Covid Crisis: ಉ.ಪ್ರ., ತೆಲಂಗಾಣದಲ್ಲಿ ಶಾಲೆ ಬಂದ್, ತಮಿಳ್ನಾಡಲ್ಲಿ ಪರೀಕ್ಷೆ ಮುಂದೂಡಿಕೆ!
* ದೇಶದಲ್ಲಿ ಕೋವಿಡ್ ಕೇಸ್‌ಗಳು ಉಲ್ಬಣ
* ಉ.ಪ್ರ., ತೆಲಂಗಾಣದಲ್ಲಿ ಶಾಲೆ ಬಂದ್, ತಮಿಳ್ನಾಡಲ್ಲಿ ಪರೀಕ್ಷೆ ಮುಂದೂಡಿಕೆ
* ಈ ಮೊದಲು ಜ. 16ರ ವರೆಗೆ ರಾಜ್ಯದ ಎಲ್ಲಾ ಶೈಕ್ಷಣಿಕ ಸಂಸ್ಥೆಗಳನ್ನು ಮುಚ್ಚುವಂತೆ ಆದೇಶಿಸಲಾಗಿತ್ತು
ನವದೆಹಲಿ: ದೇಶದಲ್ಲಿ ಕೋವಿಡ್ ಕೇಸ್‌ಗಳು ಉಲ್ಬಣವಾಗುತ್ತಿರುವ ಹಿನ್ನೆಲೆಯಲ್ಲಿ ಹಲವು ರಾಜ್ಯಗಳು ಶಾಲಾ-ಕಾಲೇಜುಗಳನ್ನು ಪುನಃ ಮುಚ್ಚುವಂತೆ ಆದೇಶಿಸಿವೆ.
ತಮಿಳುನಾಡಲ್ಲಿ ಜ.31ರವರೆಗೂ 1ರಿಂದ 12ನೇ ತರಗತಿ ಸೇರಿದಂತೆ ಎಲ್ಲಾ ಶಾಲಾ-ಕಾಲೇಜುಗಳಲ್ಲಿ ಭೌತಿಕ ತರಗತಿಗಳನ್ನು ನಡೆಸದಂತೆ ಆದೇಶಿಸಲಾಗಿದೆ. ಜ. 19ರಿಂದ ಆರಂಭವಾಗಬೇಕಿದ್ದ 10 ಹಾಗೂ 12ನೇ ತರಗತಿ ಪರೀಕ್ಷೆಗಳನ್ನು ಸಹ ಸರ್ಕಾರ ಮುಂದೂಡಿದೆ.
ಇನ್ನು ಉತ್ತರಪ್ರದೇಶದಲ್ಲಿ ಜ.23 ರವರೆಗೆ ಶಾಲಾ-ಕಾಲೇಜುಗಳು ಬಂದ್ ಆಗಲಿವೆ. ಆದರೆ ನಿಗದಿಯಂತೆ ಪರೀಕ್ಷೆಗಳು ನಡೆಯಲಿವೆ ಎಂದು ಸರ್ಕಾರ ತಿಳಿಸಿದೆ.
ಇನ್ನು ತೆಲಂಗಾಣದಲ್ಲಿ ಸಹ ಮೆಡಿಕಲ್ ಕಾಲೇಜುಗಳನ್ನು ಹೊರತುಪಡಿಸಿ ಇನ್ನೆಲ್ಲಾ ಶಾಲಾ-ಕಾಲೇಜುಗಳನ್ನು ಜ.30 ರವರೆಗೆ ಮುಚ್ಚುವಂತೆ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಆದೇಶಿಸಿದ್ದಾರೆ.
ಈ ಮೊದಲು ಜ. 16ರ ವರೆಗೆ ರಾಜ್ಯದ ಎಲ್ಲಾ ಶೈಕ್ಷಣಿಕ ಸಂಸ್ಥೆಗಳನ್ನು ಮುಚ್ಚುವಂತೆ ಆದೇಶಿಸಲಾಗಿತ್ತು. ಆದರೆ ಕೋವಿಡ್ ಪ್ರಕರಣಗಳು ಭಾರೀ ಏರಿಕೆ ಕಂಡ ಹಿನ್ನೆಲೆ ಅವಧಿಯನ್ನು ವಿಸ್ತರಿಸಲಾಗಿದೆ.
ಶಾಲೆಗಳಿಂದ ಸೋಂಕು ಹಬ್ಬುತ್ತೆ ಎಂಬುದು ನಿಜವಲ್ಲ: ವಿಶ್ವಬ್ಯಾಂಕ್
ಕೊರೋನಾ ಪ್ರಕರಣಗಳು ಹೆಚ್ಚಾದ ಕಾರಣ ಸರ್ಕಾರಗಳು ಶಾಲೆಗಳನ್ನು ಬಂದ್ ಮಾಡುತ್ತಿರುವುದಕ್ಕೆ ವಿಶ್ವಬ್ಯಾಂಕ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಸೋಂಕು ಹೆಚ್ಚಾಯಿತು ಎಂದು ಶಾಲೆ ಮುಚ್ಚುವುದಕ್ಕೆ ಯಾವುದೇ ಸಮರ್ಥನೆ ಇಲ್ಲ. ಕೋವಿಡ್ ಹೊಸ ಅಲೆ ಸೃಷ್ಟಿಯಾದರೂ ಶಾಲೆ ಬಂದ್ ಮಾಡುವುದು ಕೊನೆಯ ಆಯ್ಕೆಯಾಗಬೇಕು. ಇಲ್ಲದೆ ಹೋದರೆ ಕಲಿಕಾ ಬಡತನ ಹೆಚ್ಚಾಗುತ್ತದೆ ಎಂದು ಹೇಳಿದೆ.
ಶಾಲೆಗಳನ್ನು ತೆರೆದಿದ್ದರಿಂದಲೇ ಸೋಂಕಿನ ಉಬ್ಬರವಾಯಿತು ಹಾಗೂ ಶಾಲೆಗಳು ಸುರಕ್ಷಿತ ಸ್ಥಳವಲ್ಲ ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ ಎಂದು ವಿಶ್ವ ಬ್ಯಾಂಕ್‌ನ ಜಾಗತಿಕ ಶಿಕ್ಷಣ ನಿರ್ದೇಶಕ ಜೇಮಿ ಸಾವೇದ್ರ ಅವರು ಹೇಳಿದ್ದಾರೆ.
ರೆಸ್ಟೋರೆಂಟ್, ಬಾರ್ ಹಾಗೂ ಶಾಪಿಂಗ್ ಮಾಲ್‌ಗಳನ್ನು ತೆರೆಯಲು ಬಿಟ್ಟು, ಶಾಲೆಗಳನ್ನು ಮುಚ್ಚಿಸುವುದರಲ್ಲಿ ಅರ್ಥವೇ ಇಲ್ಲ. ಇದಕ್ಕೆ ನೆಪವೂ ಇಲ್ಲ. ಶಾಲೆಗಳನ್ನು ತೆರೆಯುವುದಕ್ಕೂ ಕೊರೋನಾ ಹರುಡುವುದಕ್ಕೂ ಸಂಬಂಧ ಇಲ್ಲ ಎಂದು ಪಿಟಿಐ ಸುದ್ದಿಸಂಸ್ಥೆಗೆ ವಾಷಿಂಗ್ಟನ್‌ನಿಂದ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಶಾಲೆಗಳನ್ನು ತೆರೆಯುವುದರಿಂದ ಮಕ್ಕಳ ಆರೋಗ್ಯ ಮೇಲಾಗುವ ಪರಿಣಾಮ ಕಡಿಮೆ. ಆದರೆ ಶಾಲೆ ಬಂದ್ ಮಾಡುವುದರಿಂದ ಆಗುವ ನಷ್ಟಬಲು ಅಧಿಕ. ಹಲವು ದೇಶಗಳಲ್ಲಿ ಶಾಲೆ ಬಂದ್ ಆಗಿದ್ದಾಗಲೂ ಕೊರೋನಾ ಅಲೆಗಳು ಸೃಷ್ಟಿಯಾಗಿದ್ದವು. ಇದರರ್ಥ ಕೊರೋನಾ ಉಬ್ಬರದ ಹಿಂದೆ ಶಾಲೆಗಳ ಪಾತ್ರ ಇಲ್ಲ ಎಂಬುದಾಗಿದೆ ಎಂದು ಹೇಳಿದ್ದಾರೆ.
ಮಕ್ಕಳಿಗೆ ಲಸಿಕೆ ನೀಡಿದ ಬಳಿಕವೇ ಶಾಲೆ ಆರಂಭಿಸುತ್ತೇವೆ ಎಂದು ಯಾವುದೇ ದೇಶವೂ ಹೇಳಿಲ್ಲ. ಏಕೆಂದರೆ, ಅದರ ಹಿಂದೆ ಯಾವುದೇ ವಿಜ್ಞಾನ ಇಲ್ಲ. ಶಾಲೆಗಳನ್ನು ಬಂದ್ ಮಾಡುವುದರಿಂದ ಆಗುವ ಪರಿಣಾಮ ಹಿಂದೆ ಊಹಿಸಿದ್ದಕ್ಕಿಂತ ಅಧಿಕವಾಗಿದೆ. ಏಕೆಂದರೆ ಇದು ಕಲಿಕಾ ಬಡತನವನ್ನು ನಿರೀಕ್ಷೆಗೂ ಮೀರಿ ಹೆಚ್ಚಿಸುತ್ತದೆ ಎಂದಿದ್ದಾರೆ.
10ನೇ ವಯಸ್ಸಿಗೆ ಬಂದಾಗ ಒಂದು ಮಗು ಸರಳ ಸಂದೇಶವನ್ನೇ ಓದಲು ಹಾಗೂ ಅರ್ಥ ಮಾಡಿಕೊಳ್ಳಲು ಆಗದಿರುವುದನ್ನು ಕಲಿಕಾ ಬಡತನ ಎನ್ನಲಾಗುತ್ತದೆ. ಇದು ಭಾರತದಲ್ಲಿ ಶೇ.55ರಷ್ಟಿತ್ತು. ಈಗ ಶೇ.70ಕ್ಕೆ ಏರುವ ಸಂಭವವಿದೆ ಎಂದು ಅವರು ವಿವರಿಸಿದ್ದಾರೆ.