4 ದಶಕಗಳ ಬಳಿಕ 5500 ಬಲಿ ಪಡೆದ ಭೋಪಾಲ್‌ ದುರಂತದ ತ್ಯಾಜ್ಯ ವಿಲೇವಾರಿ

ಭೋಪಾಲ್ ಅನಿಲ ಸೋರಿಕೆ ದುರಂತದ 40 ವರ್ಷಗಳ ನಂತರ, ಯೂನಿಯನ್ ಕಾರ್ಬೈಡ್ ಕಾರ್ಖಾನೆಯ ಹಾನಿಕಾರಕ ತ್ಯಾಜ್ಯವನ್ನು ಪೀತಂಪುರಕ್ಕೆ ಸ್ಥಳಾಂತರಿಸಲಾಗಿದೆ. 100 ಕಾರ್ಮಿಕರು 30 ನಿಮಿಷಗಳ ಶಿಫ್ಟ್‌ಗಳಲ್ಲಿ ತ್ಯಾಜ್ಯವನ್ನು ಸಂಗ್ರಹಿಸಿ, 12 ಟ್ರಕ್‌ಗಳಲ್ಲಿ ಸಾಗಿಸಿದ್ದಾರೆ.

Toxic waste from Bhopal s Union Carbide Factory is being taken away in containers to Pithampur mrq

ಭೋಪಾಲ್‌: ವಿಶ್ವದ ಅತಿ ಭಯಾನಕ ಕೈಗಾರಿಕಾ ದುರಂತವೆಂದು ಪರಿಗಣಿಸಲಾಗುವ 5,479 ಜನರನ್ನು ಬಲಿಪಡೆದ ಭೋಪಾಲ್‌ ಅನಿಲ ಸೋರಿಕೆ ದುರಂತದ ತ್ಯಾಜ್ಯಗಳನ್ನು ಬರೋಬ್ಬರಿ 40 ವರ್ಷಗಳ ಬಳಿಕ ಸ್ಥಳಾಂತರಗೊಳಿಸಲಾಗಿದೆ. ಪ್ರಸ್ತುತ ಸ್ಥಗಿತವಾಗಿರುವ ಯೂನಿಯನ್‌ ಕಾರ್ಬೈಡ್ ಕಾರ್ಖಾನೆಯ ಹಾನಿಕಾರಕ ತ್ಯಾಜ್ಯಗಳನ್ನು ಸೀಲ್‌ ಮಾಡಿ ಅದನ್ನು ಟ್ರಕ್‌ಗಳಲ್ಲಿಟ್ಟ ಭೋಪಾಲ್‌ನಿಂದ 250 ಕಿ.ಮೀ. ದೂರವಿರುವ ಕೈಗಾರಿಕಾ ಪ್ರದೇಶವಾದ ದಾರ್‌ ಜಿಲ್ಲೆಯ ಪೀತಂಪುರಕ್ಕೆ ಕೊಂಡೊಯ್ಯಲಾಗಿದೆ. ಒಟ್ಟು 12 ಟ್ರಕ್‌ಗಳಲ್ಲಿ ಈ ತ್ಯಾಜ್ಯಗಳನ್ನು ಕೊಂಡೊಯ್ಯಲಾಗಿದೆ.

ಭೋಪಾಲ್ ಅನಿಲ ದುರಂತ ಪರಿಹಾರ ಮತ್ತು ಪುನರ್ವಸತಿ ಇಲಾಖೆಯ ನಿರ್ದೇಶಕ ಸ್ವತಂತ್ರ ಕುಮಾರ್‌ ಸಿಂಗ್‌ ಮಾಹಿತಿ ನೀಡಿ, ‘100 ಕಾರ್ಮಿಕರು 30 ನಿಮಿಷಗಳ ಶಿಫ್ಟ್‌ ಪ್ರಕಾರ ತ್ಯಾಜ್ಯವನ್ನು ಸಂಗ್ರಹಿಸಿದ್ದು, ಕೆಲಸ ಸಂಪನ್ನಗೊಂಡಿದೆ. ಎಲ್ಲವೂ ಸರಿಯಿದ್ದಲ್ಲಿ ತ್ಯಾಜ್ಯವನ್ನು 3 ತಿಂಗಳೊಳಗಾಗಿ ಸುಡುತ್ತೇವೆ. ಇಲ್ಲದಿದ್ದರೆ ಈ ಕೆಲಸಕ್ಕೆ 9 ತಿಂಗಳು ಬೇಕಾಗಬಹುದು’ ಎಂದರು.

