Asianet Suvarna News Asianet Suvarna News

ವರುಣಾಸ್ತ್ರ ಟಾರ್ಪೆಡೋ ಯಶಸ್ವಿ ಪ್ರಯೋಗ: ಮೊದಲ ಪ್ರಯತ್ನದಲ್ಲೇ ಗುರಿ ಮುಟ್ಟಿದ ಆಯುಧ

ಭಾರತೀಯ ನೌಕಾಪಡೆ ಮತ್ತು DRDO ದೇಶೀಯವಾಗಿ ಅಭಿವೃದ್ಧಿಪಡಿಸಿದ ಟಾರ್ಪೆಡೋ ವರುಣಾಸ್ತ್ರ ಪ್ರಯೋಗವನ್ನು ಪಶ್ಚಿಮ ಕರಾವಳಿಯ ಸಮುದ್ರದಲ್ಲಿ ಮೊದಲ ಪ್ರಯತ್ನದಲ್ಲೇ ಯಶಸ್ವಿಯಾಗಿ ನಡೆಸಲಾಯಿತು. 

Successful trial of Varunastra Torpedo The weapon hit the target in the first trial akb
Author
First Published Jun 7, 2023, 2:46 PM IST

ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

ಬೆಂಗಳೂರು: ಜೂ6 ರ ಮಂಗಳವಾರದಂದು ಭಾರತೀಯ ನೌಕಾಪಡೆ ಮತ್ತು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಅಂಗಸಂಸ್ಥೆಯಾದ ನೇವಿ ಆ್ಯಂಡ್ ನೇವಲ್ ಸೈನ್ಸಸ್ ಆ್ಯಂಡ್ ಟೆಕ್ನಾಲಜಿಕಲ್ ಲ್ಯಾಬೋರೇಟರಿ (NSTL) ದೇಶೀಯವಾಗಿ ಅಭಿವೃದ್ಧಿ ಪಡಿಸಿದ ಹೆವಿ ವೆಯ್ಟ್ ಟಾರ್ಪೆಡೋ ವರುಣಾಸ್ತ್ರದ (ಹಿಂದೂ ದೇವತೆಯಾದ ವರುಣನ ಹೆಸರಿನ ಪೌರಾಣಿಕ ಆಯುಧದಿಂದ ಹೆಸರು ಪಡೆದಿದೆ) ಯಶಸ್ವಿ ಪ್ರಯೋಗ ನಡೆಸಲಾಯಿತು. ‌ಈ ಪ್ರಯೋಗದಲ್ಲಿ ನೂತನ ಟಾರ್ಪೆಡೋ ಪಶ್ಚಿಮ ಕರಾವಳಿಯಲ್ಲಿನ ತನ್ನ ಗುರಿಯನ್ನು ಯಶಸ್ವಿಯಾಗಿ ಸಮುದ್ರದಲ್ಲಿ ಮುಳುಗಿಸಿತು. ನೀರಿನಾಳದ ಗುರಿಯನ್ನು ಈ ದೇಶೀಯವಾಗಿ ನಿರ್ಮಿಸಿರುವ ಟಾರ್ಪೆಡೋ ಹೊಡೆದುರುಳಿಸಿರುವುದು ಸಮುದ್ರದಾಳದಲ್ಲಿನ ಗುರಿಗಳ ಮೇಲೆ ದಾಳಿ ನಡೆಸುವ ಭಾರತೀಯ ನೌಕಾಪಡೆ ಮತ್ತು ಡಿಆರ್‌ಡಿಓದ ಯೋಜನೆಯಲ್ಲಿ ಮಹತ್ವದ ಮೈಲಿಗಲ್ಲಾಗಿದೆ.

