ಅಕ್ಕ ಲೈಂಗಿಕ ಕಿರುಕುಳದ ದೂರು ನೀಡಿದ್ದಕ್ಕೆ ದಲಿತ ಯುವಕನ ಹತ್ಯೆ: ತಾಯಿಯ ವಿವಸ್ತ್ರಗೊಳಿಸಿ ವಿಕೃತಿ
ದಲಿತ ಕುಟುಂಬವೊಂದರ ಮನೆಗೆ ನುಗ್ಗಿದ ನೂರಾರು ದುಷ್ಕರ್ಮಿಗಳು, 18 ವರ್ಷದ ದಲಿತ ಯುವಕನನ್ನು ಹೊಡೆದು ಬರ್ಬರವಾಗಿ ಕೊಲೆ ಮಾಡಿದ್ದಲ್ಲದೇ ಆತನ ತಾಯಿಯನ್ನು ವಿವಸ್ತ್ರಗೊಳಿಸಿ, ಸೋದರಿ ಮೇಲೆ ಹಲ್ಲೆ ನಡೆಸಿದ ದುರಂತ ಘಟನೆ ಮಧ್ಯ ಪ್ರದೇಶದ ಸಾಗರ್ ಜಿಲ್ಲೆಯಲ್ಲಿ ನಡೆದಿದೆ.

ಭೋಪಾಲ್: ದಲಿತ ಕುಟುಂಬವೊಂದರ ಮನೆಗೆ ನುಗ್ಗಿದ ನೂರಾರು ದುಷ್ಕರ್ಮಿಗಳು, 18 ವರ್ಷದ ದಲಿತ ಯುವಕನನ್ನು ಹೊಡೆದು ಬರ್ಬರವಾಗಿ ಕೊಲೆ ಮಾಡಿದ್ದಲ್ಲದೇ ಆತನ ತಾಯಿಯನ್ನು ವಿವಸ್ತ್ರಗೊಳಿಸಿ, ಸೋದರಿ ಮೇಲೆ ಹಲ್ಲೆ ನಡೆಸಿದ ದುರಂತ ಘಟನೆ ಮಧ್ಯ ಪ್ರದೇಶದ ಸಾಗರ್ ಜಿಲ್ಲೆಯಲ್ಲಿ ನಡೆದಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಈಗಾಗಲೇ 8 ಜನರನ್ನು ಬಂಧಿಸಿದ್ದಾರೆ.
ಮೃತ ಯುವಕನ ಸಹೋದರಿ 2019ರಲ್ಲಿ ಕೆಲವರ ವಿರುದ್ಧ ಲೈಂಗಿಕ ಕಿರುಕುಳದ (Sexual harassment) ಆರೋಪದಡಿ ಪ್ರಕರಣ ದಾಖಲಿಸಿದ್ದಳು. ಈ ಸಂಬಂಧ ನಾಲ್ವರನ್ನು ಬಂಧಿಸಲಾಗಿದೆ. ಈ ಪ್ರಕರಣವನ್ನು ಹಿಂಪಡೆಯುವಂತೆ ಆಕೆಗೆ ಪದೇ ಪದೇ ಕೆಲವರು ಒತ್ತಾಯಿಸುತ್ತಿದ್ದರು. ಇದಕ್ಕೊಪ್ಪದ ಕಾರಣಕ್ಕೆ ಮನೆಗೆ ನುಗ್ಗಿದ ದುಷ್ಕರ್ಮಿಗಳು ಬಾಲಕನನ್ನು ಕೊಂದು ಹಾಕಿದ್ದಾರೆ. ಈ ವೇಳೆ ಮಗನ (Son) ರಕ್ಷಣೆಗೆ ಹೋದ ತಾಯಿಯನ್ನು ಬೆತ್ತಲೆಗೊಳಿಸಿ ಹಾಗೂ ಸೋದರಿಯ ಥಳಿಸಿ ವಿಕೃತಿ ಮೆರೆದಿದ್ದಾರೆ.
ಮೇಲ್ಜಾತಿಯವರಿಗೆ ಬುದ್ಧಿ ಹೇಳಿದ ದಲಿತ ಯುವಕ, ಮರುದಿನವೇ ಶವವಾಗಿ ಪತ್ತೆ
ನನ್ನ ಮಗನನ್ನು ಹೊಡೆದು ಕೊಂದರು. ನನ್ನ ಬಟ್ಟೆಯನ್ನೂ ಕಿತ್ತೆಸೆದರು. ಮನೆಯ ಎಲ್ಲಾ ಸಾಮಗ್ರಿಗಳನ್ನು ಒಡೆದು ಹಾಕಿದ್ದಾರೆ. ಪೊಲೀಸರು ಬಂದು ನನಗೆ ಟವಲ್ ನೀಡಿದರು. ಅವರು ನನಗೊಂದು ಸೀರೆ ಕೊಡುವವರೆಗೂ ನಾನು ಟವಲ್ ಅನ್ನೇ ಸುತ್ತಿಕೊಂಡಿದ್ದೆ’ ಎಂದು ಮೃತ ಯುವಕನ ತಾಯಿ ಹೃದಯ ವಿದ್ರಾವಕವಾದ ಮಾತುಗಳನ್ನಾಡಿದ್ದಾರೆ.
ಘಟನೆ ಬಳಿಕ ಗ್ರಾಮದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದ್ದು, ಬಿಗಿ ಭದ್ರತೆ ಒದಗಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು ಸಂತ್ರಸ್ತ ಕುಟುಂಬಕ್ಕೆ ಸರ್ಕಾರಿ ಯೋಜನೆಗಳಡಿ ಸಹಾಯ ಮಾಡುವುದಾಗಿ ಜಿಲ್ಲಾಧಿಕಾರಿಗಳು ಭರವಸೆ ನೀಡಿದ್ದಾರೆ. ಇನ್ನು ಈ ಘಟನೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತೀವ್ರ ರಾಜಕೀಯ ಜಟಾಪಟಿಗೆ ಕಾರಣವಾಗಿದೆ.