ಗ್ಯಾಂಗ್‌ರೇಪ್ ಆರೋಪಿ ಪೊಲೀಸ್ ಕಸ್ಟಡಿಯಲ್ಲಿ ಸಾವು
17 ವರ್ಷದ ತರುಣಿಯ ಮೇಲೆ ಗ್ಯಾಂಗ್ ರೇಪ್ ಪ್ರಕರಣದಲ್ಲಿ ಬಂಧನಕ್ಕೊಳಗಾದ ಆರೋಪಿಯೊಬ್ಬ ಕೆಲ ಗಂಟೆಯಲ್ಲೇ ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದ್ದಾನೆ.
17 ವರ್ಷದ ತರುಣಿಯ ಮೇಲೆ ಗ್ಯಾಂಗ್ ರೇಪ್ ಪ್ರಕರಣದಲ್ಲಿ ಬಂಧನಕ್ಕೊಳಗಾದ ಆರೋಪಿಯೊಬ್ಬ ಕೆಲ ಗಂಟೆಯಲ್ಲೇ ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದ್ದಾನೆ. ಸೂರತ್‌ನ ಮೋಟಾದ ಬೊರ್ಸಾರಾ ಗ್ರಾಮದಲ್ಲಿ 17 ವರ್ಷದ ತರುಣಿ ಮೇಲೆ ದುರುಳರು ಸಾಮೂಹಿಕ ಅತ್ಯಾಚಾರವೆಸಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಆದರೆ ಅವರಲ್ಲೊಬ್ಬ ಆರೋಪಿ ಗುರುವಾರ ಪೊಲೀಸ್ ಕಸ್ಟಡಿಯಲ್ಲೇ ಸಾವನ್ನಪ್ಪಿದ್ದಾನೆ.
ಮೃತ ವ್ಯಕ್ತಿಯನ್ನು45 ವರ್ಷದ ಶಿವಶಂಕರ್ ಚೌರಾಸಿಯಾ ಎಂದು ಗುರುತಿಸಲಾಗಿದೆ. ಈತನ ಜೊತೆ ಮುನ್ನ ಪಾಸ್ವಾನ್ ಎಂಬ 40 ವರ್ಷದ ಆರೋಪಿಯನ್ನು ಸೂರತ್‌ನ ಮಾಂಡ್ವಿ ನಗರದಲ್ಲಿ ಬಂಧಿಸಲಾಗಿತ್ತು. ಬುಧವಾರ ರಾತ್ರಿ ಪೊಲೀಸರು ಹುಡುಕಾಡುತ್ತಿರುವ ವಿಚಾರ ತಿಳಿದು ಪೊದೆಗಳ ನಡುವೆ ತಪ್ಪಿಸಿಕೊಳ್ಳಲೆತ್ನಿಸಿದಾಗ ಪೊಲೀಸರು ಇವರನ್ನು ಬಂಧಿಸಿದ್ದರು.
ಬಂಧನದ ನಂತರ ಚೌರಾಸಿಯಾ ತನಗೆ ಉಸಿರಾಟಕ್ಕೆ ತೊಂದರೆಯಾಗುತ್ತಿದೆ ಎಂದು ಹೇಳಿದ ನಂತರ ಆತನನ್ನು ಕಮ್ರೇಜ್‌ನಲ್ಲಿರುವ ಸಮುದಾಯ ಆರೋಗ್ಯ ಕೇಂದ್ರಕ್ಕೆ ಪೊಲೀಸರು ಕರೆದುಕೊಂಡು ಹೋಗಿದ್ದರು. ಆದರೆ ಅಲ್ಲಿ ಆತನ ಸ್ಥಿತಿ ಬಿಗಾಡಾಯಿಸಿದ್ದು, ಅಲ್ಲೇ ಆತ ಸತ್ತು ಹೋಗಿದ್ದಾನೆ. ಚೌರಾಸಿಯಾ ಹಾಗೂ ಪಾಸ್ವಾನ್ ಇಬ್ಬರನ್ನು ಬಂಧಿಸಿ ಸ್ಥಳೀಯ ಕ್ರೈಂ ಬ್ರಾಂಚ್ ಪೊಲೀಸ್ ಠಾಣೆಯಲ್ಲಿ ಇಡಲಾಗಿತ್ತು. ಮರಣೋತ್ತರ ಪರೀಕ್ಷೆ ನಂತರ ಆತನ ಸಾವಿಗೆ ಕಾರಣ ಏನು ಎಂದು ತಿಳಿಯಲಿದೆ ಸೂರತ್‌ನ ಐಜಿಪಿ ಪ್ರೇಮ್ ವಿರ್ ಸಿಂಗ್ ಹೇಳಿದ್ದಾರೆ.
