Asianet Suvarna News Asianet Suvarna News

ವನ್ಯಜೀವಿಗಳ ಪಾಲಿಗೆ ಸಾವಿನ ರಹದಾರಿಯಾದ ಕಲಬುರಗಿ- ಚಿಂಚೋಳಿ ರಸ್ತೆ

ವಾರ್ಷಿಕ ಸರಾಸರಿ ಶೇ.23.55 ರಷ್ಟು ರೋಡ್ ಕಿಲ್ಲಿಂಗ್| ಅರಣ್ಯ ಇಲಾಖೆ, ತಾಲೂಕು, ಜಿಲ್ಲಾಡಳಿತಗಳಿಂದ ಡೋಂಟ್‌ಕೇರ್ ಧೋರಣೆ| ಅಪರೂಪದ ವನ್ಯ ಪ್ರಾಣಿಗಳಿಗೆ ಮರಣ ದಂಡನೆ| ವೇಗದ ವಾಹನ ಚಾಲನೆಗೆ ಪ್ರಾಣಿಗಳು ಬಲಿ| ಕಲಬುರಗಿ- ಚಿಂಚೋಳಿ ನಡುವಿನ 13 ಹಳ್ಳಿಗಳಿಂದ ಸಾಗುವ, 70 ಕಿ.ಮೀ. ಉದ್ದದ ರಸ್ತೆ ಮೇಲೆ ಹೆಚ್ಚುತ್ತಿವೆ ವನ್ಯಜೀವಿ ಸಾವುನೋವು|

Many Wildlife Dead in Kalaburagi-Chincholi Highway
Author
Bengaluru, First Published Oct 27, 2019, 1:26 PM IST

ಶೇಷಮೂರ್ತಿ ಅವಧಾನಿ

ಕಲಬುರಗಿ(ಅ.27): ಜಿಲ್ಲೆಯ ಕಲಬುರಗಿ- ಚಿಂಚೋಳಿ  70 ಕಿ.ಮೀ. ಉದ್ದದ ರಸ್ತೆ ವನ್ಯ ಪ್ರಾಣಿಗಳ ಪಾಲಿಗೆ ಸಾವಿನ ದಾರಿಯಾಗುತ್ತಿದೆ. ಹೆಚ್ಚಿರುವ ವಾಹನ ಸಂಚಾರದಿಂದಾಗಿ ಹಗಲು, ರಾತ್ರಿ ಎನ್ನದೆ ಅಪರೂಪದ ವನ್ಯ ಪ್ರಾಣಿಗಳ ‘ರೋಡ್ ಕಿಲ್ಲಿಂಗ್’ ಇಲ್ಲಿ ಅವ್ಯಾಹತವಾಗಿದೆ. ಇದರಿಂದಾಗಿ ದಕ್ಷಿಣ ಭಾರತದ ಒಣಭೂಮಿ ಪ್ರದೇಶದ ಏಕೈಕ ವನ್ಯಜೀವಿ ಧಾಮ ಚಿಂಚೋಳಿ ವ್ಯಾಪ್ತಿಯಲ್ಲಿ ಈ ಬೆಳವಣಿಗೆ ತೀವ್ರ ಆತಂಕ ಹುಟ್ಟುಹಾಕಿದೆ. 

