Asianet Suvarna News Asianet Suvarna News

ಅಧಿಕಾರಿಗೆ ಇಷ್ಟು ಧೈರ್ಯವಿದ್ದರೆ ಸರ್ವೋಚ್ಚ ನ್ಯಾಯಾಲಯ ಮುಚ್ಚಿ ಬಿಡಿ: ಸುಪ್ರೀಂ ಕೆಂಡ

ಶುಲ್ಕ ಪಾವತಿಸದ ಕಂಪನಿಗಳಿಗೂ ಚಾಟಿ, ನ್ಯಾಯಾಂಗ ನಿಂದನೆ ಕೇಸ್ ಎಚ್ಚರಿಕೆ |10000 ಕೋಟಿ ಪಾವತಿ ಸುವುದಾಗಿ ಏರ್‌ಟೆಲ್‌ನಿಂದ ಮಾಹಿತಿ|55000 ಕೋಟಿ ರು. ಪೈಕಿ ಫೆ.20ರೊಳಗೆ 10000 ಕೋಟಿ ರು. ಪಾವತಿಸುವುದಾಗಿ ಭಾರ್ತಿ ಏರ್‌ಟೆಲ್ ಹೇಳಿದೆ|

Supreme Court Angry on Central Government Officer
Author
Bengaluru, First Published Feb 15, 2020, 8:53 AM IST

ನವದೆಹಲಿ[ಫೆ.15]: ದೂರಸಂಪರ್ಕ ಕಂಪನಿಗಳಿಂದ 1.47 ಲಕ್ಷ ಕೋಟಿ ರು. ‘ಎಜಿಆರ್’ ಶುಲ್ಕ ವಸೂಲಿ ಮಾಡಬೇಕು ಎಂಬ ತನ್ನ ಆದೇಶಕ್ಕೆ ಕೇಂದ್ರ ಸರ್ಕಾರದ ಅಧಿಕಾರಿಯೊಬ್ಬರು ತಡೆ ನೀಡಿರುವುದು ಸುಪ್ರೀಂಕೋರ್ಟಿನ ರೋಷಾವೇಶಕ್ಕೆ ಕಾರಣವಾಗಿದೆ. 

ಸರ್ವೋಚ್ಚ ನ್ಯಾಯಾಲಯದ ಆದೇಶಕ್ಕೆ ಒಬ್ಬ ಅಧಿಕಾರಿ ಅದು ಹೇಗೆ ತಡೆ ನೀಡುತ್ತಾನೆ? ಇದೇನಾ ದೇಶದ ಕಾನೂನು? ನ್ಯಾಯಾಲಯಗಳನ್ನು ನಡೆಸಿಕೊಳ್ಳುವ ರೀತಿಯಾ ಇದು? ಎಂದು ಕೆಂಡಕಾರಿರುವ ನ್ಯಾಯಾಲಯ, ಒಬ್ಬ ಅಧಿಕಾರಿಗೆ ಅಷ್ಟೊಂದು ಧೈರ್ಯ ಇದೆ ಎಂದಾದರೆ ಸುಪ್ರೀಂ ಕೋರ್ಟನ್ನೇ ಮುಚ್ಚಿಬಿಡಿ. ಈ ದೇಶದಲ್ಲಿ ಇರುವುದು ಒಳ್ಳೆಯದಲ್ಲ, ತೊರೆಯಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದೆ. 

ಗೆಲುವು ಅಪರಾಧ ಹಿನ್ನೆಲೆಯ ಅಭ್ಯರ್ಥಿಗಳ ಮಾನದಂಡವಲ್ಲ: ಸುಪ್ರೀಂಕೋರ್ಟ್!

ಒಬ್ಬ ಅಧಿಕಾರಿ ಈ ರೀತಿ ಆದೇಶ ಹೊರಡಿಸಲು ಆಗದು. ತಪ್ಪಾಗಿದೆ ಕ್ಷಮಿಸಿಬಿಡಿ ಎಂದು ಸಾಲಿಸಿಟರ್ ಜನರಲ್ ಅವರು ಮನವಿ ಮಾಡಿಕೊಂಡರೂ ನ್ಯಾಯಾಲಯದ ಕೋಪ ತಣಿದಿಲ್ಲ. ಅಧಿಕಾರಿ ವಿರುದ್ಧ ಯಾಕೆ ಕ್ರಮ ಕೈಗೊಳ್ಳಬಾರದು ಎಂದು ಕೇಳಿದೆ.

