ಕನಸು ಕಾಣಲು ಸಾಧ್ಯವಾದರೆ ಸಾಧಿಸಲು ಸಾಧ್ಯ: ವೈದ್ಯನಾಗಿ ಬಳಿಕ ಐಎಎಸ್ ಆದ ಆದಿವಾಸಿ ತರುಣನ ಯಶೋಗಾಥೆ
ಕನಸು ಕಾಣಲು ಸಾಧ್ಯವಾದರೆ ಅದನ್ನು ಸಾಧಿಸಲು ಕೂಡ ಸಾಧ್ಯ ಸಾಮಾನ್ಯ ಕುಟುಂಬವೊಂದರಲ್ಲಿ ಹುಟ್ಟಿ, ನವೋದಯ ವಿದ್ಯಾಲಯದಲ್ಲಿ ಓದಿ ವೈದ್ಯನಾಗಿ ಬಳಿಕ ಐಎಎಸ್ ಅಧಿಕಾರಿಯಾದ ಆದಿವಾಸಿ ತರುಣನ ಯಶೋಗಾಥೆ ಇದು
ಬಾಲ್ಯದಿಂದಲೂ ನನಗೆ ವೈದ್ಯನಾಗಬೇಕು ಎಂಬ ಕನಸಿತ್ತು. ಇದರಿಂದ ನನ್ನ ಜನರಿಗೆ ಸಹಾಯ ಮಾಡಬಹುದು ಎಂಬ ಯೋಚನೆ ನನ್ನದಾಗಿತ್ತು. ಆದರೆ ನಾನು ಬೆಳೆದು ದೊಡ್ಡವನಾಗುತ್ತಿದ್ದಂತೆ ಜನರಿಗೆ ಸಹಾಯ ಮಾಡಬೇಕಾದರೆ ಮೊದಲಿಗೆ ಅವರಿಗೆ ಶಿಕ್ಷಣ ನೀಡಬೇಕು ನಂತರ ಅವರ ಜೀವನ ಶೈಲಿಯನ್ನು ಉನ್ನತಗೊಳಿಸುವ ಅವಕಾಶವನ್ನು ಒದಗಿಸಬೇಕು ಎಂಬುದು ಅರ್ಥವಾಯ್ತು. ಇದನ್ನು ಸಾಧಿಸುವುದಕ್ಕಾಗಿ ನಾನು ಮುಂದೆ ಸಿವಿಲ್ ಸರ್ವೇಂಟ್ ಆದೆ. ಇದು ಅದಿವಾಸಿ ಸಮುದಾಯದಲ್ಲಿ ಹುಟ್ಟಿ ಬಳಿಕ ವೈದ್ಯರಾಗಿ ನಂತರ ಜನರ ಸೇವೆಗಾಗಿ ಐಎಎಸ್ ಅಧಿಕಾರಿಯಾಗಿ ಬದಲಾದ ರಾಜೇಂದ್ರ ಭರುದಾ ಅವರ ಮಾತುಗಳು.
ತಮ್ಮ ಕನಸನ್ನು ಸಾಕಾರಗೊಳಿಸಲು ಅವರು ಎಂಬಿಬಿಎಸ್ ಮಾಡುತ್ತಿದ್ದಾಗಲೇ ಯುಪಿಎಸ್‌ಸಿ ಪರೀಕ್ಷಗೆ ಸಿದ್ದತೆ ನಡೆಸಿದ್ದರು. ಹಲವು ಸವಾಲುಗಳಿದ್ದರೂ ಎಡೆಬಿಡದೆ ಪರಿಶ್ರಮಪಟ್ಟರು. ಪ್ರೋಗ್ರಾಮಿಂಗ್ ಮಾಡಿದ ಕಂಪ್ಯೂಟರ್‌ಗೆ ತಮ್ಮನ್ನು ಹೋಲಿಸಿಕೊಳ್ಳುವ ಮೂಲಕ ಸ್ಥಿರವಾದ ದೈನಂದಿನ ದಿನಚರಿ ಹಾಕಿಕೊಂಡರು. ದಿನವೂ ಬೆಳಗ್ಗೆ 5 ಗಂಟೆಗೆ ಏಳುತ್ತಿದ್ದ ಅವರು ಕೆಲ ವ್ಯಾಯಾಮ ಹಾಗೂ ಧ್ಯಾನದ ನಂತರ ತಮ್ಮನ್ನು ಅಧ್ಯಯನದಲ್ಲಿ ತೊಡಗಿಸಿಕೊಂಡರು. ತೆರಗತಿಗಳಿಗೂ ಹಾಜರಾಗಿ ಅಧ್ಯಯನ ಮುಂದುವರಿಸಿದರು. ಹೀಗಾಗಿ ಎಂಬಿಬಿಎಸ್‌ನ ಅಂತಿಮ ವರ್ಷದಲ್ಲಿದ್ದಾಗಲೇ ಯುಪಿಎಸ್‌ಸಿ ಪರೀಕ್ಷೆಯನ್ನು ಮೊದಲ ಪ್ರಯತ್ನದಲ್ಲೇ ಬರೆದು ಪಾಸಾದರು. ಯುಪಿಎಸ್‌ಸಿ ರಿಸಲ್ಟ್ ಹೊರಬಂದಾಗ ರಾಜೇಂದ್ರ ಭರುದ್ ಅವರು ತಮ್ಮ ಮನೆಯಲ್ಲಿದ್ದರಂತೆ. ಜೊತೆಯಲ್ಲಿದ್ದ ತಾಯಿಗೆ ಮಗ ಸಿವಿಲ್ ಸರ್ವೆಂಟ್ ಆಗಿದ್ದಾನೆ ಎಂಬ ಅರಿವು ಕೂಡ ಇರಲಿಲ್ಲವಂತೆ.
