ಹೈದರಾಬಾದ್[ಡಿ.21]: ತೆಲಂಗಾಣ ರಾಜಧಾನಿ ಹೈದರಾಬಾದ್‌ನಲ್ಲಿ ನಡೆದಿದ್ದ ಪಶುವೈದ್ಯೆ ರೇಪ್ ಹಾಗೂ ಕೊಲೆ ಪ್ರಕರಣ ಸಂಬಂಧ ಬಂಧಿಸಲಾಗಿದ್ದ ಎಲ್ಲಾ ಆರೋಪಿಗಳ ಎನ್‌ಕೌಂಟರ್ ಪ್ರಕರಣದ ರಹಸ್ಯ ದಿನಗಳೆದಂತೆ ಮತ್ತಷ್ಟು ಆಳವಾಗುತ್ತಿದೆ. ತೆಲಂಗಾಣ ಹೈಕೋರ್ಟ್ ಈ ರಹಸ್ಯ ಬೇಧಿಸಲು ನಾಲ್ಕೂ ಶವಗಳ ಮರು ಮರತಣೋತ್ತರ ಪರೀಕ್ಷೆ ನಡೆಸುವಂತೆ ಆದೇಶಿಸಿದೆ. ಹೈದರಾಬಾದ್ ಗಾಂಧಿ ಆಸ್ಪತ್ರೆಯ ಹಿರಿಯ ವೈದ್ಯಕೀಯ ಅಧಿಕಾರಿ ಈಗಾಗಲೇ ಶವಗಳನ್ನು ದೀರ್ಘಕಾಲ ಸಂರಕ್ಷಿಸುವುದು ಸಾಧ್ಯವಿಲ್ಲ ಎಂದಿದ್ದರು. ಅಲ್ಲದೇ ಶವ ವಿಲೇವಾರಿ ಸಂಬಂಧ ಆದೇಶ ನೀಡುವಂತೆ ಹೈಕೋರ್ಟ್‌ಗೆ ಮನವಿಯನ್ನೂ ಮಾಡಿದ್ದರು.

ಕೋರ್ಟ್ ಈ ಹಿಂದೆ ಪ್ರಕರಣ ಸಂಬಂಧ ಆದೇಶ ನೀಡುತ್ತಾ, ಎನ್‌ಕೌಂಟರ್ ಸಂಬಂಧಿತ ಮತ್ತಷ್ಟು ಮಾಹಿತಿ ಪಡೆಯಲು ದೆಹಲಿಯಿಂದ ವಿಶೇಷ ತಂಡ ಮತ್ತೊಮ್ಮೆ ಶವಗಳ ಮರಣೋತ್ತರ ಪರೀಕ್ಷೆ ನಡೆಸಬಹುದು ಎಂದಿತ್ತು. ಆದರೀಗ ಆಸ್ಪತ್ರೆ ಅಧಿಕಾರಿಗಳ ಶವಗಳ ಸ್ಥಿತಿ ಹೇಗಿದೆ ಎಂದು ಮಾಹಿತಿ ಪಡೆದುಕೊಂಡ ನ್ಯಾಯಾಲಯ, ಮತ್ತೆ ಪೋಸ್ಟ್ ಮಾರ್ಟಂ ಮಾಡಲು ಆದೇಶಿಸಿದೆ. 

ಸುಪ್ರೀಂ ಕೋರ್ಟ್ ಇತ್ತೀಚೆಗಷ್ಟೇ ನಾಲ್ವರು ಆರೋಪಿಗಳ ಎನ್‌ಕೌಂಟರ್ ಸಂಬಂಧ ತನಿಖೆ ನಡೆಸಲು ಮೂವರು ಸದಸ್ಯರ ಆಯೋಗ ರಚಿಸಿತ್ತು. ಈ ಆಯೋಗದಲ್ಲಿ ಬಾಂಬೆ ಹೈಕೋರ್ಟ್ ನಿವೃತ್ತ ಜಡ್ಜ್ ರೇಖಾ ಬಲ್ದೋಟಾ ಹಾಗೂ ಸಿಬಿಐ ಮಾಜಿ ನಿರ್ದೇಶಕ ಕಾರ್ತಿಕೇಯನ್ ಕೂಡಾ ಇದ್ದಾರೆ. ಈ ಆಯೋಗ  ತಿಂಗಳೊಳಗೆ ತನಿಖಾ ವರದಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಿದೆ.