Asianet Suvarna News Asianet Suvarna News

ರಾಜ್ಯ ಸರ್ಕಾರಿ ಹುದ್ದೆಗಳಿಗೆ ನೇಮಕದಲ್ಲೂ ಕೇಂದ್ರ ಹಸ್ತಕ್ಷೇಪ!

ಕನ್ನಡಿಗರ ಸರ್ಕಾರಿ ಉದ್ಯೋಗಾವಕಾಶ ಕಸಿಯುವ ಆತಂಕಕಾರಿ ಪ್ರಸ್ತಾವನೆಯು ಸಚಿವಾಲಯ ಮಟ್ಟದಲ್ಲಿ ತೀವ್ರ ಸಂಚಲನ ಉಂಟು ಮಾಡಿದೆ.

Union Govt  Interference in Karnataka Govt Job
Author
Bengaluru, First Published Dec 8, 2019, 8:28 AM IST

ಶ್ರೀಕಾಂತ್‌.ಎನ್‌.ಗೌಡಸಂದ್ರ

ಬೆಂಗಳೂರು [ಡಿ.08]: ರಾಜ್ಯ ಸರ್ಕಾರದ ‘ಬಿ’ ಹಾಗೂ ‘ಸಿ’ ದರ್ಜೆ ಹುದ್ದೆಗಳ ನೇಮಕಾತಿಗೂ ಕೇಂದ್ರ ಸರ್ಕಾರವೇ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ನಡೆಸುವ ಬಗ್ಗೆ ಕೇಂದ್ರದಿಂದ ರಾಜ್ಯಕ್ಕೆ ಪ್ರಸ್ತಾವನೆ ಬಂದಿದೆ. ಕನ್ನಡಿಗರ ಸರ್ಕಾರಿ ಉದ್ಯೋಗಾವಕಾಶ ಕಸಿಯುವ ಆತಂಕಕಾರಿ ಪ್ರಸ್ತಾವನೆಯು ಸಚಿವಾಲಯ ಮಟ್ಟದಲ್ಲಿ ತೀವ್ರ ಸಂಚಲನ ಉಂಟು ಮಾಡಿದೆ.

ಡಿ.2ರಂದು ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಹೊರಡಿಸಿರುವ ಪ್ರಸ್ತಾವನೆಯು ರಾಜ್ಯ ಸರ್ಕಾರದ ಕೈ ಸೇರಿದ್ದು, ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ತುರ್ತು ಪರಿಶೀಲನಾ ಸಭೆ ನಡೆಸಿದ್ದಾರೆ. ಪ್ರಸ್ತಾವನೆಗೆ ಉತ್ತರಿಸಲು 30 ದಿನಗಳ ಕಾಲಾವಕಾಶ ಇದ್ದು, ಯಾವ ರೀತಿಯ ಉತ್ತರ ನೀಡಬೇಕು ಎಂಬ ಕುರಿತು ಮಹತ್ವದ ಚರ್ಚೆ ನಡೆಯುತ್ತಿದೆ.

ಈಗಾಗಲೇ ರಾಜ್ಯದಲ್ಲಿನ ಬಹುತೇಕ ಉದ್ಯೋಗಾವಕಾಶಗಳು ಕನ್ನಡೇತರರ ಪಾಲಾಗುತ್ತಿವೆ. ಹೀಗಾಗಿ ಕೇಂದ್ರದ ಪ್ರಸ್ತಾವನೆಗೆ ರಾಜ್ಯದ ಜನಪ್ರತಿನಿಧಿಗಳು, ಸರ್ಕಾರಿ ಅಧಿಕಾರಿಗಳ ಸಂಘಗಳು, ಉದ್ಯೋಗಾಕಾಂಕ್ಷಿಗಳು, ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗುವ ಮುನ್ಸೂಚನೆ ಇದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಪ್ರಸ್ತಾವನೆಗೆ ವಿರೋಧ ವ್ಯಕ್ತಪಡಿಸುವ ಕುರಿತು ಚಿಂತನೆ ನಡೆಸಿದ್ದು, ಮುಖ್ಯ ಕಾರ್ಯದರ್ಶಿಗಳ ಅಂತಿಮ ವರದಿ ಆಧರಿಸಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಪ್ರಸ್ತಾವನೆಯನ್ನು ತಿರಸ್ಕರಿಸುವ ಸಾಧ್ಯತೆಯೇ ಹೆಚ್ಚಿದೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.

