Asianet Suvarna News Asianet Suvarna News

ಪೌರತ್ವ ತಿದ್ದುಪಡಿ ಕಾಯ್ದೆ ವಿವಾದ ಸೃಷ್ಟಿಸಿರುವುದು ಏಕೆ?

ಪೌರತ್ವ ಕಾಯ್ದೆ-1955, ವಿದೇಶಿಗರ ಕಾಯ್ದೆ ಹಾಗೂ ಪಾಸ್‌ಪೋರ್ಟ್‌ ಕಾಯ್ದೆಗಳು ಭಾರತಕ್ಕೆ ಅಕ್ರಮವಾಗಿ ವಲಸೆ ಬರುವವರಿಗೆ ಪೌರತ್ವ ನೀಡುವಂತಿಲ್ಲ ಎಂದು ನಿರ್ಬಂಧಿಸಿವೆ. ಭಾರತದ ಸಂವಿಧಾನದ ಪ್ರಕಾರ ಕಾನೂನುಬದ್ಧ ಪಾಸ್‌ಪೋರ್ಟ್‌ ಅಥವಾ ಸೂಕ್ತ ದಾಖಲೆ ಇಲ್ಲದೆ ಭಾರತಕ್ಕೆ ನುಸುಳಿದವರು ಅಕ್ರಮ ವಲಸಿಗರು.

what is citizenship amendment bill and answer for constitutional question
Author
Bengaluru, First Published Dec 11, 2019, 2:32 PM IST

ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫಘಾನಿಸ್ತಾನದಿಂದ ವಲಸೆ ಬಂದ ಹಿಂದೂ ಇತ್ಯಾದಿ ಮುಸ್ಲಿಮೇತರ ಧರ್ಮೀಯರಿಗೆ ಭಾರತದ ಶಾಶ್ವತ ಪೌರತ್ವ ತಿದ್ದುಪಡಿ ವಿಧೇಯಕ 2019' ರ ಬಗ್ಗೆ ಭಾರೀ ಪರ- ವಿರೋಧ ಚರ್ಚೆ ನಡೆಯುತ್ತಿದೆ. ಅಷ್ಟಕ್ಕೂ ಏನಿದು ಪೌರತ್ವ ತಿದ್ದುಪಡಿ ಕಾಯ್ದೆ? ಯಾಕಿಷ್ಟು ವಿರೋಧ ವ್ಯಕ್ತವಾಗುತ್ತಿದೆ? ಇಲ್ಲಿದೆ ನೋಡಿ.  

ಏನಿದು ಪೌರತ್ವ ತಿದ್ದುಪಡಿ ಕಾಯ್ದೆ?

ಭಾರತದ ನೆರೆಯ ರಾಷ್ಟ್ರಗಳಿಂದ ಅಂದರೆ ಪಾಕಿಸ್ತಾನ, ಅಷ್ಘಾನಿಸ್ತಾನ ಮತ್ತು ಬಾಂಗ್ಲಾದೇಶಗಳಲ್ಲಿ ಧರ್ಮದ ಆಧಾರದ ಮೇಲೆ ಕಿರುಕುಳ ಅನುಭವಿಸಿ ಭಾರತಕ್ಕೆ ವಲಸೆ ಬಂದಿರುವ (ಸಕ್ರಮವಾಗಿ ಅಥವಾ ಅಕ್ರಮವಾಗಿ) 6 ಧಾರ್ಮಿಕ ಅಲ್ಪಸಂಖ್ಯಾತ (ಹಿಂದು, ಕ್ರಿಶ್ಚಿಯನ್‌, ಸಿಖ್‌, ಪಾರ್ಸಿ, ಜೈನ ಮತ್ತು ಬೌದ್ಧ) ಸಮುದಾಯಗಳಿಗೆ ಭಾರತದ ಪೌರತ್ವ ನೀಡುವ ಮಸೂದೆಯೇ ಪೌರತ್ವ ತಿದ್ದುಪಡಿ ಮಸೂದೆ-2019. ಹಳೆಯ ಕಾಯ್ದೆಯಲ್ಲಿ ವಿದೇಶಿಗರು ಕಾನೂನುಬದ್ಧವಾಗಿ ಭಾರತಕ್ಕೆ ವಲಸೆ ಬಂದು ಇಲ್ಲಿ 12 ವರ್ಷ ಅಥವಾ ಅದಕ್ಕಿಂತ ಹೆಚ್ಚು ವರ್ಷ ನೆಲೆಸಿದ್ದರೆ ಪೌರತ್ವ ಪಡೆಯಲು ಅರ್ಹರಾಗಿದ್ದರು.

ಆದರೆ ಹೊಸ ತಿದ್ದುಪಡಿ ಕಾಯ್ದೆಯಲ್ಲಿ ಭಾರತಕ್ಕೆ ಮೇಲಿನ ಮೂರು ದೇಶಗಳಿಂದ ಅಕ್ರಮವಾಗಿ ವಲಸೆ ಬಂದಿದ್ದರೂ ಇಲ್ಲಿ 6 ವರ್ಷ ವಾಸವಿದ್ದರೆ ಆರು ಧರ್ಮೀಯರು ಭಾರತದ ಪೌರತ್ವ ಪಡೆಯಲು ಅರ್ಹರಾಗಿರುತ್ತಾರೆ.

ತಿದ್ದುಪಡಿಯನುಸಾರ 2014ರ ಡಿಸೆಂಬರ್‌ 31ರ ಒಳಗೆ ಭಾರತಕ್ಕೆ ವಲಸೆ ಬಂದ ಮುಸ್ಲಿಮೇತರ ನಿರಾಶ್ರಿತರು ಭಾರತದ ಪೌರತ್ವ ಪಡೆಯಲು ಅರ್ಹರು. ಯಾವುದೇ ಸೂಕ್ತ ದಾಖಲೆ ಇಲ್ಲದಿದ್ದರೂ ಅವರು ಅರ್ಜಿ ಸಲ್ಲಿಸಬಹುದು. ಆದರೆ ಈ ರಾಷ್ಟ್ರಗಳಿಂದ ವಲಸೆ ಬಂದ ಮುಸ್ಲಿಮರಿಗೆ ಈ ಕಾಯ್ದೆಯು ಪೌರತ್ವ ನೀಡುವುದಿಲ್ಲ.

ಸಿಎಎ ವಿರೋಧಿಸಿ ಕತ್ತಿ, ಗುರಾಣಿ ಹಿಡಿದು ಪ್ರತಿಭಟಿಸಿದಾ ಜನ: Fact Check

ಯಾರು ಅಕ್ರಮ ವಲಸಿಗರು?

ಪೌರತ್ವ ಕಾಯ್ದೆ-1955, ವಿದೇಶಿಗರ ಕಾಯ್ದೆ ಹಾಗೂ ಪಾಸ್‌ಪೋರ್ಟ್‌ ಕಾಯ್ದೆಗಳು ಭಾರತಕ್ಕೆ ಅಕ್ರಮವಾಗಿ ವಲಸೆ ಬರುವವರಿಗೆ ಪೌರತ್ವ ನೀಡುವಂತಿಲ್ಲ ಎಂದು ನಿರ್ಬಂಧಿಸಿವೆ. ಭಾರತದ ಸಂವಿಧಾನದ ಪ್ರಕಾರ ಕಾನೂನುಬದ್ಧ ಪಾಸ್‌ಪೋರ್ಟ್‌ ಅಥವಾ ಸೂಕ್ತ ದಾಖಲೆ ಇಲ್ಲದೆ ಭಾರತಕ್ಕೆ ನುಸುಳಿದವರು ಅಕ್ರಮ ವಲಸಿಗರು. ಹೀಗೆ ವಲಸೆ ಬಂದ 3 ದೇಶಗಳ 6 ಧಾರ್ಮಿಕ ಅಲ್ಪಸಂಖ್ಯಾತರಿಗೆ ಪೌರತ್ವ ನೀಡುವ ಪ್ರಸ್ತಾಪ ಹೊಸ ತಿದ್ದುಪಡಿಯಲ್ಲಿದೆ.

1955 ರ ಪೌರತ್ವ ಕಾಯ್ದೆ ಏನು ಹೇಳುತ್ತದೆ?

ದೇಶ ವಿಭಜನೆ ಮತ್ತು ಕೋಮುಗಲಭೆ ಸಂದರ್ಭದಲ್ಲಿ ಭಾರತದಿಂದ ಅನಿವಾರ್ಯವಾಗಿ ಬೇರೆ ದೇಶಗಳಿಗೆ ವಲಸೆ ಹೋಗಿದ್ದ ಮತ್ತು ನೆರೆ ರಾಷ್ಟ್ರಗಳಲ್ಲಿ ಧಾರ್ಮಿಕ ಅಲ್ಪಸಂಖ್ಯಾತರಾದ ಮೂಲ ಭಾರತೀಯರಿಗೆ ಮತ್ತೆ ದೇಶದಲ್ಲಿ ನೆಲೆ ಕಲ್ಪಿಸುವ ಮತ್ತು ಭಾರತೀಯ ಪೌರತ್ವ ನೀಡುವ ಸಲುವಾಗಿ 1955ರಲ್ಲಿ ನೆಹರು ನೇತೃತ್ವದ ಕೇಂದ್ರ ಸರ್ಕಾರ ಭಾರತೀಯ ಪೌರತ್ವ ಕಾಯ್ದೆ ಜಾರಿಗೆ ತಂದಿತ್ತು. ಕಳೆದ ಆರು ದಶಕಗಳಿಂದ ದೇಶದಲ್ಲಿ ಚಾಲ್ತಿಯಲ್ಲಿರುವುದು ಇದೇ ಕಾಯ್ದೆ.

