Asianet Suvarna News Asianet Suvarna News

IPL 2020 ಟೂರ್ನಿ ಆಯೋಜಿಸಲು ಬಿಸಿಸಿಐನಿಂದ ಪ್ಲಾನ್ B, ಜುಲೈನಲ್ಲಿ ಟೂರ್ನಿ?

ಮಾರ್ಚ್ 29ರಂದು ಆರಂಭವಾಗಬೇಕಿದ್ದ ಐಪಿಎಲ್ ಟೂರ್ನಿಯನ್ನು ಎಪ್ರಿಲ್ 15ಕ್ಕೆ ಮುಂದೂಡಲಾಗಿದೆ. ಇದೀಗ ಮುಂದಿನ ತಿಂಗಳು ಐಪಿಎಎಲ್ ಆರಂಭವಾಗೋದು ಅನುಮಾನವಾಗಿದೆ. ಹೀಗಾಗಿ ಟೂರ್ನಿ ಆಯೋಜಿಸಲು ಬಿಸಿಸಿಐ ಪ್ಲಾನ್ ಬಿ ಸಿದ್ದಪಡಿಸಿದೆ. ಬಿಸಿಸಿಐ ಪ್ಲಾನ್ ಬಿ ಪ್ರಕಾರ ಟೂರ್ನಿ ಆಯೋಜನೆ ಹೇಗೆ? ಇಲ್ಲಿದೆ ವಿವರ.

BCCI plan to organize ipl tourney in July 2020 due to coronavirus
Author
Bengaluru, First Published Mar 19, 2020, 10:39 AM IST

ಮುಂಬೈ(ಮಾ.19): ಐಪಿಎಲ್‌ 13ನೇ ಆವೃತ್ತಿಯನ್ನು ನಡೆಸಲು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಏನೆಲ್ಲಾ ಆಯ್ಕೆಗಳು ಇವೆಯೋ ಅವೆಲ್ಲವನ್ನೂ ಪಟ್ಟಿಮಾಡುತ್ತಿದೆ. ಶತಾಯಗತಾಯ ಈ ವರ್ಷದ ಪಂದ್ಯಾವಳಿ ರದ್ದಾಗದಂತೆ ನೋಡಿಕೊಳ್ಳಬೇಕಾದ ಅನಿವಾರ್ಯತೆಗೆ ಬಿಸಿಸಿಐ ಸಿಲುಕಿದೆ. ಫ್ರಾಂಚೈಸಿಗಳ ಒತ್ತಡ ಒಂದು ಕಡೆಯಾದರೆ, ಪ್ರಸಾರ ಹಕ್ಕು ಹೊಂದಿರುವ ಸ್ಟಾರ್‌ ವಾಹಿನಿಯ ಒತ್ತಡ ಮತ್ತೊಂದು ಕಡೆ. ಕೋಟ್ಯಂತರ ರುಪಾಯಿ ನಷ್ಟವನ್ನು ತಪ್ಪಿಸಲು ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಹಾಗೂ ಕಾರ್ಯದರ್ಶಿ ಜಯ್‌ ಶಾ ಪ್ಲ್ಯಾನ್‌ ‘ಬಿ’ ಸಿದ್ಧಪಡಿಸುತ್ತಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ.

ಇದನ್ನೂ ಓದಿ: ಒಂದು ವರ್ಷ ಐಪಿಎಲ್‌ ರದ್ದಾದರೆ ಬಿಸಿಸಿಐಗೆ ಆಗೋ ನಷ್ಟ ಎಷ್ಟು..?

ಪ್ಲ್ಯಾನ್‌ ‘ಬಿ’ ಏನು?: ಐಪಿಎಲ್‌ ಟೂರ್ನಿಯನ್ನು ಇನ್ನೂ 4 ತಿಂಗಳು ಮುಂದೂಡಿ, ಜುಲೈನಲ್ಲಿ ಆರಂಭಿಸಲು ಬಿಸಿಸಿಐ ಚಿಂತನೆ ನಡೆಸಿದೆ. ಜುಲೈನಿಂದ ಸೆಪ್ಟೆಂಬರ್‌ ವರೆಗೂ ಏಷ್ಯಾಕಪ್‌ ಹೊರತು ಪಡಿಸಿ ಭಾರತ ತಂಡಕ್ಕೆ ಯಾವುದೇ ಮಹತ್ವದ ಟೂರ್ನಿಗಳು ಇಲ್ಲ. ಏಷ್ಯಾ ಕ್ರಿಕೆಟ್‌ ಸಮಿತಿ (ಎಸಿಸಿ)ಯ ಮನವೊಲಿಸಿ, ಏಷ್ಯಾಕಪ್‌ ಟಿ20 ಟೂರ್ನಿಯನ್ನು ಐಪಿಎಲ್‌ ಮುಗಿದ ಬಳಿಕ, ಟಿ20 ವಿಶ್ವಕಪ್‌ಗೂ ಮುನ್ನ ನಡೆಯುವಂತೆ ಮಾಡುವುದು ಬಿಸಿಸಿಐಗೆ ಕಷ್ಟದ ಕೆಲಸವೇನಲ್ಲ. ಜುಲೈನಿಂದ ಸೆಪ್ಟೆಂಬರ್‌ ವರೆಗಿನ ಅವಧಿಯಲ್ಲಿ ಆಸ್ಪ್ರೇಲಿಯಾ, ದಕ್ಷಿಣ ಆಫ್ರಿಕಾ, ವೆಸ್ಟ್‌ಇಂಡೀಸ್‌, ನ್ಯೂಜಿಲೆಂಡ್‌, ಬಾಂಗ್ಲಾದೇಶ ಹಾಗೂ ಆಷ್ಘಾನಿಸ್ತಾನ ತಂಡಗಳಿಗೆ ಯಾವುದೇ ಮಹತ್ವದ ಸರಣಿಗಳು ಇಲ್ಲ. ಪಾಕಿಸ್ತಾನ ತಂಡ ಇಂಗ್ಲೆಂಡ್‌ ಪ್ರವಾಸ ಕೈಗೊಳ್ಳಲಿದ್ದು, ಇಂಗ್ಲೆಂಡ್‌ನ ಕೆಲ ಆಟಗಾರರು ಐಪಿಎಲ್‌ಗೆ ಗೈರಾಗಬಹುದು. ಇನ್ನು ಪಾಕಿಸ್ತಾನದ ಆಟಗಾರರಿಗೆ ಐಪಿಎಲ್‌ನಲ್ಲಿ ಪ್ರವೇಶವೇ ಇಲ್ಲ.

