತು, ನೀವು ಹೇಳ್ತೀರಿ ಅಂತ ಅವರಿಬ್ಬರೂ ಬಹಿರಂಗವಾಗಿ ಒಂದಾಗಿ ಬಿಟ್ಟರೆ... ಅಷ್ಟರ ಮಟ್ಟಿಗೆ ಕಾಂಗ್ರೆಸ್‌ಗೆ ನಷ್ಟವಾಗುವುದಿಲ್ಲವೇ?

ಇದರಿಂದ ಕಾಂಗ್ರೆಸ್‌ಗೆ ಏನೂ ಆಗುವುದಿಲ್ಲ, ನಮ್ಮ ಮತದಾರರು ಒಟ್ಟಾಗಿದ್ದಾರೆ. ನಮ್ಮ ಅಭಿವೃದ್ಧಿ ಕಾರ್ಯಕ್ಕೆ ಮತ ಬೀಳುತ್ತದೆ. ನಮ್ಮ ಕಾರ್ಯವೈಖರಿ ನೋಡಿರುವ ಎಲ್ಲ ಜಾತಿಯ ಬಡವರು ಕಾಂಗ್ರೆಸ್ ಪರ ಮತ ಹಾಕುತ್ತಾರೆ.

ಸಮಾಜವಾದಿ ನೀವು. ಕೌಟುಂಬಿಕ ರಾಜಕಾರಣ ವಿರೋಧಿಸುತ್ತಿದ್ದ ನೀವೇ ಕುಟುಂಬ ರಾಜಕಾರಣ ಮಾಡುತ್ತಿದ್ದೀರಿ?

ನೋಡಿ, ನನ್ನ ಮೊದಲ ಮಗ ರಾಕೇಶ್ ವರುಣ ವಿಧಾನಸಭಾ ಕ್ಷೇತ್ರದ ಉಸ್ತುವಾರಿ ನೋಡಿಕೊಳ್ಳುತ್ತಿದ್ದ. ಅಲ್ಲಿ ಆತನಿಗೆ ಸ್ಪರ್ಧಿಸುವ ಬಯಕೆಯಿತ್ತು. ಆ ವೇಳೆಗೆ ಚಾಮುಂಡೇಶ್ವರಿ ಯಿಂದ ಸ್ಪರ್ಧಿಸಲು ಮಾನಸಿಕವಾಗಿ ಸಿದ್ಧನಾಗಿ ಬಿಟ್ಟಿದ್ದೆ. ಇದೇ ವೇಳೆ ರಾಕೇಶ್ ಮೃತಪಟ್ಟ. ಆ ನಂತರ ವರುಣ ಕ್ಷೇತ್ರ ನೋಡಿಕೊಳ್ಳಲು ಯಾರೂ ಇರಲಿಲ್ಲ. ಹೀಗಾಗಿ ಎರಡನೇ ಮಗ ಯತೀಂದ್ರನಿಗೆ ಕ್ಷೇತ್ರವನ್ನು ನೋಡಿಕೊಳ್ಳಲು ಹೇಳಿದ್ದೆ. ಕ್ರಮೇಣ ಜನರು ಕೂಡ ಯತೀಂದ್ರನನ್ನು ಒಪ್ಪಿಕೊಂಡರು. ಆತನನ್ನೇ ಚುನಾವಣೆಗೆ ಇಳಿಸುವಂತೆ ಹೇಳಿದರು. ಹೀಗಾಗಿ ಯತೀಂದ್ರ ಸ್ಪರ್ಧಿಸುತ್ತಿದ್ದಾರೆ.  

ರಾಕೇಶ್ ಅವರಿಗೆ ರಾಜಕೀಯದ ಆಸಕ್ತಿಯಿತ್ತು. ಆದರೆ, ವೈದ್ಯರಾದ ಯತೀಂದ್ರ ಅವರಿಗೆ ಆಸಕ್ತಿಯೇ ಇರಲಿಲ್ಲ. ಒತ್ತಾಯ ಮಾಡಿದ್ರಾ? 

