ಅಧಿಕಾರಿ ಹತ್ಯೆ ಆರೋಪ , ತಾಹಿರ್ ಹುಸೇನ್ ಅಮಾನತು ಮಾಡಿದ ಆಪ್!
ದೆಹಲಿ ಗಲಭೆಯಲ್ಲಿ ಗುಪ್ತಚರ ಅಧಿಕಾರಿ ಸೇರಿ 38 ಬಲಿ| ಅಂಕಿತ್ ಸಾವಿಗೆ ಆಪ್ ನಾಯಕ ತಾಹೀರ್ ಹುಸೇನ್ ಕಾರಣ ಎಂದು ಆರೋಪಿಸಿದ ತಂದೆ| ತಾಹೀರ್ ಹುಸೇನ್ ಕಾರ್ಖಾನೆಗೆ ಬೀಗ, FIR ದಾಖಲು| ಬೆಳವಣಿಗೆಗಳ ಬೆನ್ನಲ್ಲೇ ತಾಹೀರ್‌ನನ್ನು ಪಕ್ಷದಿಂದ ಅಮಾನತುಗೊಳಿಸಿದ ಆಪ್
ನವದೆಹಲಿ[ಫೆ.28]: ದೆಹಲಿಯಲ್ಲಿ ಭುಗಿಲೆದ್ದ ಪೌರತ್ವ ಪರ ಹಾಗೂ ವಿರೋಧಿಗಳ ನಡುವಿನ ಹಿಂಸಾಚಾರಕ್ಕೆ ಗುಪ್ತಚರ ಅಧಿಕಾರಿ ಅಂಕಿತ್ ಶರ್ಮಾ ಸೇರಿದಂತೆ ಒಟ್ಟು 38 ಮಂದಿ ಮೃತಪಟ್ಟಿದ್ದಾರೆ. ಈ ಗಲಭೆ ಬೆನ್ನಲ್ಲೇ ಆಪ್ ಕಾರ್ಪೋರೇಟರ್ ತಾಹೀರ್ ಹುಸೇನ್ ಮನೆಯಲ್ಲಿ ಕಲ್ಲು ಹಾಗೂ ಪೆಟ್ರೋಲ್ ಬಾಂಬ್ ಗಳು ಪತ್ತೆಯಾಗಿದ್ದು, ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿತ್ತು. ಅಲ್ಲದೇ ಅಧಿಕಾರಿ ಅಂಕಿತ್ ತಂದೆ, ತಾಹೀರ್ ತನ್ನ ಮಗನನ್ನು ಹತ್ಯೆ ಮಾಡಿದ್ದು ಎಂದು ಆರೋಪಿಸಿದ್ದಾರೆ. ಸದ್ಯ ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ತಾಹಿರ್ ಹುಸೇನ್ ನ್ನು ಆಪ್ ಪಕ್ಷದಿಂದ ಅಮಾನತುಗೊಳಿಸಿದೆ.
ಹೌದು, ಆಪ್ ಮುಖಂಡ ಹಾಗೂ ಪಾಲಿಕೆ ಸದಸ್ಯ ತಾಹೀರ್ ಹುಸೇನ್ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾತನತುಗೊಳಿಸಲಾಗಿದೆ. ಹುಸೇನ್ ಗಲಭೆ ಸಂಬಂಧ ತಮ್ಮ ವಿರುದ್ಧ ಕೇಳಿ ಬಂದ ಆರೋಪಗಳಿಂದ ಮುಕ್ತರಾಗುವವರೆಗೂ ಅವರನ್ನು ಅಮಾನತು ಮಾಡಲಾಗಿದೆ ಎಂದು ಆಮ್ ಆದ್ಮಿ ಪಕ್ಷ ತಿಳಿಸಿದೆ.
"
ದೆಹಲಿ ಹಿಂಸಾಚಾರಕ್ಕೆ ಬಲಿಯಾದವರಲ್ಲಿ ಗುಪ್ತಚರ ದಳದ ಅಧಿಕಾರಿ ಅಂಕಿತ್ ಶರ್ಮಾ ಕೂಡಾ ಒಬ್ಬರು. ಅವರ ಮೃತದೇಹ ಗಲಭೆ ವೇಳೆ ಮೋರಿಯೊಂದರಲ್ಲಿ ಪತ್ತೆಯಾಗಿತ್ತು. ಹೀಗಿರುವಾಗ ಅಂಕಿತ್ ನನ್ನು ತಾಹೀರ್ ಹತ್ಯೆಗೈದಿದ್ದು ಎಂದು ಅವರ ತಂದೆ ಆರೋಪಿಸಿದ್ದರು. ಇದಕ್ಕೆ ಪುಷ್ಠಿ ನೀಡುವಂತೆ ತಾಹೀರ್ ಮನೆಯ ಟೆರೇಸ್ ಮೇಲೆ ಪೆಟ್ರೋಲ್ ಬಾಂಬ್, ಆ್ಯಸಿಡ್ ಪ್ಯಾಕೆಟ್ ಗಳು ಹಾಗೂ ಕಲ್ಲುಗಳು ಪತ್ತೆಯಾಗಿದ್ದವು. ಈ ಬೆಳವಣಿಗೆ ಬೆನ್ನಲ್ಲೇ ಹುಸೇನ್ ಮೇಲೆ ದಯಾಳ್ ಪುರ ಪೊಲೀಸ್ ಠಾಣೆಯಲ್ಲಿ 302 ಸೆಕ್ಷನ್ ನಡಿ ಎಫ್ ಐ ಆರ್ ದಾಳಲಾಗಿತ್ತು. ಖಜೂರಿ ಖಾಸ್ ಪ್ರದೇಶದಲ್ಲಿರುವ ಹುಸೇನ್ ರವರ ಕಾರ್ಖಾನೆಗೆ ಬೀಗ ಜಡಿಯಲಾಗಿತ್ತು.
ಸದ್ಯ ತಾಹಿರ್ ಹುಸೇನ್ ರನ್ನು ಪಕ್ಷದಿಂದ ಅಮಾನತು ಮಾಡಿರುವ ಆಮ್ ಆದ್ಮಿ ಪಾರ್ಟಿ, ಮುಂದೆ ಅವರು ತಪ್ಪಿತಸ್ಥರೆಂದು ಸಾಬೀತಾದರೆ, ದುಪ್ಪಟ್ಟು ಶಿಕ್ಷೆ ನೀಡಬೇಕು. ಅಲ್ಲದೆ ರಾಷ್ಟ್ರೀಯ ಭದ್ರತೆಯ ವಿಷಯದಲ್ಲಿ ಯಾವುದೇ ರಾಜಕೀಯ ಇರಬಾರದು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.