ಸರ್ಕಾರಕ್ಕೆ ಟ್ವೀಟರ್ ಸಡ್ಡು: ಪ್ರಮುಖರ ಖಾತೆ ನಿರ್ಬಂಧಕ್ಕೆ ನಕಾರ!
ಸರ್ಕಾರಕ್ಕೆ ಟ್ವೀಟರ್ ಸಡ್ಡು| ಸೂಚನೆ ಹೊರತಾಗಿಯೂ ಕೆಲ ಖಾತೆಗಳಿಗೆ ಮಾತ್ರ ನಿರ್ಬಂಧ| ನಿರ್ಬಂಧ ಕೂಡಾ ಭಾರತದಲ್ಲಿ ಮಾತ್ರ ಜಾರಿ, ವಿದೇಶಗಳಲ್ಲಿಲ್ಲ| ವಾಕ್ ಸ್ವಾತಂತ್ರ್ಯದ ಹೆಸರಲ್ಲಿ ಉಳಿದ ಖಾತೆ ಮೇಲೆ ಕ್ರಮವಿಲ್
ನವದೆಹಲಿ(ಫೆ.11): ರಾಷ್ಟ್ರ ರಾಜಧಾನಿಯಲ್ಲಿ ರೈತ ಹೋರಾಟದ ಕುರಿತು ತಪ್ಪು ಮಾಹಿತಿ ಹರಡುತ್ತಿರುವ, ಪಾಕಿಸ್ತಾನ ಹಾಗೂ ಖಲಿಸ್ತಾನಿ ಬೆಂಬಲಿಗರ 1178 ಖಾತೆಗಳನ್ನು ಬ್ಲಾಕ್ ಮಾಡುವಂತೆ ಕೇಂದ್ರ ಸರ್ಕಾರ ನೀಡಿದ್ದ ಸೂಚನೆಗೆ ಅಮೆರಿಕ ಮೂಲದ ಟ್ವೀಟರ್ ಸಂಸ್ಥೆ ಸಡ್ಡು ಹೊಡೆದಿದೆ.
ಸರ್ಕಾರದ ಸೂಚನೆ ಅನ್ವಯ ಅಂದಾಜು 500 ಖಾತೆಗಳ ಮೇಲೆ ಕೆಲ ನಿರ್ಬಂಧ ಹೇರಿರುವುದಾಗಿ ಸಂಸ್ಥೆ ಮಾಹಿತಿ ನೀಡಿದೆಯಾದರೂ ಅಂಥ ನಿರ್ಬಂಧಗಳು ಕೇವಲ ಭಾರತಕ್ಕೆ ಸೀಮಿತವಾಗಿರಲಿದೆ ಎಂದು ಸ್ಪಷ್ಟಪಡಿಸಿದೆ. ಅಲ್ಲದೆ ಸಾಮಾಜಿಕ ಕಾರ್ಯಕರ್ತರು, ಮಾಧ್ಯಮಗಳು, ಪತ್ರಕರ್ತರಿಗೆ ಸೇರಿದ ಇತರೆ 600ಕ್ಕೂ ಹೆಚ್ಚು ಖಾತೆಗಳ ಮೇಲೆ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಏಕೆಂದರೆ ಅಂಥ ಕ್ರಮಗಳು ಭಾರತೀಯ ಕಾನೂನುಗಳ ಅನ್ವಯ ವಾಕ್ ಸ್ವಾತಂತ್ರವನ್ನು ಕಸಿದುಕೊಳ್ಳುತ್ತದೆ ಎಂದು ಹೇಳಿದೆ.
ತನ್ನ ಸೂಚನೆ ಪಾಲಿಸದೇ ಹೋದಲ್ಲಿ ಕಾನೂನು ಕ್ರಮ ಎದುರಿಸಬೇಕಾಗಿ ಬಂದೀತು ಎಂದು ಕೇಂದ್ರ ಸರ್ಕಾರ ಈಗಾಗಲೇ ಎಚ್ಚರಿಸಿರುವ ಕಾರಣ, ಟ್ವೀಟರ್‌ನ ಈ ನಿರ್ಧಾರ ಕೇಂದ್ರ ಸರ್ಕಾರ ಮತ್ತು ಸಾಮಾಜಿಕ ಜಾಲತಾಣದ ನಡುವೆ ಇನ್ನೊಂದು ಸುತ್ತಿನ ಸಮರಕ್ಕೆ ಕಾರಣವಾಗುವ ಸಾಧ್ಯತೆ ಇದೆ.
