ಅಮೃತಸರ(ಅ.17): ಉಗ್ರವಾದದ ವಿರುದ್ಧ ಧ್ವನಿಯೆತ್ತಿ, ಹೋರಾಟ ನಡೆಸುತ್ತಿದ್ದ ಶೌರ್ಯ ಚಕ್ರ ಪ್ರಶಸ್ತಿ ಪುರಸ್ಕೃತ ಬಲ್ವಿಂದರ್‌ ಸಿಂಗ್‌ ಸಂಧು ಅವರನ್ನು ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆ ಮಾಡಿದ್ದಾರೆ.

ಪಂಜಾಬ್‌ನ ತರಣ್‌ ತರಣ್‌ ಜಿಲ್ಲೆಯಲ್ಲಿ ಈ ಘಟನೆ ಶುಕ್ರವಾರ ಘಟನೆ ಜರುಗಿದೆ. ಏಕಾಏಕಿ ಸಿಂಗ್‌ ಅವರ ಮನೆಗೆ ನುಗ್ಗಿದ ದುಷ್ಕರ್ಮಿಗಳು, ಐದು ಸುತ್ತು ಗುಂಡು ಹಾರಿಸಿದ್ದಾರೆ. ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಬಲ್ವಿಂದರ್ ಸಿಂಗ್ ಅವರು ಮೃತಪಟ್ಟಿದ್ದರು.. ಸಂಧು ಅವರಿಗೆ ನೀಡಿದ್ದ ಭದ್ರತೆಯನ್ನು ಸರ್ಕಾರ ಹಿಂಪಡೆದ ತಿಂಗಳಲ್ಲೇ ಈ ದುರ್ಘಟನೆ ನಡೆದಿದೆ. ದಾಳಿಯ ಹಿಂದೆ ಉಗ್ರರ ಕೃತ್ಯ ಶಂಕಿಸಲಾಗಿದೆ.

ಸಂಧು ಸಮೀಪದ ಭಿಖಿವಿಂಡ್‌ನಲ್ಲಿರುವ ನಿವಾಸದಿಂದ ಕಚೇರಿಗೆ ಹೊರಟು, ಕೆಲ ನಿಮಿಷಗಳ ಅವಧಿಯಲ್ಲೇ ಹತ್ಯೆ ನಡೆದಿದೆ. ಅವರನ್ನು ಹಿಂಬಾಲಿಸಿದ ಮುಸುಕುಧಾರಿ ಬೈಕ್‌ ಸವಾರರು ಏಕಾಏಕಿ ಗುಂಡಿಂನ ದಾಳಿ ನಡೆಸಿದ್ದಾರೆ.

1990ರಲ್ಲಿ ಸಿಂಗ್‌ ಮತ್ತು ಅವರ ಕುಟುಂಬಸ್ಥರ ವಿರುದ್ಧ 200 ಉಗ್ರರು ಭೀಕರ ದಾಳಿ ನಡೆಸಿದ್ದರು. ಆ ವೇಳೆ ಆತ್ಮ ರಕ್ಷಣೆಗಾಗಿ ತಾವು ಇರಿಸಿಕೊಂಡಿದ್ದ ಪಿಸ್ತೂಲ್‌ಗಳಿಂದ ಸಿಂಗ್, ಪತ್ನಿ ಮತ್ತು ಅವರ ಸಹೋದರ ಉಗ್ರರ ವಿರುದ್ಧ ಹೋರಾಡಿದ್ದರು. ಸುಮಾರು 5 ಗಂಟೆಗೂ ಹೆಚ್ಚು ಕಾಲ ನಡೆದ ಈ ಹೋರಾಟದಲ್ಲಿ ಉಗ್ರರು ಸೋಲುಂಡು ಪರಾರಿಯಾಗಿದ್ದರು.

ಈ ದಿಟ್ಟತನವನ್ನು ಪರಿಗಣಿಸಿ 1993ರಲ್ಲಿ ಬಲ್ವಿಂದರ್ ಸಿಂಗ್‌ ಅವರಿಗೆ ಸರಕಾರ ಶೌರ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು. ಆ ಬಳಿಕ ಕೆಲವು ಬಾರಿ ಸಿಂಗ್‌ ಅವರ ವಿರುದ್ಧ ಉಗ್ರರ ದಾಳಿ ಯತ್ನ ನಡೆದಿತ್ತಾದರೂ ಸಫಲವಾಗಿರಲಿಲ್ಲ. ಇದೀಗ ಬಲ್ವಿಂದರ್ ಸಿಂಗ್ ಅವರ ಮನೆಗೇ ನುಗ್ಗಿದ ಶಸ್ತ್ರಧಾರಿ ದುಷ್ಕರ್ಮಿಗಳು ಗುಂಡು ಹಾರಿಸಿ ಕೊಂದಿದ್ದಾರೆ.