ಬೆಂಗಳೂರು: ಅರ್ಜಿ ಸಲ್ಲಿಸದೇ ಹೋದರೂ, ಮಂಡ್ಯ ಕ್ಷೇತ್ರದಲ್ಲಿ ಸ್ಪರ್ಧಿಸಲು ರೆಬೆಲ್ ಸ್ಟಾರ್ ಅಂಬರೀಷ್‌ಗೆ ಕಾಂಗ್ರೆಸ್ ಟಿಕೆಟ್ ನೀಡಿತ್ತು. ಟಿಕೆಟ್ ಸಿಕ್ಕರೂ, ಬಿಫಾರ್ಮ ಪಡೆಯದ ಈ ನಟನಿಗೆ ಕಾಂಗ್ರೆಸ್ ನಾಯಕರೇ ಮನೆಗೆ ಹೋಗಿ ಫಾರ್ಮ್ ತಲುಪಿಸಿದ್ದಾರೆ. ಆದರೂ, ತಮ್ಮದೇ ಪಟ್ಟು ಮುಂದುವರಿಸಿದ ಅಂಬಿ ಚುನಾವಣೆಯಲ್ಲಿ ಸ್ಪರ್ಧಿಸಲು ನಿರಾಕರಿಸಿದ್ದಾರೆ. ಇದರಿಂದ ಕಾಂಗ್ರೆಸ್ ಹೈ ಕಮಾಂಡ್ ಮಾತ್ರವಲ್ಲ, ಮಂಡ್ಯ ಕಾರ್ಯಕರ್ತರೂ ಮುನಿಸಿಕೊಂಡಿದ್ದಾರೆ.

ಇದೀಗ ಈ ಕ್ಷೇತ್ರದಲ್ಲಿ ಅಂಬರೀಷ್ ಅವರ ಬಂಡಾಯ ಅಭ್ಯರ್ಥಿ ರವಿ ಗಾಣಿಗ ಅವರಿಗೆ ಟಿಕೆಟ್ ಖಚಿತವಾಗಿದೆ. ಅಮರಾವತಿ ಚಂದ್ರಶೇಖರ್ ಪರ ಬ್ಯಾಟಿಂಗ್ ಮಾಡಲೂ ಅಂಬರೀಷ್ ನಿರಾಕರಿಸಿದ್ದು, ಈ ನಡೆಗೆ ಅಂಬರೀಷ್ ಆಪ್ತರೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.

'ಅಂಬರೀಶ್ ಚುನಾವಣೆಯಲ್ಲಿ ಸ್ಪರ್ಧಿಸಲು ನಾವು ಒತ್ತಾಯ‌ ಮಾಡಿದ್ದೆವು. ಆದರೂ ನಿಲ್ಲೋಲ್ಲ ಎನ್ನುತ್ತಿದ್ದಾರೆ. ಅಮರಾವತಿ ಚಂದ್ರಶೇಖರ್ ಪರವಾಗಿಯಾದರೂ ಮಾತನಾಡಿ, ಟಿಕೆಟ್ ಕೊಡಿಸಬಹುದಿತ್ತು. ಆದರೆ, ಯಾರ ಪರವೂ ಮಾತನಾಡೋಲ್ಲವೆಂದು ಪಟ್ಟು ಹಿಡಿದಿದ್ದಾರೆ.  ಅವರ ಮನಸ್ಲಿನಲ್ಲಿ ಏನಿದೇ ಅನ್ನೋದೆ ತಿಳಿಯುತ್ತಿಲ್ಲ. ನಾವು ಇಷ್ಟು ವರ್ಷ ಅಂಬರೀಶ್ ಅವರನ್ನು ಅಣ್ಣ ಎಂದೇ ಭಾವಿಸಿದ್ದೆವು. ಈಗ ಅಂಬರೀಶ್ ನಡೆ ನಮಗೆ ಬೆಸರ ತಂದಿದೆ. ಇನ್ನುಂದೆ ಅಂಬರೀಶ್ ಬೆಂಗಳೂರು, ನಾವು ಮಂಡ್ಯಾನೆ. ನಾವು ಬೆಂಗಳೂರಿಗೆ ಹೋಗಲ್ಲ ಅವರು ಮಂಡ್ಯಕ್ಕೆ ಬರಲ್ಲ,' ಎಂದು ಚಂದ್ರಶೇಕರ್ ಸಹೋದರ ನಾಗರಾಜ್ ಸುವರ್ಣ ನ್ಯೂಸ್‌ಗೆ ಹೇಳಿಕೆ ನೀಡಿದ್ದಾರೆ.

ಈ ವರ್ತನೆಯಿಂದ ಆಪ್ತರು, ಅಭಿಮಾನಿಗಳಿಗೂ ನೋವಾಗಿದ್ದು, ಅಂಬರೀಷ್ ಅವರು ಮಂಡ್ಯ ಜನತೆಯ ವಿಶ್ವಾಸ ಕಳೆದುಕೊಳ್ಳಲ್ಲಿದ್ದಾರೆ.