ಸಂಘರ್ಷ:
ರೈತ ಹೋರಾಟ ಕುರಿತು ತಪ್ಪು ಮಾಹಿತಿ ಹರಡುತ್ತಿರುವ 257 ಖಾತೆ ಬ್ಲಾಕ್ ಮಾಡುವಂತೆ ಜ.31ರಂದು ಸರ್ಕಾರ ಸೂಚಿಸಿತ್ತು. ಆದರೆ ಒಂದಷ್ಟುಖಾತೆ ಬ್ಲಾಕ್ ಮಾಡಿದ್ದ ಟ್ವೀಟರ್, ಕೆಲವೇ ತಾಸಿನಲ್ಲಿ ತನ್ನ ನಿರ್ಧಾರ ಹಿಂಪಡೆದಿತ್ತು. ಅದರ ಬೆನ್ನಲ್ಲೇ 1178 ಖಾತೆಗಳನ್ನು ಬ್ಲಾಕ್ ಮಾಡುವಂತೆ ಕೇಂದ್ರ ಸರ್ಕಾರ ಫೆ.4ರಂದು ನೋಟಿಸ್ ನೀಡಿತ್ತು. ಒಂದು ವೇಳೆ, ತನ್ನ ಸೂಚನೆ ಪಾಲಿಸದೇ ಇದ್ದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿತ್ತು. 7 ವರ್ಷದವರೆಗೂ ಜೈಲು ಶಿಕ್ಷೆ ವಿಧಿಸಲು ಅವಕಾಶವಿರುವ ಕಾಯ್ದೆಗಳನ್ನು ಸರ್ಕಾರ ಪ್ರಸ್ತಾಪಿಸಿತ್ತು.
ಪ್ರತಿಕ್ರಿಯೆ:
ಈ ಸೂಚನೆ ಸರ್ಕಾರಕ್ಕೆ ಮಾಹಿತಿ ನೀಡಿರುವ ಟ್ವೀಟರ್, ಬ್ಲಾಗ್‌ಪೋಸ್ಟ್ ಮೂಲಕವೂ ತಾನು ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡಿದೆ. ‘ಸರ್ಕಾರದ ಸೂಚನೆ ಅನ್ವಯ 500ಕ್ಕೂ ಹೆಚ್ಚು ಖಾತೆಗಳ ವಿರುದ್ಧ ನಾನಾ ರೀತಿಯ ಕ್ರಮ ಕೈಗೊಳ್ಳಲಾಗಿದೆ. ಈ ಪೈಕಿ ಕೆಲ ಖಾತೆ ಅಮಾನತು ಮಾಡಲಾಗಿದೆ. ಕೆಲ ಅಪಾಯಕಾರಿ ಮಾಹಿತಿ ಒಳಗೊಂಡ ಹ್ಯಾಷ್‌ಟ್ಯಾಗ್‌ಗಳ ಗೋಚರತೆ ಪ್ರಮಾಣ ಕಡಿತ ಮಾಡಲಾಗಿದೆ. ಅದರಲ್ಲಿ ಹ್ಯಾಷ್‌ಟ್ಯಾಗ್‌ಗಳು ಟ್ರೆಂಡಿಂಗ್ ಆಗುವುದು ಮತ್ತು ಶಿಫಾರಸು ಮಾಡಲಾದ ಸಚ್‌ರ್‍ಗಳಲ್ಲಿ ಇಂಥ ಹ್ಯಾಷ್‌ಟ್ಯಾಗ್ ಸೇರದಂತೆ ಮಾಡಲಾಗಿದೆ. ಇನ್ನು ಕೆಲ ಖಾತೆಗಳನ್ನು ಭಾರತದ ಮಟ್ಟಿಗೆ ಮಾತ್ರವೇ ನಿರ್ಬಂಧಿಸಲಾಗಿದೆ. ಆದರೆ ಉಳಿದ ದೇಶಗಳಲ್ಲಿ ಅವುಗಳು ಕಾಣಸಿಗಲಿದೆ’ ಎಂದು ಹೇಳಿದೆ.
