ನವದೆಹಲಿ[ಡಿ.08]: ತೀವ್ರ ರೀತಿಯ ಸುಟ್ಟಗಾಯಗಳಿಂದಾಗಿ ಉನ್ನಾವ್‌ ಅತ್ಯಾಚಾರ ಸಂತ್ರಸ್ತೆ ಸಾವನ್ನಪ್ಪಿದ್ದಾಳೆ ಎಂದು ಆಕೆಯ ಮರಣೋತ್ತರ ಪರೀಕ್ಷಾ ವರದಿ ಹೇಳಿದೆ.

ಲಖನೌದಿಂದ ದೆಹಲಿಯ ಸಫ್ದರ್‌ಜಂಗ್‌ ಆಸ್ಪತ್ರೆಗೆ ತಂದಾಗ ಆಕೆಗೆ ಶೇ.90ರಷ್ಟುಸುಟ್ಟಗಾಯಗಳಾಗಿದ್ದವು. ತೀವ್ರ ರೀತಿಯ ಗಾಯಗಳಿಂದಾಗಿ ಸಂತ್ರಸ್ತೆ ನಿಧನಳಾಗಿದ್ದಾಳೆ. ಆಕೆಯ ದೇಹದಲ್ಲಿ ಬಾಹ್ಯ ವಸ್ತು ಪತ್ತೆಯಾಗಿಲ್ಲ. ವಿಷ ಪ್ರಾಶನ ಅಥವಾ ಉಸಿರುಗಟ್ಟಿಸಿ ಹತ್ಯೆ ಮಾಡಿರುವ ಲಕ್ಷಣಗಳೂ ಕಂಡುಬಂದಿಲ್ಲ ಎಂದು ಶನಿವಾರ ಬೆಳಗ್ಗೆ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ವೈದ್ಯರು ವರದಿ ನೀಡಿದ್ದಾರೆ.

ನಾವು ಎಷ್ಟೆಲ್ಲಾ ಪ್ರಯತ್ನಗಳನ್ನು ಮಾಡಿದರೂ ಆಕೆ ಬದುಕುಳಿಯಲಿಲ್ಲ. ಶುಕ್ರವಾರ ಸಂಜೆಯ ನಂತರ ಆಕೆಯ ಪರಿಸ್ಥಿತಿ ವಿಷಮಿಸಿತು. ಶುಕ್ರವಾರ ರಾತ್ರಿ 11.10ರ ವೇಳೆಗೆ ಹೃದಯಸ್ತಂಭನವಾಯಿತು. ಆಕೆಯನ್ನು ಉಳಿಸಲು ಪ್ರಯತ್ನ ನಡೆಸಿದವಾದರೂ ರಾತ್ರಿ 11.40ಕ್ಕೆ ಆಕೆ ಕೊನೆಯುಸಿರೆಳೆದಳು ಎಂದು ಸಫ್ದರ್‌ಜಂಗ್‌ ಆಸ್ಪತ್ರೆಯ ಸುಟ್ಟಗಾಯ ಹಾಗೂ ಪ್ಲಾಸ್ಟಿಕ್‌ ಸರ್ಜರಿ ವಿಭಾಗದ ಮುಖ್ಯಸ್ಥ ಡಾ| ಶಲಭ್‌ ಕುಮಾರ್‌ ತಿಳಿಸಿದ್ದಾರೆ.