ಚೌರಾಸಿಯಾಗೆ ಅಪರಾಧ ಹಿನ್ನೆಲೆ ಇತ್ತು. ಹೀಗಾಗಿ ಒಬ್ಬಂಟಿಯಾಗಿ ಜೀವಿಸುತ್ತಿದ್ದ ಈತ ಆಗಾಗ ತನ್ನ ವಾಸ ಸ್ಥಾನವನ್ನು ಬದಲಾಯಿಸುತ್ತಿದ್ದ. 2017ರಲ್ಲಿ ಅಂಕಲೇಶ್ವರದಲ್ಲಿ ನಡೆದ ಭೀಕರ ಕೊಲೆ ಪ್ರಕರಣದಲ್ಲೂ ಈತ ಭಾಗಿಯಾಗಿದ್ದ. ಬರೀ ಇಷ್ಟೇ ಅಲ್ಲದೇ ಈತ ಹಲವಾರು ಕ್ರಿಮಿನಲ್ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ. ಮಂಗಳವಾರ ರಾತ್ರಿ ಬೈಕ್‌ನಲ್ಲಿ ಬಂದ ಈ ಆರೋಪಿ ಹಾಗೂ ಇನ್ನಿಬ್ಬರು, ಮೋಟಾ ಬರ್ಸಾರದ ಬಳಿ ಈ 17 ವರ್ಷದ ಯುವತಿ ತನ್ನ ಸ್ನೇಹಿತನ ಜೊತೆ ಇರುವುದನ್ನು ನೋಡಿದ್ದಾರೆ. ಅಲ್ಲದೇ ಅವರನ್ನು ಇಲ್ಲಿ ಏಕೆ ನಿಂತಿದ್ದೀರಿ ಎಂದು ಪ್ರಶ್ನಿಸಿ ಇಬ್ಬರ ಮೇಲೂ ಹಲ್ಲೆ ಮಾಡಿ ಹುಡುಗಿ ಬಳಿ ಇದ್ದ ಚಿನ್ನದ ಸರವನ್ನು ಕಿತ್ತುಕೊಂಡಿದ್ದಾರೆ. ಅಲ್ಲದೇ ಯುವತಿಯ ಸ್ನೇಹಿತನ ಬಟ್ಟೆ ಬಿಚ್ಚಿ ಬೆತ್ತಲೆಗೊಳಿಸಿದ್ದಾರೆ. ಅಲ್ಲದೇ ನಿಮ್ಮಿಬ್ಬರ ಫೋಟೋಗಳನ್ನು ವೈರಲ್ ಮಾಡುವುದಾಗಿ ಹೇಳಿ ಬ್ಲ್ಯಾಕ್‌ಮೇಲ್ ಶುರು ಮಾಡಿದ್ದಾರೆ.
ಈ ವೇಳೆ ಯುವತಿ ಇವರಿಂದ ತಪ್ಪಿಸಿಕೊಳ್ಳಲು ಸಮೀಪದ ಹೊಲಕ್ಕೆ ಓಡಿದ್ದು, ಆರೋಪಿಗಳಲ್ಲಿ ಓರ್ವ ಆಕೆಯನ್ನು ಹಿಂಬಾಲಿಸಿದ್ದಾನೆ. ಈ ವೇಳೆ ಯುವತಿಯ ಸ್ನೇಹಿತ ಅಲ್ಲಿಂದ ಪರಾರಿಯಾಗಿದ್ದರೆ, ಇತ್ತ ಆಕೆಯ ಮೇಲೆ ಈ ಮೂವರು ದುರುಳರು ಅತ್ಯಾಚಾರವೆಸಗಿದ್ದಾರೆ.