ಈ ದಾರಿಯಲ್ಲಿ ನಡೆಸಲಾಗಿರುವ ಅಧ್ಯಯನ ಹೆಚ್ಚುತ್ತಿರುವ ‘ರೋಡ್ ಕಿಲ್ಲಿಂಗ್’ ಮೇಲೆ ಬೆಳಕು ಚೆಲ್ಲಿದೆ. ಕಲಬುರಗಿ ಸರ್ಕಾರಿ ಮಹಾವಿದ್ಯಾಲಯ ಪ್ರಾಣಿಶಾಸ್ತ್ರ ವಿಭಾಗದ ಪ್ರೊಫೆಸರ್ ಡಾ. ಶಂಕರಪ್ಪ ಹತ್ತಿ, ಸಂಶೋಧನಾ ವಿದ್ಯಾರ್ಥಿನಿ ಹೀನಾ ಮುಬೀನ್‌ 2016-2017 2 ವರ್ಷ ನಡೆಸಿರುವ ಅಧ್ಯಯನ ಕಲಬುರಗಿ, ಚಿಂಚೋಳಿ ರಸ್ತೆಯ ಮೇಲಿನ ರೋಡ್‌ ಕಿಲ್ಲಿಂಗ್ ಪೆಡಂಭೂತದ ಕರಾಳ ಚಿತ್ರಣ ನೀಡಿದೆ.

ವಾರ್ಷಿಕ 275 ಕ್ಕೂ ಹೆಚ್ಚು ಪ್ರಾಣಿಗಳ ಸಾವು ನೋವು:

ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಗಳನ್ನಾವರಿಸಿರುವ ಆಂಧ್ರ ಪ್ರದೇಶ, ತೆಲಂಗಾಣ ಗಡಿಯಂಚಲ್ಲಿರುವ ಚಿಂಚೋಳಿಯ 13,488, 31 ಹೆಕ್ಟೇರ್ (134.88 ಕಿ.ಮೀ.) ಪ್ರದೇಶವನ್ನು 2011 ರ ನವೆಂಬರ್ 28 ರಂದು ‘ವನ್ಯಧಾಮ’ವಾಗಿ ಘೋಷಿಸುವುದರೊಂದಿಗೆ ಇಲ್ಲಿರುವ ವನ್ಯಜೀವಿಗಳು, ಹಕ್ಕಿ, ಪಕ್ಷಿಗಳು, ಗಿಡ, ಮರ ಸಂರಕ್ಷಿಸಲು ದಿಟ್ಟ ಕ್ರಮವನ್ನೇನೋ ಕೈಗೊಂಡಿದೆ. ಆದರೆ ಈ ವನ್ಯಧಾಮದಿಂದ ಸಾಗಿ ಹೋಗುವ ಹೆದ್ದಾರಿಗಳೇ ವನ್ಯಜೀವಿಗಳಿಗೆ ಯಮಪಾಶವಾಗುತ್ತಿರೋದು ಕಳವಳಕಾರಿ. ಅಧ್ಯಯನದ ಪ್ರಕಾರ ಕಲಬುರಗಿ- ಚಿಂಚೋಳಿ 13 ಹಳ್ಳಿಗುಂಟ ಸಾಗುವ 70 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ಮೇಲೆ ಸಸ್ತನಿಗಳು, ಉಭಯವಾಸಿಗಳು, ಸರಿಸೃಪಗಳು ಸೇರಿದಂತೆ 275 ವನ್ಯಜೀವಿಗಳು ಅಪಘಾತದಲ್ಲಿ ವಾರ್ಷಿಕ ಸಾಯುತ್ತಿವೆ. 

ಸಂಚಾರ ಅಧ್ಯಯನದ ಅಂಕಿ- ಅಂಶ ಹೀಗಿದೆ ನೋಡಿ: 

ಈ ರಸ್ತೆಯಲ್ಲಿ ವಾಹನ ಸಂಚಾರ ಅಧಿಕ ಎಂಬುದು ಅಧ್ಯಯನವೇ ಹೇಳಿದೆ. ಪ್ರತಿದಿನ ಹಗಲು, ರಾತ್ರಿ ಎಣಿಕೆ ಮಾಡಿದಾಗ 200 ಕ್ಕೂ ಹೆಚ್ಚು ವಾಹನಗಳ ಸಂಚಾರ ಈ ರಸ್ತೆ ಮೇಲಿರೋದು ಕಂಡು ಬಂದಿದೆ. ಹಗುರ ವಾಹನಗಳ ಓಡಾಟ ಶೇ. 59, ಭಾರಿ ವಾಹನಗಳ ಓಡಾಟ ಶೇ.49. ಉದ್ಯಮ ವಹಿವಾಟಿನ ಚಟುವಟಿಕೆ ಹೆಚ್ಚುತ್ತಿರೋದರಿಂದ ಈ ಭಾಗದಲ್ಲಿ ಭಾರಿ ವಾಹನಗಳ ಓಡಾಟ ಸದ್ಯ ಅಧಿಕವಾಗಿದೆ. 

