ಪಣಜಿ(ಫೆ.09): ಭಾರತದಲ್ಲಿ ಹೂಡಿಕೆ ಮಾಡಿ ವ್ಯಾಪಾರ ಮಾಡಲು ಬರುವ ವಿದೇಶಿ ಕಂಪನಿಗಳು, ಇಲ್ಲಿನ ಹಿಂದೂ ಸಮುದಾಯಕ್ಕೆ ಅನುಕೂಲವಾಗುವ ರೀತಿಯಲ್ಲಿ ವ್ಯವಹರಿಸಬೇಕು ಎಂದು ಆರ್‌ಎಸ್‌ಎಸ್‌ ಪ್ರಧಾನ ಕಾರ್ಯದರ್ಶಿ ಸುರೇಶ್ ಭಯ್ಯಾಜೀ ಹೇಳಿದ್ದಾರೆ.

ಪಣಜಿಯ ಡೋನಾ ಪೌಲಾದಲ್ಲಿ ನಡೆದ 'ವಿಶ್ವಗುರು ಭಾರತ-ಆರ್‌ಎಸ್‌ಎಸ್‌ ದೃಷ್ಟಿಕೋನ' ಎಂಬ ವಿಚಾರ ಸಂಕೀರಣದಲ್ಲಿ ಮಾತನಾಡಿದ ಸುರೇಶ್ ಭಯ್ಯಾಜೀ, ಭಾರತ 2020ರಲ್ಲಿ ವಿಶ್ವಗುರುವಾಗುವುದರಲ್ಲಿ ಸಂಶಯವಿಲ್ಲ ಎಂದು ಹೇಳಿದರು.

ಪಣಜಿ ಆರ್‌ಎಸ್‌ಎಸ್‌ ಕಾರ್ಯಕ್ರಮಕ್ಕೆ ಕ್ರೈಸ್ತ ಬಿಷಪ್‌ಗೆ ಆಹ್ವಾನ

ಭಾರತದಲ್ಲಿ ಹೂಡಿಕೆ ಮಾಡುವ ವಿದೇಶಿಗರು ಇಲ್ಲಿನ ಹಿಂದೂ ಸಮುದಾಯಕ್ಕೆ ಮೊದಲ ಆದ್ಯತೆ ನೀಡಬೇಕು. ಹಿಂದೂ ಸಮುದಾಯದೊಂದಿಗೆ ವ್ಯವಹರಿಸುವ ಮೂಲಕ ಪರಸ್ಪರ ಅಭಿವೃದ್ಧಿಗೆ ಮುಂದಾಗಬೇಕು ಎಂದು ಭಯ್ಯಾಜೀ ಆಗ್ರಹಿಸಿದರು.

ಹಿಂದೂ ಸಮುದಾಯ ಹೊರತುಪಡಿಸಿ ಭಾರತವನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಭಾರತದ ಅವಿಭಾಜ್ಯ ಅಂಗವಾಗಿರುವ ಹಿಂದೂ ಸಮುದಾಯದೊಂದಿಗೆ ಕೈಜೋಡಿಸುವುದು ಭಾರತದೊಂದಿಗೆ ಕೈಜೋಡಿಸಿದಂತೆ ಎಂದು ಭಯ್ಯಾಜೀ ಅಭಿಪ್ರಾಯಪಟ್ಟರು.

ಶತಶತಮಾನಗಳಿಂದ ಹಿಂದೂ ಸಮುದಾಯ ಜಾತ್ಯಾತೀತ ಸ್ವರೂಪವನ್ನು ಅಳವಡಿಸಿಕೊಂಡಿದ್ದು, ಈ ಸಮುದಾಯವನ್ನು ಕೋಮುವಾದಿ ಎಂದು ಕರೆಯುವುದು ಹಾಸ್ಯಾಸ್ಪದ ಎಂದು ಭಯ್ಯಾಜೀ ಈ ವೇಳೆ ನುಡಿದರು.

ಭಾರತೀಯ ಮುಸ್ಲಿಮರು ಚೆನ್ನಾಗಿರಲು ಕಾರಣವೇನು?: ಭಾಗವತ್ ಅನಿಸಿಕೆ ಒಪ್ಪೋಣವೇನು?

ಹಿಂದೂ ಸಮುದಾಯದ ಒಗ್ಗಟ್ಟು ಇತರ ಸಮುದಾಯಗಳಿಗೆ ಹಾನಿಯುಂಟು ಮಾಡುವುದಿಲ್ಲ ಎಂದ ಭಯ್ಯಾಜೀ, ಭಾರತದಲ್ಲಿರುವ ಎಲ್ಲರೂ ಹಿಂದೂಗಳು ಎಂಬ ವಿಶಾಲ ದೃಷ್ಟಿಕೋನದೊಂದಿಗೆ ಆರ್‌ಎಸ್‌ಎಸ್‌ ಕೆಲಸ ಮಾಡುತ್ತಿದೆ ಎಂದು ಹೇಳಿದರು.