Air Pollution| ರಾಷ್ಟ್ರ ರಾಜಧಾನಿ 1 ವಾರ ಶಟ್‌ಡೌನ್: ದೆಹಲಿ ಸ್ಥಿತಿ ಗಂಭೀರ!
* ವಾಯುಮಾಲಿನ್ಯದಿಂದ ಮನೆಯಲ್ಲೂ ಮಾಸ್ಕ್ ಧರಿಸುವಂತಾಗಿದೆ
* ಎಲ್ಲದಕ್ಕೂ ರೈತರನ್ನೇ ದೂರಬೇಡಿ, ಅದು ನಿಮಗೆ ಫ್ಯಾಷನ್ ಆಗಿದೆ
* ಜನರು ಪಟಾಕಿ ಹೊಡೆಯುವಾಗ ಪೊಲೀಸರು ಎಲ್ಲಿದ್ದರು?: ಕೋರ್ಟ್
* ದಿಲ್ಲಿಯಲ್ಲಿ ಉಸಿರಾಡುವುದು 20 ಸಿಗರೆಟ್ ಸೇವನೆಗೆ ಸಮ: ಸರ್ಕಾರ
ನವದೆಹಲಿ(ನ.14): ಸುಪ್ರೀಂಕೋರ್ಟ್ ಟೀಕೆಯ ಬೆನ್ನಲ್ಲೇ ದೆಹಲಿಯ ಆಮ್‌ಆದ್ಮಿ ಸರ್ಕಾರ, ಪರಿಸರ ಮಾಲಿನ್ಯದಿಂದ ಜನರನ್ನು ರಕ್ಷಿಸುವ ಸಲುವಾಗಿ ಹಲವು ತುರ್ತು ಕ್ರಮಗಳನ್ನು ಘೋಷಿಸಿದೆ. ಹಿರಿಯ ಸಚಿವರು ಮತ್ತು ಅಧಿಕಾರಿಗಳ ಜೊತೆ ಶನಿವಾರ ತುರ್ತು ಸಭೆ ನಡೆಸಿದ ಮುಖ್ಯಮಂತ್ರಿ ಕೇಜ್ರಿವಾಲ್, ಸೋಮವಾರದಿಂದ ಜಾರಿಗೆ ಬರುವಂತೆ ಒಂದು ವಾರ ಶಾಲೆಗಳಿಗೆ ರಜೆ, ಸರ್ಕಾರಿ ಸಿಬ್ಬಂದಿಗೆ ಮನೆಯಿಂದಲೇ ಕೆಲಸ, ನಿರ್ಮಾಣ ಚಟುವಟಿಕೆಗೆ 4 ದಿನ ಕಡಿವಾಣ ಮೊದಲಾದ ಕ್ರಮ ಪ್ರಕಟಿಸಿದ್ದಾರೆ. ಈ ಮೂಲಕ 2 ದಿನ ಲಾಕ್ಡೌನ್ ಹೆರುವ ಸುಪ್ರೀಂಕೋರ್ಟ್‌ನ ಸಲಹೆಯನ್ನು ಪರೋಕ್ಷ ರೀತಿಯಲ್ಲಿ ಜಾರಿಗೆ ತರುವ ಘೋಷಣೆ ಮಾಡಿದ್ದಾರೆ.
ಏನೇನು ಕ್ರಮ?