ಈ ಕಾಯ್ದೆಯ ಪ್ರಕಾರ ನೆರೆ ರಾಷ್ಟ್ರದಲ್ಲಿ ನೆಲೆಸಿರುವ ಧಾರ್ಮಿಕ ಅಲ್ಪಸಂಖ್ಯಾತರಾದ ಹಿಂದೂ, ಸಿಖ್‌, ಕ್ರೈಸ್ತ, ಪಾರ್ಸಿ, ಬೌದ್ಧ, ಜೈನ ಮತ್ತು ಯಹೂದಿಗಳು ಕಾನೂನುಬದ್ಧವಾಗಿ ನಿರ್ದಿಷ್ಟದಾಖಲೆಗಳ ಜೊತೆಗೆ ಭಾರತದಲ್ಲಿ 12 ಅಥವಾ ಅದಕ್ಕಿಂತ ಹೆಚ್ಚು ವರ್ಷ ನೆಲೆಸಿದ್ದರೆ ಅವರಿಗೆ ಭಾರತೀಯ ಪೌರತ್ವ ನೀಡಲಾಗುತ್ತಿತ್ತು. ಅಲ್ಲದೆ ಈ ಕಾಯ್ದೆ ಪ್ರಕಾರ ವಿದೇಶಿ ವ್ಯಕ್ತಿಯೊಬ್ಬ ಭಾರತದಲ್ಲಿದ್ದು, ಇಲ್ಲಿನ ಸರ್ಕಾರದಲ್ಲಿ 12 ತಿಂಗಳು ಸೇವೆ ಸಲ್ಲಿಸಿರುವ ಜೊತೆಗೆ ಹಲವು ಷರತ್ತುಗಳಿಗೆ ಬದ್ಧರಾಗಿದ್ದರೆ ಭಾರತದ ಪೌರತ್ವಕ್ಕೆ ಅರ್ಜಿ ಸಲ್ಲಿಸುವ ಅವಕಾಶ ಇದೆ.

CAAಗೆ ಬೆಂಬಲಿಸುವವರು ದೇಶ ದ್ರೋಹಿಗಳು

ಅಲ್ಲದೆ, ಅರ್ಜಿ ಸಲ್ಲಿಸುವ ಹಿಂದಿನ 14 ವರ್ಷಗಳಲ್ಲಿ 11 ವರ್ಷ ಆತ ಭಾರತದಲ್ಲೇ ಇದ್ದ ಎಂಬುದನ್ನು ದೃಢಪಡಿಸಬೇಕಾಗಿತ್ತು. ಆದರೆ ಈಗ ತಿದ್ದುಪಡಿ ಮಾಡುತ್ತಿರುವ ಮಸೂದೆಯಲ್ಲಿ ಅಕ್ರಮ ವಲಸಿಗರಿಗೂ ಪೌರತ್ವ ನೀಡುವುದು ಸೇರಿದಂತೆ ಕೆಲ ನಿಬಂಧನೆಗಳನ್ನು ಸಡಿಲಿಸಲಾಗಿದೆ.

2016 ರಲ್ಲೇ ಮಂಡನೆಯಾದ ಮಸೂದೆ

ಪೌರತ್ವ ತಿದ್ದುಪಡಿ ಮಸೂದೆ ಅನುಷ್ಠಾನಗೊಳಿಸುವುದಾಗಿ ಕೇಂದ್ರ ಸರ್ಕಾರ 2014 ಮತ್ತು 2019ರ ಲೋಕಸಭಾ ಚುನಾವಣೆ ವೇಳೆಯೇ ತನ್ನ ಪ್ರಣಾಳಿಕೆಯಲ್ಲಿ ಹೇಳಿತ್ತು. ಮೊದಲ ಬಾರಿಗೆ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗ, 2016ರ ಜುಲೈ 19ರಂದು ಈ ಮಸೂದೆಯನ್ನು ಮೊದಲ ಬಾರಿಗೆ ಲೋಕಸಭೆಯಲ್ಲಿ ಮಂಡನೆ ಮಾಡಿತ್ತು. ಅದನ್ನು ಆ ವರ್ಷವೇ ಜಂಟಿ ಸಂಸದೀಯ ಸಮಿತಿಗೆ ಒಪ್ಪಿಸಲಾಗಿತ್ತು.

ಸಮಿತಿಯು 2019ರ ಜನವರಿಯಲ್ಲಿ ತನ್ನ ವರದಿ ನೀಡಿದ್ದು, ಅದರ ಮಾರನೇ ದಿನವೇ ಲೋಕಸಭೆಯಲ್ಲಿ ಮಸೂದೆ ಮಂಡನೆಯಾಗಿ ಪಾಸಾಗಿತ್ತು. ಆದರೆ ಆಗ ರಾಜ್ಯಸಭೆಯಲ್ಲಿ ಮಂಡನೆಯಾಗಿರಲಿಲ್ಲ. ನಂತರ ಸರ್ಕಾರದ ಅವಧಿ ಮುಗಿಯಿತು. ಹೀಗಾಗಿ ಮಸೂದೆ ರದ್ದಾಯಿತು. ಆದ್ದರಿಂದ ಮೋದಿ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೆ ಬಂದ ಮೇಲೆ ಎರಡನೇ ಬಾರಿ ಮಸೂದೆ ಮಂಡಿಸಲಾಗಿದೆ. ಅದನ್ನು ಡಿಸೆಂಬರ್‌ 9ರಂದು ಲೋಕಸಭೆಯಲ್ಲಿ ಅಂಗೀಕರಿಸಲಾಗಿದೆ. ಇನ್ನು ರಾಜ್ಯಸಭೆಯಲ್ಲಿ ಅದನ್ನು ಅಂಗೀಕರಿಸಬೇಕಾಗಿದೆ.

ಇರಾನಿನ ಪ್ರತಿಭಟನೆ ಪೋಸ್ಟ್ ಮಾಡಿ ಸಿಎಎ ವಿರೋಧಿ ಹೋರಾಟ ಅಂದ್ರು

ಯಾವ ರಾಜ್ಯಗಳಿಗೆ ಈ ಕಾಯ್ದೆ ಅನ್ವಯಿಸೋದಿಲ್ಲ?

ಪೌರತ್ವ ತಿದ್ದುಪಡಿ ಕಾಯ್ದೆಯು ಸಂವಿಧಾನದ 6ನೇ ಪರಿಚ್ಛೇದ ವ್ಯಾಪ್ತಿಯಲ್ಲಿ ಬರುವ ರಾಜ್ಯಗಳಲ್ಲಿ ಅನ್ವಯವಾಗುವುದಿಲ್ಲ. ಅಂದರೆ ಬುಡಕಟ್ಟು ಜನರು ಹೆಚ್ಚಿರುವ ಅಸ್ಸಾಂ, ಮೆಘಾಲಯ, ತ್ರಿಪುರ ಮತ್ತು ಮಿಜೋರಂಗಳಲ್ಲಿ ಅನ್ವಯವಾಗುವುದಿಲ್ಲ. ಹಾಗೆಯೇ ರಾಜ್ಯದ ನಿರ್ದಿಷ್ಟಪ್ರದೇಶಕ್ಕೆ ಹೊರಗಿನವರು ಹೋಗಲು ಅನುಮತಿ ಪಡೆಯಬೇಕಾದ (ಇನ್ನರ್‌ ಲೈನ್‌ ಪರ್ಮಿಟ್‌) ವ್ಯವಸ್ಥೆ ಹೊಂದಿರುವ ಅರುಣಾಚಲ ಪ್ರದೇಶ, ನಾಗಾಲ್ಯಾಂಡ್‌ ಮತ್ತು ಮಿಜೋರಂನಲ್ಲಿ ಇದು ಅನ್ವಯವಾಗುವುದಿಲ್ಲ.

ಎನ್‌ಆರ್‌ಸಿಗೂ ಪೌರತ್ವ ತಿದ್ದುಪಡಿ ಕಾಯ್ದೆಗೂ ವ್ಯತ್ಯಾಸವೇನು?