ಭಾರತೀಯ ನೌಕಾಪಡೆ ಬಿಡುಗಡೆಗೊಳಿಸಿರುವ ಎಂಟು ಸೆಕೆಂಡುಗಳ ವೀಡಿಯೋದಲ್ಲಿ ವರುಣಾಸ್ತ್ರ ಟಾರ್ಪೆಡೋ ನೀರಿನಲ್ಲಿ ಮುಳುಗಿದ್ದ ಒಂದು ಪಾಂಟೂನ್ (ಬೋಟ್ ಸೇತುವೆ ಅಥವಾ ತೂಗು ಸೇತುವೆ) ಅನ್ನು ಸಮುದ್ರದಲ್ಲಿ ಹೊಡೆದು ಮುಳುಗಿಸಿದೆ. ಗುರಿಗೆ ಟಾರ್ಪೆಡೋ ಅಪ್ಪಳಿಸಿದ ತಕ್ಷಣವೇ ಈ ಸೇತುವೆ ಸಂಪೂರ್ಣವಾಗಿ ನಾಶಗೊಂಡು, ಅದರ ಹೊಡೆತದ ಕಂಪನದಿಂದ ನೀರಿನಲ್ಲಿ ಅಲೆಗಳೆದ್ದು, ಸಮುದ್ರದ ನೀರು ಮೇಲಕ್ಕೆ ಉಕ್ಕಿತ್ತು.

Odisha Train Accident ದುರಂತ ಸ್ಥಳದಲ್ಲಿ ರಕ್ಷಣಾ ಕಾರ್ಯ ಅಂತ್ಯ, ಭೀಕರ ಅಪಘಾತಕ್ಕೆ 261 ಬಲಿ!

ಭಾರತೀಯ ನೌಕಾಪಡೆಯ ವಕ್ತಾರರು ಭವಿಷ್ಯದ ದೃಷ್ಟಿಯಿಂದ ನೌಕಾಪಡೆ ಸದಾ ಸನ್ನದ್ಧವಾಗಿರಲಿದ್ದು, ಅದಕ್ಕೆ ಆತ್ಮನಿರ್ಭರ ಯೋಜನೆ (Atmanirbhar plan) ಪೂರಕವಾಗಿದೆ. ಇದನ್ನು ವರುಣಾಸ್ತ್ರದ ಯಶಸ್ವಿ ಪ್ರಯೋಗ ಪುಷ್ಟೀಕರಿಸಿದೆ ಎಂದಿದ್ದಾರೆ. ಈ ಅತಿ ಭಾರದ ಟಾರ್ಪೆಡೋವನ್ನು 2016ರಲ್ಲಿ ಪರಿಚಯಿಸಲಾಗಿದ್ದು, ಇದನ್ನು ಯಾವುದೇ ಆ್ಯಂಟಿ ಸಬ್‌ಮರೀನ್ ವಾರ್‌ಫೇರ್ (ASW) ನೌಕೆಯಿಂದ ಪ್ರಯೋಗಿಸಬಹುದು. ಭಾರೀ ಪ್ರತಿರೋಧ ಎದುರಾಗುತ್ತಿರುವ ಸಂದರ್ಭದಲ್ಲೂ ಇದನ್ನು ಪ್ರಯೋಗಿಸಲು ಸಾಧ್ಯವಿದೆ. ವರುಣಾಸ್ತ್ರ ಟಾರ್ಪೆಡೋ ಪ್ರಸ್ತುತ ಭಾರತೀಯ ನೌಕಾಪಡೆಯ ಬತ್ತಳಿಕೆಯಲ್ಲಿರುವ ಅಮೆರಿಕನ್ ಮಾರ್ಕ್ 46 ಟಾರ್ಪೆಡೋಗಳ (American Mark 46 torpedoes) ಬದಲಿಗೆ ಸೇರ್ಪಡೆಗೊಳ್ಳಲಿದೆ.

