ಛತ್ತೀಸ್‌ಗಡ[ಜ.11]: ಪಂಜಾಬ್ ಹಾಗೂ ಹರ್ಯಾಣ ಹೈಕೋರ್ಟ್ ಪ್ರಕರಣವೊಂದರ ಸಂಬಂಧ ಸರ್ಕಾರಕ್ಕೆ ಪರಿಹಾರ ನೀಡದಿರಲು ಸೂಚಿಸಿದ್ದು, ಬೀದಿ ಪ್ರಾಣಿಗಳಿಂದಾಗುವ ಎಲ್ಲಾ ಅಪಘಾತಗಳಿಗೂ ಸರ್ಕಾರವನ್ನು ಹೊಣೆಗಾರರನ್ನಾಗಿಸಲು ಸಾಧ್ಯವಿಲ್ಲ ಎಂದು ಆದೇಶಿಸಿದೆ. 

ಪ್ರಕರಣವೊಂದರ ವಿಚಾರಣೆ ಜಸ್ಟೀಸ್ ರಾಜೀವ್ ನರೇನ್ ರೈನಾ ನೇತೃತ್ವದ ಏಕ ಸದಸ್ಯ ಪೀಠ 'ಒಂದು ವೇಳೆ ಹಳ್ಳಿಯಲ್ಲಿ ಓಡಾಡುತ್ತಿರುವ ಬೀದಿ ಗೂಳಿಯಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳುವುದು ಗ್ರಾಮಸ್ಥರ ಕರ್ತವ್ಯ. ಕತ್ತಲೆಯಲ್ಲಿ ಪ್ರಯಾಣಿಸುವಾಗ ಎದುರಾಗುವ ಬೀದಿ ಪ್ರಾಣಿಗಳಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ. ಎಚ್ಚರ ವಹಿಸುವುದು ಸರ್ಕಾರದ ಕರ್ತವ್ಯ ಅಲ್ಲ. ಹೀಗಾಗಿ ಇಂತಹ ಅಪಘಾತಗಳಿಗೆ ಸರ್ಕಾರ ಕಾರಣವಲ್ಲ. ಪರಿಹಾರ ನೀಡುವುದೂ ಸರಿಯಲ್ಲ' ಎಂದಿದ್ದಾರೆ.

ಬೀದಿ ಪ್ರಾಣಿಯೊಂದು ವಾಹನದೆದುರು ದಿಢೀರನೆ ಕಾಣಿಸಿಕೊಂಡ ಪರಿಣಾಮ ನಡೆದಿದ್ದ ಅಪಘಾತದಲ್ಲಿ ವ್ಯಕ್ತಿಯೊಬ್ಬ ಮೃತಪಟ್ಟಿದ್ದ. ಪ್ರಕರಣ ಸಂಬಂಧ ಕೋರ್ಟ್ ಮೆಟ್ಟಿಲೇರಿದ್ದ ಮೃತ ವ್ಯಕ್ತಿಯ ಹೆಂಡತಿ ಕೃಷ್ಣಾ ದೇವಿ ಈ ಅಪಘಾತ ಹರ್ಯಾಣದ ಫತೇಬಾದ್ ನಗರ ಪಾಲಿಕೆ ವ್ಯಾಪ್ತಿಯಲ್ಲಿ ನಡೆದಿದೆ. ಹೀಗಾಗಿ ಆಡಳಿತಾಧಿಕಾರಿಗಳು ಪರಿಹಾರ ಒದಗಿಸಬೇಕೆಂದು ಮನವಿ ಮಾಡಿಕೊಂಡಿದ್ದರು. 

ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಲಯಕ್ಕೆ ರಾಜ್ಯ ಸರ್ಕಾರ ಮೃತ ವ್ಯಕ್ತಿಯ ಕುಟುಂಬಕ್ಕೆ ಈ ಮೊದಲೇ 1 ಲಕ್ಷ ರೂ. ಪರಿಹಾರ ನೀಡಿದ ವಿಚಾರ ತಿಳಿದು ಬಂದಿದೆ. ಅಲ್ಲದೇ ಪಘಾತ ನಡೆದ ಸ್ಥಳ ಫತೇಬಾದ್ ನಗರ ಪಾಲಿಕೆ ವ್ಯಾಪ್ತಿಗೊಳಪಡುವುದಿಲ್ಲ ಎಂಬುವುದನ್ನೂ ಮನಗಂಡಿದೆ. ಹೀಗಾಗಿ ಖಾಸಗಿ ರಸ್ತೆಗಳ ನಿರ್ವಹಣೆ ರಾಜ್ಯ ಸರ್ಕಾರದ ಜವಾಬ್ದಾರಿಯಲ್ಲ. ಅಲ್ಲದೇ ವ್ಯಕ್ತಿ ಹೆಲ್ಮೆಟ್ ಧರಿಸದೇ ಇರುವುದರಿಂದ ತಲೆಗೆ ಗಂಭೀರ ಗಾಯವಾಗಿ ಮೃತಪಟ್ಟಿದ್ದಾನೆ. ವ್ಯಕ್ತಿ ತನ್ನ ನಿರ್ಲಕ್ಷ್ಯದಿಂದ ಪ್ರಾಣ ಕಳೆದುಕೊಂಡಿದ್ದಾನೆಂದು ತಿಳಿಸಿದೆ.