ಪರೀಕ್ಷೆಗೆ ಪ್ರತ್ಯೇಕ ಸಂಸ್ಥೆ:

ಎಲ್ಲಾ ರಾಜ್ಯಗಳ ‘ಬಿ’ ಹಾಗೂ ‘ಸಿ’ ದರ್ಜೆ ಹುದ್ದೆಗಳ ನೇಮಕಾತಿಗೆ ಅಗತ್ಯ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಯನ್ನು ಕೇಂದ್ರ ಸರ್ಕಾರದ ವತಿಯಿಂದಲೇ ನಡೆಸಲು ಕೇಂದ್ರ ಮಟ್ಟದ ಸಿಇಟಿ ಏಜೆನ್ಸಿ ಸ್ಥಾಪಿಸಲು ಚಿಂತನೆ ನಡೆಸಿದ್ದು, ಈ ಬಗ್ಗೆ ಡಿ. 2 ರಂದು ರಾಜ್ಯ ಸರ್ಕಾರಕ್ಕೂ ಪ್ರಸ್ತಾವನೆ ಬಂದಿದೆ.

ಕೇಂದ್ರ ಮಟ್ಟದಲ್ಲಿ ಸ್ಥಾಪಿಸಲ್ಪಡುವ ಸಿಇಟಿ ಏಜೆನ್ಸಿಯೊಂದಿಗೆ ರಾಜ್ಯ ಸರ್ಕಾರಗಳು ‘ಎಂಒಯು’ ಒಪ್ಪಂದ ಮಾಡಿಕೊಳ್ಳಬೇಕು. ಒಂದು ವೇಳೆ ಒಪ್ಪಂದಕ್ಕೆ ಸಹಿ ಹಾಕಿದರೆ ರಾಜ್ಯ ಸರ್ಕಾರದ ಹುದ್ದೆಗಳ ನೇಮಕಾತಿಗೆ ಅಗತ್ಯವಿರುವ ಸಿಇಟಿ ಪರೀಕ್ಷೆಯನ್ನು ಕೇಂದ್ರ ಸಿಇಟಿ ಏಜೆನ್ಸಿ ನಡೆಸುತ್ತದೆ. ಈ ಸಿಇಟಿ ಪರೀಕ್ಷೆಯಲ್ಲಿ ಅಭ್ಯರ್ಥಿ ಪಡೆದ ಅಂಕಗಳು ಮೂರು ವರ್ಷದವರೆಗೆ ಚಾಲ್ತಿಯಲ್ಲಿರುತ್ತವೆ. ಈ ಅವಧಿಯಲ್ಲಿ ರಾಜ್ಯ ಸರ್ಕಾರಗಳು ಸರ್ಕಾರಿ ಹಾಗೂ ತತ್ಸಮಾನ ಹುದ್ದೆಗಳ ನೇಮಕಕ್ಕೆ ಕೇಂದ್ರ ಸಿಇಟಿಯಲ್ಲಿ ಅಭ್ಯರ್ಥಿ ಪಡೆದ ಅಂಕಗಳನ್ನು ಆಧರಿಸಿ ನೇಮಕಾತಿ ಮಾಡಿಕೊಳ್ಳಬೇಕು. ಈ ಬಗ್ಗೆ ರಾಜ್ಯ ಸರ್ಕಾರವು 30 ದಿನಗಳೊಳಗಾಗಿ ಅಭಿಪ್ರಾಯ ಸಲ್ಲಿಸಬೇಕು ಎಂದು ಡಿ.2 ರಂದು ಕೇಂದ್ರ ಸರ್ಕಾರದ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯು ಪತ್ರ ಬರೆದಿದೆ.

SSCಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ: ಅರ್ಜಿ ಹಾಕಿ

ಈ ಮೂಲಕ ‘ಬಿ’ ಗ್ರೂಪ್‌ ಗೆಜೆಟೆಡ್‌ ಹುದ್ದೆಗಳಾದ ಕೆಎಎಸ್‌ನಿಂದ ಹಿಡಿದು ‘ಸಿ’ ದರ್ಜೆಯ ಶಿಕ್ಷಕ ಹುದ್ದೆಗಳವರೆಗೆ ಎಲ್ಲಾ ಹುದ್ದೆಗಳ ನೇಮಕಾತಿಯಲ್ಲೂ ಕೇಂದ್ರ ಸರ್ಕಾರ ನೇರ ಹಸ್ತಕ್ಷೇಪ ಮಾಡುವ ಬಯಕೆ ಹೊಂದಿದೆ. ಅಲ್ಲದೆ ಕೇಂದ್ರ ಸರ್ಕಾರದ ಸಿಇಟಿ ಪರೀಕ್ಷೆಯಲ್ಲಿ ಯಾವುದೇ ರಾಜ್ಯದ ಅಭ್ಯರ್ಥಿಗಳು ಭಾಗವಹಿಸಲು ಅವಕಾಶವಿರುವುದರಿಂದ ರಾಜ್ಯದ ಹುದ್ದೆಗಳು ಪರ ರಾಜ್ಯದವರ ಪಾಲಾಗಲಿವೆ.

ಬಹುತೇಕ ಕರ್ನಾಟಕದಲ್ಲೇ ತನ್ನ ಸೇವಾ ಜಾಲ ಹೊಂದಿರುವ ನೈಋುತ್ಯ ರೈಲ್ವೆಗೆ 2017ರಲ್ಲಿ ನಡೆದ 2,200 ಹುದ್ದೆಗಳ ನೇಮಕಾತಿಯಲ್ಲಿ 22 ಮಂದಿ ಕನ್ನಡಿಗರಿಗೆ ಮಾತ್ರ ಕೆಲಸ ದೊರೆತಿದೆ. ಗ್ರಾಮೀಣ ಬ್ಯಾಂಕ್‌ಗಳ ನೇಮಕಾತಿ ವೇಳೆ ರಾಜ್ಯದ 18 ಸಾವಿರ ಹುದ್ದೆಗಳಲ್ಲಿ ಕೇವಲ 1,060 ಹುದ್ದೆ ಮಾತ್ರ ರಾಜ್ಯಕ್ಕೆ ದಕ್ಕಿವೆ. ಇದೇ ಪರಿಸ್ಥಿತಿ ಎಲ್ಲಾ ಬಿ ಹಾಗೂ ಸಿ ಗ್ರೂಪ್‌ ಹುದ್ದೆಗಳಿಗೂ ಅನ್ವಯವಾಗಲಿದೆ ಎಂದು ಕನ್ನಡಪರ ಹೋರಾಟಗಾರರು ಆತಂಕ ವ್ಯಕ್ತಪಡಿಸಿದ್ದಾರೆ.

ಪ್ರಸ್ತಾವನೆ ಪರಿಶೀಲಿಸುತ್ತಿದ್ದೇವೆ

ರಾಜ್ಯದ ನೇಮಕಾತಿಗಳಿಗೂ ಕೇಂದ್ರ ಮಟ್ಟದಲ್ಲಿ ಸಿಇಟಿ ನಡೆಸುವ ಬಗ್ಗೆ ಕೇಂದ್ರ ಸರ್ಕಾರದಿಂದ ಪ್ರಸ್ತಾವನೆ ಬಂದಿದೆ. ಪ್ರಸ್ತಾವನೆ ಗಂಭೀರ ವಿಷಯವಾಗಿರುವುದರಿಂದ ಪರಿಶೀಲನೆ ನಡೆಸುತ್ತಿದ್ದೇವೆ. ರಾಜ್ಯ ಸರ್ಕಾರ ತನ್ನ ಅಭಿಪ್ರಾಯ ತಿಳಿಸಲು ಇನ್ನೂ ಕಾಲಾವಕಾಶವಿದ್ದು, ಎಲ್ಲಾ ರೀತಿಯಲ್ಲೂ ಪರಾಮರ್ಶೆ ಮಾಡಿ ಅಂತಿಮವಾಗಿ ನಮ್ಮ ಅಭಿಪ್ರಾಯವನ್ನು ಕೇಂದ್ರಕ್ಕೆ ಸಲ್ಲಿಸುತ್ತೇವೆ,