ನಾನೇನು ಯತೀಂದ್ರನಿಗೆ ಚುನಾವಣೆಗೆ ನಿಲ್ಲುವಂತೆ ಒತ್ತಾಯ ಮಾಡಿಲ್ಲ. ರಾಕೇಶ್ ಇದ್ದಾಗ ಯತೀಂದ್ರ ಲ್ಯಾಬ್ ನೋಡಿಕೊಳ್ಳುತ್ತಿದ್ದ. ರಾಕೇಶ್ ಮೃತನಾದ ನಂತರ ಲ್ಯಾಬ್ ಮತ್ತು ಕ್ಷೇತ್ರ ಎರಡರ ಜವಾಬ್ದಾರಿ ನಿರ್ವಹಿಸಬೇಕು ಎಂದು ನಾನೇ ಯತೀಂದ್ರನಿಗೆ ಹೇಳಿದ್ದೆ. ವಾರಕ್ಕೆ ಒಂದೆರಡು ದಿನ ಅಲ್ಲಿಗೆ ಹೋಗು ಎಂದಿದ್ದೆ. ಅನಂತರ ವಸತಿ ಸಮಿತಿ ಅಧ್ಯಕ್ಷ ಮಾಡಿದೆ. ಕ್ರಮೇಣ ಯತೀಂದ್ರನಿಗೆ ಕ್ಷೇತ್ರದ ಜನರ ಒಲವು ದೊರೆಯಿತು. ಹೀಗೆ ಆತ ರಾಜಕೀಯಕ್ಕೆ ಬಂದ. 

ಈಗ ಆಸಕ್ತಿ ಬಂದಿದೆಯೇ? ಚೆನ್ನಾಗಿ ತರಬೇತಿ  ನೀಡಿದ್ರಾ?

ಆತನಿಗೆ ರಾಜಕೀಯ ಜ್ಞಾನ ಚೆನ್ನಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಬದ್ಧತೆ ಇದೆ.

ನೀವೇ ವರುಣದಲ್ಲಿ ನಿಂತಿದ್ದರೆ, ಪ್ರತಿಪಕ್ಷಗಳು ಒಗ್ಗೂಡಿ ನಿಮ್ಮ ಮೇಲೆ ಬೀಳುವುದನ್ನು ತಪ್ಪಿಸಬಹುದಿತ್ತೇ?

ನಾನು ಯಾವುದೇ ಕ್ಷೇತ್ರದಿಂದ ಸ್ಪರ್ಧಿಸಿದ್ದರೂ ಪ್ರತಿಪಕ್ಷಗಳು ಈಗ ಮಾಡುತ್ತಿರುವುದನ್ನೇ ಮಾಡುತ್ತಿದ್ದರು. ಈಗ ಚಾಮುಂಡೇಶ್ವರಿ ಹಾಗೂ ಬಾದಾಮಿಯಲ್ಲಿ ಮಾಡುತ್ತಿರುವುದನ್ನು ಆಗ ವರುಣದಲ್ಲಿ ಮಾಡುತ್ತಿದ್ದರು.
 
ಸ್ಪರ್ಧಿಸಿರುವ ಮೂರು ಕ್ಷೇತ್ರಗಳಲ್ಲಿ ಯಾವುದೆಲ್ಲ ಗೆಲ್ಲುವ ವಿಶ್ವಾಸವಿದೆ?

ಮೂರೂ ಕ್ಷೇತ್ರ ಗೆಲ್ಲುತ್ತೇವೆ. ನಾನು ಚಾಮುಂಡೇಶ್ವರಿ ಹಾಗೂ ಬಾದಾಮಿಯಲ್ಲಿ, ಮಗ ವರುಣದಲ್ಲಿ ಗೆಲ್ಲುತ್ತಾನೆ. 

ಚಾಮುಂಡೇಶ್ವರಿ ಹಾಗೂ ಬಾದಾಮಿ ಎರಡರಲ್ಲೂ ಗೆದ್ದರೆ, ಯಾವುದನ್ನುಉಳಿಸಿಕೊಳ್ಳುವಿರಿ?

ಅವಕಾಶ ಇದ್ದರೆ, ಎರಡನ್ನೂ ಇಟ್ಟುಕೊಳ್ಳುತ್ತಿದೆ. ಆದರೆ, ಆ ರೀತಿ ಮಾಡಲು ಅವಕಾಶವಿಲ್ಲ. ಒಟ್ಟಾರೆ, ಯಾವುದೇ ಇಟ್ಟುಕೊಂಡರೂ, ಎರಡು ಕ್ಷೇತ್ರಗಳೂ ನನ್ನ ಕ್ಷೇತ್ರವೇ. 

