ತಿರುಪತಿ[ಜ.21]: ತಿರುಮಲದ ವೆಂಕಟೇಶ್ವರ ದೇವಸ್ಥಾನಕ್ಕೆ ಭೇಟಿ ನೀಡುವ ಪ್ರತಿ ಭಕ್ತರಿಗೂ 1 ಉಚಿತ ಲಡ್ಡು ವಿತರಿಸುವ ಯೋಜನೆಗೆ ಸೋಮವಾರ ಚಾಲನೆ ದೊರಕಿದೆ.

ಈವರೆಗೂ ತಿರುಮಲ ಬೆಟ್ಟವನ್ನು ಪಾದಯಾತ್ರೆ ಮೂಲಕ ಏರಿ ಬಂದ ಭಕ್ತರಿಗೆ ಮಾತ್ರ ಉಚಿತ ಲಡ್ಡು ನೀಡಲಾಗುತ್ತಿತ್ತು. ಆದರೆ ಈಗ ಪಾದಯತ್ರೆ ಮೂಲಕವಾದರೂ ಬರಲಿ ಅಥವಾ ವಾಹನದಲ್ಲೇ ಬರಲಿ, ಎಲ್ಲ ರೀತಿಯ ಭಕ್ತರಿಗೂ 175 ಗ್ರಾಂ ತೂಕದ 1 ಉಚಿತ ಲಡ್ಡು ಪ್ರಸಾದ ಪ್ರಾಪ್ತಿಯಾಗಲಿದೆ. ಇದರಿಂದಾಗಿ ಪ್ರತಿ ದಿನ 80 ಸಾವಿರದಿಂದ 1 ಲಕ್ಷ ಉಚಿತ ಲಡ್ಡುಗಳನ್ನು ತಿರುಪತಿ ತಿರುಮಲ ದೇವಸ್ಥಾನ (ಟಿಡಿಡಿ) ಸಮಿತಿ ಭಕ್ತರಿಗೆ ಒದಗಿಸಿದಂತಾಗುತ್ತದೆ.

ಬೆಂಗಳೂರು ಐಟಿ ಕಂಪನಿ ಮಾಲೀಕನಿಂದ ತಿರುಪತಿ ದೇವಸ್ಥಾನಕ್ಕೆ 1 ಕೋಟಿ ರೂ. ದೇಣಿಗೆ!

ಈ ಬಗ್ಗೆ ಮಾತನಾಡಿದ ಟಿಟಿಡಿ ಹೆಚ್ಚುವರಿ ಕಾರ್ಯನಿರ್ವಹಣಾಧಿಕಾರಿ ಎ.ವಿ. ಧರ್ಮರೆಡ್ಡಿ, ‘ಇನ್ನು ಮುಂದೆ ಗಣ್ಯರೇ ಇರಲಿ, ಸಾಮಾನ್ಯ ಭಕ್ತರೇ ಇರಲಿ. ಎಲ್ಲರಿಗೂ 1 ಉಚಿತ ಲಡ್ಡು ದೊರಕಲಿದೆ. ಒಂದಕ್ಕಿಂತ ಹೆಚ್ಚು ಲಡ್ಡು ಬೇಕೆಂದರೆ ದೇವಸ್ಥಾನದ ಆವರಣದಲ್ಲಿರುವ ಲಡ್ಡು ಕಾಂಪ್ಲೆಕ್ಸ್‌ನ ಕೌಂಟರ್‌ಗೆ ಹೋಗಿ ಪ್ರತಿ ಲಡ್ಡುಗೆ 50 ರು. ಪಾವತಿಸಿ ಹೆಚ್ಚುವರಿ ಪ್ರಸಾದ ಪಡೆಯಬಹುದು. ಈವರೆಗೆ 4 ಕೌಂಟರ್‌ ಮಾತ್ರ ಇದ್ದವು. ಇವುಗಳ ಸಂಖ್ಯೆಯನ್ನು 12ಕ್ಕೆ ಏರಿಸಲಾಗಿದೆ’ ಎಂದರು.

ಸಬ್ಸಿಡಿ ರದ್ದು:

ಇದಲ್ಲದೆ, ಈವರೆಗೆ ಲಡ್ಡುಗಳನ್ನು ಸಬ್ಸಿಡಿ ದರದಲ್ಲಿ ವಿವಿಧ ಬೆಲೆ ನಿಗದಿಪಡಿಸಿ ನೀಡಲಾಗುತ್ತಿತ್ತು. ಆದರೆ ಈಗ ಸಬ್ಸಿಡಿ ತೆಗೆದು ಹಾಕಿ 50 ರು.ಗೆ ಒಂದರಂತೆ ಒಂದೇ ದರದಲ್ಲಿ ಲಡ್ಡು ಮಾರಲು ಟಿಟಿಡಿ ತೀರ್ಮಾನಿಸಿದೆ.

ತಿರುಪತಿಗೆ ತೆರಳುವ ಭಕ್ತರಿಗೆ ಹೊಸ ವರ್ಷದ ಗಿಫ್ಟ್!

ಒಂದು ಲಡ್ಡುವನ್ನು ಪ್ರತಿ ಭಕ್ತರಿಗೆ ಉಚಿತವಾಗಿ ನೀಡುವುದು ಹಾಗೂ ಸಬ್ಸಿಡಿ ದರವನ್ನು ರದ್ದುಗೊಳಿಸುವ ಕ್ರಮಗಳಿಂದ ಟಿಟಿಡಿಗೆ ವಾರ್ಷಿಕ 250 ಕೋಟಿ ರು. ಉಳಿತಾಯವಾಗಲಿದೆ ಎಂದು ವಿಶ್ಲೇಷಿಸಲಾಗಿದೆ. ಲಡ್ಡುಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವುದು ಈ ಕ್ರಮದಿಂದ ನಿಲ್ಲಲಿದ್ದು, ಇದರಿಂದ ದೇವಸ್ಥಾನಕ್ಕೆ ಉಳಿತಾಯವಾಗಲಿದೆ ಎಂದು ಹೇಳಲಾಗಿದೆ. ಕಳೆದ ವರ್ಷ ನವೆಂಬರ್‌ನಲ್ಲಿ 14 ಲಕ್ಷ ರು. ಮೌಲ್ಯದ 26 ಸಾವಿರ ಲಡ್ಡುಗಳನ್ನು ಟಿಟಿಡಿಯ ಕೆಲವು ಗುತ್ತಿಗೆ ನೌಕರರು ಅಕ್ರಮವಾಗಿ ಮಾರಿದ್ದು ಬೆಳಕಿಗೆ ಬಂದಿತ್ತು.

1715ರ ಆಗಸ್ಟ್‌ 2ರಂದು ತಿರುಪತಿ ಲಡ್ಡು ಪ್ರಸಾದ ವಿತರಣೆ ಮೊದಲ ಬಾರಿ ಆರಂಭವಾಗಿತ್ತು.