ವನ್ಯಜೀವಿಗಳ ಸಾವು, ನೋವಿನ ನೋಟ: 

2016 ರ ಅಧ್ಯಯನಾವಧಿಯಲ್ಲಿ ಈ ರಸ್ತೆ 26 ನಮೂನೆ ವನ್ಯಜೀವಿಗಳ ಬಲಿ ಪಡೆದಿದೆ. ಉಭಯವಾಸಿಗಳು ಮತ್ತು ಸರಿಸೃಪಗಳು ಶೇ.18.37 ಸಸ್ತನಿಗಳು ಶೇ.41.69 ಹಾಗೂ ಶೇ.21.55 ಪಕ್ಷಿಗಳು ರೋಡ್‌ಕಿಲ್ಲಿಂಗ್‌ಗೆ ತುತ್ತಾಗಿವೆ. ವಿಶೇಷ ತಳಿಯ ಹಾವುಗಳು, ಕಪ್ಪೆಗಳು, ತರಹೇವಾರಿ ಸರಿಸೃಪಗಳು ನಿತ್ಯವೂ ವಾಹನಗಳ ಗಾಲಿಗೆ ಸಿಲುಕಿ ಜೀವ ಕೊಡುತ್ತಿವೆ. ಕಾಡು ಬೆಕ್ಕು, ಪುನಗನ ಬೆಕ್ಕು, ನರಿ, ತೋಳ, ಕಾಡುಹಂದಿ, ಜಿಂಕೆ, ಕೋತಿಗಳು, ಲಂಗೂರ್, ನಾರಲ್ಲಿರುವ ಹಾವುಗಳು, ಕಪ್ಪೆಗಳು ಸೇರಿದಂ ತೆಹಲವು ಜೀವಿಗಳು ರಸ್ತೆಮೇಲೆ ಸಾಗುವಾಗ, ರಸ್ತೆ ದಾಟುವಾಗ, ತಮ್ಮ ಆಹಾರಕ್ಕಾಗಿ ಅಲೆಯುವಾಗ ರಸ್ತೆಗೆ ಬಂದು ಪ್ರಾಣ ಕಳೆದುಕೊಳ್ಳುತ್ತಿವೆ. 

ಅರಣ್ಯ ಇಲಾಖೆ ಜಾಣ ಕುರುಡು, ಮೌನ: 