ಈ ತ್ಯಾಜ್ಯ ತೆರವಿನ ಕುರಿತು ಸುಪ್ರೀಂ ಕೋರ್ಟ್‌ ಹಲವು ಬಾರಿ ನಿರ್ದೇಶನ ನೀಡಿದ್ದರೂ ಕೆಲಸ ಆಗದ ಬಗ್ಗೆ ಮಧ್ಯಪ್ರದೇಶ ಹೈಕೋರ್ಟ್‌ ಸಂಬಂಧಿಸಿದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು, ಈ ನಿರ್ಲಕ್ಷ್ಯದಿಂದ ಮತ್ತೊಂದು ದುರಂತ ಸಂಭವಿಸುವ ಅಪಾಯದ ಬಗ್ಗೆ ಎಚ್ಚರಿಸಿತ್ತು. ಅಂತೆಯೇ, ತ್ಯಾಜ್ಯ ಸ್ಥಳಾಂತರಕ್ಕೆ ಡಿ.3ರಿಂದ 4 ವಾರಗಳ ಕಾಲಾವಕಾಶವನ್ನೂ ನೀಡಿತ್ತು. ಇದರ ಬೆನ್ನಲ್ಲೇ ಈ ಬೆಳವಣಿಗೆಯಾಗಿದೆ.

ಇದನ್ನೂ ಓದಿ: ವಿಶೇಷ ರೀತಿ ಹೊಸ ವರ್ಷ ಸ್ವಾಗತಿಸಿದ ಭಾರತೀಯ ರೈಲ್ವೇ, ಪ್ರಯಾಣಿಕರಿಂದ ಭರ್ಜರಿ ಚಿಯರ್‌ಅಪ್

ವಿಲೇವಾರಿ ಹೇಗೆ?

ಮೊದಲಿಗೆ ತ್ಯಾಜ್ಯವನ್ನು ಪೀತಂಪುರದ ವಿಲೇವಾರಿ ಘಟಕದಲ್ಲಿ ಸುಡಲಾಗುವುದು. ಮಾಲಿನ್ಯ ತಡೆಯುವ ಉದ್ದೇಶದಿಂದ ಹೊಗೆಯನ್ನು 4 ಪದರಗಳ ಫಿಲ್ಟರ್‌ ಮೂಲಕ ಹೊರಬಿಡಲಾಗುವುದು. ಅದರ ಬೂದಿಯಲ್ಲಿ ಅಪಾಯಕಾರಿ ಅಂಶಗಳಿರುವ ಬಗ್ಗೆ ಪರಿಶೀಲಿಸಿ, ಸುರಕ್ಷಿತವೆನಿಸಿದರೆ ಅದು ಮಣ್ಣು ಹಾಗೂ ನೀರಿನೊಂದಿಗೆ ಸೇರದಂತೆ ಹೂಳಲಾಗುವುದು.

ಏನಿದು ದುರಂತ?

1984ರ ಡಿ.2ರ ಮಧ್ಯರಾತ್ರಿ ಭೋಪಾಲ್‌ನ ಯೂನಿಯನ್‌ ಕಾರ್ಬೈಡ್ ಕಾರ್ಖಾನೆಯಿಂದ ಮೀಥೈಲ್ ಐಸೊಸೈನೇಟ್ ಎಂಬ ವಿಷಾನಿಲ ಸೋರಿಕೆಯಾಗಿತ್ತು. ಇದು ಸುತ್ತಮುತ್ತಲು ವಾಸವಾಗಿದ್ದ ಜನರ ಆರೊಗ್ಯದ ಮೇಲೆ ಗಂಭೀರ ಪರಿಣಾಮ ಬೀರಿತ್ತು.

ಇದನ್ನೂ ಓದಿ: ಭಾರತದ ಹೊಸ ಏರ್‌ಲೈನ್‌ 'Air Kerala' ಅನಾವರಣ, ಜೂನ್‌ನಿಂದ ಕಾರ್ಯಾಚರಣೆ

Latest Videos
Follow Us:
Download App:
  • android
  • ios