ಅಲ್ಲದೆ ಆದೇಶ ಹೊರಡಿಸಿ ಹಲವು ದಿನಗಳಾದರೂ 1.47 ಲಕ್ಷ ಕೋಟಿ ರು. ಪೈಕಿ ನಯಾಪೈಸೆ ಪಾವತಿಸದ ಕಾರಣ ತಮ್ಮ ವಿರುದ್ಧ ಏಕೆ ನ್ಯಾಯಾಂಗ ನಿಂದನೆ ಪ್ರಕ್ರಿಯೆ ನಡೆಸಬಾರದು ಎಂದು ದೂರಸಂಪರ್ಕ ಕಂಪನಿಗಳ ಉನ್ನತ ಅಧಿಕಾರಿಗಳನ್ನು ಪ್ರಶ್ನಿಸಿದೆ. ಸರ್ವೋಚ್ಚ ನ್ಯಾಯಾಲಯದ ಕೆಂಗಣ್ಣಿಗೆ ಗುರಿಯಾಗುತ್ತಿದ್ದಂತೆ ಕೇಂದ್ರ ಸರ್ಕಾರ, ತೀರ್ಪು ಜಾರಿ ಮಾಡದಂತೆ ಅಧಿಕಾರಿಯೊಬ್ಬರು ಹೊರಡಿಸಿದ್ದ ಆದೇಶವನ್ನು ಹಿಂಪಡೆದಿದೆ. ಅಲ್ಲದೆ ಶುಕ್ರವಾರ ರಾತ್ರಿ 11.59 ರೊಳಗೆ ಪೂರ್ತಿ 1.47 ಲಕ್ಷ ಕೋಟಿ ರು. ಹಣ ಪಾವತಿ ಮಾಡಬೇಕು ಎಂದು ಟೆಲಿಕಾಂ ಕಂಪನಿಗಳಿಗೆ ಅಸಾಧ್ಯ ಎನ್ನಬಹುದಾದ ಆದೇಶವೊಂದನ್ನು ಹೊರಡಿಸಿದೆ. 

ಈ ನಡುವೆ ಸರ್ಕಾರದ ಆದೇಶಕ್ಕೆ ಪ್ರತಿಕ್ರಿಯೆ ನೀಡಿರುವ ಭಾರ್ತಿ ಏರ್‌ಟೆಲ್ ತಾನು ಪಾವತಿಸಬೇಕಿರುವ 55000 ಕೋಟಿ ರು. ಪೈಕಿ ಫೆ.20ರೊಳಗೆ 10000 ಕೋಟಿ ರು. ಪಾವತಿಸುವುದಾಗಿ ಹೇಳಿದೆ. ಅಲ್ಲದೆ ಬಾಕಿ ಮೊತ್ತವನ್ನು ಮುಂದಿನ ವಿಚಾರಣೆಯೊಳಗೆ ಪಾವತಿಸುವುದಾಗಿ ಭರವಸೆ ನೀಡಿದೆ. 

ಆಗಿದ್ದೇನು?: 

ದೂರಸಂಪರ್ಕ ಕಂಪನಿಗಳು ಕೇಂದ್ರ ಸರ್ಕಾರಕ್ಕೆ 1.46 ಲಕ್ಷ ಕೋಟಿ ರು. ಎಜಿಆರ್ (ಅಡ್ಜಸ್ಟೆಡ್ ಗ್ರಾಸ್ ರೆವಿನ್ಯೂ- ದೂರಸಂಪರ್ಕ ಕಂಪನಿಗಳು ಗಳಿಸುವ ಒಟ್ಟು ಆದಾಯದಲ್ಲಿ ಕೇಂದ್ರ ಸರ್ಕಾರಕ್ಕೆ ಕೊಡಬೇಕಿರುವ ಪಾಲು) ನೀಡಬೇಕು ಎಂದು ಜ.16ರಂದು ಸುಪ್ರೀಂಕೋರ್ಟ್ ಸೂಚಿಸಿತ್ತು. ಈ ನಡುವೆ, ದೂರಸಂಪರ್ಕ ಕಂಪನಿಗಳಿಗೆ ಈ ಶುಲ್ಕ ಪಾವತಿಸುವಂತೆ ಸೂಚನೆ ನೀಡಬಾರದು. ಯಾವುದೇ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬಾರದು ಎಂದು ದೂರಸಂಪರ್ಕ ಇಲಾಖೆಯ ಅಧಿಕಾರಿಯೊಬ್ಬರು ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಹಾಗೂ ಇನ್ನಿತರೆ ಸಂವಿಧಾನಿಕ ಸಂಸ್ಥೆಗಳಿಗೆ ಪತ್ರ ಬರೆದಿದ್ದರು. 