ಅಸ್ಸಾಂನಲ್ಲಿ ಬಾಂಗ್ಲಾದೇಶದಿಂದ ಅಕ್ರಮವಾಗಿ ವಲಸೆ ಬಂದವರ ಪತ್ತೆಗಾಗಿ ರಾಷ್ಟ್ರೀಯ ನಾಗರಿಕ ನೋಂದಣಿ (ಎನ್‌ಆರ್‌ಸಿ)ಯನ್ನು ಜಾರಿ ಮಾಡಲಾಗಿತ್ತು. ಅದರ ಪ್ರಕಾರ ಅಲ್ಲಿನ ಜನರು ತಾವು ಅಥವಾ ತಮ್ಮ ಪೂರ್ವಜರು ಅಸ್ಸಾಂ ನಿವಾಸಿಗಳೆಂದು ಸಾಬೀತುಪಡಿಸಬೇಕಿತ್ತು. ಈ ಪ್ರಕ್ರಿಯೆ ಪೂರ್ಣಗೊಂಡಿದ್ದು, 19 ಲಕ್ಷ ಜನರನ್ನು ಅಕ್ರಮ ವಲಸಿಗರೆಂದು ಗುರುತಿಸಲಾಗಿದೆ. ಅವರಿಗೆ ತಮ್ಮ ನಾಗರಿಕತ್ವ ಸಾಬೀತುಪಡಿಸಲು ಅಪೀಲು ಸಲ್ಲಿಸಲು ಅವಕಾಶ ನೀಡಲಾಗಿದೆ. ಹೀಗೆ ಪೌರತ್ವ ಪರಿಶೀಲಿಸುವ ಎನ್‌ಆರ್‌ಸಿಯನ್ನು ಈಗ ಎಲ್ಲ ರಾಜ್ಯಗಳಿಗೂ ವಿಸ್ತರಿಸಲಾಗುತ್ತಿದೆ. ಆದರೆ ಪೌರತ್ವ ತಿದ್ದುಪಡಿ ಕಾಯ್ದೆಯಲ್ಲಿ ಧರ್ಮದ ಆಧಾರದ ಮೇಲೆ ಪೌರತ್ವ ನೀಡಲಾಗುತ್ತದೆ.

ಕೇಂದ್ರ ಸರ್ಕಾರದ ವಾದ ಏನು?

ಮುಸ್ಲಿಂ ಪ್ರಧಾನ ರಾಷ್ಟ್ರಗಳಲ್ಲಿದ್ದ ಅಲ್ಪಸಂಖ್ಯಾತರು ಅಲ್ಲಿ ಧಾರ್ಮಿಕ ಕಿರುಕುಳ ಅನುಭವಿಸಿ ಭಾರತಕ್ಕೆ ವಲಸೆ ಬಂದಿದ್ದಾರೆ. ದೆಹಲಿ, ರಾಜಸ್ಥಾನ ಸೇರಿ ಉತ್ತರ ಭಾರತದ ವಿವಿಧ ರಾಜ್ಯಗಳಲ್ಲಿ ಮೇಲಿನ ಮೂರು ರಾಷ್ಟ್ರಗಳಿಂದ ವಲಸೆ ಬಂದ ಹಿಂದು, ಸಿಖ್‌, ಜೈನ, ಬೌದ್ಧ, ಪಾರ್ಸಿ, ಕ್ರಿಶ್ಚಿಯನ್‌ ಧರ್ಮದವರಿದ್ದು, ಅವರ ಬದುಕು ತೀವ್ರ ಸಂಕಷ್ಟದಲ್ಲಿದೆ. ನಾಲ್ಕೈದು ವರ್ಷಗಳ ಹಿಂದೆ ಅವರೆಲ್ಲರೂ ಧರಣಿ ನಡೆಸಿ ತಮ್ಮನ್ನು ಭಾರತದ ಶಾಶ್ವತ ಪ್ರಜೆಗಳನ್ನಾಗಿ ಮಾಡಿ ಎಂದು ಮನವಿ ಕೂಡ ಮಾಡಿದ್ದರು.

