Asianet Suvarna News Asianet Suvarna News

ಹಿಂದಿ ಕಲಿತರೆ ತೊಂದರೆ ಏನಿದೆ?: ತಮಿಳುನಾಡು ಸರ್ಕಾರಕ್ಕೆ ಮದ್ರಾಸ್‌ ಹೈಕೋರ್ಟ್ ಪ್ರಶ್ನೆ!

*ಹಿಂದಿ ಅಥವಾ ಇನ್ನೊಂದು ಭಾಷೆಯನ್ನು ಕಲಿಯುವುದರಿಂದ ಯಾವುದೇ ಹಾನಿಯಿಲ್ಲ
*ನೂತನ ಶಿಕ್ಷಣ ನೀರಿ ಪ್ರಶ್ನಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ವಿಚಾರಣೆ

What harm will learning Hindi do Madras high court asks Tamil Nadu govt mnj
Author
Bengaluru, First Published Jan 26, 2022, 7:52 AM IST

ಚೆನ್ನೈ (ಜ. 26): ಶಿಕ್ಷಣ ಸಂಸ್ಥೆಗಳಲ್ಲಿ ಹಿಂದಿಯನ್ನು ತೃತೀಯ ಭಾಷೆಯಾಗಿ (Hindi Language) ಸೇರ್ಪಡೆ ಮಾಡುವುದರಲ್ಲಿ ತೊಂದರೆಯೇನಿದೆ ಎಂದು ಮದ್ರಾಸ್‌ ಹೈಕೋರ್ಟ್‌ ಮಂಗಳವಾರ ಪ್ರಶ್ನಿಸಿದೆ. ನೂತನ ಶಿಕ್ಷಣ ನೀರಿ ಪ್ರಶ್ನಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ ‘ಹಿಂದಿ ಅಥವಾ ಇನ್ನೊಂದು ಭಾಷೆಯನ್ನು ಕಲಿಯುವುದರಿಂದ ಯಾವುದೇ ಹಾನಿಯಿಲ್ಲ. ತಮಿಳುನಾಡಿನ (Tamil Nadu) ಅರ್ಹ ವ್ಯಕ್ತಿಗಳು ಹಿಂದಿ ಬಾರದ ಕಾರಣ ಉತ್ತರ ಭಾರತದಲ್ಲಿ ಉದ್ಯೋಗಾವಕಾಶಗಳಿಂದ ವಂಚಿತರಾದ ಹಲವಾರು ನಿದರ್ಶನಗಳಿವೆ.

ಹೀಗಾಗಿ ಉತ್ತರ ಭಾರತದಲ್ಲಿ (North India) ಉದ್ಯೋಗ ಮಾಡಲು ಹಿಂದಿ ಕಲಿಕೆಯ ಅಗತ್ಯತೆಯಿದೆ ಎಂದು ಅಭಿಪ್ರಾಯ ಪಟ್ಟಿದೆ. ರಾಜ್ಯದಲ್ಲಿ ಕೇವಲ ತಮಿಳು, ಇಂಗ್ಲೀಷ್‌ ಇರುವ ದ್ವಿಭಾಷಾ ಶಿಕ್ಷಣ ಪದ್ಧತಿ ಜಾರಿಯಲ್ಲಿದೆ. ಕೇಂದ್ರ ಸರ್ಕಾರದ ಹೊಸ ಶಿಕ್ಷಣ ನೀತಿ 2020 (New Education Policy) ಅಡಿ ಹಿಂದಿ ಭಾಷೆಯನ್ನು ತೃತೀಯ ಭಾಷೆಯಾಗಿ ಅಳವಡಿಸಲು ಮುಂದಾದಾಗ ಇದು ವಿದ್ಯಾರ್ಥಿಗಳ ಮೇಲೆ ಹೆಚ್ಚಿನ ಒತ್ತಡ ಹೇರುತ್ತದೆ ಎಂದು ಅರ್ಜಿಯಲ್ಲಿ ವಾದಿಸಲಾಗಿತ್ತು.

ಇದನ್ನೂ ಓದಿ: Hindi Language: ದಕ್ಷಿಣ ಭಾರತದ ವಿರೋಧದ ನಡುವೆ ಹಿಂದಿ ರಾಷ್ಟ್ರ ಭಾಷೆ ಮಾಡಲು ಕೇಂದ್ರದ ಯತ್ನ!

ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ವಿಚಾರಣೆ ವೇಳೆ ಪ್ರತಿಕ್ರಿಯಿಸಿದ ಅಡ್ವೊಕೇಟ್ ಜನರಲ್ ಆರ್ ಶುಣ್ಮುಗಸುಂದರಂ, “ತಮಿಳುನಾಡು ಸರ್ಕಾರವು ಎರಡು ಭಾಷಾ ನೀತಿಯನ್ನು ಅನುಸರಿಸುತ್ತದೆಯೇ ಹೊರತು ಮೂರು ಭಾಷಾ ನೀತಿಯಲ್ಲ, ಇದು ವಿದ್ಯಾರ್ಥಿಗಳ ಮೇಲೆ ಹೊರೆಯಾಗಲಿದೆ” ಎಂದು ಹೇಳಿದರು. ಇದಲ್ಲದೆ, ತಮಿಳುನಾಡಿನಲ್ಲಿ ಹಿಂದಿ ಕಲಿಯುವುದನ್ನು ಯಾರೂ ನಿಲ್ಲಿಸುವುದಿಲ್ಲ. "ಹಿಂದಿ ಪ್ರಚಾರ ಸಭೆಯಂತಹ ಸಂಸ್ಥೆಗಳಿವೆ, ಅಲ್ಲಿ  ಹಿಂದಿಯನ್ನು ಕಲಿಯಬಹುದು" ಎಂದು ಹೇಳಿದರು.

ಇದಕ್ಕೆ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮುನೀಶ್ವರ್ ನಾಥ್ ಭಂಡಾರಿ ಮತ್ತು ನ್ಯಾಯಮೂರ್ತಿ ಪಿ ಡಿ ಆದಿಕೇಶವಲು ಅವರನ್ನೊಳಗೊಂಡ ಪೀಠ, ‘ಕಲಿಕೆ ಬೇರೆ ಕಲಿಸುವುದು ಬೇರೆ’ ಎಂದು ಹೇಳಿದೆ. ನಂತರ ಕಡಲೂರಿನ ಅರ್ಜುನನ್ ಎಳಯರಾಜ ಸಲ್ಲಿಸಿದ ಮನವಿಯನ್ನು ನ್ಯಾಯಾಲಯ ಒಪ್ಪಿಕೊಂಡಿತು ಮತ್ತು ನಾಲ್ಕು ವಾರಗಳಲ್ಲಿ ಪ್ರತಿಕ್ರಿಯೆ ನೀಡುವಂತೆ ರಾಜ್ಯಕ್ಕೆ ಸೂಚಿಸಿತು. "ಒಬ್ಬ ವ್ಯಕ್ತಿಯ ಮಾತೃಭಾಷೆಯನ್ನು ಮಾತ್ರ ಕಲಿಯುವುದು ಸಹಾಯಕವಾಗುವುದಿಲ್ಲ. ಭಾಷೆಯು ಇತರ ಭಾರತೀಯ ಭಾಷೆಗಳೊಂದಿಗೆ, ವಿಶೇಷವಾಗಿ ಹಿಂದಿ ಮತ್ತು ಸಂಸ್ಕೃತದೊಂದಿಗೆ ಕಲಿಯಬೇಕು" ಎಂದು ಅರ್ಜಿದಾರರ ಅಭಿಪ್ರಾಯವಾಗಿದೆ.

ನಮ್ಮ ನೆಲದ ತುಳು, ಕೊಡವ ಭಾಷೆಯ ಮೇಲೂ ನಿಮ್ಮ ಮಮತೆ ತೋರಿಸಿ!: ರಾಮನಗರ (Ramanagara) ಜಿಲ್ಲೆಯ ಮಾಗಡಿಯಲ್ಲಿ (Magadi ) ಕರ್ನಾಟಕ ಸರ್ಕಾರ  ನಿರ್ಮಿಸಲು ಉದ್ದೇಶಿಸಿರುವ ಸಂಸ್ಕೃತ ವಿಶ್ವವಿದ್ಯಾಲಯಕ್ಕೆ (Sanskrit university ) ಕನ್ನಡ ಪರ ಹೋರಾಟಗಾರರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಟ್ವಿಟರ್ ನಲ್ಲೂ ಇದರ ವಿರುದ್ಧವಾಗಿ "ಸೇ ನೋ ಟು ಸಂಸ್ಕೃತ (#SayNoToSanskrit) ಹ್ಯಾಶ್ ಟ್ಯಾಗ್ ಜನಪ್ರಿಯವಾಗಿದೆ. 