ಬಿಜೆಪಿ ಗೆದ್ದರೂ, ಯಡಿಯೂರಪ್ಪ ಸಿಎಂ ಆಗಲ್ಲ ಅಂತ ನೀವು ಹೇಳುತ್ತಿದ್ದೀರಿ?

ಆ ಪ್ರಶ್ನೇನೇ ಉದ್ಭವ ಆಗೋದಿಲ್ಲ. ಏಕೆಂದರೆ, ಬಿಜೆಪಿ ಅಧಿಕಾರಕ್ಕೆ ಬರೋದೇ ಇಲ್ಲ. ಯಡಿಯೂರಪ್ಪ ಸಿಎಂ ಆಗೋದಿಲ್ಲ. ಬಿಜೆಪಿಯಲ್ಲಿ ಯಡಿಯೂರಪ್ಪ ಮೂಲೆಗುಂಪು ಆಗಿದ್ದಾರೆ ಅಷ್ಟೇ.

ವಯಸ್ಸಾಯ್ತು ಅಂತ ಸಂಪುಟದಿಂದ  ಹಲವರನ್ನು ತೆಗೆದ್ರಿ. ಈಗ 85 ದಾಟಿದವರಿಗೂ ಟಿಕೆಟ್ ಕೊಟ್ಟಿದ್ದೀರಲ್ಲ?

೮೫ ವರ್ಷ ವಯಸ್ಸು ಮೀರಿದ ಶಾಮನೂರು ಶಿವಶಂಕರಪ್ಪ ಹಾಗೂ ಕಾಗೋಡು ತಿಮ್ಮಪ್ಪ ಟಿಕೆಟ್ ದೊರಕಿದೆ. ಗೆಲ್ಲುವ ಮಾನದಂಡ ನೋಡಿದಾಗ ಅವರಿಗೆ ಟಿಕೆಟ್ ನೀಡಬೇಕು ಎಂದು ಕ್ಷೇತ್ರದ ಜನರು ಹೇಳಿದರು. ಹೀಗಾಗಿ ಅವರಿಗೆ ಟಿಕೆಟ್ ನೀಡಬೇಕಾಯಿತು.

ಬಿಜೆಪಿ ‘ಬಳ್ಳಾರಿ ರಿಪಬ್ಲಿಕ್’ಗೆ ಮತ್ತೆ ಅವಕಾಶ ಕೊಡುತ್ತಿದೆ ಅಂತೀರಿ. ನೀವು ಆ ರಿಪಬ್ಲಿಕ್ ನಲ್ಲಿದ್ದ ಆನಂದ್‌ಸಿಂಗ್, ನಾಗೇಂದ್ರಗೆ ಟಿಕೆಟ್ ಕೊಟ್ರಿ?


ಆನಂದಸಿಂಗ್ ಬಿಜೆಪಿ ಬಿಡುವ ಮನಸ್ಥಿತಿಯಲ್ಲಿದ್ದರು. ಆಗ ಕ್ಷೇತ್ರದ ನಮ್ಮ ಕಾರ್ಯಕರ್ತರು ಅವರನ್ನು ತೆಗೆದುಕೊಳ್ಳಿ ಎಂದರು. ಇನ್ನು ನಾಗೇಂದ್ರ ಪಕ್ಷೇತರರಾಗಿದ್ದರು. ರಾಜ್ಯ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿದ್ದರು ಮತ್ತು ಆ ಸಮಯದಿಂದ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದರು. ಹೀಗಾಗಿ ಅವರಿಗೆ ಟಿಕೆಟ್ ಕೊಡಬೇಕಾಯಿತು.

ಒಟ್ಟಾರೆ, ಬಿಜೆಪಿಗೆ ಪ್ರತಿದಾಳಿ ಮಾಡಲು ಒಂದು ಅವಕಾಶ ಸೃಷ್ಟಿಯಾಯ್ತು?

