ಭಾರತದ ಅಣು ಯೋಜನೆಗಳ ಪಿತಾಮಹ ಖ್ಯಾತ ಭೌತ ಶಾಸ್ತ್ರಜ್ಞ ರಾಜಗೋಪಾಲ ಚಿದಂಬರಂ ಮುಂಬೈನಲ್ಲಿ ನಿಧನ

ಭಾರತದ ಪರಮಾಣು ಯೋಜನೆಗಳ ಪಿತಾಮಹ ಎಂದೇ ಖ್ಯಾತರಾಗಿದ್ದ, ಖ್ಯಾತ ಭೌತಶಾಸ್ತ್ರಜ್ಞ ರಾಜಗೋಪಾಲ ಚಿದಂಬರಂ (88) ಶನಿವಾರ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. 

Veteran Nuclear Scientist Rajagopala Chidambaram Passes Away at 88 gvd

ನವದೆಹಲಿ (ಜ.05): ಭಾರತದ ಪರಮಾಣು ಯೋಜನೆಗಳ ಪಿತಾಮಹ ಎಂದೇ ಖ್ಯಾತರಾಗಿದ್ದ, ಖ್ಯಾತ ಭೌತಶಾಸ್ತ್ರಜ್ಞ ರಾಜಗೋಪಾಲ ಚಿದಂಬರಂ (88) ಶನಿವಾರ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ತಮ್ಮ 6 ದಶಕಗಳ ವೃತ್ತಿ ಜೀವನದಲ್ಲಿ ದೇಶದ ಪ್ರಮುಖ ಪರಮಾಣು ಸಂಶೋಧನಾ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದ ಚಿದಂಬರಂ 1974 ಮತ್ತು 1998ರಲ್ಲಿ ಭಾರತ ರಹಸ್ಯವಾಗಿ ನಡೆಸಿದ್ದ ಭೂಗತ ಪರಮಾಣು ಪರೀಕ್ಷೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಹಿರಿಯ ವಿಜ್ಞಾನಿಯ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ‘ಚಿದಂಬರಂ ಸಾವಿನಿಂದ ಬಹಳ ನೋವಾಗಿದೆ. ಭಾರತದ ಅಣು ಯೋಜನೆಗಳ ಪ್ರಮುಖ ಶಿಲ್ಪಿಯಾಗಿದ್ದ ಅವರು ದೇಶದ ವೈಜ್ಞಾನಿಕ ಹಾಗೂ ಕಾರ್ಯತಂತ್ರದ ಸಾಮರ್ಥ್ಯಗಳಿಗೆ ಬಲ ತುಂಬಿದವರು. ಅವರನ್ನು ಇಡೀ ದೇಶ ನೆನೆಯಲಿದ್ದು, ಮುಂದಿನ ಪೀಳಿಗೆಗೆ ಸ್ಫೂರ್ತಿಯಾಗಿರುತ್ತಾರೆ’ ಎಂದು ಮೋದಿ ಹೇಳಿದ್ದಾರೆ. 1936ರಲ್ಲಿ ಚೆನ್ನೈನಲ್ಲಿ ಜನಿಸಿದ ಚಿದಂಬರಂ, ಚೆನ್ನೈನ ಪ್ರೆಸಿಡೆನ್ಸಿ ಕಾಲೇಜು ಹಾಗೂ ಬೆಂಗಳೂರಿನ ಇಂಡಿಯನ್‌ ಇನ್ಸ್‌ಟಿಟ್ಯೂಟ್‌ ಆಫ್‌ ಸೈನ್ಸ್‌ನಲ್ಲಿ ಅಧ್ಯಯನ ನಡೆಸಿದ್ದರು.

ಕರ್ನಾಟಕದಲ್ಲಿ ಹೆಚ್ಚುತ್ತಿರುವ ಬಾಣಂತಿಯರ ಸಾವು: ಕೇಂದ್ರಕ್ಕೆ ಸಂಸದ ಡಾ.ಸುಧಾಕರ್‌ ಪತ್ರ

ವಿವಿಧೆಡೆ ಸೇವೆ: 1962ರಲ್ಲಿ ಭಾಭಾ ಅಣು ಸಂಶೋಧನಾ ಕೇಂದ್ರಕ್ಕೆ ಸೇರ್ಪಡೆಯಾದ ಚಿದಂಬರಂ 1990ಯಲ್ಲಿ ಅದರ ನಿರ್ದೇಶಕರಾದರು. 1993-2000ರ ನಡುವೆ ಅಣು ಶಕ್ತಿ ಆಯೋಗ ಹಾಗೂ ಸರ್ಕಾರದ ಕಾರ್ಯದರ್ಶಿಯಾಗಿ, ಸತತ 6 ದಶಕಗಳ ಕಾಲ ಪರಮಾಣು ಸಂಬಂಧಿತ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸಿದ್ದರು. ನಿವೃತ್ತಿಯ ಬಳಿಕ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರರಾಗಿ 2001ರಿಂದ 2018ರ ವರೆಗೆ ಸೇವೆ ಸಲ್ಲಿಸಿದ್ದರು.