ವರುಣಾಸ್ತ್ರ ಒಂದು ವೈರ್ - ನಿರ್ದೇಶಿತ, ಆ್ಯಕ್ಟಿವ್ - ಪ್ಯಾಸಿವ್ ಅಕೌಸ್ಟಿಕ್ ಹೋಮಿಂಗ್ ಟಾರ್ಪೆಡೋ ಆಗಿದ್ದು, ಗರಿಷ್ಠ 40 ಕಿಲೋಮೀಟರ್‌ಗಳ ವ್ಯಾಪ್ತಿ ಹೊಂದಿದೆ. ಇದು 600 ಮೀಟರುಗಳಷ್ಟು ಆಳದಲ್ಲಿ ಕಾರ್ಯ ನಿರ್ವಹಿಸಬಲ್ಲದಾಗಿದ್ದು, 250 ಕೆಜಿ ತನಕದ ಸಿಡಿತಲೆಗಳನ್ನು ಒಯ್ಯಬಲ್ಲದು. ಈ ಟಾರ್ಪೆಡೋವನ್ನು ನೀರಿನ ಮೇಲಿನ ನೌಕೆಗಳು, ಸಬ್‌ಮರೀನ್‌ಗಳು ಮತ್ತು ವಿಮಾನಗಳಿಂದ ಉಡಾವಣೆಗೊಳಿಸುವಂತೆ ವಿನ್ಯಾಸಗೊಳಿಸಲಾಗಿದೆ.

ಟಾರ್ಪೆಡೋ ಎಂದರೇನು?

ಟಾರ್ಪೆಡೋ ಒಂದು ಸ್ವಯಂ ಚಾಲಿತ, ನೀರಿನಾಳದ ಕ್ಷಿಪಣಿಯಾಗಿದ್ದು, ಇದನ್ನು ಸಬ್‌ಮರೀನ್, ಹಡಗು ಅಥವಾ ವಿಮಾನದಿಂದ ಪ್ರಯೋಗಿಸಿ, ಶತ್ರುವಿನ ಹಡಗು ಅಥವಾ ಸಬ್‌ಮರೀನ್‌ಗಳನ್ನು ನಾಶಪಡಿಸಬಹುದು. ಇದು ಸಾಮಾನ್ಯವಾಗಿ ಉದ್ದವಾಗಿದ್ದು, ತೆಳ್ಳನೆಯ ಸಿಲಿಂಡರ್ ಆಕಾರದಲ್ಲಿರುತ್ತದೆ. ಇದಕ್ಕೆ ಬಾಲದ ರೆಕ್ಕೆಯಂತಹ ರಚನೆಯೂ ಇರುತ್ತದೆ. ಟಾರ್ಪೆಡೋಗಳನ್ನು ವಿದ್ಯುತ್ ಮೋಟಾರ್ ಅಥವಾ ಸಂಕುಚಿತ ಗಾಳಿ ಚಲಾಯಿಸುತ್ತದೆ. ಇವುಗಳಲ್ಲಿ ವಿವಿಧ ರೀತಿಯ ಸಿಡಿತಲೆಗಳನ್ನು ಬಳಸಬಹುದಾಗಿದ್ದು, ಅದರಲ್ಲಿ ಪ್ರಬಲ ಸ್ಫೋಟಕಗಳು, ಪರಮಾಣು ಶಸ್ತ್ರಾಸ್ತ್ರ ಅಥವಾ ಮೈನ್‌ಗಳೂ ಸೇರಿವೆ.