- ಟಿ.ಎಂ. ವಿಜಯಭಾಸ್ಕರ್‌, ಸರ್ಕಾರದ ಮುಖ್ಯ ಕಾರ್ಯದರ್ಶಿ

ಕೇಂದ್ರ ವಾದವೇನು?: 

ಪ್ರಸ್ತುತ ರಾಜ್ಯ ಸರ್ಕಾರಗಳ ಪ್ರತಿ ಹುದ್ದೆಯ ನೇಮಕಾತಿಗೂ ಪ್ರತ್ಯೇಕ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಕಳೆದ ವರ್ಷ 1.25 ಲಕ್ಷ ಖಾಲಿ ಹುದ್ದೆಗಳಿಗೆ 2.5 ಕೋಟಿ ಮಂದಿ ಪರೀಕ್ಷೆ ಬರೆದಿದ್ದಾರೆ. ತತ್ಸಮಾನ ಹುದ್ದೆಗಳಿಗೆ ಪದೇ ಪದೇ ಪರೀಕ್ಷೆ ಬರೆಯುವುದನ್ನು ತಪ್ಪಿಸಲು ಸಿಇಟಿ ವ್ಯವಸ್ಥೆ ಮಾಡಲಾಗುತ್ತಿದೆ. ಇದರಿಂದ ಅಭ್ಯರ್ಥಿಗಳು ಪ್ರತಿ ಹುದ್ದೆಗೂ ಪ್ರತ್ಯೇಕವಾಗಿ ಪರೀಕ್ಷೆ ಬರೆಯುವ ಅಗತ್ಯವಿಲ್ಲ. ಇದರಿಂದ ಪರೀಕ್ಷಾ ಶುಲ್ಕ, ಸಾರಿಗೆ ವೆಚ್ಚ ಉಳಿತಾಯವಾಗಲಿದೆ ಎಂದು ತನ್ನ ಪ್ರಸ್ತಾವನೆಗೆ ಸಮರ್ಥನೆಗಳನ್ನು ಕೇಂದ್ರ ಸರ್ಕಾರ ನೀಡಿದೆ.

ಒಪ್ಪಲು ಸಾಧ್ಯವಿಲ್ಲ

ಪ್ರಸ್ತಾವನೆ ಬಗ್ಗೆ ಇನ್ನೂ ಅಧಿಕಾರಿಗಳ ಹಂತದಲ್ಲೇ ಚರ್ಚೆಯಾಗುತ್ತಿದೆ. ರಾಜ್ಯದ ನೇಮಕಾತಿಗಳಿಗೆ ಕೇಂದ್ರ ಸರ್ಕಾರ ಸಿಇಟಿ ಪರೀಕ್ಷೆ ನಡೆಸುವುದನ್ನು ರಾಜ್ಯ ಸರ್ಕಾರ ಒಪ್ಪಲು ಸಾಧ್ಯವಿಲ್ಲ. ಇದರಿಂದ ನಮ್ಮ ರಾಜ್ಯದ ಅಭ್ಯರ್ಥಿಗಳಿಗೆ ತೀವ್ರ ಅನ್ಯಾಯವಾಗುತ್ತದೆ. ಈ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇನೆ. ರಾಜ್ಯದ ಅಭ್ಯರ್ಥಿಗಳ ಹಿತವನ್ನು ದೃಷ್ಟಿಯಲ್ಲಿಟ್ಟುಕೊಂಡು ಕೇಂದ್ರಕ್ಕೆ ನಮ್ಮ ಅಂತಿಮ ಅಭಿಪ್ರಾಯ ತಿಳಿಸುತ್ತೇವೆ.

- ಎಸ್‌.ಆರ್‌.ವಿಶ್ವನಾಥ್‌, ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ

Follow Us:
Download App:
  • android
  • ios