ಉತ್ತರಾಖಂಡದ ಅಲ್ಮೋರಾ ಬಳಿ ಬಸ್ ಪ್ರಪಾತಕ್ಕೆ ಉರುಳಿ 28 ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಗಾಯಾಳುಗಳ ರಕ್ಷಣಾ ಕಾರ್ಯ ಮುಂದುವರೆದಿದ್ದು, ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆಯಿದೆ.
ಡೆಹರಾಡೂನ್: ಉತ್ತರಾಖಂಡದ ಅಲ್ಮೋರಾ ಬಳಿಯ ಮಾರ್ಚುಲಾ ಎಂಬಲ್ಲಿ ಬಸ್ ಪ್ರಪಾತಕ್ಕೆ ಉರುಳಿದ್ದು, ದುರ್ಘಟನೆಯಲ್ಲಿ 28 ಪ್ರಯಾಣಿಕರು ಪ್ರಾಣ ಕಳೆದುಕೊಂಡಿದ್ದಾರೆ. ಬಸ್‌ನಲ್ಲಿ ಒಟ್ಟು 35 ಜನರು ಪ್ರಯಾಣಿಸುತ್ತಿದ್ದು, ಇದರಲ್ಲಿ 28 ಪ್ರಯಾಣಿಕರು ಮೃತರಾಗಿರೋದನ್ನು ಸ್ಥಳೀಯ ಪೊಲೀಸರು ಖಚಿತಪಡಿಸಿದ್ದಾರೆ. ಬಸ್ ಅಪಘಾತಕ್ಕೊಳಗಾಗಿರುವ ವಿಷಯ ತಿಳಿಯತ್ತಿದ್ದಂತೆ ಅಲ್ಮೋರಾ ಎಸ್‌ಪಿ ಮೂರು ರಕ್ಷಣಾ ತಂಡಗಳ ಜೊತೆ ಸ್ಥಳಕ್ಕೆ ತೆರಳಿದ್ದಾರೆ.
ಕೆಲ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸುವ ಕೆಲಸಗಳು ನಡೆಯುತ್ತಿವೆ. ಅಲ್ಮೋರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾರ್ಚುಲಾದಲ್ಲಿ ಅಪಘಾತ ನಡೆದಿದೆ ಎಂದು ಎಸ್‌ಡಿಎಂ ಸಂಜಯ್ ಕುಮಾರ್ ಮಾಹಿತಿ ನೀಡಿದ್ದಾರೆ.
ಬಸ್ ಪ್ರಪಾತಕ್ಕೆ ಬೀಳುತ್ತಿದ್ದಂತೆ ಸ್ಥಳದಲ್ಲಿಯೇ ಏಳು ಜನರ ಸಾವಾಗಿದೆ. ಬಸ್ ಗಡ್ವಾಲದಿಂದ ಕುಮಾಊಗೆ ತೆರಳುತ್ತಿದ್ದಾಗ ಮಾರ್ಚುಲಾದಲ್ಲಿ ಪ್ರಪಾತಕ್ಕೆ ಬಿದ್ದಿದೆ. ಬಸ್‌ನಲ್ಲಿ ಒಟ್ಟು 40 ಜನರು ಪ್ರಯಾಣಿಸುತ್ತಿದ್ದರು. ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆಗಳಿವೆ. ಎಸ್‌ಡಿಆರ್‌ಎಫ್ ತಂಡ ಸ್ಥಳಕ್ಕೆ ತೆರಳಿದ್ದು, ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಅಲೋಕ್ ಕುಮಾರ್ ಪಾಂಡೆ ಹೇಳಿದ್ದಾರೆ.
ಇದನ್ನೂ ಓದಿ: ಬಿಸ್ಕತ್ ಬಳಸಿ ಕಾಶ್ಮೀರ ಲಷ್ಕರ್ ಉಗ್ರ ಉಸ್ಮಾನ್ ಬೇಟೆ!
ಅಲ್ಮೋರಾ ಜಿಲ್ಲೆಯ ಮಾರ್ಚುಲಾದಲ್ಲಿ ಸಂಭವಿಸಿದ ದುರದೃಷ್ಟಕರ ಬಸ್ ಅಪಘಾತದಲ್ಲಿ ಪ್ರಯಾಣಿಕರ ಸಾವುನೋವುಗಳ ಬಗ್ಗೆ ಅತ್ಯಂತ ದುಃಖದ ಸುದ್ದಿ ಬಂದಿದೆ. ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಕ್ಷಿಪ್ರವಾಗಿ ನಡೆಸುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ. ಘಟನಾ ಸ್ಥಳದಲ್ಲಿ ಸ್ಥಳೀಯ ಆಡಳಿತ ಮತ್ತು ಎಸ್‌ಡಿಆರ್‌ಎಫ್ ತಂಡಗಳು ಗಾಯಾಳುಗಳನ್ನು ಸ್ಥಳಾಂತರಿಸಲು ಮತ್ತು ಚಿಕಿತ್ಸೆಗಾಗಿ ಹತ್ತಿರದ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲು ತ್ವರಿತವಾಗಿ ಕಾರ್ಯನಿರ್ವಹಿಸುತ್ತಿವೆ. ಅಗತ್ಯವಿದ್ದರೆ ಗಂಭೀರವಾಗಿ ಗಾಯಗೊಂಡ ಪ್ರಯಾಣಿಕರನ್ನು ಏರ್‌ಲಿಫ್ಟ್ ಮಾಡಲು ಸಹ ಸೂಚನೆಗಳನ್ನು ನೀಡಲಾಗಿದೆ ಎಂದು ಉತ್ತರಾಖಂಡದ ಸಿಎಂ ಪುಷ್ಕರ್ ಸಿಂಗ್ ಹೇಳಿದ್ದಾರೆ.
ಇದನ್ನೂ ಓದಿ: ಮೋದಿ ಬಗ್ಗೆ ವಯನಾಡ್ ಚುನಾವಣಾ ಪ್ರಚಾರ ವೇಳೆ ರಾಹುಲ್ ಗಾಂಧಿ ಅಚ್ಚರಿ ಹೇಳಿಕೆ
