Asianet Suvarna News Asianet Suvarna News

ಪೂಜಾರಿಯಿಲ್ಲದ ಮದುವೆಗೆ ನಾಂದಿ ಹಾಡಿದ ಗಟ್ಟಿಗಿತ್ತಿ ಸಾವಿತ್ರಿಬಾಯಿ ಫುಲೆ

ಮಹಿಳೆಯೊಬ್ಬರು ಶಿಕ್ಷಕಿಯಾಗುವುದು ಧರ್ಮಕ್ಕೂ, ಸಮಾಜಕ್ಕೂ ದ್ರೋಹ ಬಗೆದಂತೆ ಎಂಬ ಭಾವನೆ ಹೊಂದಿದ್ದ ಸಮಾಜದಲ್ಲಿ ದಿಟ್ಟತನದಿಂದ ಶಿಕ್ಷಕ ತರಬೇತಿ ಪಡೆದು, ಎಲ್ಲರ ವಿರೋಧದ ನಡುವೆ ತಾವು ಅಂದುಕೊಂಡಿದ್ದನ್ನು ಸಾಧಿಸಿದ ಗಟ್ಟಿಗಿತ್ತಿ ಸಾವಿತ್ರಿಬಾಯಿ ಫುಲೆ.

Savitribai Phule 189th Birth Anniversary on jan 03 Know About The 19th Century Social Reformer
Author
Bengaluru, First Published Jan 3, 2020, 11:12 AM IST

ರಾಜ್ಯದ ಎಲ್ಲಾ ಶಾಲೆಗಳಲ್ಲಿ ಇಂದು (03.1.2020) ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನವನ್ನು ಆಚರಿಸಲಾಗುತ್ತಿದೆ. ಈ ಮಹಾ ತಾಯಿಯ ಬದುಕಿನ ಪರಿಚಯ ನಮ್ಮೆಲ್ಲ ಮಕ್ಕಳಿಗೂ ತಿಳಿಯಬೇಕು. ಈ ಮಹಾನ್‌ ಹೋರಾಟಗಾರ್ತಿಯ ಸವಾಲುಗಳನ್ನು ಎದುರಿಸುವ ಛಲ ನಮ್ಮೆಲ್ಲಾ ಮಕ್ಕಳಲ್ಲೂ ಬರಬೇಕು ಮತ್ತು ಸಮಾಜದ ಕಟ್ಟಕಡೆಯ ವ್ಯಕ್ತಿಯ ಬಗ್ಗೆ ಕಾಳಜಿ ನಮ್ಮೆಲ್ಲ ಮಕ್ಕಳಲ್ಲಿ ಉಂಟಾಗಬೇಕು ಎಂಬುದೇ ಈ ಜನ್ಮದಿನದ ಆಚರಣೆಗೆ ಕಾರಣ. ಜೊತೆಗೆ ನಮ್ಮ ಮಕ್ಕಳಿಗೆ ಇವರ ಧ್ಯೇಯದಿಂದ ಕೂಡಿದ ಬದುಕನ್ನು ತಿಳಿಸುವುದೇ ಈ ಮಹಾನ್‌ ಚೇತನಕ್ಕೆ ನಾವೆಲ್ಲರೂ ಸಲ್ಲಿಸಬಹುದಾದ ಅರ್ಥಪೂರ್ಣ ಗೌರವ.

ಕಿರುಕುಳ ಕಂಡು ಧೃತಿಗೆಡಲಿಲ್ಲ

ಸಾವಿತ್ರಿಬಾಯಿ ಫುಲೆ ಅವರು ಭಾರತದ ಮೊಟ್ಟಮೊದಲ ಶಿಕ್ಷಕಿ. ಆಧುನಿಕ ಶಿಕ್ಷಣದ ಜನನಿ. ಸಾಮಾಜಿಕ ಹಾಗೂ ಮಹಿಳಾ ಹಕ್ಕುಗಳ ಹೋರಾಟಗಾರ್ತಿ, ಜೊತೆಗೆ ಸಾಹಿತಿ. ಮಹಾರಾಷ್ಟ್ರದಲ್ಲಿ ತರಬೇತಾದ ಮೊದಲ ಶಿಕ್ಷಕಿ ಅವರು. ಮಹಿಳೆಯರು ಮನೆಯಿಂದ ಹೊರಬಂದು ಸಾಮಾಜಿಕ ಚಳವಳಿಯಲ್ಲಿ ಪಾಲ್ಗೊಳ್ಳಲು ಹಿಂಜರಿಯುತ್ತಿದ್ದ ಕಾಲದಲ್ಲಿ ಪತಿ ಜ್ಯೋತಿಬಾ ಫುಲೆ ಅವರ ಜೊತೆಗೂಡಿ ಹದಿನಾಲ್ಕು ಶಾಲೆಗಳನ್ನು ಸ್ಥಾಪಿಸಿದವರು.

