ಹೈದರಾಬಾದ್[ಡಿ.08]: ಹೈದರಾಬಾದ್ ವೈದ್ಯೆ ಮೇಲಿನ ರೇಪ್ ಹಾಗೂ ಕೊಲೆ ಪ್ರಕರಣದ ಆರೋಪಿಗಳು ಎನ್‌ಕೌಂಟರ್‌ನಲ್ಲಿ ಬಲಿಯಾಗಿದ್ದಾರೆ. ಇದರ ಬೆನ್ನಲ್ಲೇ ತೆಲಂಗಾನದ ಹಿರಿಯ ಸಚಿವರೊಬ್ಬರು 'ಘೋರ ಅಪರಾಧವೆಸಗುವವರು ಎನ್‌ಕೌಂಟರ್‌ಗೆ ಬಲಿಯಾಗಬೇಕಾಗುತ್ತದೆ' ಎನ್ನುವ ಎಚ್ಚರಿಕೆ ನೀಡಿದ್ದಾರೆ. ಈ ಮೂಲಕ ಹೈದರಾಬಾದ್ ಪೊಲೀಸರು ನಡೆಸಿದ ಎನ್‌ಕೌಂಟರ್ ಸಮರ್ಥಿಸಿಕೊಂಡಿದ್ದಾರೆ.

ಸ್ಥಳೀಯ ಸುದ್ದಿ ವಾಹಿನಿಗೆ ಸಂದರ್ಶನ ನೀಡಿದ ಪಶುಸಂಗೋಪನಾ ಸಚಿವ ತಲ್‌ಸಾನೀ ಶ್ರೀನಿವಾಸ್ ಯಾದವ್ 'ಅತ್ಯಾಚಾರದಂತಹ ಘೋರ ಅಪರಾಧವೆಸಗುವವರಿಗೆ ಇದೊಂದು ಪಾಠ. ಇನ್ನು ನೀವು ನ್ಯಾಯಾಲಯದ ವಿಚಾರಣೆಯ ಲಾಭ ಹಾಗೂ ಜಾಮೀನು ಪಡೆಯಲು ಸಾಧ್ಯವಿಲ್ಲ. ಇನ್ಮುಂದೆ ಇಂತಹ ಅಪರಾಧ ಕೃತ್ಯಗಳೂ ನಡೆಯುವುದಿಲ್ಲ. ಈ ಎನ್‌ಕೌಂಟರ್ ಪ್ರಕರಣ ತಪ್ಪು ಮಾಡಿದವರ ಎನ್‌ಕೌಂಟರ್ ಮಾಡಲಾಗುತ್ತದೆ ಎಂಬ ಸಂದೇಶ ದೇಶಕ್ಕೆ ರವಾನಿಸಿದೆ. ಪೊಲೀಸರ ಈ ನಡೆ ದೇಶಕ್ಕೆ ಮಾದರಿ' ಎಂದಿದ್ದಾರೆ.

ಮಾರ್ಗಸೂಚಿ ಪಾಲಿಸಿಲ್ಲ: ಹೈದರಾಬಾದ್‌ ಎನ್‌ಕೌಂಟರ್‌ ಪ್ರಶ್ನಿಸಿ ಸುಪ್ರೀಂಗೆ 2 ಅರ್ಜಿ!

28 ನವೆಂಬರ್‌ಗೆ ಪತ್ತೆಯಾಗಿತ್ತು ಪಶು ವೈದ್ಯೆಯ ಸುಟ್ಟ ಶವ

ನವೆಂಬರ್ 28ರಂದು ಗೈದರಾಬಾದ್‌ನ ಶಾದ್‌ನಗರದಲ್ಲಿ ನಿರ್ಮಾಣ ಹಂತದಲ್ಲಿದ್ದ ಅಂಡರ್‌ ಪಾಸ್ ಕೆಳಗೆ ಪಶು ವೈದ್ಯೆಯ ಶವ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ವೈದ್ಯಕೀಯ ಪರೀಕ್ಷೆ ಬಳಿಕ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದ್ದು ಸಾಬೀತಾಗಿತ್ತು. ತನಿಖೆ ಆರಂಭಿಸಿದ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳು ಸೇರಿದಂತೆ ಇನ್ನಿತರ ಮಹತ್ವದ ಸಾಕ್ಷಿಯಿಂದ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಶ್ವಿಯಾಗಿದ್ದರು. ಘಟನೆ ಬೆನ್ನಲ್ಲೇ ಆರೋಪಿಗಳಿಗೆ ಗಲ್ಲು ಶಿಕ್ಷೆ ನೀಡಬೇಕೆಂಬ ಕೂಗು ಕೇಳಿ ಬಂದಿತ್ತು ಹಾಗೂ ಪ್ರತಿಭಟನೆಗಳೂ ನಡೆದಿದ್ದವು.

ಪರಾರಿಯಾಗಲು ಯತ್ನಿಸುತ್ತಿದ್ದಾಗ ಎನ್‌ಕೌಂಟರ್

ಬಂಧಿತ ನಾಲ್ವರು ಆರೋಪಿಗಳನ್ನು ಕೋರ್ಟ್ ಆದೇಶದ ಮೇರೆಗೆ ಮಹಜರು ಮಾಡಲು ಶುಕ್ರವಾರದಂದು ಬೆಳಗ್ಗಿನ ಜಾವ ಶಾದ್ ನಗರದ ಘಟನಾ ಸ್ಥಳಕ್ಕೆ ಕರೆದೊಯ್ಯಲಾಗಿತ್ತು. ಈ ವೇಳೆ ಆರೋಪಿಗಳು ಪೊಲೀಸರ ಗನ್ ಕಸಿದು ಪರಾರಿಯಾಗಲು ಯತ್ನಿಸಿದ್ದರು. ಈ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಆರೋಪಿಗಳು ಬಲಿಯಾಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

ಭಾರತಕ್ಕೆ ಹೋದರೆ ಎಚ್ಚರವಾಗಿರಿ: ಪ್ರಜೆಗಳಿಗೆ ಇಂಗ್ಲೆಂಡ್, ಅಮೆರಿಕ ಪ್ರವಾಸ ಸಲಹೆ!

ಇನ್ನು ಈ ಎನ್‌ಕೌಂಟರ್ ಮೂಲಕ ಆರೋಪಿಗಳಿಗೆ ತಕ್ಕ ಶಾಸ್ತಿಯಾಗಿದೆ ಎಂದು ದೇಶದಾದ್ಯಂತ ಅನೇಕ ಮಂದಿ ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಈ ಘಟನೆ ಅತ್ಯಾಚಾರಿಗಳಿಗೆ ನಡುಕ ಹುಟ್ಟಿಸಲಿದೆ ಎಂಬ ಅಭಿಪ್ರಾಯಗಳೂ ಕೇಳಿ ಬಂದಿದ್ದವು.