ಬಿಜೆಪಿಗೆ ಅದೊಂದು ನೆಪ ಅಷ್ಟೆ. ವಾಸ್ತವವಾಗಿ ಗಣಿ ಲೂಟಿಕೋರರಿಗೆಲ್ಲ ಅವರು ಟಿಕೆಟ್ ನೀಡಿಲ್ಲವೇ? 

ಮೊದಲು ನಾನೇ ಸಿಎಂ ಅಂತಿದ್ರಿ. ಇತ್ತೀಚೆಗೆ ನಾನು ಸಿಎಂ ಆಗೋ ಸಾಧ್ಯತೆ ಹೆಚ್ಚು ಅಂತೀದ್ದಿರಿ, ಏಕೆ?

ಕಾಂಗ್ರೆಸ್ ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿಟ್ಟಿರುವ ಪಕ್ಷ. ಮುಖ್ಯಮಂತ್ರಿ ಪದವಿ ಅನ್ನೋದು ಶಾಸಕಾಂಗ ಪಕ್ಷದ ಸಭೆಯಲ್ಲಿ ತೀರ್ಮಾನವಾಗಬೇಕು. ಅನಂತರ ರಾಹುಲ್ ಅಂತಿಮ ನಿರ್ಧಾರ ಕೈಗೊಳ್ಳಬೇಕು. ಇವೆಲ್ಲ ಪ್ರಕ್ರಿಯೆ ಇರುತ್ತವೆ. ಹೀಗಾಗಿ ಈ ರೀತಿ ಹೇಳುತ್ತಿದ್ದೇನೆ. ಆದರೆ, ಸಿಎಂ ಆಗೋದು ನಾನೇ. ಅದನ್ನು ರಾಹುಲ್ ಗಾಂಧಿ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಈ ವಿಚಾರದಲ್ಲಿ ಯಾವ ರೀತಿಯ ಭಿನ್ನಾಭಿಪ್ರಾಯವೂ ಪಕ್ಷದಲ್ಲಿ ಇಲ್ಲ.

ಬಹಿರಂಗ ಪ್ರಚಾರ ಅಂತ್ಯಕ್ಕೆ ಏಳು ದಿನ ಇದೆ. ಈಗ ಮೋದಿ ಬಂದಿದ್ದಾರೆ. ಮೋದಿ ಮ್ಯಾಜಿಕ್ ನಡೆಯತ್ತೆ ಅಂತ ಬಿಜೆಪಿ ನಂಬಿದೆ, ನಡೆಯುತ್ತಾ?

ರಾಜ್ಯದಲ್ಲಿ ಮೋದಿಯ ಪ್ರಭಾವ ಇಲ್ಲವೇ ಇಲ್ಲ. ಅದು ನಡೆಯೋದೂ ಇಲ್ಲ. ಏಕೆಂದರೆ, ಅವರು ಕಳೆದ ನಾಲ್ಕು ವರ್ಷದಲ್ಲಿ ಕೇವಲ ಮಾತನಾಡಿದ್ದಾರೆಯೇ ಹೊರತು ಯಾವುದೇ ಸಾಧನೆ ಮಾಡಿಲ್ಲ. ಮೋದಿ ಸರ್ಕಾರ ಸಂಪೂರ್ಣ ವಾಗಿ ವಿಫಲವಾಗಿದೆ. ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದರು, ಆದರೆ ಮಾಡಲಿಲ್ಲ. ಕಪ್ಪು ಹಣ ತರುತ್ತೇವೆ ಎಂದರು, ತರಲಿಲ್ಲ. ರೈತರ ಆದಾಯ ಹೆಚ್ಚು ಮಾಡುತ್ತೇವೆ ಎಂದಿದ್ದರು, ಅದನ್ನು ಮಾಡಲಿಲ್ಲ. ಪೆಟ್ರೋಲ್, ಡಿಸೇಲ್ ಬೆಲೆ ಗಗನಕ್ಕೆ ಹೋಗಿವೆ. ಗ್ಯಾಸ್ ಸಿಲಿಂಡರ್ 2014ರಲ್ಲಿ 400 ರು. ಇದ್ದದ್ದು ಈಗ 750 ರು. ಆಗಿದೆ. ಶ್ರೀಸಾಮಾನ್ಯರಿಗೆ ಇದರಿಂದ ತುಂಬಾ ತೊಂದರೆ ಆಗುತ್ತಿದೆ. ಅವರು ಭ್ರಮ ನಿರಸನಗೊಂಡಿದ್ದಾರೆ. ಮೋದಿ ‘ಅಚ್ಛೇ ದಿನ್’ ಬರುತ್ತೆ ಎಂದು ಹೇಳಿದ್ದರು, ಏನೂ ಬರಲಿಲ್ಲ. 