ಈ ಕುರಿತಂತೆ ಮಾತನಾಡಿರುವ ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ವಿಧಾನಪರಿಷತ್ ಸದಸ್ಯ ಬಿಕೆ ಹರಿಪ್ರಸಾದ್ (Congress leader BK hariprasad ), "ಬಿಜೆಪಿ ಸರ್ಕಾರ ರಾಜ್ಯದ ಕೇವಲ 24,821 ಸಂಸ್ಕೃತ ಭಾಷಿಗರ ಮೇಲೆ ತೋರಿಸುತ್ತಿರುವ ಅಗಾಧ ಮಮತೆಯನ್ನ ನಮ್ಮ ರಾಜ್ಯದಲ್ಲಿ ಮೂಲೆಗುಂಪಾಗಿರುವ ತುಳು (Tulu) ಮತ್ತು ಕೊಡವ (Kodava) ಭಾಷೆಗಳ ಮೇಲೆ ತೋರಿಸಲಿ" ಎಂದು ಹೇಳಿದ್ದಾರೆ.

ಇದನ್ನೂ ಓದಿ: Magadi Karnataka Sanskrit University: ಮಾಗಡಿಯಲ್ಲಿ ಸಂಸ್ಕೃತ ವಿವಿ, 320 ಕೋಟಿ ರೂ. ವೆಚ್ಚದಲ್ಲಿ ಕ್ಯಾಂಪಸ್

359 ಕೋಟಿ ರೂಪಾಯಿಯ ವೆಚ್ಚದಲ್ಲಿ ನೂರಾರು ಎಕರೆಯ ಜಾಗದಲ್ಲಿ ಸಂಸ್ಕೃತ ವಿವಿ ನಿರ್ಮಾಣ ಮಾಡುವ ಆಸೆಯಲ್ಲಿ ರಾಜ್ಯ ಸರ್ಕಾರವಿದ್ದರೆ, ಇದಕ್ಕೆ ದೊಡ್ಡ ಮಟ್ಟದ ವಿರೋಧಗಳು ಏಳುವ ಲಕ್ಷಣಗಳು ಕಾಣುತ್ತಿವೆ. ಈ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿರುವ ಬಿಕೆ ಹರಿಪ್ರಸಾದ್, 2011 ರ ಜನಗಣತಿಯ ಪ್ರಕಾರ ರಾಜ್ಯದಲ್ಲಿರುವ ಒಟ್ಟು ತುಳುವರ ಸಂಖ್ಯೆ 18,46,427 ಹಾಗೆಯೇ ಕೊಡವ ಭಾಷೆಯನ್ನಾಡುವವರ ಸಂಖ್ಯೆ 1,13,857. 

ಆದರೆ, ಸಂಸ್ಕೃತ ಭಾಷೆಯನ್ನು ತಮ್ಮ ಮಾತೃಭಾಷೆಯೆಂದು ದಾಖಲಿಸಿದವರ ಸಂಖ್ಯೆ 24,821 ಮಾತ್ರ. ಇಷ್ಟು ಕಡಿಮೆ ಜನಸಂಖ್ಯೆಯ ಮೇಲೆ ಬಿಜೆಪಿ ಸರಕಾರ ತನ್ನ ಅಗಾಧ ಪ್ರೀತಿಯನ್ನು ತೋರಿಸುತ್ತಾ ಬಂದಿದೆ. ಈಗಾಗಲೇ ರಾಜ್ಯದಲ್ಲಿ ಸಂಸ್ಕೃತ ವಿಶ್ವವಿದ್ಯಾಲಯವಿದೆ. ಅದಕ್ಕೆ ಬೇಕಾದಂತಹ ಎಲ್ಲಾ ಸೌಕರ್ಯಗಳನ್ನು ನೀಡಲಾಗಿದೆ. ಆದರೆ, ನಮ್ಮ ರಾಜ್ಯದಲ್ಲಿ ಚಾಲ್ತಿಯಲ್ಲಿರುವ ತುಳು ಮತ್ತು ಕೊಡವ ಭಾಷೆಗಳ ಅಭಿವೃದ್ದಿಯತ್ತ ಮಾತ್ರ ದಿವ್ಯ ನಿರ್ಲಕ್ಷವನ್ನು ತೋರಿಸುತ್ತಿದೆ' ಎಂದು ಕಿಡಿಕಾರಿದ್ದಾರೆ

Follow Us:
Download App:
  • android
  • ios