ಆದರೆ ಭಾರತದಲ್ಲಿ ಎಷ್ಟುಪ್ರಮಾಣದಲ್ಲಿ ಅಕ್ರಮ ವಲಸಿಗರಿದ್ದಾರೆ ಎಂಬ ಬಗ್ಗೆ ಸ್ಪಷ್ಟಅಂಕಿ-ಅಂಶಗಳಿಲ್ಲ. ಆದರೆ, ಮೂರೂ ದೇಶಗಳಿಂದ ಬಂದ ಅಕ್ರಮ ವಲಸಿಗರಲ್ಲಿ ಬಹುಪಾಲು ಇಸ್ಲಾಂ ಧರ್ಮದವರೇ ಇದ್ದಾರೆ. ಅಕ್ರಮ ವಲಸಿಗರು ಮಸ್ಲಿಮರಾಗಿದ್ದರೆ ಅವರಿಗೆ ಅವರ ದೇಶದಲ್ಲಿ ಇಸ್ಲಾಂ ಧರ್ಮವೇ ಬಹುಸಂಖ್ಯಾತ ಧರ್ಮವಾದ್ದರಿಂದ ಅಲ್ಲಿಗೆ ಹೋಗಿ ಬದುಕಲು ಯಾವುದೇ ತೊಂದರೆಯಿಲ್ಲ. ಆದರೆ, ಅಕ್ರಮ ವಲಸಿಗರು ಇತರ ಧರ್ಮದವರಾಗಿದ್ದರೆ ಅವರಿಗೆ ಅವರ ದೇಶಕ್ಕೆ ಮರಳಿ ಹೋಗಿ ಬದಕಲು ಆಗುವುದಿಲ್ಲ. ಅವರು ಮೊದಲೇ ಹಿಂಸಾಚಾರದಿಂದ ತಪ್ಪಿಸಿಕೊಳ್ಳಲು ಭಾರತಕ್ಕೆ ಆಶ್ರಯ ಕೇಳಿ ಬಂದಿರುತ್ತಾರೆ ಎಂಬುದು ಕೇಂದ್ರ ಸರ್ಕಾರದ ನಿಲುವು.

ವಿವಾದದ ಮೂಲ ಬಿಂದು ಇಲ್ಲಿದೆ

ಪೌರತ್ವ ತಿದ್ದುಪಡಿ ಮಸೂದೆಯಲ್ಲಿ ಮುಸ್ಲಿಂ ಸಮುದಾಯವನ್ನು ಹೊರಗಿಟ್ಟಿರುವುದು ಅಥವಾ ಧರ್ಮದ ಆಧಾರದ ಮೇಲೆ ಪೌರತ್ವ ನೀಡುತ್ತಿರುವುದು ಈ ತಿದ್ದುಪಡಿ ವಿರೋಧಕ್ಕೆ ಮೊದಲ ಕಾರಣ. ಇದು ಸಂವಿಧಾನದ 14ನೇ ವಿಧಿ (ಸಮಾನತೆ)ಯನ್ನು ಉಲ್ಲಂಘಿಸುತ್ತದೆ. ಭಾರತ ಜಾತ್ಯತೀತ ರಾಷ್ಟ್ರ. ಹಾಗಾಗಿ ಧರ್ಮದ ಆಧಾರದ ಮೇಲೆ ಪೌರತ್ವ ನೀಡುವುದು ಸರಿಯಲ್ಲ ಎಂದು ವಿರೋಧ ಪಕ್ಷಗಳು ಮಸೂದೆಯನ್ನು ವಿರೋಧಿಸುತ್ತಿವೆ.

ಹಾಗೆಯೇ ಕೇಂದ್ರ ಸರ್ಕಾರ ನೆರೆಯ ರಾಷ್ಟ್ರಗಳಿಂದ ಕಿರುಕುಳ ಅನುಭವಿಸಿ ವಲಸೆ ಬಂದ ಧಾರ್ಮಿಕ ಅಲ್ಪಸಂಖ್ಯಾತರಿಗೆ ಪೌರತ್ವ ನೀಡುತ್ತಿದ್ದೇವೆ ಎಂದು ಹೇಳುತ್ತಿದೆ. ಆದರೆ ಈ ತಿದ್ದುಪಡಿ ಮಸೂದೆಯು ಎಲ್ಲಾ ಅಲ್ಪಸಂಖ್ಯಾತ ಸಮುದಾಯಗಳನ್ನು ಮತ್ತು ಎಲ್ಲಾ ನೆರೆಯ ರಾಷ್ಟ್ರಗಳನ್ನು ಒಳಗೊಂಡಿಲ್ಲ. ಪಾಕಿಸ್ತಾನದಲ್ಲಿ ಅಹ್ಮದಿಯಾ ಮತ್ತು ಶಿಯಾ ಮುಸ್ಲಿಂ ಸಮುದಾಯಗಳೂ ತಾರತಮ್ಯ ಅನುಭವಿಸುತ್ತಿವೆ. ಬರ್ಮಾದಲ್ಲಿ ರೋಹಿಂಗ್ಯಾ ಮುಸ್ಲಿಮರು ಮತ್ತು ಹಿಂದುಗಳು ಕಿರುಕುಳ ಅನುಭವಿಸುತ್ತಿದ್ದಾರೆ. ಶ್ರೀಲಂಕಾದಲ್ಲಿ ಹಿಂದುಗಳು, ಕ್ರಿಶ್ಚಿಯನ್ನರು ಮತ್ತು ತಮಿಳರು ತಾರತಮ್ಯ ಅನುಭವಿಸುತ್ತಿದ್ದಾರೆ ಎಂಬುದು ಇನ್ನೊಂದು ವಾದ.