ಅರಣ್ಯಇಲಾಖೆ ವನ್ಯಧಾಮದ ವ್ಯಾಪ್ತಿಯಲ್ಲಿ ಸಾಗಿರುವ ರೋಡ್ ಕಿಲ್ಲಿಂಗ್ ಬಗ್ಗೆ ಜಾಣ ಕುರುಡು ಧೋರಣೆ ಅನುಸರಿಸುತ್ತಿದೆ. ಇಂದಿಗೂ ಈ ವನ್ಯಧಾಮ ಗುಂಟಸಾಗುವ ರಸ್ತೆಗಳಲ್ಲಿ ಗತಿರೋಧಕ ಹೆಚ್ಚು ಅಳವಡಿಸುವ ಕೆಲಸವಾಗಿಲ್ಲ. ಕಲಬುರಗಿ, ಚಿಂಚೋಳಿ ರಸ್ತೆಯಲ್ಲಿಯೂ ಗತಿರೋಧಕಗಳಿಲ್ಲ. ಹೀಗಾಗಿ ವನ್ಯಪ್ರಾಣಿಗಳು ತಮ್ಮದಲ್ಲದ ತಪ್ಪಿಗೂ ಮರಣ ದಂಡನೆಗೆ ಗುರಿಯಾಗುತ್ತಿವೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ವನ್ಯಧಾಮದಲ್ಲಿ ಸಾಗುವ ರಸ್ತೆ ಇಕ್ಕೆಲಗಳಲ್ಲಿ ಮಾಹಿತಿ ಫಲಕಗಳು, ವನ್ಯಜೀವಿಗಳ ಮಾಹಿತಿ ಫಲಕ ಇರಲೇಬೇಕು. ಗತಿ ರೋಧಕಗಳನ್ನು ಕಡ್ಡಾಯವಾಗಿ ಅಳವಡಿಕೆಮಾಡಬೇಕು. ಇಂತಹ ಕ್ರಮಗಳಿಂದ ಸಸ್ತನಿಗಳು, ಸರಿಸೃಪಗಳು, ಉಭಯವಾಸಿ ಪ್ರಾಣಿಗಳ ರೋಡ್ ಕಿಲ್ಲಿಂಗ್ ಪ್ರಮಾಣ ತಾನಾಗಿಯೇ ತಗ್ಗುತ್ತದೆ ಎಂದು ಕಲಬುರಗಿಯ ಹಿರಿಯ ಸಂಶೋಧಕರು ಡಾ. ಶಂಕರಪ್ಪ ಹತ್ತಿ ಅವರು ಹೇಳಿದ್ದಾರೆ. 

ವನ್ಯ ಪ್ರಾಣಿಗಳ ‘ರೋಡ್‌ಕಿಲ್ಲಿಂಗ್’ಗೆ ಇವೆಲ್ಲ ಕಾರಣ

1. ಈ ರಸ್ತೆಯಲ್ಲಿ ಹೆಚ್ಚುತ್ತಿರುವ ಭಾರಿ, ಹಗುರ ವಾಹನಗಳ ಓಡಾಟ
2. ರಸ್ತೆ ಇಕ್ಕೆಲಗಳಲ್ಲಿನ ಜಂಗಲ್‌ಕಟ್ಟಿಂಗ್ ಮಾಡದೆ ಇರೋದು
3. ಹೆಚ್ಚಿನ ವೇಗರೋಧಕಇಲ್ಲದ ರಸ್ತೆ
4. ರಸ್ತೆ ಇಕ್ಕೆಲಗಳಲ್ಲಿ ವನ್ಯಪ್ರಾಣಿಗಳ ಮಾಹಿತಿ ಫಲಕಗಳ ಕೊರತೆ 

ರೋಡ್ ಕಿಲ್ಲಿಂಗ್‌ ತಡೆಯಲು ಇವೆಲ್ಲ ಕ್ರಮಕೈಗೊಳ್ಳುವರೆ?

1. ರಸ್ತೆ ಮೇಲೆ ತಕ್ಷಣ ಸ್ಪೀಡ್ ಬ್ರೇಕರ್, ಗತಿ ರೋಧಕ ಅಳವಡಿಸೋದು
2. ರಸ್ತೆ ಬದಿಗಳಲ್ಲಿ, ತಿರುವಲ್ಲಿ, ಕ್ರಾಸ್‌ಗಳಲ್ಲಿ ರೇಡಿಯಂ ಫಲಕಗಳು 
3. ವನ್ಯಜೀವಿಗಳು, ಅವುಗಳ ಮಹತ್ವಸಾರುವ ಫಲಕಗಳು ಅಳವಡಿಕೆ
4. ವನ್ಯಜೀವಿಗಳ ಫೋಟೋ, ಮಾಹಿತಿ ಬೋರ್ಡ್‌ಗಳು ಬೇಕು
 

Follow Us:
Download App:
  • android
  • ios