ಏತನ್ಮಧ್ಯೆ, ಎಜಿಆರ್ ಪಾವತಿಸಲು ತಮಗೆ ಸಮಯಾವಕಾಶ ನೀಡಬೇಕು ಎಂದು ವೊಡಾಫೋನ್ ಐಡಿಯಾ, ಭಾರತಿ ಏರ್‌ಟೆಲ್, ಟಾಟಾ ಟೆಲಿಸರ್ವೀಸಸ್ ಕಂಪನಿಗಳು ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿದ್ದವು. ಶುಕ್ರವಾರ ಈ ಅರ್ಜಿಯ ವಿಚಾರಣೆ ವೇಳೆ ಅಧಿಕಾರಿಯ ಆದೇಶ ತಿಳಿದು ನ್ಯಾ| ಅರುಣ್ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠ ಕೆಂಡಕಾರಿತು. 

‘ಸುಪ್ರೀಂಕೋರ್ಟ್ ಆದೇಶಕ್ಕೇ ಅಧಿಕಾರಿ ತಡೆ ನೀಡುತ್ತಿದ್ದಾನೆ. ಸುಪ್ರೀಂಕೋರ್ಟ್ ಮೇಲೆ ಆತ ಕೂತಿದ್ದಾನೆ? ಇದು ಹೇಗೆ? ದೇಶದಲ್ಲಿ ಇರುವುದು ಒಳ್ಳೆಯದಲ್ಲ. ಹೊರಡಬೇಕು. ಆದೇಶ ಹೊರಡಿಸಿದ ಅಧಿಕಾರಿ ವಿರುದ್ಧ ನ್ಯಾಯಾಂಗ ನಿಂದನೆ ಆರಂಭಿಸಬೇಕು’ ಎಂದು ಪೀಠ ಕಿಡಿಕಾರಿತು. ಟೆಲಿಕಾಂ ಕಂಪನಿಗಳ ವ್ಯವಸ್ಥಾಪಕ ನಿರ್ದೇಶಕರು ಹಾಗೂ ನಿರ್ದೇಶಕರು ಮುಂದಿನ ವಿಚಾರಣೆ ದಿನವಾದ ಮಾ.17ರಂದು ಹಾಜರಿರಬೇಕು. ಅಷ್ಟರೊಳಗೆ ಟೆಲಿಕಾಂ ಕಂಪನಿಗಳು ತಮ್ಮ ಶುಲ್ಕ ಪಾವತಿಸಿರಬೇಕು ಎಂದು ಆದೇಶಿಸಿತು.

ಏನಿದು ಪ್ರಕರಣ?

1. ಟೆಲಿಕಾಂ ಕಂಪನಿಗಳು 1.46 ಲಕ್ಷ ಕೋಟಿ ರು. ಎಜಿಆರ್ ಶುಲ್ಕ ಪಾವತಿಸುವಂತೆ ಕೋರ್ಟ್‌ನಿಂದ ಈ ಹಿಂದೆ ತೀರ್ಪು

2.  ಆದರೆ ಶುಲ್ಕ ಪಾವತಿಸ ದಂತೆ ಟೆಲಿಕಾಂ ಇಲಾಖೆ ಅಧಿಕಾರಿ ಆದೇಶ 

3. ಈ ಆದೇಶಕ್ಕೆ ಕೋರ್ಟ್ ಕೆಂಡಾಮಂಡಲ. ಹಿಗ್ಗಾ ಮುಗ್ಗಾ ತರಾಟೆ. 

4. ತರಾಟೆಗೆ ಬೆಚ್ಚಿ ಆದೇಶ ವಾಪಸ್ ಪಡೆದ ಅಧಿಕಾರಿ 

5. ಹಣ ಪಾವತಿಸಲು ಟೆಲಿಕಾಂ ಕಂಪನಿಗಳಿಗೆ ಸೂಚನೆ

Follow Us:
Download App:
  • android
  • ios