ಮುಂಬೈ(ಮೇ.06): ದೇಶದ ಇತರ ನಗರಗಳಿಗಿಂತ ಮೊದಲು ಕೊರೋನಾ 2ನೇ ಅಲೆಯನ್ನು ಎದುರಿಸಿದ್ದ ವಾಣಿಜ್ಯ ನಗರಿ ಮುಂಬೈನಲ್ಲಿ ಈಗ ಸೋಂಕಿನ ಪ್ರಮಾಣ ದಿನದಿಂದ ದಿನಕ್ಕೆ ಇಳಿಕೆ ಆಗುತ್ತಿವೆ. ಏಪ್ರಿಲ್‌ 4ರಂದು ಗರಿಷ್ಠ 11 ಸಾವಿರ ತಲುಪಿದ್ದ ದೈನಂದಿನ ಪ್ರಕರಣಗಳ ಸಂಖ್ಯೆ ಈಗ 3000ಕ್ಕಿಂತ ಕೆಳಗೆ ಇಳಿದಿದೆ. ಸ್ವತಃ ಸುಪ್ರೀಂಕೋರ್ಟ್‌ ಕೂಡಾ ಬುಧವಾರ ವಿಚಾರಣೆಯೊಂದರ ವೇಳೆ ಸೋಂಕು ನಿಯಂತ್ರಣ ಮತ್ತು ಆಕ್ಸಿಜನ್‌ ನಿರ್ವಹಣೆ ವಿಷಯದಲ್ಲಿ ಮುಂಬೈ ಮಾದರಿಯನ್ನು ಬಹುವಾಗಿ ಪ್ರಶಂಸಿಸಿದೆ.

ಮುಂಬೈನಲ್ಲಿ ಸೋಂಕು ಇಳಿಕೆಗೆ ಮುಂಬೈ ಮಹಾನಗರ ಪಾಲಿಕೆ ಕೈಗೊಂಡ ಕ್ರಮಗಳೇನು?

ಟಿಟಿಟಿ ಸೂತ್ರ:

ಸೋಂಕು ಪತ್ತೆ, ಪರೀಕ್ಷೆ, ಚಿಕಿತ್ಸೆ ನೀಡುವ ಮೂಲ ಮಂತ್ರ ಕಟ್ಟುನಿಟ್ಟಾಗಿ ಪಾಲಿಸಲಾಯಿತು. ಶಾಪಿಂಗ್‌ ಮಾಲ್‌, ಕ್ರೀಡಾಂಗಣ, ಅಂಗಡಿ ಮುಂಗಟ್ಟು, ಮೀನು ಮಾರುಕಟ್ಟೆಸೇರಿದಂತೆ ಜನರು ಸೇರುವ ಕಡೆ ರಾಪಿಡ್‌ ಆ್ಯಂಟಿಜೆನ್‌ ಪರೀಕ್ಷೆ ಪ್ರಮಾಣ ಹೆಚ್ಚಿಸಲಾಯಿತು. ರೋಗ ಪತ್ತೆಯಾದವರನ್ನು ತಕ್ಷಣವೇ ಗುರುತಿಸಿ ಹೋಮ್‌ ಕ್ವಾರಂಟೈನ್‌ಗೆ ಒಳಪಡಿಸಲಾಯಿತು.

ಕೊರೋನಾದಿಂದ ಮಗನ ಕೆಲ್ಸ ಹೋಯ್ತು: ತುತ್ತು ಅನ್ನಕ್ಕಾಗಿ ಮತ್ತೆ ಕೆಲಸಕ್ಕೆ ಬಂದ 73ರ ವೃದ್ಧ

ಕ್ವಾರಂಟೈನ್‌ ಕೇಂದ್ರಗಳ ಮುಂದುವರಿಕೆ:

ಕೊರೋನಾ ಮೊದಲ ಅಲೆ ವೇಳೆ ಆರಂಭಿಸಿದ್ದ ಕ್ವಾರಂಟೈನ್‌ ಕೇಂದ್ರ ಮುಚ್ಚುವ ಬದಲು ಮಾ.31ರವರೆಗೂ ನಿರ್ವಹಣೆ ಮಾಡಲು ತೀರ್ಮಾನಿಸಲಾಗಿತ್ತು. ಇದರಿಂದ ರೋಗಿಗಳ ಚಿಕಿತ್ಸೆಗೆ ಅನುಕೂಲವಾಯಿತು.