* ಸೋಮವಾರದಿಂದ ಒಂದು ವಾರ ಶಾಲೆಗಳಿಗೆ ರಜೆ ಘೋಷಣೆ
* ಸರ್ಕಾರಿ ನೌಕರರಿಗೆ ಮನೆಯಿಂದಲೇ ಕೆಲಸಕ್ಕೆ ಅವಕಾಶ ಭಾಗ್ಯ
* ಖಾಸಗಿ ಕಂಪನಿಗಳ ಮನೆಯಿಂದಲೇ ಕೆಲಸಕ್ಕೆ ಪ್ರತ್ಯೇಕ ಮಾರ್ಗಸೂಚಿ
* ನ.14ರಿಂದ ನ.17ರವರೆಗೆ ಕಟ್ಟಡ ಚಟುವಟಿಕೆಗಳಿಗೆ ನಿರ್ಬಂಧ
* ಮಾಲಿನ್ಯ ನಿಯಂತ್ರಣಕ್ಕೆ ಕೈ ಜೋಡಿಸುವಂತೆ ನೆರೆ ರಾಜ್ಯಗಳಿಗೆ ಕೋರಿಕೆ
ದೆಹಲಿ ಪರಿಸ್ಥಿತಿ ಗಂಭೀರ
ದೀಪಾವಳಿ ಬಳಿಕ ಕಳೆದೊಂದು ವಾರದಿಂದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯ ವಿಕೋಪಕ್ಕೆ ಹೋಗಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್, ಜನರು ಮನೆಯಲ್ಲೂ ಮಾಸ್ಕ್ ಧರಿಸುವಷ್ಟುಗಾಳಿ ಕೆಟ್ಟಿದೆ ಎಂದು ಆತಂಕ ವ್ಯಕ್ತಪಡಿಸಿದೆ. ಅಲ್ಲದೆ, ಎರಡು ದಿನಗಳ ಕಾಲ ಲಾಕ್‌ಡೌನ್ ಅಥವಾ ಸಂಚಾರ ಬಂದ್ ಮಾಡುವಂತಹ ತಕ್ಷಣದ ತುರ್ತು ಕ್ರಮಗಳನ್ನು ತೆಗೆದುಕೊಳ್ಳುವಂತೆ ಸರ್ಕಾರಗಳಿಗೆ ಸಲಹೆ ಮಾಡಿದೆ.
ಇದೇ ವೇಳೆ, ಪಂಜಾಬ್‌ನಲ್ಲಿ ರೈತರು ಬೆಳೆಯ ಕೂಳೆ ಸುಡುತ್ತಿರುವುದರಿಂದ ಮಾಲಿನ್ಯ ಹೆಚ್ಚಾಗುತ್ತಿದೆ ಎಂಬ ಸರ್ಕಾರಿ ವಕೀಲರ ವಾದಕ್ಕೆ ತೀವ್ರ ಆಕ್ಷೇಪ ತೆಗೆದಿರುವ ನ್ಯಾಯಾಲಯ, ಮಾಲಿನ್ಯಕ್ಕೆ ರೈತರೇ ಕಾರಣ ಎಂದು ದೂರುತ್ತಿದ್ದೀರಿ. ರೈತರ ಕೊಡುಗೆ ಶೇ.70ರಷ್ಟುಇರಬಹುದು ಎಂದು ನಮಗೂ ಅನಿಸುತ್ತದೆ. ಆದರೆ ಉಳಿದ ಮಾಲಿನ್ಯಕ್ಕೆ ಪಟಾಕಿ, ವಾಹನ ಸಂಚಾರ, ಕೈಗಾರಿಕೆ ಹಾಗೂ ಧೂಳಿನ ಕಣಗಳು ಕೂಡ ಕಾರಣ. ವಾಯುಗುಣಮಟ್ಟಸೂಚ್ಯಂಕವನ್ನು 500ರಿಂದ 200ಕ್ಕೆ ಹೇಗೆ ಇಳಿಸುತ್ತೀರಿ ಎಂಬುದನ್ನು ತಿಳಿಸಿ ಎಂದು ತಾಕೀತು ಮಾಡಿದೆ.
ಅರ್ಜಿದಾರರೇ ಆಗಲಿ, ದೆಹಲಿ ಸರ್ಕಾರ ಅಥವಾ ಇನ್ಯಾರೇ ಆಗಲಿ ವಾಯುಮಾಲಿನ್ಯಕ್ಕೆ ರೈತರನ್ನು ದೂಷಿಸುವುದು ಫ್ಯಾಷನ್ ಆಗಿಬಿಟ್ಟಿದೆ. ಕಳೆದ ಏಳು ದಿನಗಳಿಂದ ದೆಹಲಿಯಲ್ಲಿ ಪಟಾಕಿಯನ್ನು ಯಾವ ರೀತಿ ಸಿಡಿಸಲಾಗುತ್ತಿದೆ ಎಂಬುದನ್ನು ನೋಡಿದ್ದೀರಾ? ದೆಹಲಿ ಪೊಲೀಸರು ಏನು ಮಾಡುತ್ತಿದ್ದರು? ಎಂದು ಕಿಡಿಕಾರಿದೆ.
ಇದೇ ವೇಳೆ, ದೆಹಲಿಯಲ್ಲಿ ವಾಯುಗುಣಮಟ್ಟಹಾಳಾಗಿರುವುದನ್ನು ಒಪ್ಪಿಕೊಂಡಿರುವ ರಾಜ್ಯ ಸರ್ಕಾರ, ದೆಹಲಿಯಲ್ಲಿ ಈಗ ಉಸಿರಾಡಿದರೆ 20 ಸಿಗರೆಟ್ ಸೇದುವುದಕ್ಕೆ ಸಮವಾಗುತ್ತದೆ ಎಂದು ಹೇಳುವ ಮೂಲಕ ಅಲ್ಲಿರುವ ಘೋರ ಪರಿಸ್ಥಿತಿಯನ್ನು ಅನಾವರಣಗೊಳಿಸಿದೆ.
ತಕ್ಷಣದ ಕ್ರಮ ಬೇಕು:
ದೆಹಲಿಯಲ್ಲಿ ಮಾಲಿನ್ಯ ಮಿತಿ ಮೀರಿರುವ ಹಿನ್ನೆಲೆಯಲ್ಲಿ ಕೂಳೆ ಸುಡುವ ರೈತರಿಗೆ ಕೂಳೆಯನ್ನು ತೆಗೆಯುವ ಯಂತ್ರಗಳನ್ನು ಉಚಿತವಾಗಿ ನೀಡಬೇಕು ಎಂದು ಪರಿಸರ ಹೋರಾಟಗಾರ ಆದಿತ್ಯ ದುಬೆ ಹಾಗೂ ಕಾನೂನು ವಿದ್ಯಾರ್ಥಿ ಅಮಾನ್ ಬಂಕಾ ಎಂಬುವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆಯನ್ನು ಶನಿವಾರ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ನೇತೃತ್ವದ ಪೀಠ, ದೆಹಲಿಯಲ್ಲಿ ವಾಯುಮಾಲಿನ್ಯ ಹೆಚ್ಚಳದಿಂದ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕಳವಳ ವ್ಯಕ್ತಪಡಿಸಿತು. ವಾಯು ಗುಣಮಟ್ಟಸುಧಾರಣೆಗೆ ತಕ್ಷಣದ ತ್ವರಿತ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿತು.
ರೈತರು ಬೆಳೆಯ ಕೂಳೆ ಸುಡುವುದೇ ಮಾಲಿನ್ಯಕ್ಕೆ ಕಾರಣ ಎಂದು ಹೇಳಲಾಗದು. ವಾಹನ ಸಂಚಾರ, ಪಟಾಕಿ ಕೂಡ ಕಾರಣ. ಮೊದಲು ದೆಹಲಿಯ ಜನರನ್ನು ನಿಯಂತ್ರಿಸಿ. ಪಟಾಕಿ ಸಿಡಿತ, ವಾಹನ ಮಾಲಿನ್ಯ ನಿಯಂತ್ರಿಸಲು ಪರಿಣಾಮಕಾರಿ ವ್ಯವಸ್ಥೆ ಎಲ್ಲಿದೆ? ಎಂದು ಕೇಳಿತು.
ದೆಹಲಿಯಲ್ಲಿ ಶಾಲೆಗಳು ಪುನಾರಂಭವಾಗಿವೆ. ಹೀಗಾಗಿ ವಾಹನ ಸಂಚಾರ ಸ್ಥಗಿತ ಅಥವಾ ಲಾಕ್‌ಡೌನ್ ಹೇರುವಂತಹ ತಕ್ಷಣದ ಕ್ರಮಗಳನ್ನು ಕೈಗೊಳ್ಳಿ. ಈ ಬಗ್ಗೆ ಸೋಮವಾರದೊಳಗೆ ಉತ್ತರ ನೀಡಿ ಎಂದು ಸೂಚಿಸಿದೆ.