ಕ್ರಮ ಇಲ್ಲ:
ಆದರೆ ‘ಸರ್ಕಾರದ ಸೂಚನೆ ಹೊರತಾಗಿಯೂ ಮಾಧ್ಯಮ ಸಂಸ್ಥೆಗಳು, ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರು ಮತ್ತು ರಾಜಕಾರಣಿಗಳ ಖಾತೆಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಏಕೆಂದರೆ ನಮಗೆ ಕೈಗೊಳ್ಳಲು ಸೂಚಿಸಲಾಗಿರುವ ಕ್ರಮಗಳು ಭಾರತೀಯ ಕಾನೂನಿನ ಅನುಗುಣವಾಗಿಲ್ಲ ಮತ್ತು ವಾಕ್ ಸ್ವಾತಂತ್ರ್ಯವನ್ನು ಪ್ರತಿಪಾದಿಸುವ ನಮ್ಮ ತತ್ವಗಳಿಗೆ ಹೊಂದಿಕೊಳ್ಳುತ್ತಿಲ್ಲ. ಇಂಥ ಯಾವುದೇ ಕ್ರಮಗಳು ಭಾರತೀಯ ಕಾನೂನಿನ ಅನ್ವಯ ವಾಕ್ ಸ್ವಾತಂತ್ರ ಹರಣ ಮಾಡುತ್ತವೆ. ಟ್ವೀಟರ್‌ನಲ್ಲಿ ಆರೋಗ್ಯಪೂರ್ಣ ಚರ್ಚೆಯನ್ನು ರಕ್ಷಿಸುವಲ್ಲಿ ನಮ್ಮ ಹೊಣೆಗಾರಿಕೆ ಬಗ್ಗೆ ಭರವಸೆ ನೀಡುತ್ತಾ, ಟ್ವೀಟ್‌ಗಳು ಮುಂದುವರೆಯಬೇಕು ಎಂಬುದರಲ್ಲಿ ನಾವು ನಂಬಿಕೆ ಇಟ್ಟಿದ್ದೇವೆ’ ಎಂದು ಟ್ವೀಟರ್ ಸಂಸ್ಥೆ ಮಾಹಿತಿ ನೀಡಿದೆ.
‘ಮುಕ್ತ ಅಂತರ್ಜಾಲ ಮತ್ತು ವಾಕ್ ಸ್ವಾತಂತ್ರ ಆಧಾರವಾಗಿರುವ ಮೌಲ್ಯಗಳು ವಿಶ್ವದಾದ್ಯಂತ ದಿನೇ ದಿನೇ ಅಪಾಯ ಎದುರಿಸುತ್ತಿವೆ. ಟ್ವೀಟರ್ ಇರುವುದೇ ಜನರ ಧ್ವನಿಯನ್ನು ಸಬಲೀಕರಣಗೊಳಿಸಿ ಎಲ್ಲರೂ ಕೇಳುವಂತೆ ಮಾಡುವುದು. ಜನರ ಅಭಿಪ್ರಾಯ ಮತ್ತು ದೃಷ್ಟಿಕೋನ ಏನೇ ಇದ್ದರೂ, ನಾವು ನಮ್ಮ ಸೇವೆಯನ್ನು ಪ್ರತಿಯೊಂದು ಕಡೆಯಲ್ಲೂ ಸುಧಾರಣೆ ಮಾಡುತ್ತಲೇ ಇರಲಿದ್ದೇವೆ. ಹೀಗಾಗಿ ಸಾರ್ವಜನಿಕ ಚರ್ಚೆಯಲ್ಲಿ ಭಾಗವಹಿಸುವುರಲ್ಲಿ ನೀವು ಸುರಕ್ಷತೆ ಭಾವನೆ ಹೊಂದಿರಬಹುದು’ ಎಂದು ಸಂಸ್ಥೆ ಹೇಳಿದೆ.
ಸರ್ಕಾರದ ಸೂಚನೆ ಏನಿತ್ತು?
ದೆಹಲಿ ರೈತ ಹೋರಾಟದ ಕುರಿತು ತಪ್ಪು ಮಾಹಿತಿ ಹರಡುತ್ತಿರುವ, ಪಾಕಿಸ್ತಾನ ಹಾಗೂ ಖಲಿಸ್ತಾನಿ ಬೆಂಬಲಿಗರ 1178 ಖಾತೆಗಳನ್ನು ಬ್ಲಾಕ್ ಮಾಡಲು ಫೆ.4ರಂದು ಸೂಚನೆ. ಇಲ್ಲದಿದ್ದಲ್ಲಿ ಕಾನೂನು ಕ್ರಮದ ಎಚ್ಚರಿಕೆ.
ಟ್ವೀಟರ್ ಮಾಡಿದ್ದೇನು?
ಅಂದಾಜು 500 ಖಾತೆಗಳ ಮೇಲೆ ಕ್ರಮ. ಕೆಲ ಖಾತೆ ಅಮಾನತು. ಇನ್ನು ಕೆಲ ಖಾತೆಗಳ ಗೋಚರತೆಗೆ ಕಡಿವಾಣ. ಕೆಲ ಖಾತೆಗಳಿಗೆ ಭಾರತದಲ್ಲಿ ಮಾತ್ರ ನಿರ್ಬಂಧ. ಸಾಮಾಜಿಕ ಹೋರಾಟಗಾರರು, ಮಾಧ್ಯಮ, ಪತ್ರಕರ್ತರು, ರಾಜಕಾರಣಿಗಳ ಖಾತೆ ಮೇಲೆ ವಾಕ್ ಸ್ವಾತಂತ್ರ ಕಾಪಾಡುವ ಹೆಸರಲ್ಲಿ ಯಾವುದೇ ಕ್ರಮ ಇಲ್ಲ.