ಸ್ವದೇಶಿ ಗೋ ಹತ್ಯೆ ನಿಷೇಧ ಆದೇಶಕ್ಕೆ ಸುಪ್ರೀಂ ನಕಾರ: ದೇಶೀಯ ಗೋತಳಿ ಉಳಿಸುವ ವಿಷಯ ನಿರ್ಣಯ ಶಾಸಕಾಂಗದ್ದು ಎಂದ ಕೋರ್ಟ್
ಇಂಥದ್ದೇ ನಿರ್ದಿಷ್ಟ ಕಾನೂನು ಜಾರಿ ಮಾಡಿ ಎಂದು ತಾನು ಶಾಸಕಾಂಗಕ್ಕೆ ಸೂಚಿಸಲಾಗದು. ಹೀಗಾಗಿ ಸ್ವದೇಶಿ ಗೋತಳಿ ನಿಷೇಧ ವಿಷಯದಲ್ಲಿ ತಾನು ಯಾವುದೇ ನಿರ್ದೇಶನ ನೀಡುವುದಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ.
ನವದೆಹಲಿ (ಜುಲೈ 19, 2023) : ದೇಶೀಯ ಗೋತಳಿಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಆ ತಳಿಯ ಹತ್ಯೆ ನಿಷೇಧಿಸುವುದು ಶಾಸಕಾಂಗದ ವಿಷಯವೇ ಹೊರತೂ ಇದರಲ್ಲಿ ತಾನು ಮಧ್ಯಪ್ರವೇಶ ಮಾಡಲಾಗದು ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ. ಜೊತೆಗೆ ಇಂಥದ್ದೇ ನಿರ್ದಿಷ್ಟ ಕಾನೂನು ಜಾರಿ ಮಾಡಿ ಎಂದು ತಾನು ಶಾಸಕಾಂಗಕ್ಕೆ ಸೂಚಿಸಲಾಗದು. ಹೀಗಾಗಿ ಸ್ವದೇಶಿ ಗೋತಳಿ ನಿಷೇಧ ವಿಷಯದಲ್ಲಿ ತಾನು ಯಾವುದೇ ನಿರ್ದೇಶನ ನೀಡುವುದಿಲ್ಲ ಎಂದು ಹೇಳಿದೆ. ಆದರೆ ಈ ಕುರಿತು ಅರ್ಜಿದಾರರು ಸೂಕ್ತ ರಾಜ್ಯ ಸರ್ಕಾರಗಳಿಗೆ ಮನವಿ ಸಲ್ಲಿಸಬಹುದು ಎಂದು ಹೇಳಿದೆ.
ಏನಿದು ಪ್ರಕರಣ?:
ಅವನತಿಯ ಅಂಚಿನಲ್ಲಿರುವ ದೇಶೀಯ ಗೋ ಸಂತತಿ ಉಳಿಸಿ, ಸಂರಕ್ಷಿಸಲು ಸರ್ಕಾರಗಳಿಗೆ ಸೂಚಿಸಬೇಕು/ ದೇಶೀಯ ಗೋ ತಳಿಗಳ ರಕ್ಷಣೆಗಾಗಿ ರಾಷ್ಟ್ರೀಯ ಗೋಕುಲ್ ಮಿಷನ್ ಜಾರಿ ಮಾಡಬೇಕು/ ಮಿಶ್ರತಳಿ ಅಭಿವೃದ್ಧಿಗಾಗಿ ಭಾರತೀಯ ಗೋವುಗಳ ಜೊತೆಗೆ ವಿದೇಶಿ ತಳಿಗಳನ್ನು ಸಂಯೋಗದ ಮೇಲೆ ನಿಯಂತ್ರಣ ಹೇರಬೇಕು/ ಹಾಲು ಕೊಡುವ ದೇಶೀಯ ಗೋವು ಸಂತತಿ ಹತ್ಯೆ ನಿಷೇಧಿಸಬೇಕು/ ಮಿಶ್ರತಳಿ ಮಾಡದೆಯೇ ದೇಶೀಯ ಗೋವುಗಳಲ್ಲಿ ಹಾಲು ಉತ್ಪಾದನೆ ಹೆಚ್ಚಳಕ್ಕೆ ಸಂಶೋಧನೆ ನಡೆಸಲು ಸರ್ಕಾರಗಳಿಗೆ ಸೂಚಿಸಬೇಕು ಎಂದು ಅರ್ಜಿದಾರರು ಈ ಹಿಂದೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಮುಂದೆ ಅರ್ಜಿ ಸಲ್ಲಿಸಿದ್ದರು.