ಮಹಿಳೆಯೊಬ್ಬರು ಶಿಕ್ಷಕಿಯಾಗುವುದು ಧರ್ಮಕ್ಕೂ, ಸಮಾಜಕ್ಕೂ ದ್ರೋಹ ಬಗೆದಂತೆ ಎಂಬ ಭಾವನೆ ಹೊಂದಿದ್ದ ಸಮಾಜದಲ್ಲಿ ದಿಟ್ಟತನದಿಂದ ಶಿಕ್ಷಕ ತರಬೇತಿ ಪಡೆದ ಸಾವಿತ್ರಿಬಾಯಿ ಫುಲೆ ಎಲ್ಲರ ವಿರೋಧದ ನಡುವೆ ತಾವು ಅಂದುಕೊಂಡಿದ್ದನ್ನು ಸಾಧಿಸಿದ ಗಟ್ಟಿಗಿತ್ತಿ. ಪಾಠ ಮಾಡಲು ಶಾಲೆಗೆ ಹೊರಟಾಗ ಊರಿನ ಜನರು ಲೇವಡಿ ಮಾಡುವುದು, ಅವಾಚ್ಯ ಶಬ್ದಗಳಿಂದ ನಿಂದಿಸುವುದು, ಕಲ್ಲು ತೂರುವುದು, ಸಗಣಿ ಎರಚುವುದು, ಮೈಮೇಲೆ ಕೆಸರು ಸುರಿಯುವುದು... ಒಂದೇ ಎರಡೇ ಕಿರುಕುಳ.

ತಾರಾ ಅಭಿನಯದಲ್ಲಿ ಅರಳಿದ ಆತ್ಮಕಥೆ ’ಸಾವಿತ್ರಿ ಬಾಯಿ ಪುಲೆ’

ಸಾಮಾನ್ಯ ಮಹಿಳೆಯಾಗಿದ್ದರೆ ಇವೆಲ್ಲಾ ಉಸಾಬರಿ ಏಕೆ ಬೇಕು ಎಂದು ಸುಮ್ಮನಾಗುತ್ತಿದ್ದರೇನೋ? ಆದರೆ ಸಾವಿತ್ರಿಬಾಯಿ ಫುಲೆ ಛಲ ಬಿಡದ ತ್ರಿವಿಕ್ರಮನಂತೆ ಬಂದದ್ದೆಲ್ಲವನ್ನೂ ಬಂಡೆಯಂತೆ ಗಟ್ಟಿಯಾಗಿ ನಿಂತು ಎದುರಿಸಿದರು. ಮೈ ಮೇಲೆ ಕೆಸರು, ಸಗಣಿ ಎರಚಿದಾಗ ಧೃತಿಗೆಡಲಿಲ್ಲ.

ಕೈಚೀಲದಲ್ಲಿ ಇನ್ನೊಂದು ಸೀರೆ ಇಟ್ಟುಕೊಂಡು ಮಕ್ಕಳು ಬರುವ ಮೊದಲೇ ಶಾಲೆಗೆ ಹೋಗಿ ಸೀರೆ ಬದಲಾಯಿಸಿ ಪಾಠ ಮಾಡಲು ಸಿದ್ಧರಾಗುತ್ತಿದ್ದರು. ಅವರ ಈ ಎಲ್ಲಾ ಹೋರಾಟದಲ್ಲೂ ಭುಜಕ್ಕೆ ಭುಜ ಕೊಟ್ಟು ನಿಂತವರು ಪತಿ ಜ್ಯೋತಿಬಾ ಅವರು. ಅವರಿಬ್ಬರದು ಪರಸ್ಪರ ಅವಲಂಬಿ ಬದುಕು.