ಮೋದಿಗೆ ಯುವ ಸಮೂಹದ ಬೆಂಬಲ ಸಿಗುತ್ತಿದೆ. ಯುವ ಮತದಾರರು ಮೋದಿಯವರ ದೊಡ್ಡ ಪ್ಲಸ್ ಪಾಯಿಂಟ್ ಅನ್ನೋ ವಿಶ್ಲೇಷಣೆಯಿದೆ?

ನಾನು ಈಗ ಕಳೆದ ಒಂದು ವಾರದಿಂದ ಸತತವಾಗಿ ಪ್ರಚಾರ ನಡೆಸುತ್ತಿದ್ದೇನೆ. ಕಲಬುರಗಿ, ಬೆಳಗಾವಿ, ಬಿಜಾಪುರ, ಬಾಗಲಕೋಟೆ, ಬಳ್ಳಾರಿ, ಗದಗ, ಹಾವೇರಿ ಎಲ್ಲ ಕಡೆ ಹೋಗಿದ್ದೇನೆ. ನನಗೆ ಒಂದು ಗಮನಾರ್ಹ ಸಂಗತಿ ಕಂಡು ಬಂದಿದೆ. ಅದು ಯುವಕರು ಹೆಚ್ಚು ಕಾಂಗ್ರೆಸ್ ಸಭೆಗಳಿಗೆ ಬರುತ್ತಿದ್ದಾರೆ. ನನ್ನ ಪ್ರಕಾರ ಮೋದಿ ಬಗ್ಗೆ ಯುವಕರು ಭ್ರಮ ನಿರಸನಗೊಂಡಿದ್ದಾರೆ. ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇನೆ ಎಂದು ಹೇಳಿದ್ದ ಮೋದಿ ಅದನ್ನು ಮಾಡಿಲ್ಲ. ಬಹಳ ಬಂಡವಾಳ ಬಂದು ಉದ್ಯೋಗ ಸೃಷ್ಟಿಯಾಗಲಿಲ್ಲ. ಐಟಿ-ಬಿಟಿ ಉದ್ಯೋಗಗಳು ಕಡಿಮೆಯಾದವು. ಇದೇ ವೇಳೆ ಕಾಂಗ್ರೆಸ್ ಸರ್ಕಾರ ಯುವ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ನೀಡಿದ್ದು, ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ, ಫ್ರೀ ಬಸ್ ಪಾಸ್, ಶಾಲಾ ಮಕ್ಕಳಿಗೆ ಹಾಲು, ಮೊಟ್ಟೆ ನೀಡುತ್ತಿರುವುದು ದೊಡ್ಡ ಇಂಪ್ಯಾಕ್ಟ್ ಆಗಿದೆ. ನಾವು ಐದು ಲಕ್ಷ ಜನರಿಗೆ ಸ್ಕಿಲ್ ಡೆವಲಪ್‌ಮೆಂಟ್ ಮಾಡಿದ್ದೇವೆ. ಇವೆಲ್ಲ ಪರಿಣಾಮ ಬೀರಿದೆ. ಯುವಕರು ನಮ್ಮ ಸರ್ಕಾರದ ಸಾಧನೆಯನ್ನು, ಹಿಂದಿನ ಸರ್ಕಾರ ಹಾಗೂ ಮೋದಿ ಸರ್ಕಾರದ ಜತೆಗೆ ಹೋಲಿಕೆ ಮಾಡುತ್ತಿದ್ದಾರೆ. ನನ್ನ ಪ್ರಕಾರ ಯುವಕರು ಈ ಬಾರಿ ಕಾಂಗ್ರೆಸ್ ಪರ ನಿಲ್ಲಲಿದ್ದಾರೆ.