ವಿಧಾನ ಪರಿಷತ್‌ (ಸೆ.24):  ರಾಜ್ಯದಲ್ಲಿ ಇನ್ನು ಮುಂದೆ ಮಹಿಳೆಯರು ಇಚ್ಛೆಪಟ್ಟಲ್ಲಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ಅವಕಾಶ ಕಲ್ಪಿಸುವ ‘ಕರ್ನಾಟಕ ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳ (ತಿದ್ದುಪಡಿ) ವಿಧೇಯಕಕ್ಕೆ ವಿಧಾನ ಪರಿಷತ್‌ ಅಂಗೀಕಾರ ನೀಡಿದೆ.

ವಿಧಾನಸಭೆಯಿಂದ ಅಂಗೀಕಾರ ರೂಪದಲ್ಲಿದ್ದ ಈ ವಿಧೇಯಕಕ್ಕೆ ವಿಧಾನಪರಿಷತ್‌ ಸಹ ಒಪ್ಪಿಗೆ ನೀಡಿದೆ. ರಾಜ್ಯಪಾಲರ ಅಂಕಿತ ಬೀಳುತ್ತಿದ್ದಂತೆಯೇ ಸ್ವ ಇಚ್ಛೆ ಹೊಂದಿದ ಮಹಿಳೆಯರು ರಾತ್ರಿ ಪಾಳಿ ಕೆಲಸ ಮಾಡುವುದು ಕಾನೂನುಬದ್ಧವಾಗಲಿದೆ.

ಪರಿಷತ್ತಿನಲ್ಲಿ ಬುದವಾರ ವಿಧೇಯಕ ಮಂಡಿಸಿದ ಕಾರ್ಮಿಕ ಹಾಗೂ ಸಕ್ಕರೆ ಸಚಿವ ಶಿವರಾಂ ಹೆಬ್ಬಾರ್‌ ಮಾತನಾಡಿ, ಈಗಾಗಲೇ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ರಾತ್ರಿ ಪಾಳಿ ಕೆಲಸಕ್ಕೆ ಅವಕಾಶವಿದೆ. ಉಳಿದ ಕಡೆ ಸೂಕ್ತ ಭದ್ರತೆ, ಸೌಲಭ್ಯ ಕಲ್ಪಿಸಿ ಮಹಿಳೆಯರಿಗೆ ರಾತ್ರಿ ಪಾಳಿಯದಲ್ಲಿ ಕೆಲಸ ಮಾಡಬಹುದು. ಪ್ರಮುಖವಾಗಿ ಮಹಿಳಾ ಉದ್ಯೋಗಿಗೆ ನಿವಾಸದಿಂದ ಕೆಲಸದ ಸ್ಥಳಕ್ಕೆ ಮತ್ತು ಹಿಂದಿರುಗಲು ಉಚಿತ ಸಾರಿಗೆ ಸೌಲಭ್ಯ ಮತ್ತು ಹೆಚ್ಚಿನ ಭದ್ರತೆ ಒದಗಿಸಬೇಕು. ಸಾರಿಗೆ ವಾಹನದ ಮಾರ್ಗಪತ್ತೆಗೆ ಜಿಪಿಎಸ್‌ ಅಳವಡಿಕೆ, ರಾತ್ರಿ ಪಾಳಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭದ್ರತಾ ಸಿಬ್ಬಂದಿ ನಿಯೋಜನೆ, ಖಾಸಗಿತನ ಕಾಪಾಡಲು ಮಹಿಳಾ ಉದ್ಯೋಗಿಗಳಿಗೆ ಪ್ರತ್ಯೇಕ, ಅಗತ್ಯವಿರುವಷ್ಟುವಿಶ್ರಾಂತಿ ಕೊಠಡಿ, ವಿದ್ಯುತ್‌, ಶೌಚಾಲಯಗಳು, ಭದ್ರತಾ ಕಪಾಟುಗಳು, ಔಷಧಾಲಯ ಸೌಲಭ್ಯ, ಸಾಕಷ್ಟುನೀರು ಪೂರೈಕೆ ಸೌಲಭ್ಯ ಕಲ್ಪಿಸಬೇಕು. ಸ್ವಯಂ ಅಥವಾ ಇತರ ಸಂಸ್ಥೆಗಳಿಂದ ಮಹಿಳಾ ಉದ್ಯೋಗಿಗಳು ಪಡೆದ ಶಿಶುಕೇಂದ್ರದ ವೆಚ್ಚವನ್ನು ಸಂಸ್ಥೆ ಭರಿಸಬೇಕು ಎಂದು ವಿಧೇಯಕದಲ್ಲಿ ಸ್ಪಷ್ಟಪಡಿಸಲಾಗಿದೆ.

ಹೋಟೆಲ್‌, ಮಾಲ್‌ಗಳಲ್ಲೂ ಮಹಿಳೆಯರಿಗೆ ರಾತ್ರಿ ಪಾಳಿ: ವಿಧೇಯಕ ಮಂಡನೆ

ಇದಲ್ಲದೇ ವಾಹನ ಚಾಲಕರ ಹಿನ್ನೆಲೆ, ವಾಹನಗಳ ಅನಿರೀಕ್ಷಿತ ತಪಾಸಣೆ ಮಾಡಬೇಕು ಎಂಬುದು ಸೇರಿದಂತೆ ಹಲವು ಷರತ್ತುಗಳನ್ನು ವಿಧೇಯಕದಲ್ಲಿವೆ. ಈ ಎಲ್ಲ ಷರತ್ತುಗಳನ್ನು ಪಾಲನೆ ಮಾಡದ ಸಂಸ್ಥೆಯ ನೋಂದಣಿ ಪ್ರಮಾಣಪತ್ರವನ್ನು ರದ್ದುಮಾಡಬೇಕು ಎಂದು ತಿಳಿಸಲಾಗಿದೆ.

ವಿಧೇಯಕದ ಮೇಲೆ ತೇಜಸ್ವಿನಿ ಗೌಡ, ಆಯನೂರು ಮಂಜುನಾಥ್‌, ಅಪ್ಪಾಜಿಗೌಡ, ಪಿ.ಆರ್‌. ರಮೇಶ್‌, ಮರಿತಿಬ್ಬೇಗೌಡ, ಬಿ.ಕೆ. ಹರಿಪ್ರಸಾದ್‌, ಯು.ಬಿ. ವೆಂಕಟೇಶ್‌, ಭಾರತಿ ಶೆಟ್ಟಿಮಾತನಾಡಿದರು.