ಚುನಾವಣಾ ಪ್ರಚಾರದಲ್ಲಿ ಮಹಿಳೆಯರ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಿರುವ ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಅವರಿಗೆ ಬಿಜೆಪಿ ಮಹಿಳಾ ಮೋರ್ಚಾ ಐದು ಪ್ರಶ್ನೆಗಳನ್ನು ಮುಂದಿಟ್ಟಿದ್ದು, ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣ, ದೌರ್ಜನ್ಯ ಕುರಿತು ಕೇಳಲಾಗಿದೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ರಾಷ್ಟ್ರೀಯ ಮಹಿಳಾ ಮೋರ್ಚಾ ಅಧ್ಯಕ್ಷೆ ವಿಜಯಾ ರಾಹತ್ಕರ್, ಐದು ಪ್ರಶ್ನೆಗಳನ್ನು ಮುಂದಿಟ್ಟರು.

1 ಕಾಂಗ್ರೆಸ್ ಆಡಳಿತಾವಧಿಯಲ್ಲಿ 7523 ಮಹಿಳೆಯರ ಕೊಲೆಯಾಗಿದೆ. 3,873 ಮಹಿಳೆಯರ ಮೇಲೆ ಅತ್ಯಾಚಾರ ನಡೆದಿದ್ದು, ಈ ಪೈಕಿ 600 ದಲಿತ ಮಹಿಳೆಯರು ಸೇರಿದ್ದಾರೆ. 24,751 ಲೈಂಗಿಕ ದೌರ್ಜನ್ಯಗಳು ವರದಿಯಾಗಿವೆ. ಮಹಿಳೆಯರ ಮೇಲಿನ ದೌರ್ಜನ್ಯ ವಿರುದ್ಧ ಮೇಣದ ಬತ್ತಿ ಹೊತ್ತಿಸಿ ಪ್ರತಿಭಟನಾ ಮೆರವಣಿಗೆ ನಡೆಸಿದ್ದ ರಾಹುಲ್ ಗಾಂಧಿ ರಾಜ್ಯದಲ್ಲಿಯೂ ಇದೇ ರೀತಿ ಪ್ರತಿಭಟನೆ ನಡೆಸುವರೇ ಎಂದು ಪ್ರಶ್ನಿಸಿದರು.
2ಬೇಟಿ ಬಚಾವೋ-ಬೇಟಿ ಪಡಾವೋ ಎಂದು ರಾಹುಲ್ ಗಾಂಧಿ  ರ್ಯಾಲಿಗಳಲ್ಲಿ ಕರೆ ನೀಡುತ್ತಾರೆ. ಆದರೆ, ಅತ್ಯಾಚಾರ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಕೆ.ಸಿ.ವೇಣುಗೋಪಾಲ್ ಅವರಿಗೆ ಪಕ್ಷದ ಕರ್ನಾಟಕ ಉಸ್ತುವಾರಿ ವಹಿಸಲಾಗಿದೆ. ಇದಕ್ಕೆ ರಾಹುಲ್ ಗಾಂಧಿ ಉತ್ತರ ಏನು?
3ಶಿಶು ಮರಣ ವಿಷಯವನ್ನು ಪ್ರಸ್ತಾಪಿಸುವ ರಾಹುಲ್ ಗಾಂಧಿ ಅವರು ಗೋರಖ್‌ಪುರ ಘಟನೆಯನ್ನು ಎಳೆದು ತರುತ್ತಾರೆ. ಆದರೆ, ಅವರದ್ದೇ ಸರ್ಕಾರ ಇರುವ ಕರ್ನಾಟಕದಲ್ಲಿ ಪ್ರತಿದಿನ 14 ಶಿಶುಗಳು ಸಾವನ್ನಪ್ಪುತ್ತಿವೆ. ಇದನ್ನು ತಡೆಯಲು ಸರ್ಕಾರ ಏನು ಕ್ರಮಗಳನ್ನು ತೆಗೆದುಕೊಂಡಿದೆ?
4 ಬಾಣಂತಿ ಆರೈಕೆ ಯೋಜನೆಯನ್ನು ಹಿಂದಿನ ಬಿಜೆಪಿ ಸರ್ಕಾರ ಜಾರಿಗೊಳಿಸಿದ್ದು, ಯೋಜನೆಯನ್ನು ಕಾಂಗ್ರೆಸ್ ಸರ್ಕಾರ ಕಡಿತಗೊಳಿಸಿದೆ. ಬಿಜೆಪಿ ಸರ್ಕಾರದಲ್ಲಿ ಈ ಯೋಜನೆಯಿಂದ 5 ಲಕ್ಷಕ್ಕೂ ಅಧಿಕ ಬಡ ಮಹಿಳೆಯರು ಪ್ರಯೋಜನ ಪಡೆದಿದ್ದರು. ಕಾಂಗ್ರೆಸ್ ಸರ್ಕಾರದಲ್ಲಿ 65 ಸಾವಿರ ಮಹಿಳೆಯರಷ್ಟೇ ಈ ಯೋಜನೆಯ ಲಾಭ ಪಡೆಯಲು ಸಾಧ್ಯವಾಗಿದೆ. ಇದಕ್ಕೆ ರಾಹುಲ್ ಗಾಂಧಿ ಉತ್ತರವೇನು?
5 ಹಿಂದಿನ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಭಾಗ್ಯಲಕ್ಷ್ಮಿ ಯೋಜನೆ ಅತ್ಯಂತ ಜನಪ್ರಿಯ ಯೋಜನೆಯಾಗಿತ್ತು. ಅನೇಕ ರಾಜ್ಯಗಳು ಈ ಯೋಜನೆಯನ್ನು ಜಾರಿಗೆ ತಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ಈ ಯೋಜನೆಯನ್ನು ರದ್ದುಪಡಿಸಿದ್ದೇಕೆ ಎಂದು ಕೇಳಿದರು.