ಲಖನೌ(ಅ.12): ಭೂ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಭೂ ಮಾಫಿಯಾದ ಗುಂಪೊಂದು ರಾಜಸ್ಥಾನದಲ್ಲಿ ಅರ್ಚಕರೊಬ್ಬರ ಮೇಲೆ ಪೆಟ್ರೋಲ್‌ ಸುರಿದು ಜೀವಂತವಾಗಿ ಸುಟ್ಟು ಹಾಕಿದ ಭೀಭತ್ಸ ಘಟನೆ ಮರೆಯುವ ಮುನ್ನವೇ, ಇಂಥದ್ದೇ ಘಟನೆಯೊಂದು ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯಲ್ಲಿ ನಡೆದಿದೆ.

ಈ ಸಂಬಂಧ ನಾಲ್ವರ ವಿರುದ್ಧ ಕೇಸ್‌ ದಾಖಲಿಸಿಕೊಂಡ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಈ ದಾಳಿಗೆ ತುತ್ತಾದ ಸಂತ್ರಸ್ತನನ್ನು ಗೊಂಡ ಜಿಲ್ಲೆಯ ಇಥಿಯಾ ಥೋಕ್‌ ಗ್ರಾಮದ ರಾಮ ಜಾನಕಿ ದೇಗುಲದ ಅರ್ಚಕ ಸಾಮ್ರಾಟ್‌ ದಾಸ್‌ ಎಂದು ಗುರುತಿಸಲಾಗಿದೆ.

ದೀರ್ಘಕಾಲೀನ ಭೂ ವಿವಾದಕ್ಕೆ ಸಂಬಂಧಿಸಿ ಶನಿವಾರ ತಡರಾತ್ರಿ ನಾಲ್ವರು ಕಿಡಿಗೇಡಿಗಳು ಅರ್ಚಕನ ಮೇಲೆ ಗುಂಡಿನ ದಾಳಿ ಎಸಗಿ ಪರಾರಿಯಾಗಿದ್ದರು. ಗುಂಡಿನ ದಾಳಿಯಿಂದ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಅರ್ಚಕನ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಕಳೆದ ವರ್ಷವೂ ಇದೇ ದೇವಾಲಯದ ಮತ್ತೋರ್ವ ಅರ್ಚಕ ಬಾಬಾ ಸೀತಾರಾಮ್‌ ದಾಸ್‌ ಅವರ ಮೇಲೆಯೂ ಅಪರಿಚಿತ ದುಷ್ಕರ್ಮಿಗಳು ಇದೇ ರೀತಿ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಆ ಕುರಿತಾದ ತನಿಖೆ ಇನ್ನೂ ಪೂರ್ಣವಾಗುವ ಮುನ್ನವೇ ಈ ಘಟನೆ ನಡೆದಿದೆ.