ಲಕ್ನೋ[ಡಿ.07]: ಹೈದರಾಬಾದ್ ಎನ್‌ಕೌಂಟರ್‌ಗೆ ಅತ್ಯಾಚಾರ ಹಾಗೂ ಕೊಲೆ ಆರೋಪಿಗಳು ಬಲಿಯಾಗಿದ್ದಾರೆ. ಇಡೀ ದೇಶದಾದ್ಯಂತ ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಆದರೆ ಈ ಎಲ್ಲದರ ನಡುವೆ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಉನ್ನಾವೋ ರೇಪ್ ಸಂತ್ರಸ್ತೆ ಸಾವನ್ನಪ್ಪಿದ್ದಾಳೆ. ಹೀಗಿರುವಾಗ ಆಕೆಯಲ್ಲಿದ್ದ ಆ ಆತ್ಮಸ್ಥೈರ್ಯ ಎಷ್ಟು ಎಂಬುವುದು ಸಾಯುವುದಕ್ಕೂ ಮುನ್ನ ಆಕೆ ಆಡಿದ್ದ ಮಾತುಗಳಲ್ಲೇ ತಿಳಿದು ಬರುತ್ತದೆ.

ಶೇ. 90 ರಷ್ಟು ಸುಟ್ಟ ಗಂಭೀರವಾಗಿ ಗಾಯಗೊಂಡಿದ್ದ ಉನ್ನಾವೋ ರೇಪ್ ಸಂತ್ರಸ್ತೆ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಳು. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತಾದರೂ,ಚಿಕಿತ್ಸೆಗೆ ಸ್ಪಂದಿಸದ ಆಕೆ ಡಿ. 7ರಂದು ಕೊನೆಯುಸಿರೆಳೆದಿದ್ದಾಳೆ. ಆದರೆ ಸಾಯುವುದಕ್ಕೂ ಮುನ್ನ 'ಡಾಕ್ಟ್ರೇ... ನನ್ನನ್ನು ದಯವಿಟ್ಟು ಕಾಪಾಡಿ, ನಾನು ಬದುಕಬೇಕು' ಎಂದು ಗೋಗರೆದಿದ್ದಳೆಂಬ ಮಾಹಿತಿ ಲಭ್ಯವಾಗಿದೆ.

ಕುಟುಂಬ ಸದಸ್ಯರಿಗೆ ಬೆದರಿಕೆ

ಉನ್ನಾವೋ ರೇಪ್ ಸಂತ್ರಸ್ತೆಯ ಕುಟುಂಬ ಸದಸ್ಯರು, ಆರೋಪಿಗಳು ತಮಗೆ ಜೀವ ಬೆದರಿಕೆಯೊಡ್ಡಿರುವುದಾಗಿ ಹೇಳಿದ್ದಾರೆ. ಆದರೆ ಅತ್ತ ಈ ಪ್ರಕರಣದ ಪ್ರಮುಖ ಆರೋಪಿಯ ತಂಗಿ 'ನನ್ನ ತಂದೆ ಹಾಗೂ ಅಣ್ಣನನ್ನು ಬಂಧಿಸುವಾಗ ಅವರು ಮನೆಯಲ್ಲೇ ಇದ್ದರೆಂಬುವುದಕ್ಕೆ ಪೊಲೀಸರೇ ಸಾಕ್ಷಿ. ಯಾರಾದರೂ ಇಷ್ಟು ದೊಡ್ಡ ಅಪರಾಧವೆಸಗಿ ಮನೆಯಲ್ಲಿರುತ್ತಾರೆಯೇ?' ಎಂದು ಪ್ರಶ್ನಿಸಿದ್ದಾಳೆ. ಅಲ್ಲದೇ ಈ ಪ್ರಕರಣ ಸಿಬಿಐ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾಳೆ. 

ಸಂತ್ರಸ್ತ ಯುವತಿಯ ಚಿಕ್ಕಪ್ಪ ಈ ಕುರಿತಾಗಿ ಪ್ರತಿಕ್ರಿಯಿಸಿದ್ದು, 'ಬಂಧಿತ ಆರೋಪಿಯ ಸೊಸೆಯ ತಂದೆ ನಮಗೆ ಸುಮಾರು 9 ಗಂಟೆಗೆ ಕರೆ ಮಾಡಿ, ನಿಮಗಿಲ್ಲ ಬದುಕಲು ಬಿಡುವುದಿಲ್ಲ. ನಿಮ್ಮ ಅಂಗಡಿಯನ್ನೂ ಸುಟ್ಟು ಹಾಕ್ತೀವಿ. ನಿಮ್ಮನ್ನೂ ಸಾಯಿಸ್ತೀವಿ' ಎಂದಿರುವುದಾಗಿ ತಿಳಿಸಿದ್ದಾರೆ. 

ಇನ್ನು ಈ ಸಂಬಂಧ ತನಿಖೆ ನಡೆಸಿ ಪೊಲೀಸರು ಯುವತಿಯ ಕುಟುಂಬಕ್ಕೆ ಭದ್ರತೆ ಒದಗಿಸುವುದಾಗಿ ತಿಳಿಸಿದ್ದಾರೆ.