ಪತಿಯೇ ಮೊದಲ ಗುರು

ಮಹಾರಾಷ್ಟ್ರದ ಸತಾರ ಜಿಲ್ಲೆಯ ನೈಗಾಂವ್‌ನಲ್ಲಿ 1931ರ ಜನವರಿ 3ರಂದು ಜನಿಸಿದ ಸಾವಿತ್ರಿಬಾಯಿ ಫುಲೆ ಅವರ ತಂದೆ ನವಸೆ ಪಾಟೀಲ್‌, ತಾಯಿ ಲಕ್ಷ್ಮೀಬಾಯಿ. ಅಂದಿನ ಕಾಲದ ಪದ್ಧತಿಯಂತೆ ಜ್ಯೋತಿಬಾ ಫುಲೆ ಅವರೊಂದಿಗೆ ಸಾವಿತ್ರಿಬಾಯಿ ಅವರ ಬಾಲ್ಯ ವಿವಾಹ ನಡೆಯಿತು.

ಆಗ ಸಾವಿತ್ರಿಬಾಯಿ ಫುಲೆ ಅವರಿಗೆ ಎಂಟು ವರ್ಷವಾದರೆ, ಜ್ಯೋತಿಬಾ ಫುಲೆ ಅವರಿಗೆ ಹದಿಮೂರು ವರ್ಷ. ಮನೆಯೇ ಮೊದಲ ಪಾಠಶಾಲೆ ಎಂಬಂತೆ ಸಾವಿತ್ರಿಬಾಯಿ ಫುಲೆ ಅವರಿಗೆ ಪತಿಯೇ ಮೊದಲ ಗುರು. 1847ರಲ್ಲಿ ಮಿಚಲ್‌ ಅವರ ನಾರ್ಮಲ್‌ ಶಾಲೆಯಲ್ಲಿ ಶಿಕ್ಷಕಿಯ ತರಬೇತಿ ಪಡೆದಾಗ ಸಾವಿತ್ರಿಬಾಯಿ ಫುಲೆ ಅವರಿಗೆ ಹದಿನೇಳು ವರ್ಷ. ಭಿಡೆಯವರ ಮನೆಯಲ್ಲಿ ಆರಂಭವಾದ ಕನ್ಯಾಶಾಲೆಯ ಪ್ರಧಾನ ಶಿಕ್ಷಕಿ ಅವರು.

ಭಾರತದ ಮೊದಲ ಶಿಕ್ಷಕಿ

1848ರಿಂದ 1852ರ ಅವಧಿಯಲ್ಲಿ 14 ಶಾಲೆಗಳನ್ನು ದಂಪತಿಗಳು ತೆರೆದರು. ಆಡಳಿತದ ಸಂಪೂರ್ಣ ಜವಾಬ್ದಾರಿ ಸಾವಿತ್ರಿ ಅವರದು. ಬ್ರಿಟಿಷ್‌ ಸರ್ಕಾರ ಅವರ ಕಾರ್ಯವನ್ನು ಮೆಚ್ಚಿ ಭಾರತದ ಮೊದಲ ಶಿಕ್ಷಕಿ ಎಂಬ ಮನ್ನಣೆ ನೀಡಿತು. ಸ್ತ್ರೀಯರು ಸಹ ಪುರುಷರಂತೆ ಶಿಕ್ಷಣ ಪಡೆಯಬೇಕು ಎಂಬುದು ಈ ದಂಪತಿಗಳ ಹಂಬಲವಾಗಿತ್ತು. ಸಮಾಜಕ್ಕೇ ಶಿಕ್ಷಕಿಯಾದವರು ಸಾವಿತ್ರಿಬಾಯಿ. ಬಾಲ್ಯವಿವಾಹ, ಸತಿ ಸಹಗಮನ, ವಿಧವೆಯರಿಗೆ ಕೇಶಮುಂಡನ ಮುಂತಾದ ಸಾಮಾಜಿಕ ಅನಿಷ್ಟಗಳ ವಿರುದ್ಧ ಹೋರಾಟ ನಡೆಸಿದ ಅವರು, ಮಹಿಳೆಯರಿಗಾಗಿಯೇ ಶಾಲೆಗಳು, ಅಬಲಾಶ್ರಮಗಳನ್ನು ಸ್ಥಾಪಿಸಿದರು.