ಇದನ್ನು ಓದಿ: Breaking: ಮೋದಿ ಸರ್‌ನೇಮ್ ಕೇಸ್: ಗುಜರಾತ್ ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್ ಮೊರೆ ಹೋದ ರಾಹುಲ್ ಗಾಂಧಿ
ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಜಾನುವಾರು ನೀತಿ ಮತ್ತು ವಿವಿಧ ರಾಜ್ಯಗಳಲ್ಲಿ ಕಾಯ್ದೆಗಳನ್ನು ಪರಿಶೀಲಿಸಿದ್ದ ನ್ಯಾಯಾಧಿಕರಣವು, ಈ ವಿಷಯದಲ್ಲಿ ನಿರ್ದಿಷ್ಟ ಆದೇಶ ಹೊರಡಿಸುವ ಅವಶ್ಯಕತೆ ಇಲ್ಲ ಎಂದಿತ್ತು. ಈ ಹಿನ್ನೆಲೆಯಲ್ಲಿ ಅರ್ಜಿದಾರರು ಸುಪ್ರೀಂಕೋರ್ಟ್‌ಗೆ ಮೊರೆ ಹೋಗಿದ್ದರು. ಈ ಹಿನ್ನೆಲೆಯಲ್ಲಿ 2019ರಲ್ಲೇ ಸುಪ್ರೀಂಕೋರ್ಟ್ ರಾಜ್ಯಗಳಿಗೆ ಈ ಕುರಿತು ನೋಟಿಸ್ ಜಾರಿ ಮಾಡಿತ್ತು. ಅದರ ಬಳಿಕ ವಿಚಾರಣೆ ಹಂತದಲ್ಲಿ ವಿವಿಧ ರಾಜ್ಯಗಳು ಇಂಥ ಗೋ ಸಂತತಿ ರಕ್ಷಣೆಗೆ ಹಲವು ಕ್ರಮಗಳನ್ನು ಕೈಗೊಂಡಿದ್ದವು.
ಈ ಅಂಶಗಳನ್ನೆಲ್ಲಾ ಪರಿಗಣಿಸಿದ ನ್ಯಾ.ಎ.ಎಸ್.ಓಕಾ ಮತ್ತು ನ್ಯಾ.ಸಂಜಯ್ ಕರೋಲ್ ಅವರನ್ನೊಳಗೊಂಡ ನ್ಯಾಯಪೀಠವು ನ್ಯಾಯಾಧಿರಣದ ಆದೇಶ ಎತ್ತಿಹಿಡಿದಿದೆ. ಜೊತೆಗೆ ಈ ವಿಷಯದಲ್ಲಿ ಯಾವುದೇ ನಿರ್ಣಯ ಕೈಗೊಳ್ಳುವ ಅಧಿಕಾರ ಶಾಸಕಾಂಗಕ್ಕಿದೆ. ಶಾಸಕಾಂಗಕ್ಕೆ ಇಂಥದ್ದೇ ನಿರ್ದಿಷ್ಟ ಕಾನೂನು ರೂಪಿಸಿ ಎಂದು ತಾನು ಹೇಳಲಾಗದು. ಹೀಗಾಗಿ ಅರ್ಜಿದಾರರು ಕೋರಿದಂತೆ ಯಾವುದೇ ನಿರ್ದೇಶನಗಳನ್ನು ತಾನು ಹೊರಡಿಸಲಾಗದು. ಅರ್ಜಿದಾರರು ಈ ವಿಷಯದಲ್ಲಿ ನೇರವಾಗಿ ರಾಜ್ಯ ಸರ್ಕಾರಗಳಿಗೆ ಮನವಿ ಸಲ್ಲಿಸಬಹುದು ಎಂದು ಹೇಳಿ ಅರ್ಜಿಯನ್ನು ಇತ್ಯರ್ಥಪಡಿಸಿದೆ.
ಇದನ್ನೂ ಓದಿ: ಕಾಶ್ಮೀರಕ್ಕೆ ವಾಪಸಾಗುತ್ತಾ 370ನೇ ವಿಧಿ? ಜುಲೈ 11ರಿಂದ ಸುಪ್ರೀಂ ಸಾಂವಿಧಾನಿಕ ಪೀಠದಲ್ಲಿ ವಿಚಾರಣೆ