2021ರಲ್ಲಿ ಅವರು ಫರಿದಾಬಾದ್‌ನಲ್ಲಿ ಐಆರ್‌ಎಸ್ ಅಧಿಕಾರಿಯಾಗಿ ಸೇವೆಗೆ ನಿಯೋಜನೆಗೊಂಡಿದ್ದರು. ತಮ್ಮ ಈ ಅವಧಿಯಲ್ಲಿ ಅವರು ಮತ್ತೆ 2ನೇ ಬಾರಿಗೆ ಯುಪಿಎಸ್‌ಸಿ ಪರೀಕ್ಷೆ ಬರೆದಿದ್ದು, ಈ ವೇಳೆ ಉತ್ತಮ ದರ್ಜೆಯಲ್ಲಿ ಪಾಸಾದ ಅವರು ಐಎಎಸ್ ಅಧಿಕಾರಿಯ ಹಂತಕ್ಕೇರಿದರು. ಅಲ್ಲದೇ ಮಸೂರಿಯಲ್ಲಿ ಐಎಎಸ್ ಅಧಿಕಾರಿಗಳಿಗೆ ನೀಡಲಾಗುವ ಎರಡು ವರ್ಷಗಳ ತರಬೇತಿಗೆ ಆಯ್ಕೆಯಾದರು. ನಂತರ 2015ರಲ್ಲಿ ನಾಂದೇಡ್ ಜಿಲ್ಲೆಯ ಸಹಾಯಕ ಕಲೆಕ್ಟರ್ ಹಾಗೂ ಪ್ರಾಜೆಕ್ಟ್ ಅಧಿಕಾರಿಯಾಗಿ ಸೇವೆಗೆ ಸೇರಿದರು. 2017ರಲ್ಲಿ ಸೋಲಾಪುರದಲ್ಲಿ ಸಿಇಒ ಆದ ಅವರು ಕೊನೆಯದಾಗಿ 2018ರ ಜುಲೈನಲ್ಲಿ ನಂದೂರಬಾರ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಆದರು.
ನಂದೂರ್‌ಬಾರ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಆದ ನಂತರ ಭರುದಾ ಅವರು ಬುಡಕಟ್ಟು ಮತ್ತು ಗ್ರಾಮೀಣ ಸಮುದಾಯಗಳಿಗೆ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಪ್ರಾರಂಭಿಸಿದರು. 40,000 ಕ್ಕೂ ಹೆಚ್ಚು ಕುಟುಂಬಗಳನ್ನು ಪಡಿತರ ಯೋಜನೆಗೆ ಸೇರಿಸುವುದು ಮತ್ತು 65,000 ಕ್ಕೂ ಹೆಚ್ಚು ಗ್ರಾಮೀಣ ವ್ಯಕ್ತಿಗಳನ್ನು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯಿದೆಗೆ ಸೇರಿಸುವ ಕಾರ್ಯ ಮಾಡಿದರು.
ಸೊಲ್ಲಾಪುರದಲ್ಲಿ ಜಿಲ್ಲಾ ಪಂಚಾಯತ್ ಅಧಿಕಾರಿಯಾಗಿದ್ದ ಅವಧಿಯಲ್ಲಿ ತೆರೆದ ಚರಂಡಿಗಳನ್ನು ನಿರ್ಮೂಲನೆ ಮಾಡಲು ಚರಂಡಿ ವ್ಯವಸ್ಥೆ ಕಲ್ಪಿಸಿದ್ದರು. ಇವರು ಜಾರಿಗೆ ತಂದ ಈ ಹೊಸ ಮಾದರಿಯು ನೆಲಕ್ಕೆ ನೀರು ಪ್ರವೇಶಿಸುವುದಕ್ಕೂ ಮೊದಲು ತ್ಯಾಜ್ಯ ನೀರಿನ ಸಂಗ್ರಹಣೆಯಾಗಿ ಸಂಸ್ಕರಣೆಯಾಗುತ್ತಿತ್ತು. ಇವರ ಈ ಕಾರ್ಯ ಬಹಳಷ್ಟು ಜನಮನ್ನಣೆಗೆ ಪಾತ್ರವಾಗಿತ್ತು. ಆದರೂ ಇದೆಲ್ಲದರ ಆಚೆಗೆ ತಾವು ಓದಿದ ಮಹಾರಾಷ್ಟ್ರದ ಅಕ್ಕಲಕುವ ತಾಲೂಕಿನ ಜವಾಹರ್ ನವೋದಯ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿದ್ದನ್ನು ತಮ್ಮ ವೃತ್ತಿ ಜೀವನದ ಯಶಸ್ಸು ಎಂದು ಹೇಳಿಕೊಳ್ಳುತ್ತಾರೆ ರಾಜೇಂದ್ರ ಭರುದಾ, ಐಎಎಸ್ ಅಧಿಕಾರಿಯಾಗಬೇಕು ಎಂದು ಹಗಲಿರುಳು ಶ್ರಮಿಸುತ್ತಿರುವ ಅನೇಕರಿಗೆ ಇವರು ಸ್ಪೂರ್ತಿ.