ಮೇಕ್‌ ಇನ್‌ ಇಂಡಿಯಾ ಫಲ: ದೇಶದಲ್ಲಿ 1 ಲಕ್ಷ ಕೋಟಿ ರು. ಮೌಲ್ಯದ ಶಸ್ತ್ರಾಸ್ತ್ರ ಉತ್ಪಾದನೆ

ಟಾರ್ಪೆಡೋಗಳನ್ನು 19ನೇ ಶತಮಾನದ ಆರಂಭದಿಂದಲೂ ಯುದ್ಧಗಳಲ್ಲಿ ಬಳಸಲಾಗುತ್ತಿದೆ. ಮಹಾಯುದ್ಧಗಳಲ್ಲಿ ಟಾರ್ಪೆಡೋಗಳು ಮಹತ್ವದ ಪಾತ್ರ ನಿರ್ವಹಿಸಿವೆ. ಇಂದಿಗೂ ಅವುಗಳು ಜಗತ್ತಿನಾದ್ಯಂತ ಸಾಕಷ್ಟು ನೌಕಾಪಡೆಗಳ ಪ್ರಮುಖ ಆಯುಧಗಳಾಗಿವೆ.

ಹೆವಿ ವೆಯ್ಟ್ ಟಾರ್ಪೆಡೋ ಸಾಮಾನ್ಯವಾಗಿ ಲೈಟ್ ವೆಯ್ಟ್ ಟಾರ್ಪೆಡೋಗಿಂತ ದೊಡ್ಡದೂ, ಭಾರವೂ ಆಗಿರುತ್ತದೆ. ಇವುಗಳನ್ನು ಸಾಮಾನ್ಯವಾಗಿ ನೀರಿನ ಮೇಲ್ಮೈಯಲ್ಲಿನ ಹಡಗುಗಳು ಮತ್ತು ಸಬ್‌ಮರೀನ್‌ಗಳ ಮೇಲೆ ದಾಳಿ ನಡೆಸಲು ಬಳಸಲಾಗುತ್ತದೆ. ಲೈಟ್ ವೆಯ್ಟ್ ಟಾರ್ಪೆಡೋಗಳನ್ನು ಸಣ್ಣ ಪುಟ್ಟ ಗುರಿಗಳಾದ ಬೋಟ್‌ಗಳು ಮತ್ತು ಮೈನ್‌ಗಳ ಮೇಲೆ ದಾಳಿ ನಡೆಸಲು ಬಳಸಲಾಗುತ್ತದೆ.

ಹೆವಿ ವೆಯ್ಟ್ ಟಾರ್ಪೆಡೋಗಳು

ಹೆವಿ ವೆಯ್ಟ್ ಟಾರ್ಪೆಡೋಗಳಿಗೆ ಸಾಮಾನ್ಯವಾಗಿ ಇಲೆಕ್ಟ್ರಿಕ್ ಮೋಟಾರ್ ಅಥವಾ ಗ್ಯಾಸ್ ಟರ್ಬೈನ್‌ಗಳು ಶಕ್ತಿ ನೀಡುತ್ತವೆ. ಇವುಗಳು ಗರಿಷ್ಠ 50 ನಾಟ್‌ಗಳ ವೇಗದಲ್ಲಿ ಚಲಿಸಬಲ್ಲವು. ಇವುಗಳು ಹಲವು ಮೈಲಿಗಳ ವ್ಯಾಪ್ತಿ ಹೊಂದಿದ್ದು, ಭಾರೀ ಸ್ಫೋಟಕಗಳು, ಪರಮಾಣು ಸಿಡಿತಲೆ ಮತ್ತು ಆ್ಯಂಟಿ ಸಬ್‌ಮರೀನ್ ಸಿಡಿತಲೆ ಸೇರಿದಂತೆ ವಿವಿಧ ಬಗೆಯ ಸಿಡಿತಲೆಗಳನ್ನು ಒಯ್ಯಬಲ್ಲವು.

ಮಾರ್ಕ್ 48 ಟಾರ್ಪೆಡೋ, ವರುಣಾಸ್ತ್ರ ಟಾರ್ಪೆಡೋ, ಹಾಗೂ ಎಫ್-21 ಟಾರ್ಪೆಡೋಗಳು ಹೆವಿ ವೆಯ್ಟ್ ಟಾರ್ಪೆಡೋಗಳಿಗೆ ಕೆಲವು ಉದಾಹರಣೆಗಳಾಗಿವೆ.

