ಹುಲಿ ಸಂರಕ್ಷಿತ ಪ್ರದೇಶದಲ್ಲೇ ಹುಲಿಗೆ ಕಲ್ಲೆಸೆದು ಕೊಂದ ಗ್ರಾಮಸ್ಥರು!
ರಾಜಸ್ಥಾನದಲ್ಲಿ ಕುರಿಗಾಹಿಯನ್ನು ಕೊಂದಿದ್ದ ಹುಲಿಯನ್ನು ಗ್ರಾಮಸ್ಥರು ಕಲ್ಲೆಸೆದು ಕೊಂದಿದ್ದಾರೆ.
ಜೈಪುರ: ರಾಜಸ್ಥಾನದ ರಣಥಂಬೋರ್ ಹುಲಿ ಸಂರಕ್ಷಿತ ಪ್ರದೇಶ ಬಳಿಯ ಉಲಿಯಾನದಲ್ಲಿ ಗ್ರಾಮಸ್ಥರು ಹುಲಿಯೊಂದನ್ನು ಕಲ್ಲೆಸೆದು ಕೊಂದಿದ್ದಾರೆ. ಕುರಿಗಾಹಿಯನ್ನು ಕೊಂದಿದ್ದ ಈ 12 ವರ್ಷದ ಹುಲಿ ಗ್ರಾಮಸ್ಥರ ಕಲ್ಲೇಟಿನಿಂದ ಸಾವನ್ನಪ್ಪಿದೆ. ಉಲಿಯಾನದಲ್ಲಿ ಭಾನುವಾರ ಮಧ್ಯಾಹ್ನ ಹುಲಿಯ ಮೃತದೇಹ ಪತ್ತೆಯಾಗಿದೆ ಎಂದು ಅಧಿಕಾರಿಗಳು ಸೋಮವಾರ ಹೇಳಿದ್ದಾರೆ. ಉಲಿಯಾನದಲ್ಲಿ ಹುಲಿ ದಾಳಿಯಿಂದ ಕುರಿಗಾಹಿ ಭರತ್ ಲಾಲ್ ಮೃತಪಟ್ಟ ನಂತರ 20ಕ್ಕೂ ಹೆಚ್ಚು ಗ್ರಾಮಸ್ಥರು ದಾಳಿ ಮಾಡಿ ಹುಲಿಯನ್ನು ಕೊಂದಿದ್ದಾರೆ. ಶನಿವಾರ ಇದೇ ಸ್ಥಳದಲ್ಲಿ ಕುರಿಗಾಹಿಯನ್ನು ಕೊಂದ ಹುಲಿ ಅಲ್ಲಿಂದ ಓಡಿ ಹೋಗಿತ್ತು. ಹೀಗಾಗಿ ಹುಲಿ ಮೇಲೆ ಗ್ರಾಮಸ್ಥರ ಸಿಟ್ಟಿತ್ತು.
