ವಿಧಾನ ಪರಿಷತ್‌ (ಸೆ.24): ರಾಜ್ಯ ಸರ್ಕಾರದಿಂದ ಯಾವುದೇ ರಿಯಾಯಿತಿಯನ್ನು ಪಡೆಯದ ಖಾಸಗಿ ಸಂಸ್ಥೆಗಳೂ ಕೂಡಾ ತಮ್ಮಲ್ಲಿನ ಸಿ ಮತ್ತು ಡಿ ವೃಂದದಲ್ಲಿನ ಎಲ್ಲ ಉದ್ಯೋಗಗಳನ್ನು ಕನ್ನಡಿಗರಿಗೆ ಮೀಸಲಿಡುವಂತೆ ಹಾಲಿ ಜಾರಿ ಇರುವ ಆದೇಶವನ್ನು ಅನ್ವಯಿಸುವ ಬಗ್ಗೆ ಸರ್ಕಾರ ಚಿಂತನೆ ಮಾಡುತ್ತಿದೆ ಎಂದು ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದ್ದಾರೆ.

ಜೆಡಿಎಸ್‌ ನಾಯಕ ಬಸವರಾಜ ಹೊರಟ್ಟಿಅವರು ಡಾ. ಸರೋಜಿನಿ ಮಹಿಷಿ ಪರಿಷ್ಕೃತ ವರದಿಯನ್ವಯ ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ಕಲ್ಪಿಸುವ ಮಸೂದೆಯನ್ನು ಸದನದಲ್ಲಿ ಮಂಡಿಸಬೇಕೆಂಬ ಸಲಹೆಗೆ ಪ್ರತಿಕ್ರಿಯಿಸಿದ ಸಚಿವರು, ಸರ್ಕಾರಿ ಸೌಲಭ್ಯ ಪಡೆಯದ ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಿಡುವ ಬಗ್ಗೆ ರಾಜ್ಯ ಸಚಿವ ಸಂಪುಟದಲ್ಲಿ ಚರ್ಚಿಸಿ ತೀರ್ಮಾನಕ್ಕೆ ಬರುತ್ತೇವೆ. ಆಂಧ್ರ ಪ್ರದೇಶದಲ್ಲಿ ಸ್ಥಳೀಯರಿಗೆ ಉದ್ಯೋಗ ಕಲ್ಪಿಸುವ ಕಾಯ್ದೆ ಜಾರಿಯಲ್ಲಿದ್ದು ಈ ಕಾಯ್ದೆಯನ್ನು ತರಿಸಿಕೊಂಡು ಅಧ್ಯಯನ ನಡೆಸುತ್ತಿದ್ದೇವೆ ಎಂದರು.

8.65 ಲಕ್ಷ ಉದ್ಯೋಗ ಕಲ್ಪಿಸಲು ನೀತಿ: ಕನ್ನಡಿಗರಿಗೆ ಶೇ.100 ಮೀಸ​ಲು ..

ಈಗಾಗಲೇ ರಾಜ್ಯ ಸರ್ಕಾರದಿಂದ ಸವಲತ್ತು ಅಥವಾ ರಿಯಾಯಿತಿ ಪಡೆದಿರುವ ಎಲ್ಲ ಸಂಸ್ಥೆಗಳು ತಮ್ಮಲ್ಲಿನ ಸಿ ಮತ್ತು ಡಿ ವೃಂದಲ್ಲಿನ ಎಲ್ಲ ಉದ್ಯೋಗವನ್ನು ಕನ್ನಡಿಗರಿಗೆ ಮೀಸಲಿಡಬೇಕು ಎಂದು ಆದೇಶ ಹೊರಡಿಸಲಾಗಿದೆ. ಅಷ್ಟೇ ಅಲ್ಲ ಎ ಮತ್ತು ಬಿ ವೃಂದದ ಹುದ್ದೆಗಳಲ್ಲಿಯೂ ಕನ್ನಡಿಗರಿಗೆ ಆದ್ಯತೆ ನೀಡಬೇಕು ಎಂದು ಸೂಚನೆ ನೀಡಲಾಗಿದೆ. ಆದರೆ ಅಸಂಘಟಿತ ವಲಯಕ್ಕೆ ಸಂಬಂಧಿಸಿದಂತೆ ನಮ್ಮ ಮುಂದೆ ಯಾವುದೇ ವರದಿಗಳಿಲ್ಲ. ಆದ್ದರಿಂದ ಈ ವಲಯದ ಬಗ್ಗೆ ನಾವು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಮಾಧುಸ್ವಾಮಿ ತಿಳಿಸಿದರು.

ಕರ್ನಾಟಕದಲ್ಲಿ 15 ವರ್ಷ ವಾಸಿಸಿದವರನ್ನು ಕನ್ನಡಿಗರು ಎನ್ನಬೇಕೆ ಅಥವಾ 1 ರಿಂದ 10ರವರೆಗೆ ಕನ್ನಡವನ್ನು ಐಚ್ಛಿಕವಾಗಿಯಾದರೂ ಅಧ್ಯಯನ ನಡೆಸಿದವರನ್ನು ಮಾತ್ರ ಕನ್ನಡಿಗರು ಎಂದು ಪರಿಗಣಿಸಬೇಕೇ ಎಂಬುದರ ಬಗ್ಗೆಯೂ ಸದಸ್ಯರು ತುಸು ಚರ್ಚೆ ನಡೆಸಿದರು.

ಈ ಸಂದರ್ಭದಲ್ಲಿ ಬಿ ಕೆ ಹರಿಪ್ರಸಾದ್‌, ರಾಜ್ಯದಲ್ಲಿ ತುಳು, ಕೊಂಕಣಿ, ಕೊಡವ ಮುಂತಾದ ಭಾಷೆಗಳನ್ನು ಮಾತನಾಡುವವರ ಹಿತವನ್ನು ಕೂಡ ಸರ್ಕಾರ ಗಮನಿಸಬೇಕು ಎಂದು ಹೇಳಿದರು.