ಹೆವಿ ವೆಯ್ಟ್ ಟಾರ್ಪೆಡೋಗಳ ಅನುಕೂಲತೆಗಳು:

ಇವುಗಳು ಲೈಟ್ ವೆಯ್ಟ್ ಟಾರ್ಪೆಡೋಗಳಿಗಿಂತ ಹೆಚ್ಚಿನ ವ್ಯಾಪ್ತಿ ಹೊಂದಿವೆ.

ಇವುಗಳು ಹೆಚ್ಚು ಭಾರದ ಸಿಡಿತಲೆಗಳನ್ನು ಒಯ್ಯಬಲ್ಲವು.

ಇವುಗಳು ಹೆಚ್ಚು ಶಕ್ತಿಶಾಲಿಯಾಗಿದ್ದು, ಗುರಿಯನ್ನು ನಾಶಪಡಿಸಬಲ್ಲವು.

ಹೆವಿ ವೆಯ್ಟ್ ಟಾರ್ಪೆಡೋಗಳ ಅನನುಕೂಲತೆಗಳು:

ಇವುಗಳು ಲೈಟ್ ವೆಯ್ಟ್ ಟಾರ್ಪೆಡೋಗಳಿಗಿಂತ ಹೆಚ್ಚು ಬೆಲೆ ಬಾಳುತ್ತವೆ.

ಇವುಗಳನ್ನು ನಿರ್ವಹಿಸುವುದು ಮತ್ತು ಬಳಸುವುದು ಹೆಚ್ಚು ಕಷ್ಟಕರ.

ಇವುಗಳು ಗಾತ್ರದಲ್ಲಿ ದೊಡ್ಡದು, ಹೆಚ್ಚು ಭಾರವುಳ್ಳವಾಗಿದ್ದು, ಸಾಗಾಟ ನಡೆಸಲು ಮತ್ತು ಉಡಾವಣೆಗೊಳಿಸಲು ಕಷ್ಟಕರ.

ಒಟ್ಟಾರೆಯಾಗಿ, ಹೆವಿ ವೆಯ್ಟ್ ಟಾರ್ಪೆಡೋಗಳು ಶಕ್ತಿಶಾಲಿ ಆಯುಧಗಳಾಗಿದ್ದು, ವಿವಿಧ ರೀತಿಯ ಗುರಿಗಳ ಮೇಲೆ ದಾಳಿ ನಡೆಸಲು ಬಳಕೆಯಾಗುತ್ತವೆ. ಆದರೆ ಅವುಗಳು ಹೆಚ್ಚು ವೆಚ್ಚದಾಯಕವೂ, ಬಳಸಲು ಹಗುರ ಟಾರ್ಪೆಡೋಗಳಿಂದ ಕಷ್ಟಕರವೂ ಆಗಿವೆ.

ದೇಶೀಯವಾಗಿ ನಿರ್ಮಿಸಿದ ಹೆವಿ ವೆಯ್ಟ್ ಟಾರ್ಪೆಡೋ ವರುಣಾಸ್ತ್ರ:

ವರುಣಾಸ್ತ್ರ ಒಂದು ದೇಶೀಯವಾಗಿ ನಿರ್ಮಿಸಿರುವ ಹೆವಿ ವೆಯ್ಟ್ ಟಾರ್ಪೆಡೋ ಆಗಿದ್ದು,  ಇದನ್ನು ಡಿಆರ್‌ಡಿಓದ ನೇವಲ್ ಸೈನ್ಸ್ ಆ್ಯಂಡ್ ಟೆಕ್ನಾಲಜಿಕಲ್ ಲ್ಯಾಬೋರೇಟರಿ ವಿಶಾಖಪಟ್ಟಣಂ ಅಭಿವೃದ್ಧಿ ಪಡಿಸಿದೆ. ವಿದ್ಯುತ್ ಚಾಲಿತ ಆ್ಯಂಟಿ ಸಬ್‌ಮರೀನ್ ಆಯುಧವಾಗಿರುವ ಇದು ಆಳ ಸಾಗರ ಮತ್ತು ಆಳವಿಲ್ಲದ ಕಡೆಗಳಲ್ಲೂ ಕಾರ್ಯಾಚರಿಸಬಲ್ಲದು.

