ಮೇಘಾಲಯದ ಚರ್ಚ್‌ನಲ್ಲಿ ವ್ಯಕ್ತಿಯೊಬ್ಬ ಜೈ ಶ್ರೀರಾಂ ಘೋಷಣೆ ಕೂಗಿದ ಘಟನೆ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಈ ಘಟನೆಯನ್ನು ಉದ್ದೇಶಪೂರ್ವಕ ಕೃತ್ಯ ಎಂದು ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಖಂಡಿಸಿದ್ದಾರೆ.

ಶಿಲ್ಲಾಂಗ್: ವ್ಯಕ್ತಿಯೊಬ್ಬ ಚರ್ಚ್‌ನೊಳಗೆ ಅಕ್ರಮವಾಗಿ ಪ್ರವೇಶಿಸಿ ‘ಜೈ ಶ್ರೀರಾಂ’ ಘೋಷಣೆ ಕೂಗಿದ ಘಟನೆ ಮೇಘಾಲಯದ ಪೂರ್ವ ಖಾಸಿ ಹಿಲ್ಸ್‌ ಜಿಲ್ಲೆಯಲ್ಲಿ ನಡೆದಿದೆ. ಇದರ ಬೆನ್ನಲ್ಲೇ ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. 2023ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕಡಬದಲ್ಲಿ ಇಬ್ಬರು ವ್ಯಕ್ತಿಗಳು ಮಸೀದಿಯೊಳಗೆ ಪ್ರವೇಶಿಸಿ ಜೈ ಶ್ರೀರಾಂ ಘೋಷಣೆ ಕೂಗಿದ್ದು, ಈ ಪ್ರಕರಣ ಸುಪ್ರೀಂ ಅಂಗಳದಲ್ಲಿದೆ. ಅದರ ಬೆನ್ನಲ್ಲೇ ಈ ಘಟನೆ ನಡೆದಿದೆ.

ಆಗಿದ್ದೇನು?:
ಆಕಾಶ್‌ ಸಾಗರ್‌ ಎಂಬಾತ ಮಾವ್ಲಿನ್ನಾಂಗ್ ಗ್ರಾಮದ ಚರ್ಚ್‌ ಒಳಗೆ ಪ್ರವೇಶಿಸಿ ಜೈ ಶ್ರೀರಾಂ ಎಂಬ ಘೋಷಣೆ ಕೂಗಿ ಅದರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ. ಈ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೊಪದಡಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ಘಟನೆಯನ್ನು ಖಂಡಿಸಿರುವ ಮೇಘಾಲಯ ಸಿಎಂ ಕಾನ್ರಾಡ್‌ ಸಂಗ್ಮಾ, ‘ಇದು ಉದ್ದೇಶಪೂರ್ವಕ ಕೃತ್ಯವಾಗಿದೆ. ಇದರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಸರ್ಕಾರವು ಸಮಾಜಿಕ, ಧಾರ್ಮಿಕ ಅಥವಾ ಕೋಮು ಸಾಮರಸ್ಯ ಕದಡುವುದಕ್ಕೆ ಅನುವು ಮಾಡಿಕೊಡುವುದಿಲ್ಲ’ ಎಂದರು. ಅಂತೆಯೇ ಹಿಂದೂ ಸಂಘಟನೆಗಳು ಹಾಗೂ ಸಾಮಾಜಿಕ ಹೋರಾಟಗಾರರಿಂದಲೂ ಆಕಾಶ್‌ ಕೃತ್ಯಕ್ಕೆ ವಿರೋಧ ವ್ಯಕ್ತವಾಗಿದೆ.

Scroll to load tweet…