ಇದನ್ನೂ ಓದಿ: ಏಕಾಏಕಿಯಾಗಿ ಅಭ್ಯಾಸ ನಿಲ್ಲಿಸಿ ರಾಂಚಿಗೆ ತೆರಳಿದ ಧೋನಿ..!

ಜುಲೈನಲ್ಲಿ ನಡೆಸುವುದೇ ಸೂಕ್ತ?
ಮಾ.29ಕ್ಕೆ ಆರಂಭಗೊಳ್ಳಬೇಕಿದ್ದ 13ನೇ ಆವೃತ್ತಿಯ ಐಪಿಎಲ್‌ ಟೂರ್ನಿಯನ್ನು ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಏ.15ರ ವರೆಗೂ ಅಮಾನತು ಮಾಡಲಾಗಿದೆ. ಏಪ್ರಿಲ್‌ 2ನೇ ವಾರದಲ್ಲಿ ಟೂರ್ನಿ ಆರಂಭಗೊಂಡರೂ, ಎಲ್ಲಾ 60 ಪಂದ್ಯಗಳನ್ನು ನಡೆಸಲು ಸಾಧ್ಯವಿದೆ ಎನ್ನುವುದು ಬಿಸಿಸಿಐ ಲೆಕ್ಕಾಚಾರ. 2009ರ ಐಪಿಎಲ್‌ ಟೂರ್ನಿಯನ್ನು ಕೇವಲ 37 ದಿನಗಳಲ್ಲಿ ಮುಕ್ತಾಯಗೊಳಿಸಲಾಗಿತ್ತು. ಹೀಗಾಗಿ ಅದೇ ಮಾದರಿಯಿಟ್ಟುಕೊಂಡು ಈ ವರ್ಷದ ವೇಳಾಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ ಎನ್ನಲಾಗಿದೆ.

‘ಸದ್ಯದ ಪರಿಸ್ಥಿತಿಯಲ್ಲಿ ವಿದೇಶಿ ಆಟಗಾರರು ಐಪಿಎಲ್‌ ಆಡಲು ಭಾರತಕ್ಕೆ ಬರುವುದು ಸಹ ಅನುಮಾನ. ವಿದೇಶಿರ ಆಗಮನಕ್ಕೆ ಕೇಂದ್ರ ಸರ್ಕಾರ ನಿರ್ಬಂಧ ಹೇರಿದರೂ ಅಚ್ಚರಿಯಿಲ್ಲ. ಹೀಗಾಗಿ ಪರಿಸ್ಥಿತಿ ಸುಧಾರಿಸಿದ ಬಳಿಕ ಜುಲೈನಲ್ಲಿ ಪಂದ್ಯಾವಳಿ ನಡೆಸುವುದೇ ಸೂಕ್ತ. ಕೊರೋನಾ ಸೋಂಕು ನಿಯಂತ್ರಣಕ್ಕೆ ಬಂದ ಮೇಲೆ ಕ್ರೀಡಾಂಗಣಗಳಿಗೆ ಪ್ರೇಕ್ಷಕರು ಆಗಮಿಸಲು ಸಹ ಯಾವುದೇ ಅಡೆತಡೆ ಇರುವುದಿಲ್ಲ’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿದ್ದಾರೆ.

ಐಪಿಎಲ್‌ 13ನೇ ಆವೃತ್ತಿ ಬಗ್ಗೆ ಇರುವ ಕುತೂಹಲ ಮುಂದುವರಿದಿದ್ದು, ಬಿಸಿಸಿಐ ತನ್ನ ಮುಂದಿರುವ ಆಯ್ಕೆಗಳ ಪೈಕಿ ಯಾವುದನ್ನು ಕಾರ್ಯರೂಪಕ್ಕೆ ತರಲಿದೆ ಎನ್ನುವುದು ಕಾದು ನೋಡಬೇಕಿದೆ.
 

Follow Us:
Download App:
  • android
  • ios