ಚಿದಂಬರಂ ಸಾಧನೆ: ಭಾರತದ ಅಣ್ವಸ್ತ್ರ ಸಾಮರ್ಥ್ಯ ವೃದ್ಧಿಯಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸಿದ್ದ ಚಿದಂಬರಂ, 1974ರಲ್ಲಿ ಭಾರತ ಮೊದಲ ಬಾರಿಗೆ ನಡೆಸಿದ ಪರಮಾಣು ಪರೀಕ್ಷೆ ನಿರ್ಣಾಯಕವಾಗಿ ಕೆಲಸ ಮಾಡಿದ್ದರು. ಮತ್ತು 1998ರಲ್ಲಿ ಪೋಖ್ರಣ್‌ನಲ್ಲಿ ನಡೆದ ಭಾರತದ 2ನೇ ಪರಮಾಣು ಪರೀಕ್ಷೆ ವೇಳೆ ಭಾರತೀಯ ಅಣುಶಕ್ತಿ ಇಲಾಖೆಯನ್ನು ಮುನ್ನಡೆಸಿದ್ದರು.

ಹೈ ಪ್ರಶರ್‌ ಫಿಸಿಕ್ಸ್‌, ಕ್ರಿಸ್ಟಲ್ಲೋಗ್ರಾಫೀ ಮತ್ತು ಮೆಟಿರಿಯಲ್‌ ಸೈನ್ಸ್‌ನಲ್ಲಿ ಚಿದಂಬರಂ ನಡೆಸಿದ್ದ ಸಂಶೋಧನೆಗಳು, ಈ ಕ್ಷೇತ್ರದ ಕುರಿತು ವೈಜ್ಞಾನಿಕ ಕ್ಷೇತ್ರವು ಹೆಚ್ಚಿನ ಅರಿವು ಪಡೆಯಲು ನೆರವು ಮಾಡಿಕೊಟ್ಟಿತ್ತು. ಇದಲ್ಲದೇ ಭಾರತದಲ್ಲಿ ಸೂಪರ್‌ಕಂಪ್ಯೂಟರ್‌ಗಳ ಅಭಿವೃದ್ಧಿಯ ಭಾಗವಾಗಿದ್ದ ಚಿದಂಬರಂ, ಸಂಶೋಧನೆಗಳನ್ನು ಶಿಕ್ಷಣ ಕ್ಷೇತ್ರಗಳೊಂದಿಗೆ ಬೆಸೆದ ನ್ಯಾಷನಲ್‌ ನಾಲೆಡ್ಜ್‌ ನೆಟ್‌ವರ್ಕ್‌ನ ಪರಿಕಲ್ಪನೆಯನ್ನು ಹುಟ್ಟುಹಾಕಿದರು. ವಿಜ್ಞಾನ ಹಾಗೂ ತಂತ್ರಜ್ಞಾನವನ್ನು ರಾಷ್ಟ್ರದ ಅಭಿವೃದ್ದಿಗೆ ಬಳಸುವುದರ ಪರವಾಗಿದ್ದ ಇವರು ಹಲವಾರು ಯೋಜನೆಗಳನ್ನು ರೂಪಿಸಿದ್ದರು. 

ಸಚಿನ್ ಸಾವಿಗೆ ನ್ಯಾಯಬೇಕು, ಪರಿಹಾರ ಬೇಕಿಲ್ಲ: ಸಹೋದರಿ ಸುರೇಖಾ

ಪ್ರಶಸ್ತಿಗಳು: ಚಿದಂಬರಂ ಅವರಿಗೆ 1975ರಲ್ಲಿ ಪದ್ಮ ಶ್ರೀ, 1999ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿ ನೀಡಿ ಸರ್ಕಾರ ಗೌರವಿಸಿತ್ತು. ಅಣು ಪರೀಕ್ಷೆಗೆ ವಿಶಿಷ್ಠ ಕೊಡುಗೆ 1974ರಲ್ಲಿ ನಡೆದ ಆಪರೇಷನ್‌ ಸ್ಮೈಲಿಂಗ್‌ ಬುದ್ಧಾ ಹೆಸರಿನ ಅಣು ಪರೀಕ್ಷೆಯ ವೇಳೆ, ಪರಮಾಣು ರಿಯಾಕ್ಟರ್‌ಗಳಿಗೆ ಇಂಧನವಾಗಿ ಬಳಸಲಾಗುವ ಪ್ಲುಟೋನಿಯಂ ಅನ್ನು ಚಿದಂಬರಂ ಅವರು ಸ್ವತಃ ಮುಂಬೈನಿಂದ ಪರೀಕ್ಷೆ ನಡೆದ ರಾಜಸ್ಥಾನದ ಪೋಖ್ರಣ್‌ಗೆ ಕೊಂಡೊಯ್ದಿದ್ದರು. ಜತೆಗೆ, 1998ರಲ್ಲಿ ಆಪರೇಷನ್‌ ಶಕ್ತಿ ಹೆಸರಲ್ಲಿ ನಡೆದ 2ನೇ ಅಣು ಪರೀಕ್ಷೆಯ ವೇಳೆ ಅಮೆರಿಕ ಉಪಗ್ರಹದ ಕಣ್ತಪ್ಪಿಸಲು, ಡಿಆರ್‌ಡಿಒ ಅಧ್ಯಕ್ಷರಾಗಿದ್ದ ಡಾ.ಎ.ಪಿ.ಜೆ. ಅಬ್ದುಲ್‌ ಕಲಾಂ ಅವರ ಸಹಕಾರದೊಂದಿಗೆ ವಿಜ್ಞಾನಿಗಳೆಲ್ಲಾ ಯೋಧರ ಉಡುಪು ಧರಿಸಿ ಸೇನಾ ವಾಹನದಲ್ಲಿಯೇ ಪರೀಕ್ಷೆ ನಡೆವ ಸ್ಥಳಕ್ಕೆ ತೆರಳಿದ್ದರು.

Latest Videos
Follow Us:
Download App:
  • android
  • ios