ಯೋಗಿಗೆ ಹತ್ಯೆ ಬೆದರಿಕೆ ಒಡ್ಡಿದ್ದ ಫಾತಿಮಾ ಬಂಧಮುಕ್ತ
ಮುಂಬೈ: 10 ದಿನಗಳೊಳಗಾಗಿ ರಾಜೀನಾಮೆ ನೀಡದಿದ್ದಲ್ಲಿ ಎನ್‌ಸಿಪಿ ನಾಯಕ ಬಾಬಾ ಸಿದ್ದಿಕಿ ರೀತಿ ಹತ್ಯೆ ಮಾಡಲಾಗುವುದು ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಬೆದರಿಕೆ ಒಡ್ಡಿದ್ದ ಮಹಿಳೆಯನ್ನು ಪೊಲೀಸರು ವಿಚಾರಣೆ ಬಳಿಕ ಬಿಡುಗಡೆ ಮಾಡಿದ್ದಾರೆ. ಇತ್ತೀಚೆಗೆ ಪೊಲೀಸರಿಗೆ ಬೆದರಿಕೆ ಸಂದೇಶ ರವಾನಿಸಿದ್ದ ಥಾಣೆ ಜಿಲ್ಲೆಯ ಫಾತಿಮಾ ಖಾನ್‌ಳನ್ನು (24) ಪೊಲೀ ಸರು ವಿಚಾರಣೆಗೆಂದು ಮುಂಬೈಗೆ ಕರೆತಂದಿದ್ದರು. ವಿಚಾರಣೆ ವೇಳೆ ಸುಶಿಕ್ಷಿತಳಾದ ಫಾತಿಮಾ ಮಾನಸಿಕ ಅಸ್ವಸ್ಥೆಯಾಗಿದ್ದಾಳೆ ಎಂದು ಕಂಡುಬಂದಿತ್ತು. ಫಾತಿಮಾಳ ಉದ್ದೇಶದ ಹಿಂದೆ ದುಷ್ಕೃತ್ಯ ಕಂಡುಬರದ ಕಾರಣ ಆಕೆಯನ್ನು ಬಿಡುಗಡೆ ಮಾಡಲಾಗಿದೆ.
ಮಹಾರಾಷ್ಟ್ರ ಡಿಜಿಪಿ ತಕ್ಷಣ ಎತ್ತಂಗಡಿ: ಆಯೋಗ ಆದೇಶ
ನವದೆಹಲಿ: ನ.20ರಂದು ವಿಧಾನಸಭೆ ಚುನಾವಣೆ ಎದುರಿಸಲಿರುವ ಮಹಾರಾಷ್ಟ್ರದ ಡಿಜಿಪಿ ರಶ್ಮಿ ಶುಕ್ಲಾ ಅವರನ್ನು ವರ್ಗ ಮಾಡಲು ರಾಜ್ಯ ಸರ್ಕಾರಕ್ಕೆ ಚುನಾವಣಾ ಆಯೋಗವು ಆದೇಶಿಸಿದೆ. ಶುಕ್ಲಾ ಮೇಲೆ ವಿಪಕ್ಷ ನಾಯಕರ ಫೋನ್ ಕರೆಗಳ ಕದ್ದಾಲಿಕೆ, ಪ್ರತಿಪಕ್ಷಗಳ ವಿರುದ್ಧ ಪೂರ್ವಾಗ್ರಹಪೀಡಿತ ಧೋರಣೆ ಸೇರಿದಂತೆ ಹಲವು ಆರೋಪಗಳನ್ನು ಕಾಂಗ್ರೆಸ್ ಸೇರಿದಂತೆ ಹಲವು ವಿಪಕ್ಷಗಳು ಮಾಡಿದ್ದು, ಅದರ ಬೆನ್ನಲ್ಲೇ ಈ ಬೆಳವಣಿಗೆಯಾಗಿದೆ.
ಅಭ್ಯರ್ಥಿ ಹಿಂದಕ್ಕೆ: ಕೈಗೆ ಮುಜುಗರ
ಮುಂಬೈ: ಮಹಾರಾಷ್ಟ್ರದಲ್ಲಿ ನಾಮಪತ್ರ ವಾಪಸಾತಿ ನಿನ್ನೆ ಮುಗಿದಿದ್ದು 288 ಕ್ಷೇತ್ರಕ್ಕೆ 4140 ಜನ ಕಣದಲ್ಲಿದ್ದಾರೆ. 2019ಕ್ಕಿಂತ 901ಅಧಿಕ . ಕೊಲ್ಲಾಪುರ ಕಾಂಗ್ರೆಸ್ ಅಭ್ಯರ್ಥಿ, ರಾಜಮನೆತನದ ಮಧುರಿಮಾ ರಾಜೇ ಕೊನೇ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಕಾಂಗ್ರೆಸ್‌ಗೆ ಮುಜುಗರ ತಂದಿದ್ದಾರೆ.