ರಾಜಕೀಯ ದ್ವೇಷ, ಪಶ್ಚಿಮ ಬಂಗಾಳದಲ್ಲಿ ಗುಂಡಿಕ್ಕಿ ಟಿಎಂಸಿ ನಾಯಕನ ಹತ್ಯೆ
ಪಶ್ಚಿಮ ಬಂಗಾಳದಲ್ಲಿ ಶನಿವಾರ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತನನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ರಾಜಕೀಯ ದ್ವೇಷಕ್ಕೆ ಕೊಲೆ ನಡೆದಿದೆ ಎನ್ನಲಾಗಿದೆ.
ಕೊಲ್ಕತ್ತಾ (ಜು.2): ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ಶನಿವಾರ ತೃಣಮೂಲ ಕಾಂಗ್ರೆಸ್ (Trinamool Congress -ಟಿಎಂಸಿ) ಕಾರ್ಯಕರ್ತನನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ಹತ್ಯೆಯಾದ ವ್ಯಕ್ತಿಯನ್ನು ಜಿಯಾರುಲ್ ಮೊಲ್ಲಾ ಬಸಂತಿ ಎಂದು ಗುರುತಿಸಲಾಗಿದ್ದು, ಗ್ರಾಮದ ರಸ್ತೆಯೊಂದರಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಜಿಯಾರುಲ್ ಮೊಲ್ಲಾ ಅವರು ಯುವ ತೃಣಮೂಲ ಕಾಂಗ್ರೆಸ್ ಸದಸ್ಯನಾಗಿದ್ದು, ಅವರಿಗೆ ನಿರಂತರ ಜೀವ ಬೆದರಿಕೆ ಇತ್ತು ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ. ನನ್ನ ತಂದೆಗೆ ಸಾಕಷ್ಟು ಶತ್ರುಗಳಿದ್ದರು, ಅವರ ವಿರುದ್ಧ ರಾಜಕೀಯ ದ್ವೇಷವಿತ್ತು, ಅವರಿಗೆ ಪಕ್ಷದ ಇನ್ನೊಂದು ಬಣದಿಂದ ಹಲವಾರು ಬಾರಿ ಬೆದರಿಕೆ ಬಂದಿದೆ. ವಿವಿಧ ನಂಬರ್ ನಿಂದ ಫೋನ್ ಬೆದರಿಕೆ ಕರೆಗಳು ಬರುತ್ತಿದ್ದವು, ನನ್ನ ತಂದೆ ಅವರು ಟಿಎಂಸಿ ಯುವ ಘಟಕದ ಸದಸ್ಯರಾಗಿದ್ದರು. ತಂದೆಯನ್ನು ತಮ್ಮ ಬಣಕ್ಕೆ ಸೇರುವಂತೆ ಇತರ ಪಕ್ಷಗಳು ಒತ್ತಡ ಹೇರುತ್ತಿದ್ದವು ಎಂದು ಅವರ ಪುತ್ರ ತಿಳಿಸಿದ್ದಾರೆ. ಈ ವಿಚಾರದಲ್ಲಿ ತನಿಖೆ ನಡೆಯುತ್ತಿದೆ.