ಜ್ಯೋತಿಬಾ ಫುಲೆ ಅವರ ತತ್ವ, ಪ್ರಗತಿಪರ ದೃಷ್ಟಿಕೋನವನ್ನು ತಮ್ಮದಾಗಿಸಿಕೊಂಡು ಜೀವನಪೂರ್ತಿ ಪತಿಗೆ ಬೆಂಗಾವಲಾಗಿ ನಿಂತರು. ಇಬ್ಬರೂ ಪರಸ್ಪರರ ಭಾವನೆಗಳನ್ನು ಗೌರವಿಸುತ್ತಲೇ ತಾವು ಅಂದುಕೊಂಡಿದ್ದನ್ನು ಸಾಧಿಸುತ್ತಾ ಹೋದರು. ಮಕ್ಕಳಿರದ ಈ ದಂಪತಿಗಳು ವಿಧವೆಯ ಮಗ ಯಶವಂತನನ್ನು ದತ್ತು ತೆಗೆದುಕೊಂಡರು.

1873 ರಲ್ಲಿ ಅನಾಥ ಮಕ್ಕಳಿಗೆ ಶಿಶುಕೇಂದ್ರ ತೆರೆಯುವುದರ ಜೊತೆಗೆ ವಿಧವೆಯರಿಗೆ ಹುಟ್ಟಿದ ಮಕ್ಕಳಿಗೆ ಭಿನ್ನವಾದ ಶಿಶುಕೇಂದ್ರಗಳನ್ನು ಪ್ರಾರಂಭಿಸಿ ಅವರಿಗೂ ಬದುಕು ಕಟ್ಟಿಕೊಟ್ಟರು. 150 ವರ್ಷಗಳ ಹಿಂದೆಯೇ ಶಾಲೆಯನ್ನು ತೊರೆಯದ ವಿದ್ಯಾರ್ಥಿಗಳಿಗೆ ಸ್ಟೈಪೆಂಡ್‌ ಕೊಡುವ ಯೋಜನೆ ಆರಂಭಿಸಿದರು.

ಗ್ರಾಮೀಣ ಶಾಲೆ ಅಲರ್ಜಿ: ಬಡ್ತಿಯೇ ಬೇಡ ಎನ್ನುತ್ತಿದ್ದಾರೆ ಶಿಕ್ಷಕರು!

ಪೂಜಾರಿಯಿಲ್ಲದ ಮದುವೆಗೆ ನಾಂದಿ

ಸತ್ಯಶೋಧಕ ಸಮಾಜದ ಅಧ್ಯಕ್ಷೆಯಾದ ಸಾವಿತ್ರಿಯವರು ಪೂಜಾರಿಗಳಿಲ್ಲದೆ ವಿವಾಹಗಳನ್ನು ನಡೆಸಿ ಕ್ರಾಂತಿಗೆ ಮುನ್ನುಡಿ ಬರೆದರು. 1848ರಲ್ಲಿ ಸಮಾಜದ ತಳ ವರ್ಗದ ಹೆಣ್ಣುಮಕ್ಕಳಿಗಾಗಿ ಶಾಲೆ, 1855ರಲ್ಲಿ ಕೂಲಿ ಕಾರ್ಮಿಕರಿಗಾಗಿ ರಾತ್ರಿ ಪಾಳಿ ಶಾಲೆ, 1878ರಲ್ಲಿ ದಲಿತರಿಗಾಗಿ ಕುಡಿಯುವ ನೀರಿನ ಟ್ಯಾಂಕ್‌ ಸ್ಥಾಪನೆ.. ಹೀಗೆ ಸಮಾಜಮುಖಿಯಾದ ಹತ್ತಾರು ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡವರು ಸಾವಿತ್ರಿಬಾಯಿ.