• ವರುಣಾಸ್ತ್ರ 7.780 ಮೀಟರ್ ಉದ್ದವಿದೆ.

• ಇದರ ಒಟ್ಟು ವ್ಯಾಸ 533.4 ಮಿಲಿಮೀಟರ್ ಆಗಿದೆ.

• ವರುಣಾಸ್ತ್ರದ ಗರಿಷ್ಠ ವೇಗ ಪ್ರತಿ ಗಂಟೆಗೆ 74 ಕಿಲೋಮೀಟರ್ ಆಗಿದೆ.

• ವರುಣಾಸ್ತ್ರದ ಎಕ್ಸಸೈಸ್ ಆವೃತ್ತಿ 1605 ಕೆಜಿ ಆಗಿದ್ದರೆ, ಕಾಂಬ್ಯಾಟ್ ಆವೃತ್ತಿ 1,850 (+ಅಥವಾ- 10 ಕೆಜಿ) ಆಗಿದೆ.

• ವರುಣಾಸ್ತ್ರ ಹೆಚ್ಚಿನ ವ್ಯಾಪ್ತಿ ಹೊಂದಿದ್ದು, ವಿವಿಧ ದಿಕ್ಕುಗಳಲ್ಲಿ ಚಲಿಸಬಲ್ಲದು.

• ವರುಣಾಸ್ತ್ರದಲ್ಲಿ ಅಕೌಸ್ಟಿಕ್ ಹೋಮಿಂಗ್ ಮತ್ತು ವೈಡ್ ಲುಕ್ ಆ್ಯಂಗಲ್ ಇದ್ದು, ನಿಶ್ಶಬ್ದವಾದ ಗುರಿಗಳನ್ನೂ ಹಿಂಬಾಲಿಸಬಲ್ಲದು.

• ಇದರಲ್ಲಿ ಅಕೌಸ್ಟಿಕ್ ಕೌಂಟರ್ ಮೆಶರ್ಸ್ (ಎಸಿಸಿಎಂ) ಇದ್ದು, ಸಿಗ್ನಲ್ ಟ್ರ್ಯಾಕ್ ಮಾಡಲು ಒಂದಕ್ಕಿಂತ ಹೆಚ್ಚಿನ ವಿಧಾನಗಳಿವೆ. ಎಸಿಸಿಎಂ ಶತ್ರುಗಳ ನೌಕೆಗಳನ್ನು ಮತ್ತು ಟಾರ್ಪೆಡೋಗಳ ಸೋನಾರ್ ಗೈಡೆನ್ಸ್ ವ್ಯವಸ್ಥೆಯನ್ನು ಮೂರ್ಖರನ್ನಾಗಿಸಲು ಶಬ್ದ ಮಾಡುತ್ತದೆ.

• ಇದರಲ್ಲಿ ಅಟಾನಮಸ್ ಅಡ್ವಾನ್ಸ್ ಗೈಡೆನ್ಸ್ ಅಲ್ಗಾರಿದಂ ಇದೆ.

• ಇದರಲ್ಲಿ ಸಂಚರಣ ಉಪಕರಣಗಳಿದ್ದು, ದೀರ್ಘಕಾಲ ಕಾರ್ಯಾಚರಿಸಿ, ಟಾರ್ಪೆಡೋ ಹಾದಿ ತಪ್ಪದಂತೆ ನೋಡಿಕೊಳ್ಳುತ್ತವೆ.

Follow Us:
Download App:
  • android
  • ios