CAA ವಿರೋಧಿಸಿದ್ದಕ್ಕೆ ಮಲೇಷ್ಯಾದ ಪಾಮ್ ಆಯಿಲ್ ಆಮದು ನಿಲ್ಲಿಸ್ತಾ ಭಾರತ?

ಈಶಾನ್ಯ ರಾಜ್ಯಗಳಲ್ಲಿ ವಿನಾಕಾರಣ ವಿರೋಧ?

1985ರ ಅಸ್ಸಾಂ ಒಪ್ಪಂದದ ಪ್ರಕಾರ 1971ರ ಬಳಿಕ ವಲಸೆ ಬಂದವರನ್ನು ಅಕ್ರಮ ವಲಸಿಗರು ಎಂದು ಪರಿಗಣಿಸಲಾಗುತ್ತದೆ. ಆದರೆ ಈ ಕಾಯ್ದೆ ಜಾರಿ ಬಳಿಕ ಅಸ್ಸಾಂ ಒಪ್ಪಂದವು ತನ್ನ ಮಹತ್ವ ಕಳೆದುಕೊಳ್ಳಲಿದೆ ಎಂಬುದು ಅಸ್ಸಾಮಿಗರ ಆತಂತಕಕ್ಕೆ ಕಾರಣ. ಅಲ್ಲದೆ ಈಗಾಗಲೇ ಈಶಾನ್ಯ ರಾಜ್ಯಗಳಾದ ಅಸ್ಸಾಂ, ಮೇಘಾಲಯ, ತ್ರಿಪುರ, ಮಿಜೋರಂ, ನಾಗಾಲ್ಯಾಂಡ್‌, ಅರುಣಾಚಲ ಪ್ರದೇಶ, ಮಣಿಪುರ ನಿರಾಶ್ರಿತರ ಸ್ವರ್ಗವಾಗಿ ಬದಲಾಗಿದೆ.

ಈ ಪೈಕಿ ಹಿಂದೂಗಳ ಸಂಖ್ಯೆಯೇ ಅಧಿಕ. ಅಲ್ಲದೆ, ಇಲ್ಲಿನ ಎಲ್ಲಾ ನಿರಾಶ್ರಿತರೂ ಅಕ್ರಮ ವಲಸಿಗರು ಎಂಬುದು ಉಲ್ಲೇಖಾರ್ಹ. ಆದರೆ, ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ನೂತನ ಪೌರತ್ವ ತಿದ್ದುಪಡಿ ಕಾಯ್ದೆ ಅಂಗೀಕಾರವಾದರೆ ಇಲ್ಲಿ ಎಲ್ಲಾ ಹಿಂದೂ ಅಕ್ರಮ ವಲಸಿಗರಿಗೂ ದೇಶದ ಪೌರತ್ವ ಲಭ್ಯವಾಗುತ್ತದೆ. ಹೀಗೆ ಎಲ್ಲರಿಗೂ ಪೌರತ್ವ ಲಭ್ಯವಾದರೆ ಇವರು ಸ್ಥಳೀಯ ಜನರ ಅವಕಾಶಗಳನ್ನು ಕಸಿದುಕೊಳ್ಳುತ್ತಾರೆ. ಸ್ಥಳೀಯ ಹಿಂದೂಗಳು ಅಲ್ಪ ಸಂಖ್ಯಾತರಾಗುತ್ತಾರೆ. ಅಲ್ಲದೆ, ನಿರಾಶ್ರಿತರಿಗೂ ನುಸುಳುಕೋರರಿಗೂ ವ್ಯತ್ಯಾಸವಿಲ್ಲದಂತಾಗುತ್ತದೆ ಎಂಬುದು ಪ್ರತಿಭಟನಾಕಾರರ ವಾದ. ಆದರೆ, ಈ ತಿದ್ದುಪಡಿ ಮಸೂದೆಯು ಈಶಾನ್ಯ ರಾಜ್ಯಗಳಿಗೆ ಅನ್ವಯಿಸುವುದಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.

ರಾಜ್ಯಸಭೆಯಲ್ಲಿ ಪಾಸಾಗುತ್ತಾ?

ಸೋಮವಾರ 12 ಗಂಟೆಗಳ ಸುದೀರ್ಘ ಚರ್ಚೆ ಬಳಿಕ ಪೌರತ್ವ ತಿದ್ದುಪಡಿ ಕಾಯ್ದೆಯು ಮಧ್ಯರಾತ್ರಿ ಲೋಕಸಭೆಯಲ್ಲಿ ಅಂಗೀಕಾರಗೊಂಡಿದೆ. ಬುಧವಾರ ರಾಜ್ಯಸಭೆಯಲ್ಲಿ ಮಂಡನೆಯಾಗಲಿದೆ. ರಾಜ್ಯಸಭೆಯಲ್ಲಿ ಪಾಸಾಗಬೇಕಿದ್ದರೆ ಕೇಂದ್ರ ಸರ್ಕಾರಕ್ಕೆ ಪ್ರಾದೇಶಿಕ ಪಕ್ಷಗಳ ಬೆಂಬಲ ಅಗತ್ಯ. ರಾಜ್ಯಸಭೆಯಲ್ಲಿ ಒಟ್ಟು 245 ಸ್ಥಾನಗಳಿದ್ದು, ಮಸೂದೆ ಅನುಮೋದನೆಗೊಳ್ಳಲು 120ರಿಂದ 122 ಸದಸ್ಯರ ಬೆಂಬಲ ಬೇಕಿದೆ.

ಸದ್ಯ ಒಟ್ಟು 238 ಸದಸ್ಯರಿದ್ದು, 119-120 ಸದಸ್ಯರು ಮಸೂದೆಯ ಪರ ಮತ ಹಾಕಿದರೆ ಬಿಜೆಪಿ ಗೆಲುವು ಸಾಧಿಸಬಹುದು. ಬಿಜೆಪಿ 83 ಸ್ಥಾನ ಹೊಂದಿದೆ. ಬಿಜೆಡಿ(7), ತೆಲಂಗಾಣ ರಾಷ್ಟ್ರೀಯ ಸಮಿತಿ(6), ವೈಎಸ್‌ಆರ್‌ ಕಾಂಗ್ರೆಸ್‌ (2) ಬೆಂಬಲದ ಮೇಲೆ ಬಿಜೆಪಿ ನಂಬಿಕೆ ಇರಿಸಿಕೊಂಡಿದೆ. ಆದರೆ ಕಾಂಗ್ರೆಸ್‌, ಟಿಡಿಪಿ, ಡಿಎಂಕೆ, ಎಎಪಿ,ಟಿಎಂಸಿ ಈಗಾಗಲೇ ಮಸೂದೆಯನ್ನು ವಿರೋಧಿಸಿವೆ.

ಇಲ್ಲಿಯವರೆಗೆ 5 ತಿದ್ದುಪಡಿ

ಪೌರತ್ವ ಕಾಯ್ದೆ-1955 ಇಲ್ಲಿಯವರೆಗೆ 5 ಬಾರಿ ತಿದ್ದುಪಡಿಯಾಗಿದೆ. 1986, 1992, 2003, 2005 ಮತ್ತು 2015ರಲ್ಲಿ ತಿದ್ದುಪಡಿ ಮಾಡಲಾಗಿದೆ. ಕಾಂಗ್ರೆಸ್‌ ಸರ್ಕಾರದಲ್ಲಿ 3 ಬಾರಿ, ಬಿಜೆಪಿ ಸರ್ಕಾರದಲ್ಲಿ 2 ಬಾರಿ ತಿದ್ದುಪಡಿಯಾಗಿದೆ.

ಭಾರತದ ಪೌರತ್ವ ಪಡೆಯುವುದು ಹೇಗೆ?

- ಭಾರತದಲ್ಲಿ ಜನಿಸಿದ್ದರೆ

- ಪೋಷಕರು ಭಾರತದ ಪ್ರಜೆಗಳಾಗಿದ್ದರೆ

- ಪೂರ್ವಜರು ಭಾರತೀಯರಾಗಿದ್ದರೆ

- ಭಾರತೀಯ ಪ್ರಜೆಯನ್ನು ವಿವಾಹವಾಗುವ ಮೂಲಕ

- ಕನಿಷ್ಠ 12 ವರ್ಷ ಭಾರತದಲ್ಲಿ ಕಾನೂನುಬದ್ಧವಾಗಿ ನೆಲೆಸುವ ಮೂಲಕ

- ಕೀರ್ತಿ ತೀರ್ಥಹಳ್ಳಿ 

Follow Us:
Download App:
  • android
  • ios