ಮಹಿಳೆಯರು ಇಂದು ಎಲ್ಲಾ ಕ್ಷೇತ್ರಗಳಲ್ಲೂ ತಮ್ಮ ಛಾಪು ಮೂಡಿಸಲು ಇವರ ಕೊಡುಗೆ ದೊಡ್ಡದು. ಸಾವಿತ್ರಿಯವರು ಸಾಹಿತ್ಯ ಕ್ಷೇತ್ರದಲ್ಲೂ ತಮ್ಮ ಛಾಪು ಮೂಡಿಸಿದರು. 1854ರಲ್ಲಿ ಕಾವ್ಯ ಫäಲೆ (ಕಾವ್ಯ ಅರಳಿದೆ) ಕವನ ಸಂಕಲನದ ಮೂಲಕ 19ನೇ ಶತಮಾನದ ಸಮಾಜವನ್ನು ಚಿತ್ರಿಸುವ ಪ್ರಯತ್ನ ಮಾಡಿದರು. 1891ರಲ್ಲಿ ಭವನ ಕಾಶಿ ಸುಬೋಧ ರತ್ನಾಕರ (ಅಪ್ಪಟ ಮುತ್ತುಗಳ ಸಾಗರ) ಜ್ಯೋತಿಬಾ ಅವರನ್ನು ಒಳಗೊಂಡು ಬರೆದ ಆತ್ಮಕತೆ, 1892ರಲ್ಲಿ ಜ್ಯೋತಿಬಾ ಅವರ ಭಾಷಣಗಳ ಸಂಪಾದಿತ ಕೃತಿ ಹಾಗೂ ಕಜ್‌ರ್‍ (ಸಾಲ) ಸಾವಿತ್ರಿ ಬಾಯಿಯವರ ಸಾಹಿತ್ಯ ರಚನೆಯಿಂದ ಹೊರಹೊಮ್ಮಿದ ಸಾಮಾಜಿಕ ಕೃತಿಗಳು.

ರೋಗಿಗಳ ಸೇವೆಯಲ್ಲಿ ಪ್ರಾಣಾರ್ಪಣೆ

ಪಶ್ಚಿಮ ಮಹಾರಾಷ್ಟ್ರದ ಕ್ಷಾಮಪೀಡಿತ ಪ್ರದೇಶಗಳಲ್ಲಿ ಎರಡು ವರ್ಷಗಳ ಕಾಲ ಸಾವಿತ್ರಿಬಾಯಿ ಕಾರ್ಯನಿರ್ವಹಿಸಿದರು. 1897ರ ಮಾಚ್‌ರ್‍ 10ರಂದು ಪ್ಲೇಗ್‌ಪೀಡಿತ ರೋಗಿಗಳ ಸೇವೆ ಮಾಡುತ್ತಲೇ ಸ್ವತಃ ಆ ರೋಗಕ್ಕೆ ಬಲಿಯಾದರು. ಸಾವಿತ್ರಿ ಬಾಯಿ ಫುಲೆ ನಮ್ಮೆಲ್ಲರಿಗೂ ಆದರ್ಶ ತೋರಿದ ಧೀಮಂತ ಮಹಿಳೆ.

ಅವರಿದ್ದ ಕಾಲ, ಅವರು ಎದುರಿಸಿದ ಸವಾಲುಗಳು, ಅವರು ಮಾಡಿದ ಕಾರ್ಯ ಎಲ್ಲವನ್ನೂ ಒಮ್ಮೆ ನೆನಪಿಸಿಕೊಂಡರೆ ಅವರಿಗೆ ತಲೆಬಾಗಿ ನಮಸ್ಕರಿಸಬೇಕು ಎಂಬ ಭಾವನೆ ಮೂಡುವುದು ಅತ್ಯಂತ ಸಹಜ. ಸಾವಿತ್ರಿಬಾಯಿ ಅವರ ವ್ಯಕ್ತಿತ್ವ ನಮಗೆಲ್ಲರಿಗೂ ಸ್ಫೂರ್ತಿ ತುಂಬಲಿ ಎಂಬುದು ನನ್ನ ಆಶಯ. ಆ ಮಹಾನ್‌ ಚೇತನಕ್ಕೆ ನನ್ನ ಪ್ರಣಾಮಗಳು.

"

Follow Us:
Download App:
  • android
  • ios