ಆಕ್ಸಿಜನ್‌ ಸಿಲಿಂಡರ್‌ಗಳ ಸಂಗ್ರಹ:

ಕೊರೋನಾ 2ನೇ ಅಲೆಯಲ್ಲಿ ದೇಶದೆಲ್ಲೆಡೆ ಆಮ್ಲಜನಕ ತೀವ್ರ ಕೊರತೆ ಉಂಟಾಗಿದೆ. ಆದರೆ, ಮುಂಬೈಗೆ ಈ ಸಮಸ್ಯೆ ಅಷ್ಟಾಗಿ ಬಾಧಿಸಲಿಲ್ಲ. ಕ್ವಾರಂಟೈನ್‌ ಕೇಂದ್ರಗಳಲ್ಲಿ 28,000 ಹಾಸಿಗೆಗಳ ಪೈಕಿ ​13,000 ಹಾಸಿಗೆಗಳಿಗೆ ಆಮ್ಲಜನಕ ಪೂರೈಕೆಗೆ ವ್ಯವಸ್ಥೆ ಮಾಡಲಾಗಿತ್ತು. ಸಾಮಾನ್ಯ ಆಮ್ಲಜನಕದ ಸಿಲಿಂಡರ್‌ಗಳಿಗಿಂತ 10 ಪಟ್ಟು ಅಧಿಕ ಸಾಮರ್ಥ್ಯದ ಜಂಬೋ ಸಿಲಿಂಡರ್‌ಗಳನ್ನು ಪೂರೈಕೆ ಮಾಡಲಾಗಿತ್ತು.

"

ರೋಗಿಗಳಿಗೆ ಮನೆಯಲ್ಲೇ ಚಿಕಿತ್ಸೆ:

ಈ ಬಾರಿ ಮುಂಬೈನಲ್ಲಿ ಬಹುತೇಕ ಕೊರೋನಾ ರೋಗಿಗಳನ್ನು ಹೋಮ್‌ ಕ್ವಾರಂಟೈನ್‌ ಮಾಡಲಾಗಿತ್ತು. ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳ ಶೇ.80ರಷ್ಟುಹಾಸಿಗೆಯನ್ನು ಕೋವಿಡ್‌ ರೋಗಿಗಳ ಚಿಕಿತ್ಸೆಗೆ ಮೀಸಲಿಡಲಾಗಿತ್ತು. ಹೀಗಾಗಿ ಆಸ್ಪತ್ರೆಗಳಲ್ಲಿ ಬೆಡ್‌ಗಳ ಕೊರತೆ ಅಷ್ಟಾಗಿ ಕಾಡಲಿಲ್ಲ. ಜೊತೆಗೆ ಮನೆ ಬಾಗಿಲ ಸಮೀಕ್ಷೆ, ಶಿಬಿರಗಳ ಮೂಲಕ ರೋಗ ಲಕ್ಷಣ ಇರುವವರನ್ನು ಗುರುತಿಸಿ ಅವರ ಚಿಕಿತ್ಸೆಗೆ ವ್ಯವಸ್ಥೆ ಕಲ್ಪಿಸಲಾಗಿತ್ತು.

ಗುಡ್‌ನ್ಯೂಸ್‌: ಮುಂಬೈನಲ್ಲಿ ಸೋಂಕಿನಬ್ಬರ ತೀವ್ರ ಕುಸಿತ!

ರೆಮ್‌ಡೆಸಿವಿರ್‌ ಸಂಗ್ರಹ:

ಕೊರೋನಾ ರೋಗಿಗಳ ಚಿಕಿತ್ಸೆಗೆ ಅಗತ್ಯವಿರುವ ರೆಮ್‌ಡೆಸಿವಿರ್‌ ಔಷಧದ 2 ಲಕ್ಷ ಬಾಟಲ್‌ಗಳನ್ನು ಸಂಗ್ರಹ ಇಡಲಾಗಿತ್ತು. ಹೀಗಾಗಿ ಆಸ್ಪತ್ರೆಗಳಲ್ಲಿ ರೆಮ್‌ಡೆಸಿವಿರ್‌ನ ಕೊರತೆ ಉಂಟಾಗಲಿಲ್ಲ.

ಮುಂಬೈ ಗೆದ್ದಿದ್ದು ಹೇಗೆ?

1. ಟಿಟಿಟಿ ಸೂತ್ರ: ಸೋಂಕು ಪತ್ತೆ, ಪರೀಕ್ಷೆ, ಚಿಕಿತ್ಸೆ ಕಟ್ಟುನಿಟ್ಟಾಗಿ ಪಾಲನೆ

2. ಆಸ್ಪತ್ರೆಗೆ ಆಕ್ಸಿಜನ್‌ ಸಮರ್ಪಕ ಪೂರೈಕೆ. ಜಂಬೋ ಸಿಲಿಂಡರ್‌ ಬಳಕೆ

3. ಹೆಚ್ಚಿನವರಿಗೆ ಹೋಂ ಕ್ವಾರಂಟೈನ್‌. ಶೇ.80 ಆಸ್ಪತ್ರೆ ಬೆಡ್‌ ಕೋವಿಡ್‌ಗೆ

4. ಜೀವರಕ್ಷಕ ಎನ್ನಲಾದ 2 ಲಕ್ಷ ರೆಮ್‌ಡೆಸಿವಿರ್‌ ದಾಸ್ತಾನು ಇಟ್ಟು ಚಿಕಿತ್ಸೆ

5. ಮೊದಲ ಅಲೆ ವೇಳೆ ಆರಂಭಿಸಿದ್ದ ಕ್ವಾರಂಟೈನ್‌ ಕೇಂದ್ರಗಳ ಸದ್ಬಳಕೆ

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona