ನವದೆಹಲಿ[ಫೆ.25]: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎರಡು ದಿನದ ಭಾರತ ಪ್ರವಾಸದಲ್ಲಿದ್ದಾರೆ, ಈ ನಡುವೆ ಈಶಾನ್ಯ ದೆಹಲಿಯಲ್ಲಿ ಪೌರತ್ವ ಪರ- ವಿರೋಧ ಪ್ರತಿಭಟನೆ ಜೋರಾಗಿದ್ದು ನಾಲ್ವರು ಉದ್ರಿಕ್ತರಿಗೆ ಬಲಿಯಾಗಿದ್ದಾರೆ. ಹೀಗಿರುವಾಗ ಈ ಸಂಬಂಧ ಪ್ರತಿಕ್ರಿಯಿಸಿರುವ AIMEM ಅಧ್ಯಕ್ಷ ಅಸಾದುದ್ದೀನ್ ಓವೈಸಿ ದೆಹಲಿಯ ಮಾಜಿ ಶಾಸಕನ ವಿರುದ್ಧ ಹಿಂಸಾಚಾರಕ್ಕೆ ಕು್ಮಮುಕ್ಕು ನೀಡಿರುವ ಆರೋಪವೆಸಗಿದ್ದಾರೆ. 

ಪೌರತ್ವ ತಿದ್ದುಪಡಿ ಕಾಯ್ದೆ, NRC ಹಾಗೂ NPR ವಿರೋಧಿಸಿ ನಡೆಯುತ್ತಿದ್ದ  ರ‍್ಯಾಲಿಯಲ್ಲಿ ಮಾತನಾಡಿದ ಓವೈಸಿ ಪ್ರಧಾನಿ ನರೇಂದ್ರ ಮೋದಿಗೆ ಎಚ್ಚರಿಕೆಯೊಂದನ್ನು ನೀಡುತ್ತಾ 'ನಿಮ್ಮ ಅಂಗಳದಲ್ಲಿ ಬೆಳೆಯುತ್ತಿರುವ, ನೀವು ಸಾಕುತ್ತಿರುವ ಹಾವುಗಳೇ ನಾಳೆ ನಿಮ್ಮನ್ನು ಕಚ್ಚುತ್ತವೆ ಎಂದು ಮೋದೀಜೀಗೆ ಹೇಳ ಬಯಸುತ್ತೇನೆ' ಎಂದಿದ್ದಾರೆ.

ಈ ಹಿಂಸಾಚಾರವನ್ನು ಖಂಡಿಸಿರುವ ಓವೈಸಿ 'ಬಿಜೆಪಿ ನಾಯಕ ತಮ್ಮ ಪ್ರಚೋದನಕಾರಿ ಹೇಳಿಕೆಯಲ್ಲಿ ಮೂರು ದಿನದ ಗಡುವು ನೀಡಿದ್ದರು. ಇದರ ಬೆನ್ನಲ್ಲೇ ಹಿಂಸಾಚಾರ ಭುಗಿಲೆದ್ದಿದೆ' ಎಂದಿದ್ದಾರೆ.

ಈ ಸಂಬಂಧ ಟ್ವೀಟ್ ಕೂಡಾ ಮಾಡಿರುವ ಅಸಾದುದ್ದೀನ್ ಓವೈಸಿ 'ಈ ಹಿಂಸಾಚಾರ ಓರ್ವ ಮಾಜಿ ಶಾಸಕ ಹಾಗೂ ಬಿಜೆಪಿ ನಾಯಕನಿಂದಾಗಿ ನಡೆಯುತ್ತಿವೆ. ಪೊಲೀಸರು ಇದಕ್ಕೆ ಕೈಜೋಡಿಸಿದ್ದಾರೆ ಎಂಬುವುದು ಸ್ಪಷ್ಟ. ಹೀಗಾಗಿ ಈ ಕೂಡಲೇ ಮಾಜಿ ಶಾಸಕನನ್ನು ಬಂಧಿಸಬೇಕು ಹಾಗೂ ಹಿಂಸಾಚಾರ ತಡೆಯುವ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಇದು ಮತ್ತಷ್ಟು ವ್ಯಾಪಿಸುತ್ತದೆ' ಎಂದಿದ್ದಾರೆ.

ಅಸಾವುದ್ದೀನ್ ನೀಡಿದ ಹೇಳಿಕೆ ಬಿಜೆಪಿ ನಾಯಕ ಕಪಿಲ್ ಮಿಶ್ರಾ ಕುರಿತಾಗಿ ಎಂಬುವುದರಲ್ಲಿ ಅನುಮಾನವಿಲ್ಲ. ಅವರು ಈ ಹಿಂದೆ ತಮ್ಮ ಹೇಳಿಕೆಯಲ್ಲಿ ಪೌರತ್ವ ಕಾಯ್ದೆಗೆ ವಿರೋಧಿಗಳಿಗೆ ಮೂರು ದಿನದ ಗಡುವು ನೀಡಿದ್ದರು.