ಬೆಂಗಳೂರು :  ‘ಕರ್ನಾಟಕದ ಉದ್ಯೋಗಗಳು ಕನ್ನಡಿಗರಿಗೆ’ ಎಂಬ ಅಭಿಯಾನಕ್ಕೆ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌ ಬೆಂಬಲ ವ್ಯಕ್ತಪಡಿಸಿದ್ದು, ರಾಜ್ಯದಲ್ಲಿರುವ ಬ್ಯಾಂಕ್‌ಗಳಲ್ಲಿ ನಾಡಭಾಷೆ ಬಲ್ಲ ಸ್ಥಳೀಯರಿಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

2014ರವರೆಗೆ ರಾಜ್ಯದ ಬ್ಯಾಂಕ್‌ಗಳಲ್ಲಿನ ಉದ್ಯೋಗಗಳು ಕನ್ನಡ ಬಲ್ಲ ರಾಜ್ಯದ ಆಕಾಂಕ್ಷಿಗಳಿಗೆ ಮಾತ್ರವೇ ಮೀಸಲಾಗಿದ್ದವು. ಐಬಿಪಿಎಸ್‌ ನಿಯಮಗಳ ತಿದ್ದುಪಡಿಯಿಂದಾಗಿ ಕನ್ನಡ ಬಾರದವರೆಲ್ಲರೂ ಬ್ಯಾಂಕ್‌ ಉದ್ಯೋಗ ಗಿಟ್ಟಿಸಿ ಕರ್ನಾಟಕದಲ್ಲಿ ಕನ್ನಡಿಗರೇ ಬ್ಯಾಂಕ್‌ ವ್ಯವಹಾರ ಮಾಡಲಾಗದ ಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ಬ್ಯಾಂಕ್‌ ಉದ್ಯೋಗಗಳು ರಾಜ್ಯದ ಆಕಾಂಕ್ಷಿಗಳ ಕೈತಪ್ಪುತ್ತಿವೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಐಬಿಪಿಎಸ್‌ ತಿದ್ದುಪಡಿಯಿಂದಾಗಿ ರಾಜ್ಯದ ಅಭ್ಯರ್ಥಿಗಳಿಗೆ ಮೋಸವಾಗುತ್ತಿದೆ. ಐಬಿಪಿಎಸ್‌ ತಿದ್ದುಪಡಿ ಹಿಂಪಡೆಯಬೇಕೆಂದು ಕೇಂದ್ರ ಹಣಕಾಸು ಸಚಿವರಿಗೆ ಪತ್ರ ಬರೆದಿದ್ದೇನೆ. ಆದರೆ ಈವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. 

ಸ್ಥಳೀಯರೊಂದಿಗೆ ವ್ಯವಹರಿಸುವ ಜವಾಬ್ದಾರಿ ಇರುವ ಉದ್ಯೋಗಿಗಳು ನಾಡಭಾಷೆ ಬಲ್ಲವರಾದ ಸ್ಥಳೀಯರೇ ಆಗಿರಬೇಕು. ಇದು ನಮ್ಮೆಲ್ಲರ ಸಹಜ ಬೇಡಿಕೆ. ಈ ನಿಟ್ಟಿನಲ್ಲಿ ಕರ್ನಾಟಕದ ಉದ್ಯೋಗಗಳು ಕನ್ನಡಿಗರಿಗೆ ಎಂಬ ಒತ್ತಾಯಕ್ಕೆ ಸಹಮತ ವ್ಯಕ್ತಪಡಿಸುತ್ತಿದ್ದೇನೆ ಎಂದು ಅವರು ಸರಣಿ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.