ನವದೆಹಲಿ[ಫೆ.15]: ನಿರ್ಭಯಾ ಗ್ಯಾಂಗ್‌ರೇಪ್‌ ಹಾಗೂ ಕೊಲೆ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ನಾಲ್ವರು ದೋಷಿಗಳಲ್ಲಿ ಒಬ್ಬನಾದ ವಿನಯ್‌ ಶರ್ಮಾನ ಕೊನೆಯ ಕಾನೂನು ಹೋರಾಟ ಅಂತ್ಯಗೊಂಡಿದೆ. ಕ್ಷಮಾದಾನ ಕೋರಿಕೆ ವಜಾ ಪ್ರಶ್ನಿಸಿ ಆತ ಸಲ್ಲಿಸಿದ್ದ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯ ಶುಕ್ರವಾರ ತಿರಸ್ಕರಿಸಿದೆ.

ನ್ಯಾ. ಆರ್‌. ಭಾನುಮತಿ, ನ್ಯಾ. ಅಶೋಕ್‌ ಭೂಷಣ್‌ ಹಾಗೂ ನ್ಯಾ. ಎ.ಎಸ್‌. ಬೋಪಣ್ಣ ಅವರಿದ್ದ ಪೀಠವು ಅರ್ಜಿ ವಜಾ ಮಾಡಿತು. ಕ್ಷಮಾದಾನ ಅರ್ಜಿ ತಿರಸ್ಕಾರ ಆಗಿದ್ದು ಸರಿಯಿಲ್ಲ ಎಂಬ ತನ್ನ ವಾದಕ್ಕೆ ವಿನಯ್‌ ಸಕಾರಣಗಳನ್ನು ನೀಡಿಲ್ಲ ಎಂದು ಪೀಠ ಹೇಳಿತು.

ಮತ್ತೆ ನಿರ್ಭಯಾ ದೋಷಿ ಪೀಕಲಾಟ, ರಾಷ್ಟ್ರಪತಿ ವಿರುದ್ಧ ಸುಪ್ರೀಂಗೆ ಅರ್ಜಿ!

‘ರಾಷ್ಟ್ರಪತಿ ಮುಂದೆ ಎಲ್ಲ ಸಂಬಂಧಿತ ದಾಖಲೆಗಳನ್ನು ಇಡಲಾಗಿತ್ತು. ಇವನ್ನು ಪರಿಶೀಲಿಸಿಯೇ ರಾಷ್ಟ್ರಪತಿಗಳು ಕ್ಷಮಾದಾನ ಕೋರಿಕೆ ತಿರಸ್ಕರಿಸಿದ್ದಾರೆ. ಹೀಗಾಗಿ ಇದನ್ನು ಅವರ ನಿರ್ಧಾರವನ್ನು ಮರುಪರಿಶೀಲನೆಗೆ ಒಳಪಡಿಸಲು ಸಕಾರಣಗಳಿಲ್ಲ’ ಎಂದು ಕೋರ್ಟ್‌ ಅಭಿಪ್ರಾಯಪಟ್ಟಿದೆ.

ಇದಲ್ಲದೆ, ‘ನನಗೆ ಮಾನಸಿಕ ಕಾಯಿಲೆಯಿದೆ. ಈ ಸಂಗತಿಯನ್ನು ರಾಷ್ಟ್ರಪತಿ ಪರಿಗಣಿಸಿಲ್ಲ. ಜೈಲಲ್ಲಿ ನನ್ನ ಮೇಲೆ ದೌರ್ಜನ್ಯ ಎಸಗಲಾಗಿದೆ’ ಎಂದು ಶರ್ಮಾ ಹೇಳಿದ್ದನ್ನು ಕೂಡ ತಳ್ಳಿಹಾಕಿದ ಕೋರ್ಟ್‌, ‘ವೈದ್ಯಕೀಯ ವರದಿಯಲ್ಲಿ ಶರ್ಮಾ ಸರಿಯಾಗೇ ಇದ್ದಾನೆ ಎಂದು ತಿಳಿಸಲಾಗಿದೆ’ ಎಂದಿತು.

ವಿನಯ್‌ ಕ್ಷಮಾದಾನ ಅರ್ಜಿ ವಜಾ, ಆಟ ಮುಂದುವರೆಸಿದ ಮತ್ತೊಬ್ಬ ದೋಷಿ!

ಈಗಾಗಲೇ ದೋಷಿಗಳಾದ ಮುಕೇಶ್‌, ಅಕ್ಷಯ್‌ ಹಾಗೂ ವಿನಯ್‌ನ ಕ್ಷಮಾದಾನ ಅರ್ಜಿಗಳು ತಿರಸ್ಕಾರಗೊಂಡಿದ್ದು, ಅವರ ಹೋರಾಟದ ಹಾದಿ ಮುಗಿದಂತಾಗಿದೆ. ಆದರೆ ಕೊನೆಯ ದೋಷಿ ಪವನ್‌ ಗುಪ್ತಾ, ಕ್ಯುರೇಟಿವ್‌ ಅರ್ಜಿ ಹಾಗೂ ಕ್ಷಮಾದಾನದ ಎರಡೂ ಅವಕಾಶಗಳನ್ನು ಇನ್ನೂ ಮುಕ್ತವಾಗಿ ಇರಿಸಿಕೊಂಡಿದ್ದಾನೆ.